ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಜಿ. ರೋಡೆಂಬ ಜಾತ್ರೆ...

ಎಂಜಿ ರೋಡೆಂಬ ಜಾತ್ರೆ
Last Updated 20 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು ಈಗ ಜಗದ ಹೊಚ್ಚ ಹೊಸ ಮಾಯಾನಗರಿ. ಇಲ್ಲಿಗೆ ಬರಲುಯಾರು ಇಷ್ಟಪಡುವುದಿಲ್ಲ ಹೇಳಿ? ಹೀಗೆ ಬಂದವರೆಲ್ಲ ಎಂ.ಜಿ. ರಸ್ತೆಗೆ ಬರದೇ ಇರುವುದಿಲ್ಲ. ಇದೀಗ ಸ್ನೇಹವೋ, ಪ್ರೀತಿಯೋ ಎಂದರಿಯದ ಎಳೆ ವಯಸ್ಸಿನವರಿಂದ ಹಿಡಿದು, ಬಳಕುವ ಬಾಲೆಯರೂ, ಅವರಿಗಾಸರೆ ನೀಡುವ ಯುವಕರೂ, ಈ ಮಜಲನ್ನೂ ಅನುಭವಿಸಿ, ತಮ್ಮ ಭಾರವನ್ನು ಹೊರಲಾರದೇ ನಡೆಯುವ ಹಿರಿಯರು. ವಯಸ್ಸೆಂಬುದು ಅಂಕಗಳು ಮಾತ್ರ ಎಂಬಂತೆ ಲವಲವಿಕೆಯಿಂದಲೂ ನಡೆದಾಡುವವರು.

ಒಮ್ಮೆ ಕುಂಬ್ಳೆ ಸರ್ಕಲ್‌ ಬಳಿ ಇರುವ ಜೀವನ ಬೀಮಾ ಕಟ್ಟಡದಿಂದ ಈಚೆಗೆ ಬ್ರಿಗೇಡ್‌ ವೃತ್ತದ ತುದಿಯವರೆಗೂ ಜಾತ್ರೆಯೇ! ಈ ರಸ್ತೆಯ ಚಮಕ್ಕೇ ಅಂಥದ್ದು. ಜೇಬಿನಲ್ಲಿ ನೂರು ರೂಪಾಯಿಗಳಿದ್ದರೂ ಎಂ.ಜಿ ರಸ್ತೆಯಲ್ಲೊಂದಷ್ಟು ಚುರುಮುರಿ ತಿಂದು ಚಹಾ ಕುಡಿಯುತ್ತ ಹೆಜ್ಜೆ ಹಾಕಬಹುದು.

ಸಾವಿರಾರು ರೂಪಾಯಿಗಳನ್ನು ಕಾರ್ಡಿನಲ್ಲಿ ಸೊಂಯ್‌ ಎಂದು ಇನ್ನೊಂದು ಲೆಕ್ಕಕ್ಕೆ ಸೇರಿಸುತ್ತಲೇ ಗಂಟೆಗಟ್ಟಲೆ ಉಣ್ಣಬಹುದು. ಬಿಯರ್‌ನಿಂದ ಚಹಾದವರೆಗೂ ಅವರವರ ಅಗತ್ಯಕ್ಕೆ ತಕ್ಕ ಎಲ್ಲ ಪಾನೀಯಗಳನ್ನೂ ಹೀರಬಹುದು. ಹೀಗೆ ಹೀರುತ್ತಲೇ, ಚರ್ಚ್‌ ಸ್ಟ್ರೀಟ್‌ನಲ್ಲೂ ಕಾಲಾಡಿಸಿಕೊಂಡು ಬರಬಹುದು. ವಿಂಡೋ ಶಾಪಿಂಗ್ ಮಾಡುತ್ತಲೇ ಮನದೊಳಗೊಂದಷ್ಟು ಕನಸುಗಳನ್ನು ಬಿತ್ತಿಕೊಳ್ಳಬಹುದು.

ಮನದ ಭಿತ್ತಿಯೊಳಗೆ ಆಸೆ, ಆಕಾಂಕ್ಷೆಗಳಾಗುತ್ತಲೇ ಗುರಿ ನಿರ್ಧಾರವಾಗುವುದು ಇದೇ ರಸ್ತೆಯಲ್ಲಿಯೇ. ಒಮ್ಮೆಯಾದರೂ ಈ ರಸ್ತೆಯ ಪಬ್‌ನಲ್ಲಿ ಸ್ನೇಹಿತರೊಂದಿಗೆ ಬರಬೇಕು. ಸಂಗಾತಿಯೊಡನೆ ಸುತ್ತಬೇಕು. ಪುಸ್ತಕ ಕೊಳ್ಳಬೇಕು. ಉಡಬೇಕು, ತೊಡಬೇಕು, ಕಾಡಬೇಕು, ನೋಡಬೇಕು... ಬೇಕು, ಬೇಕು.. ಇನ್ನಷ್ಟು ಬೇಕು.

ಹೀಗೆ ಹಲವಾರು ಬೇಕುಗಳನ್ನು ಹುಟ್ಟುಹಾಕುವ ಈ ರಸ್ತೆಯ ಅಂಚಿಗೆ ಬಂದಾಗ ಅಂತೂ ಮಹಾತ್ಮ ಕಾಣುತ್ತಾನೆ. ಕಾಡುತ್ತಾನೆ. ಇಳಿ ಸಂಜೆಯ ರಂಗುರಂಗಿನ ಬೆಳಕಿನ ಚಿತ್ತಾರಗಳಲ್ಲಿ ವಿಜ್ರಂಭಿಸಿದ್ದ ಮನಕ್ಕೆ, ಕಬ್ಬನ್‌ ಪಾರ್ಕ್‌ನ ಗಾಳಿ ಸೋಕುವಾಗಲೇ ಮಹಾತ್ಮನ ದರ್ಶನವಾಗುವುದು. ಅಲ್ಲಿಯವರೆಗೂ ಉಣ್ಣಬೇಕೆಂದುಕೊಂಡಿದ್ದು, ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ಎನಿಸುತ್ತದೆ. ಬಫೆಯೊಂದರಲ್ಲಿ ಉಂಡು ಬಿಲ್ಲುಕೊಟ್ಟು ಬಂದವರು, ಹೊರಗೆ ಹತ್ತು ರೂಪಾಯಿ ಪೆನ್ನು ಮಾರುವವನ ಬಳಿ ಚೌಕಾಶಿಗೆ ತೊಡಗುತ್ತಾರೆ. ಆ ಬಫೆಯ ಬಿಲ್ಲಿನಲ್ಲಿ ಕುಟುಂಬವೊಂದರ ದಿನಸಿ ಲೆಕ್ಕ ನೀಗುತ್ತಿತ್ತು ಎಂಬ ಲೆಕ್ಕಾಚಾರದಲ್ಲಿ ತನ್ನ ಸಿನಿಕತನಕ್ಕೆ ತಾನೇ ಗೊಣಗುತ್ತಾನೆ.

ಮಹಾತ್ಮನಷ್ಟೇ ಕಡಿಮೆ ಬಟ್ಟೆ ತೊಟ್ಟವರು ಸರಳ ಜೀವನದ ಬಗೆಗೆ ಚರ್ಚಿಸುತ್ತಲೇ ಹೂ ಹಾದಿಯ ಮೇಲೆ ಹೆಜ್ಜೆ ಹಾಕುತ್ತಾರೆ. ಹೂ ಹಂದರದ ನಡುವೆ ನಗು ಸೂಸುತ್ತ, ಕೈಕೈ ಹಿಡಿದುಕೊಂಡು, ಇಲ್ಲವೇ ಮುಂಗೈ ಅಂಚಿಗೆ ಅಂಗೈ ಸೋಕಿಸುತ್ತ ನಡೆಯುತ್ತಾರೆ.

ಮನದನ್ನೆಯ ಕೆನ್ನೆಯ ಸೋಕುವ ಗಾಳಿ ತಾನಾಗಬಾರದೇ ಎಂದು ಹುಡುಗ ಬಯಸಿದರೆ, ತಬ್ಬಿ ನಿಂತ ಕಂಬ,ಹುಡುಗನ ಬಾಹುವಾಗಿರಲಿ ಎಂದು ಹುಡುಗಿಯರು ಕನಸು ಕಾಣುತ್ತಾರೆ. ಅವರ ಲೋಕದಲ್ಲಿದ್ದಾಗಲೇ ಪ್ರೀತಿಯ ಬಳ್ಳಿಗೆ ಕುಡಿಯೊಡೆದ ಮಗುವೊಂದು, ನಗುತ್ತ, ಎಡುವುತ್ತ, ಇವರೆಡೆಗೊಂದು ನಗೆಮಿಂಚು ಸೂಸುತ್ತ ಓಡಿ ಹೋಗುತ್ತದೆ. ರಸ್ತೆಯ ಎರಡೂ ಬದಿ ಜಾತ್ರೆಯ ಚಿತ್ರಣಗಳೇ ಹೀಗೆ...

ರಥಬೀದಿಯಲ್ಲಿ ವ್ಯಾಪಾರ ಮಾಡಲು ಇರುವುದೆಲ್ಲವೂ ಇಲ್ಲಿಯೂ ಇದೆ. ಕಾಲುಚೀಲದಿಂದ ರತ್ನಗಂಬಳಿವರೆಗೂ, ಜಂಕ್‌ ಜ್ಯುವೆಲ್ಲರಿಯಿಂದ ವಜ್ರದೊಡವೆಯವರೆಗೂ, ಸ್ಟ್ರೀಟ್‌ ಫ್ಯಾಷನ್‌ನಿಂದ ಸಾಂಪ್ರದಾಯಿಕ ಉಡುಗೆಯ ಮಳಿಗೆಯವರೆಗೂ.. ನೋಡುವುದೇ ಒಂದು ಹಬ್ಬ.

ಊರಿಂದ ಯಾರಾದರೂ ಬಂದರೆ ಮತ್ತೆ ಎಂ.ಜಿ ರೋಡಿಗೆ ಬರುತ್ತಾರೆ, ಕರೆ ತರುತ್ತಾರೆ. ಈ ರಸ್ತೆಯ ಮೋಡಿಯೇ ಅಂಥದ್ದು. ಮತ್ತೆ ಬರಬೇಕೆನಿಸುವಂಥದ್ದು. ಮತ್ತೇ ಬರುವಂಥದ್ದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT