ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಿಡದೆ ಕಾಡುತ್ತಿದೆ ‘ಭೂತ’

ಏನು ಕಾರಣ? ಹೇಗೆ ನಿಯಂತ್ರಣ?
Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತೇಲಾಡುವ ದೂಳಿನ ಕಣಗಳ ಬಗ್ಗೆ ಗ್ರೀನ್ ಪೀಸ್ ಸಂಸ್ಥೆ ಬಹಿರಂಗ ಮಾಡಿರುವ ವರದಿ ಉತ್ತರ ಕರ್ನಾಟಕದಲ್ಲಿ ಮತ್ತೆ ಆತಂಕದ ಛಾಯೆ ಮೂಡಿಸಿದೆ. ‘ದೂಳು ಮಾಲಿನ್ಯ’ದ ವಿಷಯದಲ್ಲಿ ಸದಾ ಒಂದು ಹೆಜ್ಜೆ ಮುಂದೆ ಎಂದೇ ಹೇಳಲಾಗುವ ಈ ಭಾಗದ ಜನರಿಗೆ ಈ ಆತಂಕ ಸಹಜ. ಪರಿಸರದಲ್ಲಿ ಇರುವ ದೂಳಿನ ಕಣಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಮಿತಿಯನ್ನು ಉತ್ತರ ಕರ್ನಾಟಕದ ಬಹುತೇಕ ಎಲ್ಲ ನಗರಗಳೂ ದಾಟಿದ್ದರೆ, ಉಳಿದವು ಅಪಾಯ ಮಟ್ಟದ ಸಮೀಪದಲ್ಲಿವೆ. ಈ ಭಾಗದಲ್ಲಿರುವ ಏಳು ವಾಯುಮಾಲಿನ್ಯ ಮಾಪನ ಯಂತ್ರಗಳಲ್ಲಿ ಕಳೆದ ವರ್ಷ ದಾಖಲಾದ ಮಾಲಿನ್ಯದ ಪ್ರಮಾಣ ಆತಂಕಕಾರಿಯಾಗಿದೆ.

ಇಲ್ಲಿ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣ ದೂಳು. ಇಲ್ಲಿನ ಭೂಪ್ರಕೃತಿ ಮಾಲಿನ್ಯಕ್ಕೆ ‘ಪೂರಕ’ವಾಗಿದೆ ಎಂಬ ವಾದ ಅಧಿಕಾರಿಗಳದು. ಅವರ ಅಭಿಪ್ರಾಯ ಸರಿ ಎಂದು ಕೆಲ ಪರಿಸರವಾದಿಗಳು ಕೂಡ ಹೇಳುತ್ತಾರೆ. ವಿಜಯಪುರ, ಬಾಗಲಕೋಟೆ, ಬೀದರ್‌, ಕಲಬುರ್ಗಿ, ಕೊಪ್ಪಳ ಮುಂತಾದ ಕಡೆಗಳಲ್ಲಿ ಇದು ವಿಪರೀತವಾಗಿದೆ ಎನ್ನುವ ತಜ್ಞರು, ಇಲ್ಲಿ ಮೇಲೇಳುವ ದೂಳನ್ನು ನಿಯಂತ್ರಿಸಲು ನಡೆಸುವ ಶ್ರಮಕ್ಕೆ ಫಲ ಸಿಗುವುದು ಕಷ್ಟ ಎಂಬ ನಿರ್ಣಯವನ್ನೂ ನೀಡುತ್ತಾರೆ.

ದೂಳಿನ ಕಣಗಳನ್ನು ಪರಿಸರದಲ್ಲಿ ತೇಲಿಬಿಡಲು ಭೂಪ್ರಕೃತಿ ಎಷ್ಟು ಕಾರಣವೋ ಇಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಕೊಡುಗೆ ಕೂಡ ಸಾಕಷ್ಟು ಇದೆ ಎಂಬ ಮಾತು ಸರ್ವೇಸಾಧಾರಣವಾಗಿದೆ.

ವಾಯುಮಾಲಿನ್ಯಕ್ಕೆ ಸಂಬಂಧಿಸಿ ಸಂಘ–ಸಂಸ್ಥೆಗಳು ನೀಡುವ ವರದಿ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘ಪ್ರತಿ ಜಿಲ್ಲಾ ಕೇಂದ್ರದಿಂದ ಮಂಡಳಿಯ ಕೇಂದ್ರ ಕಚೇರಿಗೆ ಪ್ರತಿ ತಿಂಗಳು ವರದಿ ಸಲ್ಲಿಕೆಯಾಗುತ್ತದೆ. ಈ ಮಾಹಿತಿ ಪಡೆದುಕೊಂಡು ಸಂಸ್ಥೆಗಳು ವರದಿ ತಯಾರಿಸುತ್ತವೆ. ಆದರೆ ಜಿಲ್ಲಾ ಕೇಂದ್ರಗಳು ನೀಡಿದ ವರದಿಯನ್ನು ಸಮಗ್ರವಾಗಿ ಅವರು ಪರಿಗಣಿಸುವುದಿಲ್ಲ. ಹೀಗಾಗಿ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ಧಾರವಾಡ ಜಿಲ್ಲೆಯ ಅಧಿಕಾರಿ ವಿಜಯಕುಮಾರ ಕಡಕಭಾವಿ ಹೇಳಿದರು.

‘ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಎರಡು ಮಾಪನಗಳಿವೆ. ಕೇವಲ ಹುಬ್ಬಳ್ಳಿ ಮಾಪನದಿಂದ ಪಡೆದ ಮಾಹಿತಿ ಆಧಾರದಲ್ಲಿ ಎರಡೂ ನಗರಗಳಿಗೆ ಅನ್ವಯ ಮಾಡಿ ವರದಿ ತಯಾರಿಸುತ್ತಾರೆ’ ಎನ್ನುತ್ತಾರೆ.

ರಾಯಚೂರು ಜಿಲ್ಲಾ ಅಧಿಕಾರಿ ನಟೇಶ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ‘ರಾಯಚೂರಿನಲ್ಲಿ ಹೆಚ್ಚು ವಾಯುಮಾಲಿನ್ಯವಿಲ್ಲ. ಇತ್ತೀಚೆಗೆ ರಸ್ತೆ ದುರಸ್ತಿ ಮತ್ತು ಹೊಸ ರಸ್ತೆಗಳ ನಿರ್ಮಾಣ ಕಾಮಗಾರಿಗಳು ಹೆಚ್ಚಾಗಿ ನಡೆದಿವೆ. ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಂತೂ ನಿರಂತರವಾಗಿ ಕಾಮಗಾರಿಗಳು ನಡೆದಿವೆ. ಡಿಸೆಂಬರ್‌ನಲ್ಲಿ ಇಲ್ಲಿ ಗಾಳಿ ಕೆಳ ಹಂತದಲ್ಲಿ ಬೀಸುತ್ತದೆ. ಆಗ ದೂಳಿನ ಕಣಗಳು ಹೆಚ್ಚು ಎತ್ತರಕ್ಕೆ ಹೋಗುವುದಿಲ್ಲ. ಹೀಗಾಗಿ ಮಾಪನ ಯಂತ್ರದಲ್ಲಿ ಹೆಚ್ಚು ಪ್ರಮಾಣ ದಾಖಲಾಗುತ್ತದೆ. ಇಂಥ ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿದರೆ ಉಳಿದಂತೆ ಇಲ್ಲಿ ಮಾಲಿನ್ಯದ ಪ್ರಮಾಣ ರಾಷ್ಟ್ರೀಯ ಮಿತಿಗಿಂತ ಕಡಿಮೆಯೇ ಇರುತ್ತದೆ’ ಎಂಬುದು ಅವರ ವಾದ.

ಆದರೆ ಪರಿಸರ ಹೋರಾಟ ಸಂಘಟನೆಗಳು ಅಧಿಕಾರಿಗಳ ಮಾತನ್ನು ಒಪ್ಪುವುದಿಲ್ಲ. ‘ಮಾಲಿನ್ಯ ಮಿತಿ ಮೀರುತ್ತಿದೆ. ಯಾರಿಗೂ ಈ ಬಗ್ಗೆ ಕಾಳಜಿ ಇಲ್ಲ’ ಎಂದು ಅವರು ದೂರುತ್ತಾರೆ. ‘ಪರಿಸರ ಕಾಳಜಿ ಇರುವ ನಾಗರಿಕರು ಒಂದಾಗಿ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ. ರಾಜಕಾರಣಿಗಳು, ಅಧಿಕಾರಿಗಳನ್ನು ಕಾಯುತ್ತ ಕುಳಿತರೆ ಮಾಲಿನ್ಯ ನಿಯಂತ್ರಣ ಸಾಧ್ಯವಿಲ್ಲ’ ಎಂದು ಗ್ರೀನ್ ರಾಯಚೂರು ಸಂಘದ ಕಾರ್ಯದರ್ಶಿ ಕೊಂಡ ಕೃಷ್ಣಮೂರ್ತಿ ಹೇಳಿದರು.

ರಸ್ತೆಯದೇ ಪ್ರಮುಖ ಕಾಟ
ಭಾರತದಲ್ಲಿ ವಾಯುಮಾಲಿನ್ಯದ ಪ್ರಮುಖ ವಾಹಕ ‘ರಸ್ತೆ’ ಎಂಬುದು ಹಾವೇರಿ ಜಿಲ್ಲಾ ಪರಿಸರ ಅಧಿಕಾರಿ ಕೊಟ್ರೇಶ ಅವರ ವಾದ. ವಾಹನಗಳ ಸಾಗಾಟ, ನಗರಗಳಲ್ಲಿ ರಸ್ತೆಯ ಕಸ ಗುಡಿಸುವುದು, ತೆರೆದ ವಾಹನಗಳಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದು ಮುಂತಾದ ಸಂದರ್ಭಗಳಲ್ಲಿ ಏಳುವ ದೂಳಿನ ಕಣಗಳು ಪರಿಸರಕ್ಕೆ ಮಾರಕವಾಗುತ್ತವೆ ಎಂದು ಅಭಿಪ್ರಾಯಪಡುತ್ತಾರೆ.

‘ವಿದೇಶಗಳಲ್ಲಿ ತೆರೆದ ವಾಹನಗಳಲ್ಲಿ ಯಾವುದೇ ಸಾಮಗ್ರಿ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ.  ಭಾರತದಲ್ಲಿ ಇಂಥ ಶಿಸ್ತು ಕಾಣಲು ಸಾಧ್ಯವಿಲ್ಲ. ಸ್ವಚ್ಛ ನಗರ ಮತ್ತು ವಾಹನ ಸಂಚಾರ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಿಂದ ವಾಯುಮಾಲಿನ್ಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT