ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಮರೆಯದ ಮಾದರಿ; ಸಾಧನೆಯ ಹೆಗ್ಗುರಿ

ನಮ್ಮ ‘ಸ್ವಚ್ಛ ನಗರ’ಗಳು
Last Updated 14 ಆಗಸ್ಟ್ 2015, 19:56 IST
ಅಕ್ಷರ ಗಾತ್ರ

ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಇತ್ತೀಚೆಗೆ ಸ್ವಚ್ಛತೆಯ ಶ್ರೇಣಿಯಲ್ಲಿ ಬೆಂಗಳೂರಿಗೆ ಏಳನೇ ಸ್ಥಾನ ಮತ್ತು ರಾಜ್ಯ ರಾಜಧಾನಿಗಳಲ್ಲಿ ಮೊದಲ ಸ್ಥಾನ ನೀಡಿರುವುದು ಎಲ್ಲರಲ್ಲಿಯೂ ಅಚ್ಚರಿ ಉಂಟು ಮಾಡಿದೆ. ನಮ್ಮ ಕಸದ ಗುಡ್ಡೆಗಳು ಅಕ್ಷರಶಃ ನಾರುತ್ತಿರುವ ಸ್ಥಿತಿಯಲ್ಲಿ ಸ್ವಚ್ಛತೆಯ ಶ್ರೇಯಾಂಕವನ್ನು ತುಲನಾತ್ಮಕವಾಗಿ ನೀಡಲಾಗಿದೆ ಎಂದು ತೋರುತ್ತದೆ. ಜೊತೆಗೆ ಇದು ಪ್ರಯತ್ನಗಳಿಗೆ ನೀಡಿರುವ ಶ್ರೇಣಿಯೇ ಹೊರತು ಫಲಿತಾಂಶಕ್ಕೆ ಅಲ್ಲ ಎಂದೂ ತೋರುತ್ತದೆ.

ಬೆಂಗಳೂರು ಉತ್ತಮ ಶ್ರೇಯಾಂಕ ಪಡೆಯುವುದಕ್ಕೆ ಇರುವ ಕಾರಣಗಳನ್ನು ಹೀಗೆ ವಿವರಿಸಬಹುದು. ಬೆಂಗಳೂರಿನಲ್ಲಿ ಬಯಲು ಮಲ ವಿಸರ್ಜನೆ ಪ್ರಮಾಣ ಬಹಳ ಕಡಿಮೆ. ನಗರದಲ್ಲಿ 650ಕ್ಕೂ ಹೆಚ್ಚು (ಪ್ರತಿ ಚದರ ಕಿ.ಮೀ.ಗೆ ಒಂದು) ಸಾರ್ವಜನಿಕ ಶೌಚಾಲಯಗಳಿವೆ. ಶ್ರೇಣಿ ನೀಡಿಕೆಯಲ್ಲಿ ಇವು ಮಹತ್ವದ ಪಾತ್ರ ವಹಿಸಿವೆ.

ಘನ ತ್ಯಾಜ್ಯದ ವಿಷಯಕ್ಕೆ ಬಂದಾಗಲೂ, ಮೂಲದಲ್ಲಿಯೇ ತ್ಯಾಜ್ಯವನ್ನು ಕಡ್ಡಾಯವಾಗಿ ಪ್ರತ್ಯೇಕಿಸುವ ಏಕೈಕ ನಗರ ಬೆಂಗಳೂರು. ಪ್ರತಿ ವಾರ್ಡ್‌ನಲ್ಲಿಯೂ ಘನ ತ್ಯಾಜ್ಯವನ್ನು ಸಂಗ್ರಹಿಸುವ ಕೇಂದ್ರ ಇದೆ. ಕಸ ಸಂಸ್ಕರಣೆಗೆ ಹಲವು ಹೊಸ ಯೋಜನೆಗಳೂ ಇವೆ. ಈ ವಿಷಯಗಳಲ್ಲಿ ದೆಹಲಿ ಕೂಡ ದೂರದಲ್ಲಿಯೇ ಇದೆ. ಹಾಗಾಗಿ ಇದು ನಮಗೆ ಸಂಭ್ರಮಿಸುವ ಸಂಗತಿಯೇ ಹೌದು.

ಉದ್ಯಾನ ನಗರದಿಂದ ತ್ಯಾಜ್ಯ ನಗರವಾಗಿ, ಈಗ ಮತ್ತೆ ಹಸಿರು ನಗರವಾಗಲು ಯತ್ನಿಸುತ್ತಿರುವ ಬೆಂಗಳೂರಿನ ಸ್ಥಿತಿಯಲ್ಲಿ ಅನುಷ್ಠಾನಕ್ಕೆ ತರಲು, ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಹಲವು ಪಾಠಗಳಿವೆ. ಮೂಲದಲ್ಲೇ ಕಸ ವಿಂಗಡಣೆ ಮಾಡುವ ಕಾನೂನು ಜಾರಿಯಾಗಬೇಕಾಗಿದೆ. ಕಸ ವಿಂಗಡಣೆ ಅಲ್ಲದೆ ನಮ್ಮಲ್ಲಿ ಬೇರೆ ಯಾವುದೇ ಸುಸ್ಥಿರ ಪರಿಹಾರ ಇಲ್ಲ. ‘ನಾವಿಬ್ಬರು, ನಮಗಿಬ್ಬರು’ ಎಂಬ ಕುಟುಂಬ ಯೋಜನೆಯ ಹಳೆಯ ಘೋಷಣೆಯನ್ನು ಒಣ ಮತ್ತು ಹಸಿ ತ್ಯಾಜ್ಯವನ್ನು ಪ್ರತಿನಿಧಿಸುವ ಎರಡು ಬಕೆಟ್‌ಗಳಿಗೆ ಹೊಂದಿಸುವ ಅಗತ್ಯ ಈಗ ಇದೆ.

ಮಿಶ್ರ ತ್ಯಾಜ್ಯವನ್ನು ನೀಡಿದರೆ ಅದು ಜಾದೂವಿನಂತೆ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ ಎಂದು ನಂಬಿರುವ ನಾಗರಿಕರು ಬಹಳ ಜನ ಇದ್ದಾರೆ. ಅಂತಹ ಸಾಧ್ಯತೆ ಇಲ್ಲವೇ ಇಲ್ಲ. ಮಿಶ್ರಣಗೊಂಡಿರುವ ಒಣ ಮತ್ತು ಹಸಿ ತ್ಯಾಜ್ಯದಿಂದ ಉತ್ಪಾದನೆಯಾಗುವ ಶಕ್ತಿಯ ಪ್ರಮಾಣ ಅತ್ಯಂತ ಕಡಿಮೆ. ಉದಾಹರಣೆಗೆ, ಕಡ್ಲೆಕಾಯಿ ಕಟ್ಟಿ ತಂದ ಕಾಗದ ಮತ್ತು ಭೇಲ್‌ಪುರಿ ತಿಂದ ಕಾಗದಗಳಲ್ಲಿ ಕಡ್ಲೆ ಕಾಯಿ ಕಟ್ಟಿ ತಂದ ಕಾಗದದ ಬೆಲೆ ಬಹಳ ಹೆಚ್ಚು.

ಹೋಟೆಲ್‌ಗಳು, ಅಪಾರ್ಟ್‌ಮೆಂಟ್‌ ಸಂಕೀರ್ಣಗಳು, ಕ್ಯಾಂಪಸ್‌ಗಳಂತಹ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವ ಘಟಕಗಳು ತಮ್ಮ ತ್ಯಾಜ್ಯವನ್ನು ತಾವೇ ನಿರ್ವಹಿಸಲು ಪ್ರೋತ್ಸಾಹ ನೀಡಬೇಕು. ಇಂತಹ ಸಂಸ್ಥೆಗಳಿಗೆ ಘನ ತ್ಯಾಜ್ಯ ನಿರ್ವಹಣೆ ಮೇಲ್ತೆರಿಗೆಯಿಂದ ವಿನಾಯಿತಿ ನೀಡಬೇಕು. ಬಿಬಿಎಂಪಿಯಿಂದ ಮಾನ್ಯತೆ ಪಡೆದಿರುವ ತ್ಯಾಜ್ಯ ನಿರ್ವಾಹಕರ ಮೂಲಕ ಇವರು ತಮ್ಮ ತ್ಯಾಜ್ಯವನ್ನು ತಾವೇ ನಿರ್ವಹಿಸಲಿ.

ವಿಂಗಡಣೆಗೊಂಡ ತ್ಯಾಜ್ಯವನ್ನು ಸಂಗ್ರಹಿಸುವುದಕ್ಕೆ ಮತ್ತು ಅದನ್ನು ನಿರ್ದಿಷ್ಟ ಪ್ರದೇಶಕ್ಕೆ ಸಾಗಿಸುವುದಕ್ಕೆ ಹೊಸ ಟೆಂಡರ್‌ಗಳನ್ನು ಕರೆಯುವ ಅಗತ್ಯ ಇದೆ. ಕಸದ ಗುತ್ತಿಗೆದಾರರು ನಿಜ ಅರ್ಥದಲ್ಲಿ ತ್ಯಾಜ್ಯ ನಿರ್ವಾಹಕರಾಗಬೇಕೇ ಹೊರತು ಈಗ ಇರುವಂತೆ ದೂರದ ಪ್ರದೇಶಗಳಿಗೆ ಗರಿಷ್ಠ ತ್ಯಾಜ್ಯ ಸಾಗಿಸುವುದರಲ್ಲಿ ಮಾತ್ರ ಆಸಕ್ತಿ ಇರುವಂಥವರಾಗಬಾರದು.

ಬೇರೆ ಬೇರೆ ವರ್ಗಗಳ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಸ್ಕರಿಸುವುದೇ ಭವಿಷ್ಯದ ವಿಧಾನವಾಗಿದೆ. ಹೋಟೆಲುಗಳ ಅಡುಗೆ ಮನೆ ತ್ಯಾಜ್ಯವನ್ನು ಸಂಗ್ರಹಿಸಿ ಅಡುಗೆ ಅನಿಲವಾಗಿ ಪರಿವರ್ತಿಸುವ ಪ್ರಯತ್ನವನ್ನು ಮಾಗಡಿ ರಸ್ತೆಯಲ್ಲಿ ನೋಬಲ್‌ ಎಕ್ಸ್‌ಚೇಂಜ್‌ ಎಂಬ ಸಂಸ್ಥೆ ನಡೆಸುತ್ತಿದೆ. ಇದು ಅಧ್ಯಯನಯೋಗ್ಯ ಪ್ರಯತ್ನ. ಸಂಪೂರ್ಣವಾಗಿ ಅನುಷ್ಠಾನವಾದ ಬಳಿಕ ಇತರೆಡೆಯಲ್ಲಿಯೂ ಅದನ್ನು ಅನುಕರಿಸಬಹುದು. ಟೆಟ್ರಾ ಪ್ಯಾಕ್‌ಗಳ ಬಳಕೆಯನ್ನು ಇನ್ನಷ್ಟು ಹೆಚ್ಚಿಸುವುದು ಮತ್ತು ಅವುಗಳನ್ನು ಸಂಸ್ಕರಿಸಿ ಮರುಬಳಕೆ ಮಾಡುವುದು ಕಸ ಹೆಕ್ಕುವವರಿಗೂ ಆದಾಯದ ಮೂಲವಾಗಬಹುದು.

ಪ್ರತಿ ವಾರ್ಡ್‌ನಲ್ಲಿ ಇರುವ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳು (ಡಿಡಬ್ಲ್ಯುಸಿಸಿ) ಇನ್ನೂ ಹೆಚ್ಚಿನ ಪ್ರಮಾಣದ ತ್ಯಾಜ್ಯವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಈ ಕೇಂದ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಬಂದು ತಲುಪುವಂತೆ ಕಸ ಸಂಗ್ರಹ ಟೆಂಡರ್‌ ರೂಪಿಸಬೇಕು. ನಗರದಾದ್ಯಂತ ಚೆಲ್ಲಾಡಿರುವ ಕಡಿಮೆ ಮೌಲ್ಯದ (ಸಾಮಾನ್ಯವಾಗಿ ಕಿಲೊಗೆ ₹ 3ಕ್ಕಿಂತ ಕಡಿಮೆ) ತ್ಯಾಜ್ಯ ನಿರ್ವಹಣೆಯಲ್ಲಿಯೂ ಈ ಕೇಂದ್ರಗಳು ಕೈಜೋಡಿಸಬಹುದು.

ಸಂಗ್ರಹ, ಸಾಗಾಟ, ಸಂಸ್ಕರಣೆ ಸರಪಣಿಯಲ್ಲಿರುವ ಘನ ತ್ಯಾಜ್ಯ ನಿರ್ವಹಣೆಗಾರರ ಪಟ್ಟಿ ಸಿದ್ಧಪಡಿಸಿ. ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರು ನಿಯಮಗಳನ್ನು ಅನುಸರಿಸುತ್ತಿರುವ ಬಗ್ಗೆ ಪ್ರಮಾಣಪತ್ರ ನೀಡಿ. ಇದು ವ್ಯವಸ್ಥೆಯಿಂದ ಶೋಷಣೆಗೆ ಒಳಗಾಗುವ ಪೌರಕಾರ್ಮಿಕರು ತ್ಯಾಜ್ಯ ನಿರ್ವಹಿಸುವ ಸ್ಥಿತಿಯನ್ನು ಉತ್ತಮಪಡಿಸುತ್ತದೆ. ಶಾಲೆಗಳೂ ಸೇರಿದಂತೆ ತ್ಯಾಜ್ಯ ನಿರ್ವಹಣೆ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ನಗರಗಳ ನಡುವೆ ನಡೆಯುತ್ತಿರುವ ಸ್ವಚ್ಛತಾ ಸ್ಪರ್ಧೆಗಳ ರೀತಿಯಲ್ಲಿಯೇ ಅಂತರ ನಗರ ಸ್ವಚ್ಛತಾ ಸ್ಪರ್ಧೆಗಳನ್ನು ಏರ್ಪಡಿಸಬಹುದು.

ಮಾಹಿತಿಯನ್ನು ಗಣನೆಗೇ ತೆಗೆದುಕೊಳ್ಳದೆ ಯೋಜನೆ ರೂಪಿಸುವ ಪ್ರವೃತ್ತಿ ನಮ್ಮಲ್ಲಿದೆ. ಉದಾಹರಣೆಗೆ ದಿನಕ್ಕೆ 5 ಸಾವಿರ ಟನ್‌ ಕಸ ಉತ್ಪಾದನೆಯಾಗುತ್ತಿದೆ ಎಂಬ ಅಂದಾಜು. ಸಾರಿಗೆ ಗುತ್ತಿಗೆದಾರರಿಗೆ ನೆರವಾಗುವುದಕ್ಕಾಗಿ ಇದೇ ಉತ್ಪ್ರೇಕ್ಷಿತ ಅಂದಾಜನ್ನು ಮತ್ತೆ ಮತ್ತೆ ಹೇಳಲಾಗುತ್ತದೆ.  ತ್ಯಾಜ್ಯ ಸಂಸ್ಕರಣೆ ಪ್ರಕ್ರಿಯೆಯ ಎಲ್ಲ ಹಂತಗಳ ಮೇಲೆ ನಿಗಾ ಇರಿಸುವುದಕ್ಕಾಗಿ ನಿಯಮಗಳನ್ನು ರೂಪಿಸುವ ಮತ್ತು ಅದನ್ನು ಅನುಷ್ಠಾನಗೊಳಿಸುವುದಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅಗತ್ಯ ಇದೆ.

ಗ್ರಾಹಕ ಬಳಕೆಯ ನಂತರ ಅಂತಿಮವಾಗಿ ಉಳಿಯುವ ತ್ಯಾಜ್ಯವನ್ನು ನಿರ್ವಹಿಸುವ ಹೊಣೆಯನ್ನು ಜಗತ್ತಿನಾದ್ಯಂತ ಈಗ ಉತ್ಪಾದಕರ ಮೇಲೆಯೇ ಹೇರಲಾಗುತ್ತಿದೆ. ಈ ಕಾನೂನು ಮತ್ತು ನಿಯಮಗಳನ್ನು ಅನುಷ್ಠಾನಕ್ಕೆ ತಂದ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದಕ್ಕೆ ಬೆಂಗಳೂರಿಗೆ ಅವಕಾಶ ಇದೆ. ಇಂತಹ ನಿಯಮಗಳಿದ್ದರೆ ಉತ್ಪಾದಕರು ಹೆಚ್ಚು ಪರಿಸರಸ್ನೇಹಿ ವಸ್ತುಗಳನ್ನು ಬಳಸಿ ಪ್ಯಾಕ್‌ ಮಾಡಲು ಆರಂಭಿಸುತ್ತಾರೆ.

ಕಸ ಹೂಳುವ ಪ್ರದೇಶಗಳು ದೇಶದಲ್ಲಿ ಇನ್ನಷ್ಟು ‘ಸಿಂಗೂರು’ಗಳನ್ನು ಸೃಷ್ಟಿಸಬಲ್ಲವು. ಅಲ್ಲದೆ, ಗ್ರಾಮಗಳಲ್ಲಿ ಕಸ ಸುರಿಯುವುದು ನೈತಿಕವಾಗಿ ತಪ್ಪು ಮಾತ್ರವಲ್ಲ, ಸುಸ್ಥಿರವೂ ಅಲ್ಲ. ನಾವು  ಹೂಳುವ ತ್ಯಾಜ್ಯದ ಪ್ರಮಾಣವನ್ನು ಶೇ 80ರಷ್ಟು ಇಳಿಸುವ ಗುರಿ ಹಾಕಿಕೊಳ್ಳಬೇಕು. ಈಗ ದೊರೆತ ‘ಸ್ವಚ್ಛ ನಗರ’ ಎಂಬ ಶ್ರೇಯಾಂಕದಲ್ಲಿ ನಾವು ಮೈಮರೆಯಬಾರದು. ಕಸ ನಿರ್ವಹಣೆಯಲ್ಲಿ ಇಡೀ ದೇಶಕ್ಕೆ ಬೆಂಗಳೂರು ಮಾದರಿಯಾಗುವಂತೆ ನೋಡಿಕೊಳ್ಳಬೇಕು. ಈ ಕಾರ್ಯಕ್ಕಾಗಿ, ತ್ಯಾಜ್ಯ ನಿರ್ವಹಣೆಯ ಮುಂಗಾಣ್ಕೆಯನ್ನು ಅನುಷ್ಠಾನಗೊಳಿಸುವ ಬದ್ಧತೆ, ಆಯ್ಕೆಯಾಗಲಿರುವ ಕಾರ್ಪೊರೇಟರ್‌ಗಳಲ್ಲಿ ಇರಬೇಕು. ಅದೇ ಪ್ರಮಾಣದಲ್ಲಿ ನಾಗರಿಕರ ಸಹಕಾರವೂ  ಅಗತ್ಯ.
*

ನಮ್ಮ ‘ಹಸಿರು ದಳ’  ನಿತ್ಯ 5 ಟನ್‌ ಸಾವಯವ ತ್ಯಾಜ್ಯವನ್ನು ಮರುಬಳಕೆಗೆ ಸಿದ್ಧಪಡಿಸುತ್ತಿದೆ. ಕಾರ್ಯಕರ್ತರು 1050 ಟನ್‌ ಕಸ ಭೂಭರ್ತಿ ಘಟಕಗಳಿಗೆ ಹೋಗದಂತೆ ತಡೆಯುತ್ತಿದ್ದಾರೆ.
– ನಳಿನಿ ಶೇಖರ್‌,
ಹಸಿರು ದಳದ ಸಂಸ್ಥಾಪಕರಲ್ಲಿ ಒಬ್ಬರು,
ಬೆಂಗಳೂರು
*

ಮೂಲದಲ್ಲಿಯೇ ಕಸ ವಿಂಗಡಿಸಿ ಪುನರ್‌ಬಳಕೆ ಮಾಡುವ ನಮ್ಮ ಸಣ್ಣ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ಪ್ಲಾಸ್ಟಿಕ್‌ ಅನ್ನು ನಿಷೇಧಿಸಿದರೆ ತ್ಯಾಜ್ಯ ಸಮಸ್ಯೆ ಅರ್ಧದಷ್ಟು ಕಡಿಮೆಯಾಗುತ್ತದೆ.
- ಸ್ಮಿತಾ ಶ್ರೀನಾಥ್,
ಲಾಲ್‌ಬಾಗ್‌ ಪಶ್ಚಿಮ ಸ್ವಯಂಸೇವಕರ ಗುಂಪಿನ ಸದಸ್ಯೆ,
ಬೆಂಗಳೂರು
*

ಅರಮನೆ ನಗರ ವಾರ್ಡ್‌ನಲ್ಲಿ 5 ಟನ್ ಸಾಮರ್ಥ್ಯದ ಬಯೋಮಿಥನೈಸೇಷನ್ ಘಟಕ ಸ್ಥಾಪಿಸಲಾಗಿದೆ.  ಕಸ ಸಂಸ್ಕರಣೆಯಿಂದ ಬರುವ ಜೈವಿಕ ಅನಿಲವನ್ನು ವಿದ್ಯುತ್ ಆಗಿ ಪರಿವರ್ತಿಸಿ ಎರಡು ರಸ್ತೆಗಳ ಬೀದಿದೀಪಗಳಿಗೆ ಪೂರೈಸಲಾಗುತ್ತಿದೆ. ಇಂಥ ವ್ಯವಸ್ಥೆ ಎಲ್ಲೆಡೆ ಬರಬೇಕು. ಹಸಿ ಕಸವನ್ನು ಕಾಂಪೋಸ್ಟ್‌ ಗೊಬ್ಬರವನ್ನಾಗಿ ಪರಿವರ್ತಿಸಬೇಕು. ಹೋಟೆಲ್‌ಗಳಲ್ಲಿ ಘಟಕ ಸ್ಥಾಪಿಸಿ ಇಂಧನವನ್ನಾಗಿ ಪರಿವರ್ತಿಸಿ ಅಡುಗೆಗೆ ಬಳಸಬೇಕು.  ಜನರಲ್ಲಿ ಅರಿವಿನ ಕೊರತೆಯೇ ದೊಡ್ಡ ಸಮಸ್ಯೆ.
- ಡಾ. ಎಂ.ಎಸ್‌.ಶಿವಪ್ರಸಾದ್‌,
ಬಿಬಿಎಂಪಿ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT