ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಗೆಡಿಸಿದ ರಾಜಕೀಯ ಹಸ್ತಕ್ಷೇಪ!

ಪೊಲೀಸ್‌ ಒಳಸುಳಿ
Last Updated 13 ಜೂನ್ 2014, 19:30 IST
ಅಕ್ಷರ ಗಾತ್ರ

ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ಸಾವು, ತನಿಕೋಡ ಚೆಕ್‌ಪೋಸ್ಟ್‌ನ ಎನ್‌­ಕೌಂಟರ್‌, ಎಡಿಜಿಪಿ ಡಾ.ಪಿ. ರವೀಂದ್ರನಾಥ್ ಪ್ರಹಸನ, ಕಳ್ಳರಿಂದ ಪೊಲೀ­ಸರು ವಶಪಡಿಸಿಕೊಂಡ ಹಣಕ್ಕೇ ಬಿದ್ದ ಕನ್ನ... ಇವೇ ಮೊದಲಾದ ಪ್ರಕರಣ­ಗಳು ‘ಬೇಡವಾಗಿದ್ದ ಅಹಿತಕರ ಘಟನೆಗಳು’ ಎನ್ನದೆ ವಿಧಿಯಿಲ್ಲ. ಪೊಲೀಸ್‌ ಪಡೆಯ ಸದ್ಯದ ಸ್ಥಿತಿಯನ್ನೂ ಇವು ಸೂಚ್ಯವಾಗಿ ಬಿಂಬಿಸುತ್ತವೆ.

ಬಂಡೆ ಅವರ ಸಾವು ಸಂಭವಿಸಿ ಹಲವು ತಿಂಗಳು ಉರುಳಿವೆ. ಹೆಚ್ಚೆಂದರೆ ಅರ್ಧ ಗಂಟೆಯಲ್ಲಿ ನಡೆದ ಘಟನೆ ಅದು. ಆಗಿನ ಘಟನಾವಳಿಗಳ ತನಿಖೆಗೆ ಇಷ್ಟೊಂದು ಕಾಲಾವಕಾಶ ಬೇಕೆ? ಆಗ ನಡೆದಿದ್ದೇನು ಎನ್ನುವ ಕುರಿತು ಇದುವರೆಗೆ ಒಂದು ಖಚಿತವಾದ ವರ್ತಮಾನ ಸಿಕ್ಕಿಲ್ಲ. ಬಂಡೆ ಅವರು ಒಂದು ವೇಳೆ ಪೊಲೀಸ್‌ ಗುಂಡಿಗೇ ಬಲಿಯಾಗಿದ್ದರೆ ಆ ಸಂಗತಿಯನ್ನು ಮರೆ ಮಾಡುವ ಯಾವ ಅಗತ್ಯವೂ ಇಲ್ಲ.

ಬಂಡೆ ಅವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ ಎಂಬುದನ್ನೇ ನಂಬುವುದಾದರೆ ಅಂತಹ ಪ್ರಕರಣ ನಡೆದಿರುವುದು ಇದೇ ಮೊದಲಲ್ಲ.  ಪೊಲೀಸರು ಹಾರಿಸಿದ ಗುಂಡು ತಮ್ಮ ಸಹೋದ್ಯೋಗಿಯನ್ನೇ ಬಲಿ ತೆಗೆದುಕೊಂಡ ಪ್ರಕರಣಗಳು ಈ ಹಿಂದೆಯೂ ಬೇಕಾದಷ್ಟು ನಡೆದಿವೆ. ತಪ್ಪಾಗಿದ್ದರೆ ಅದನ್ನು ಒಪ್ಪಿಕೊಳ್ಳುವ, ನಡೆದ ತಪ್ಪಿಗೆ ವಿಷಾದ ವ್ಯಕ್ತಪಡಿಸುವ ನೈತಿಕ ಧೈರ್ಯವನ್ನು ಸರ್ಕಾರ ತೋರಬೇಕು.

ತಪ್ಪು ಹೆಜ್ಜೆ: ಹಾಗೆಯೇ ಶೃಂಗೇರಿ ಹತ್ತಿರದ ತನಿಕೋಡ ಚೆಕ್‌ಪೋಸ್ಟ್‌ನ ಎನ್‌ಕೌಂಟರ್‌ ಪ್ರಕರಣದಲ್ಲಿ ಕಾನ್‌ಸ್ಟೆಬಲ್‌ ಗುಂಡು ಹಾರಿಸುವಾಗ ಆತನಲ್ಲಿ ಯಾವ ದುರುದ್ದೇಶವೂ ಇರಲಿಲ್ಲ. ಅದು ಕೂಡ ಅಚಾತುರ್ಯದಿಂದ ನಡೆದ ಘಟನೆ. ಸರ್ಕಾರ ಆತನನ್ನು ಅಮಾನತು ಮಾಡಿದ್ದು ಸರಿಯಲ್ಲ. ಇದರಿಂದ ಪೊಲೀಸರ ನೈತಿಕ ಸ್ಥೈರ್ಯ ಕುಂದುತ್ತದೆ.

ಡಾ. ರವೀಂದ್ರನಾಥ್‌ ಅವರ ವಿಷಯದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಯಾಗಿದೆ. ಸರ್ಕಾರ ಈ ಪ್ರಕರಣವನ್ನು ಸರಿಯಾಗಿ ನಿಭಾಯಿಸಲಿಲ್ಲ. ರವೀಂದ್ರನಾಥ್‌,  ಪ್ರಕರಣದ ಬಗೆಗೆ ಮಾಧ್ಯಮಗಳಿಗೆ ಪದೇ ಪದೇ ಮಾಹಿತಿ ನೀಡಿದ್ದರಿಂದ ಗೊಂದಲ ಉಲ್ಬಣಗೊಳ್ಳಲು ಅವಕಾಶ ಸಿಕ್ಕಂತಾಯಿತು. ಘಟನೆಗೆ ಸಂಬಂಧಪಟ್ಟವರು ಸುದೀರ್ಘ ಅನುಭವದ ಹಿರಿಯ ಅಧಿಕಾರಿಗಳು. ಇಂತಹ ವಿಷಯಗಳನ್ನು ಅವರು ಅತ್ಯಂತ ಸೂಕ್ಷ್ಮ­ವಾಗಿ ನಿಭಾಯಿಸಬೇಕಿತ್ತು. ಹೈಗ್ರೌಂಡ್ಸ್‌ನಂತಹ ಪ್ರಮುಖ ಠಾಣೆ ಪಿಎಸ್‌ಐಗೆ ಎಡಿಜಿಪಿ ಮಟ್ಟದ ಅಧಿಕಾರಿ ಪರಿಚಯ ಇಲ್ಲದಿದ್ದುದು ವಿಪರ್ಯಾಸವೇ ಸರಿ.

ಒಂದೊಂದು ಪ್ರಕರಣವನ್ನೂ ವಿಶ್ಲೇಷಿಸುತ್ತಾ ಹೊರಟರೆ ಒಂದೊಂದು ರೀತಿಯ ನ್ಯೂನತೆ ಗೋಚರಿಸುತ್ತದೆ. ಆದರೆ, ಅವುಗಳ ವಿಶ್ಲೇಷಣೆಯಲ್ಲೇ ಕಾಲಹರಣ ಮಾಡದೆ ಪೊಲೀಸರು ಧೈರ್ಯ, ಕಾರ್ಯಕ್ಷಮತೆಯಿಂದ ಕೆಲಸ ಮಾಡುವಂತಹ ವಾತಾವರಣ ನಿರ್ಮಿಸುವ ಅಗತ್ಯವಿದೆ. ಅದಕ್ಕಾಗಿ ಕೆಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಹಸ್ತಕ್ಷೇಪವೇ ಮೂಲ: ಪೊಲೀಸ್‌ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುವ ಸಂಗತಿ ಗುಟ್ಟಾಗಿ ಉಳಿದಿಲ್ಲ. ಪೊಲೀಸ್‌ ಪಡೆ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಮೂಲ ಇರುವುದು ಈ ಹಸ್ತಕ್ಷೇಪದ ಸುಳಿಯಲ್ಲಿಯೇ. ದೇಶದ ಎಲ್ಲ ರಾಜ್ಯಗಳ ಪೊಲೀಸ್‌ ಪಡೆಗೆ ಸಂಬಂಧಿಸಿದ 1996ರಿಂದ 2006ರವರೆಗಿನ ಬೆಳವಣಿಗೆಗಳನ್ನು ವಿಶ್ಲೇಷಿಸಿದ ಸುಪ್ರೀಂ ಕೋರ್ಟ್‌, ಠಾಣಾ ಮಟ್ಟದ ಸಿಬ್ಬಂದಿಯಿಂದ ಡಿ.ಜಿ.ವರೆಗೆ (ಪೊಲೀಸ್‌ ಮಹಾನಿರ್ದೇಶಕ)  ಪ್ರತಿಯೊಬ್ಬ ನೌಕರ­ನಿಗೂ ಒಂದು ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷ ಕೆಲಸ ಮಾಡಲು ಅವಕಾಶ ನೀಡ­ಬೇಕು ಎಂಬ ಆದೇಶ ನೀಡಿತ್ತು.

ರಾಜ್ಯದ ಹಿಂದಿನ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಒಂದು ಹುದ್ದೆಯಲ್ಲಿ ಒಬ್ಬ ವ್ಯಕ್ತಿ ಇರಬೇಕಾದ ಕನಿಷ್ಠ ಸೇವಾವಧಿಯನ್ನು ಎರಡು ವರ್ಷದಿಂದ ಒಂದು ವರ್ಷಕ್ಕೆ ಮೊಟಕುಗೊಳಿಸಿತು. ಪೊಲೀಸ್‌ ಅಧಿಕಾರಿಯೊಬ್ಬರು ಯಾವುದೇ ಹುದ್ದೆಗೆ ನಿಯುಕ್ತಿಗೊಂಡಾಗ ಅಲ್ಲಿನ ಸನ್ನಿವೇಶ ಅರ್ಥ ಮಾಡಿಕೊಂಡು ಕಾರ್ಯ ಪ್ರವೃತ್ತರಾಗಲು ಕನಿಷ್ಠ ಆರು ತಿಂಗಳ ಕಾಲಾವಕಾಶ ಬೇಕು. ಅದರ ಮುಂದಿನ ಆರು ತಿಂಗಳು ವರ್ಗಾವಣೆ ಆತಂಕದಲ್ಲೇ ಕಾಲ ದೂಡುವಂತಾದರೆ ಅವರಿಂದ ಸಮರ್ಪಕವಾದ ಕಾರ್ಯ ನಿರ್ವಹಣೆ ಅಸಾಧ್ಯ.

ಈಗಿನ ಸರ್ಕಾರವಾದರೂ ಆ ಸುಗ್ರೀವಾಜ್ಞೆಯನ್ನು ವಾಪಸು ಪಡೆದು, ಹಿಂದೆ ಆಗಿರುವ ಪ್ರಮಾದವನ್ನು ಸರಿಪಡಿಸಬಹುದಿತ್ತು. ನೆರೆಯ ಮಹಾರಾಷ್ಟ್ರದಲ್ಲಿ ಎಲ್ಲ ಇಲಾಖೆಗಳಲ್ಲೂ ಕನಿಷ್ಠ 2 ವರ್ಷ ಒಂದೇ ಹುದ್ದೆಯಲ್ಲಿ ಕೆಲಸ ಮಾಡಲು ಅವಕಾಶ ಒದಗಿಸಲು ವಿಶೇಷ ಕಾನೂನನ್ನೇ ರೂಪಿಸಲಾಗಿದೆ.

ನಮ್ಮ ರಾಜ್ಯದಲ್ಲಿ ಪೊಲೀಸ್‌ ಹಾಗೂ ಕಂದಾಯ ಇಲಾಖೆಗಳ ಮಟ್ಟಿಗಾದರೂ ಇಂತಹ ಕಾನೂನು ಬೇಕು. ಏಕೆಂದರೆ ಕಂದಾಯ ಇಲಾಖೆಗೆ ಸೇರಿದ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ  ಮತ್ತು ತಹಶೀಲ್ದಾರರ ಹುದ್ದೆಗಳಿಗೆ ದಂಡಾಧಿಕಾರಿಗಳ ಹೊಣೆಯೂ ಇದ್ದು, ಪೊಲೀಸ್‌ ವ್ಯವಸ್ಥೆಯ ಭಾಗವಾಗಿವೆ ಆ ಹುದ್ದೆಗಳು.

ಪೊಲೀಸರ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ವ್ಯಾಪಕವಾಗಿದೆ. ಇದಕ್ಕೆ ಎರಡು ಮುಖ್ಯ ಕಾರಣ. ಒಂದು ಭ್ರಷ್ಟಾಚಾರ, ಮತ್ತೊಂದು ಜಾತಿ. ವ್ಯವಸ್ಥೆಯಲ್ಲಿ ಜಾತಿಯ ವಿಷಸರ್ಪ ಹೆಡೆ ಬಿಚ್ಚಿದ್ದು, ಲಂಗು ಲಗಾಮು ಇಲ್ಲದಂತೆ ಬೆಳೆದಿದೆ. ಪೊಲೀಸ್‌ ಪಡೆ ದಕ್ಷತೆಯಿಂದ ಕೆಲಸ ಮಾಡಲು ಈ ವಿಷಸರ್ಪವನ್ನು ಹೊಡೆದು ಹಾಕುವ ಅಗತ್ಯವಿದೆ.

ಪೊಲೀಸ್‌ ವ್ಯವಸ್ಥೆಯು ಸರ್ಕಾರದ ನಿಯಂತ್ರಣ, ಮಾರ್ಗ­ದರ್ಶನ ಮತ್ತು ನಿರ್ದೇಶನದ ಪ್ರಕಾರ ನಡೆಯಬೇಕಿರುವುದು ಕಾನೂನು ಸಮ್ಮತವಾಗಿದೆ ಮತ್ತು ಅಗತ್ಯ ಕೂಡ. ಸರ್ಕಾರವು ನಗರ, ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಡಿಜಿಪಿಯಂತಹ ಹುದ್ದೆಗಳಿಗೆ ವಿವೇಚನೆ ಉಪಯೋಗ ಮಾಡಿ ದಕ್ಷ ಅಧಿಕಾರಿ­ಗಳನ್ನು ನೇಮಕ ಮಾಡಬೇಕು.

ಒಮ್ಮೆ ವರಿಷ್ಠ ಅಧಿಕಾರಿಯನ್ನು ನೇಮಕ ಮಾಡಿದ ಮೇಲೆ ಆಯಾ ಘಟಕದ ನೇಮಕಾತಿ, ವರ್ಗಾವಣೆ, ಕಾರ್ಯನಿರ್ವ­ಹಣೆ ಮೊದಲಾದ ವಿಷಯಗಳನ್ನು ಅಲ್ಲಿನ ವರಿಷ್ಠ ಅಧಿಕಾರಿ ನಿರ್ಧಾರಕ್ಕೆ ಬಿಡಬೇಕು. ಆದರೆ, ಎಲ್ಲ ಘಟಕಗಳಲ್ಲಿ ಹಸ್ತಕ್ಷೇಪ ಇದ್ದೇ ಇರುತ್ತದೆ.

ಸ್ವಚ್ಛಂದತೆ ಅಲ್ಲ: ಹಾಗಾದರೆ ಪೊಲೀಸ್‌ ಅಧಿಕಾರಿಗಳನ್ನು ಸ್ವಚ್ಛಂದವಾಗಿ ಬಿಟ್ಟುಬಿಡಬೇಕೇ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಹಾಗೇನಿಲ್ಲ, ಯಾರೇ ಆಗಿದ್ದರೂ ತಪ್ಪು ಮಾಡಿದಾಗ, ಕರ್ತವ್ಯ ನಿರ್ವಹಣೆ ಮಾಡದಿದ್ದಾಗ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲೇಬೇಕು. ಇಷ್ಟಕ್ಕೂ ಪೊಲೀಸ್‌ ವ್ಯವಸ್ಥೆ ಶಾಸಕಾಂಗ ರೂಪಿಸಿದ ಕಾನೂನು ಮತ್ತು ನಿಯಮಗಳ ಪ್ರಕಾರವೇ ನಡೆಯುತ್ತದೆ ಎನ್ನುವುದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಪೊಲೀಸ್‌ ಇಲಾಖೆಯಲ್ಲಿ ರಹಸ್ಯವಾದ ಇಲ್ಲವೆ ಮೌಖಿಕ­ವಾದ ಯಾವ ವ್ಯವಹಾರಗಳಿಗೂ ಆಸ್ಪದ ಇರಕೂಡದು. ಸರ್ಕಾರದ ಯಾವುದೇ ಪ್ರತಿನಿಧಿ ಏನೇ ಸೂಚನೆ ನೀಡುವು­ದಿದ್ದರೂ ಅದನ್ನು ಲಿಖಿತವಾಗಿಯೇ ನೀಡಬೇಕು. ಆಗ ಅದರ ಪಾಲನೆ ಪೊಲೀಸ್‌ ಅಧಿಕಾರಿಗಳಿಗೂ ಸುಲಭವಾಗುತ್ತದೆ.

ಕಾನೂನು ಮತ್ತು ಸುವ್ಯವಸ್ಥೆಗೆ ಇತ್ತೀಚಿನ ದಿನಗಳಲ್ಲಿ ಬಹಳ ಪರಿಮಿತವಾದ ಅರ್ಥಬಂದಿದೆ. ಶಾಂತ ವ್ಯವಸ್ಥೆಯನ್ನು ಕಾಪಾಡುವುದಷ್ಟೇ ಕಾನೂನು ಸುವ್ಯವಸ್ಥೆ ಎಂಬ ಸಂಕುಚಿತ ಭಾವ ಸಮಾಜದಲ್ಲಿದೆ. ಈ ನೆಲದ ಕಾನೂನನ್ನು ಯಾವ ಭೇದ­ಭಾವವಿಲ್ಲದೆ ಜಾರಿ ಮಾಡುವುದು, ಕಾನೂನು ಮೀರಿ­ದವರ ವಿರುದ್ಧ ಕ್ರಮ ಕೈಗೊಳ್ಳುವುದು, ನ್ಯಾಯಾಲಯಗಳಲ್ಲಿ ಸಮರ್ಪಕವಾಗಿ ಅಭಿಯೋಗ (ಪ್ರಾಸಿಕ್ಯೂಷನ್‌) ನಡೆಸುವುದು, ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳು­ವುದು... ಇವೇ ಮೊದಲಾದ ಪ್ರಕ್ರಿಯೆಗಳು ಕಾನೂನು ಮತ್ತು ಸುವ್ಯವಸ್ಥೆ ಪರಿಧಿಯಲ್ಲಿ ಬರುತ್ತವೆ.

ಮೇಲ್ನೋಟಕ್ಕೆ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎನ್ನುವಂತೆ ಕಂಡುಬಂದರೂ ಶೇ 99ರಷ್ಟು ಪ್ರಕರಣಗಳಲ್ಲಿ ಅಭಿಯೋಗ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಹೀಗಾಗಿ ಬಹುತೇಕ ತಪ್ಪಿತಸ್ಥರಿಗೆ ಶಿಕ್ಷೆಯೂ ಆಗುತ್ತಿಲ್ಲ. ಕೊಲೆ, ಸುಲಿಗೆ, ಭ್ರಷ್ಟಾಚಾರ, ಅತ್ಯಾಚಾರ ಮೊದಲಾದ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ದಶಕಗಳೇ ಉರುಳಿದರೂ ಆರಾಮವಾಗಿ ಓಡಾಡಿಕೊಂಡಿದ್ದಾರೆ.

ತಪ್ಪಿತಸ್ಥರಿಗೆ ಶಿಕ್ಷೆಯಾಗದ ಹೊರತು ಅಪರಾಧ ಕೃತ್ಯಗಳಲ್ಲಿ ತೊಡಗಿದವರಿಗೆ ಕಾನೂನಿನ ಬಗೆಗೆ ಭಯ ಉಂಟಾಗುವುದಿಲ್ಲ. ಕಾನೂನಿನ ಕುರಿತು ಭಯ ಇಲ್ಲದಿದ್ದಾಗ ರಾಜ್ಯದ ಅಭಿವೃದ್ಧಿ ಸಹ ಅಸಾಧ್ಯ. ಉದಾಹರಣೆಗೆ ಕೊಳೆಯುತ್ತಾ ಬಿದ್ದಿರುವ ಸಾವಿರಾರು ಭ್ರಷ್ಟಾಚಾರ ಪ್ರಕರಣಗಳು. ಭ್ರಷ್ಟರಿಗೆ ಚೆನ್ನಾಗಿ ಬಿಸಿ ಮುಟ್ಟಿಸಿದರೆ ಬಿಸಿ ಹಾಲಿಗೆ ಬಾಯಿ ಹಾಕಿದ ಬೆಕ್ಕಿನಂತೆ ಅಂತಹ ವ್ಯಕ್ತಿಗಳೆಲ್ಲ ಸರಿದಾರಿಗೆ ಬರುತ್ತಾರೆ. ಕಾನೂನು ಬಲ ವಾಗಬೇಕಿದೆ.

ಕಟ್ಟುನಿಟ್ಟಾಗಿ ಜಾರಿಗೆ ಬರಬೇಕಿದೆ. ಗುರುತರ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ವ್ಯವಸ್ಥೆಯನ್ನು ರೂಪಿಸಬೇಕಿದೆ. ಪ್ರಕರಣದ ತನಿಖೆ ಮತ್ತು ವಿಚಾರಣೆಗೆ ಗರಿಷ್ಠ 2 ವರ್ಷಗಳ ಮಿತಿ ಹಾಕಬೇಕು. ಮೇಲ್ಮನವಿಗೆ ಒಂದು ವರ್ಷದ ಅವಕಾಶವನ್ನಷ್ಟೇ ಒದಗಿಸಬೇಕು.
ಪ್ರಕರಣಗಳ ಪರಿಣಾಮಕಾರಿ ವಿಲೇವಾರಿಗೆ ಅಭಿಯೋಗದ ರೂಪುರೇಷೆ ಮತ್ತು ವಿಧಿ–ವಿಧಾನಗಳಲ್ಲಿ ಮಾರ್ಪಾಡು ತರಬೇಕು.

ಲಘು ಅಪರಾಧ ಪ್ರಕರಣಗಳ ವಿಚಾರಣೆಗೆ ‘2ನೇ ಶ್ರೇಣಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌’ ನೇತೃತ್ವದ ನ್ಯಾಯಾಲಯಗಳ ಸ್ಥಾಪನೆ ಮಾಡಬೇಕು. ನಿವೃತ್ತ ನ್ಯಾಯಮೂರ್ತಿ ವಿ.ಎಸ್‌.ಮಳಿಮಠ ಸಮಿತಿ ವರದಿಯಂತೆ ಅಪರಾಧ ತನಿಖಾ ವಿಭಾಗವನ್ನು ಪೊಲೀಸ್‌ ಇಲಾಖೆಯಿಂದ ಬೇರ್ಪಡಿಸಿ, ಅದನ್ನು ನ್ಯಾಯಾಂಗದ ನಿಯಂತ್ರಣಕ್ಕೆ ಕೊಡಬೇಕು. ಕಾನೂನು ಮತ್ತು ಸುವ್ಯವಸ್ಥೆ ಹೊಣೆಯನ್ನು ಮಾತ್ರ ಸರ್ಕಾರ ಹೊರಬೇಕು.

ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳ ಅನುಷ್ಠಾನಕ್ಕೆ ಖಾಸಗಿಯವರು ಕೈಜೋಡಿಸಬಹುದು. ಆದರೆ, ಕಾನೂನು ಮತ್ತು ಸುವ್ಯವಸ್ಥೆ ಹೊರೆ ಸರ್ಕಾರ ಮಾತ್ರವೇ ಹೊರುವಂಥದು. ಪೊಲೀಸ್‌ ಇಲಾಖೆಯಲ್ಲಿ ಶಿಸ್ತಿಗೇನೂ ಕೊರತೆಯಿಲ್ಲ. ಅಗತ್ಯವಾದ ಸಂದರ್ಭದಲ್ಲಿ ಮೌನಕ್ಕೆ ಶರಣಾಗಿ, ಅನಗತ್ಯ ಸಂದರ್ಭದಲ್ಲಿ ಹಸ್ತಕ್ಷೇಪ ನಡೆಸುವ ಮೂಲಕ ಅಂತಹ ಶಿಸ್ತಿಗೆ ಭಂಗ ತರುವಂತಹ ಕೆಲಸ ನಡೆಯಬಾರದು.

ಕಟ್ಟುನಿಟ್ಟಿನ ಕ್ರಮ ಅಗತ್ಯ
ಪೊಲೀಸರಿಗೆ ಮೊದಲು ಅಧಿಕಾರ ಮತ್ತು ಜವಾಬ್ದಾರಿ ಕೊಡಬೇಕು. ನಂತರ ತಪ್ಪು ಮಾಡಿದರೆ ಕಟ್ಟುನಿಟ್ಟಿನ ಕ್ರಮವನ್ನೂ ಕೈಗೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ.

(ಲೇಖಕರು ನಿವೃತ್ತ ಪೊಲೀಸ್‌ ಮಹಾನಿರ್ದೇಶಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT