ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಗಣಿತ ದಿನ: ಗಣಿತವೇಕೆ ಕಬ್ಬಿಣದ ಕಡಲೆ?

ಆರ್. ಶ್ರೀನಾಗೇಶ್
Published 17 ಡಿಸೆಂಬರ್ 2023, 23:43 IST
Last Updated 17 ಡಿಸೆಂಬರ್ 2023, 23:43 IST
ಅಕ್ಷರ ಗಾತ್ರ
ಗಣಿತ ಬಾರದವರು ದಡ್ಡರು ಎಂದು ಬಿಂಬಿಸಿದಾಗ ಲೆಕ್ಕ ಮಾಡಲು ತನಗೆ ಬರದೇ ಹೋದರೆ ಎನ್ನುವ ಭಯ ಉಂಟಾಗುವುದು ಸಹಜ. ಡಿ.22 ರಾಷ್ಟ್ರೀಯ ಗಣಿತ ದಿನ. ಈ ಹಿನ್ನೆಲೆಯಲ್ಲಿ ಗಣಿತ ಕಲಿಕೆಯ ವಿಶ್ಲೇಷಣೆ ಇಲ್ಲಿದೆ...

ಏಳನೆಯ ತರಗತಿಯಿಂದ ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಮೇಲೆ 2021 ರಲ್ಲಿ ನಡೆಸಲಾದ ಒಂದು ಅಧ್ಯಯನದ ಪ್ರಕಾರ ಶೇ 82 ರಷ್ಟು ವಿದ್ಯಾರ್ಥಿಗಳಲ್ಲಿ ಗಣಿತ ಕಂಡರೆ ಭಯ ಇರುವುದು ಕಂಡು ಬಂದಿದೆ.

ಗಣಿತ ಎಂದರೆ ಕಬ್ಬಿಣದ ಕಡಲೆ ಎಂದು ಅನೇಕರು ನಂಬಿದ್ದಾರೆ.. ವಯಸ್ಕರಲ್ಲಿಯೂ ನನಗೆ ಲೆಕ್ಕ ಬರಲ್ಲ ಅನ್ನುವವರೇ ಹೆಚ್ಚು. ಕೆಲವರು ಮಾತ್ರ ಅದೇ ಗಣಿತದಲ್ಲಿ ಅಪ್ರತಿಮ ಯಶಸ್ಸು ಗಳಿಸುತ್ತಾರೆ

ಇದಕ್ಕೆ ಕಾರಣವೇನಿರಬಹುದು?

ಗಣಿತ ಎಂದಾಗ ಒಂದು ಲೆಕ್ಕವನ್ನು ಬಿಡಿಸುವುದು ಎಂಬುದು ಸಾಮಾನ್ಯ ನಂಬಿಕೆ. ಹೀಗೆ ಬಿಡಿಸಲು ಒಂದು ಸಿದ್ದಾಂತದ ಆಧಾರದ ಮೇಲೆ ಪ್ರಯತ್ನವನ್ನು ಮಾಡಬೇಕು. ಆ ಪ್ರಯತ್ನ ಹಂತಹAತವಾಗಿ ಸಾಗಬೇಕು. ಶೇ 50 ರಷ್ಟು ಸಿದ್ದಾಂತವನ್ನೂ, ಶೇ 45 ರಷ್ಟು ಕ್ರಮವನ್ನೂ ಒಳಗೊಂಡಿರುತ್ತದೆ.

ಈ ಸಿದ್ದಾಂತವನ್ನು ಅರ್ಥ ಮಾಡಿಕೊಳ್ಳಲು ಪರದಾಡುವಿಕೆ ಮತ್ತು ಹಂತಗಳನ್ನು ನೆನಪಿಟ್ಟುಕೊಳ್ಳಲು ಪ್ರಯಾಸ ಪಡುವುದೇ ಗಣಿತವನ್ನು ಅಯ್ಯೋ, ಕಷ್ಟ ಎನ್ನುವಂತೆ ಬಿಂಬಿಸಿರುತ್ತದೆ. ಸಿದ್ಧಾಂತವನ್ನು ಅರ್ಥ ಮಾಡಿಕೊಳ್ಳಲು ಸತತವಾಗಿ ತೀವ್ರ ಗಮನವನ್ನು ಕೇಂದ್ರೀಕರಿಸಬೇಕು. ಅದರಲ್ಲಿ ಎಡವಿದರೆ, ಸಿದ್ದಾಂತ ಸರಿಯಾಗಿ ಅರ್ಥವಾಗದು. ಕ್ರಮದಲ್ಲಿ ಒಂದೆಡೆ ತಪ್ಪಾದರೂ ಹೆಜ್ಜೆ ಮುಂದೆ ಸಾಗದು. ಇದು ಬಹು ಮುಖ್ಯ ಕಾರಣ.

ಮನೆಯಲ್ಲಿನ ವಾತಾವರಣ ಎರಡನೆಯ ಕಾರಣ. ಹಿರಿಯರು ಗಣಿತವನ್ನು ನೋಡುವ ದೃಷ್ಟಿ, ಗಣಿತದಲ್ಲಿ ಅವರ ಸಾಧನೆ ಕೂಡ ಪ್ರಭಾವ ಬೀರುತ್ತದೆ.

ಗಣಿತ ಬಾರದವರು ದಡ್ಡರು ಎಂದು ಬಿಂಬಿಸಿದಾಗ ಲೆಕ್ಕ ಮಾಡಲು ತನಗೆ ಬರದೇ ಹೋದರೆ ಎನ್ನುವ ಭಯ ಕಾಡಲು ಪ್ರಾರಂಭವಾಗುತ್ತದೆ. ಸಿದ್ದಾಂತವನ್ನು ವಿವರಿಸುವಾಗ ಈ ಭಯ ಮನಸ್ಸನ್ನು ಆವರಿಸಿಕೊಂಡು ವಿವರಣೆಯ ಮೇಲೆ ಗಮನ ಕೇಂದ್ರೀಕರಿಸಲು ಅಡ್ಡ ಬರುತ್ತದೆ. ಅಥವ ಸಿದ್ದಾಂತವನ್ನು ವಿವರಿಸುತ್ತಿರುವ ವಿಧಾನ ಬೋರ್ ಎನಿಸಬಹುದು. ಹೀಗೆ ಬುನಾದಿ ಅಭದ್ರವಾದಾಗ ಅದನ್ನು ಅಚಲಂಬಿಸಿದ ಹೆಜ್ಜೆಗಳು ಅಸ್ಥಿರವಾಗುತ್ತವೆ. .

ಹಲವು ಕಾರಣಗಳಿಂದಾಗಿ ಪ್ರೌಢಶಾಲಾವಿದ್ಯಾರ್ಥಿಗಳು ಕೀಳರಿಮೆ ಹೊಂದಿರುತ್ತಾರೆ. ಅವರು ತೆಗೆದುಕೊಂಡ ಅಂಕಗಳ ಮೇಲೆ ಅವರ “ದಡ್ಡತನ”ವನ್ನು ಪದೇಪದೇ ಎತ್ತಿ ತೋರಿಸುವುದು, ದೈಹಿಕ ನ್ಯೂನತೆಗಳನ್ನು ಆಧರಿಸಿ ಅವರಿಗಿಡುವ ಅಡ್ಡ ಹೆಸರುಗಳು, ಆ ಸಮಯದಲ್ಲಿ ವಯೋಸಹಜವಾಗಿ ಕಾಣಿಸಿಕೊಳ್ಳುವ ಆಲಸ್ಯವನ್ನು ಹೀಯಾಳಿಸುವುದು, ಪದೇಪದೇ ಒಂದಲ್ಲ ಒಂದು ಕಾರಣಕ್ಕೆ ನಿಂದಿಸುತ್ತಿರುವುದು ಅವರಲ್ಲಿ ಕೀಳರಿಮೆ ಹೆಚ್ಚಿಸಬಹುದಾದ ಸನ್ನಿವೇಶಗಳು.

ಶೇ 6 ರಷ್ಟು ಮಂದಿಗೆ ಕಲಿಕಾ ತೊಂದರೆ ಇರುತ್ತದೆ. ಎಷ್ಟೋ ಪೋಷಕರು ಈ ತೊಂದರೆ ಇರಬಹುದು ಎಂದು ಒಪ್ಪುವುದೇ ಇಲ್ಲ. “ಸೋಂಬೇರಿ ಅಷ್ಟೆ. ಸರಿಯಾಗಿ ಪ್ರಯತ್ನವನ್ನು ಮಾಡಿದರೆ ಕಲಿಯಬಹುದು” ಎಂದೇ ವಾದಿಸುತ್ತಾರೆ. ಕಲಿಯುವ ಆಸಕ್ತಿಯಿದ್ದರೂ ಕಲಿಯಲಾಗದೆ ಪರದಾಡುವ ಮಕ್ಕಳೂ ಇರುತ್ತಾರೆ. ಅವರು ನರಳುತ್ತಿರುವ ಸಮಸ್ಯೆಯನ್ನು ಗುರುತಿಸುವುದರಲ್ಲಿ ನಾವು ವಿಫಲರಾಗುತ್ತೇವೆ.

ಸಮಾಜ ಸಹ ಈ ನಿಟ್ಟಿನಲ್ಲಿ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನ ಕಲಿಯುವುದರಲ್ಲಿ ತುಂಬ ಹಿಂದುಳಿದಿದ್ದಾರೆ ಎಂಬ ವರದಿ ಮಾಧ್ಯಮದಲ್ಲಿ ಬಂದಿತ್ರು ಇದು ಅಂತಹ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಮತ್ತಷ್ಟು ಕುಂಠಿತಗೊಳಿಸುತ್ತದೆ. ಇದೇ ಹೇಳಿಕೆಯನ್ನು ಗಣಿತ ಮತ್ತು ವಿಜ್ನಾನವನ್ನು ಕಲಿಯಲು ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಉತ್ಸುಕತೆ ತುಂಬಬೇಕಿದೆ ಎಂದು ವರದಿ ಮಾಡಿದ್ದರೆ?

ಮಕ್ಕಳು ಪ್ರೌಢಶಾಲೆಯ ಹಂತಕ್ಕೆ ಬರುವ ವೇಳೆಗೆ ಗಣಿತ ಕುರಿತಂತೆ ಪೋಷಕರ ಮತ್ತು ಶಿಕ್ಷಕರ ನಡವಳಿಕೆಗಳು ಅವರ ಮನಸ್ಸಿನಲ್ಲಿ ಆಲೋಚನೆಗಳನ್ನು ನಿರ್ಮಿಸಿಬಿಟ್ಟಿರುತ್ತದೆ. ನಮ್ಮ ನಿಜಜೀವನಕ್ಕೆ ಈ ಗಣಿತ ಯಾಕೆ ಬೇಕು ಎಂಬ ಪ್ರಶ್ನೆ ಕಾಡುತ್ತದೆ. ಅದಕ್ಕೆ ಉತ್ತರವನ್ನು ಪೋಷಕರಾಗಲೀ, ಶಿಕ್ಷಕರಾಗಲೀ ಕೊಡದೇ ಹೋದರೆ ಕಲಿಯುವ ಆಸಕ್ತಿ ಮೂಡುವುದೇ ಇಲ್ಲ.

ಯಾವುದೇ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಸಮಸ್ಯೆಯನ್ನು ಗುರುತಿಸುವುದು. ಅನಂತರ ಅದನ್ನು ಬಗೆಹರಿಸಲು ಏನು ಮಾಡಬೇಕು ಎಂದು ವಿಶ್ಲೇಷಿಸುವುದು. ಈ ವಿಷಯದಲ್ಲಿ ನಾವು ಎಡವುತ್ತೇವೆ. ಮೇಲೆ ಕಾಣಿಸಿಕೊಳ್ಲುವ ಲಕ್ಷಣಗಳನ್ನೇ ಸಮಸ್ಯೆ ಎಂದು ನಂಬಿಕೊAಡು ಪರಿಹಾರ ಹುಡುಕಲು ಹೋಗುತ್ತೇವೆ. ಆ ಪರಿಹಾರಗಳು ಸಮಸ್ಯೆಯನ್ನು ನಿವಾರಿಸುವುದಿಲ್ಲ. ಸಮಸ್ಯೆ ಮುಂದುವರೆಯುತ್ತಾ ಹೋಗುವುದು.

ಗಣಿತ ಎಂದರೆ ಕಬ್ಬಿಣದ ಕಡಲೆ ಎಂಬ ನಂಬಿಕೆಯನ್ನು ಹೋಗಲಾಡಿಸಲು ನಾವು ಮಾಡುತ್ತಿರುವ ಪ್ರಯತ್ನವೂ ಇದೇ ರೀತಿಯದು. ಗಣಿತ ಬಾರದವರಿಗೆ ದಡ್ಡರು ಎಂಬ ಹಣೆ ಪಟ್ಟಿ ಹಚ್ಚಿ ಸಮಸ್ಯೆಯನ್ನು ಮುಂದುವರೆಯಲು ಬಿಟ್ಟಿದ್ದೇವೆ.

ಮಕ್ಕಳಿಸ್ಕೂಲ್ ಮನೇಲಲ್ವೇ ಎಂದು ಕೈಲಾಸಂ ಅವರು ಹೇಳಿದಂತೆ ಗಣಿತ ಕಲಿಯಲು ಕಷ್ಟವಲ್ಲ, ಸರಿಯಾದ ಕ್ರಮಬದ್ಧ ಕಲಿಕೆ ಸಾಧ್ಯವಿದೆ ಎಂಬ ಪ್ರೋತ್ಸಾಹಕ ನುಡಿಗಳನ್ನು ಮನೆಯಲ್ಲಿ ಪೋಷಕರು ಮಾತನಾಡಬೇಕು. ಅದು ತಮಗೂ ಕಷ್ಟವಾಗುತ್ತಿತ್ತು ಎಂದು ಹೇಳುವ ಬದಲಿಗೆ ಕಲಿಯಲು ಯಾವರೀತಿ ಪ್ರಯತ್ನಿಸಬೇಕು ಎಂದು ಗೊತ್ತಿರಲಿಲ್ಲ ಎಂದು ಹೇಳಿದಾಗ ಮಕ್ಕಳ ಮನಸ್ಸಿನಲ್ಲಿ ಗಣಿತ ಕುರಿತು ಪೂರ್ವಗ್ರಹ ಮೂಡುವುದಿಲ್ಲ.

ಕಲಿಸುವುದರಲ್ಲಿ ಸೃಜನಶೀಲತೆ ಅಗತ್ಯವಿದೆ. ವಿಮಾನ ಹೇಗೆ ಹಾರುವುದು ಎಂದು ಶಿಕ್ಷಕರು ವಿವರಿಸಿದಾಗ ಅರ್ಥವಾಗಲಿಲ್ಲ ಎಂದ ವಿದ್ಯಾರ್ಥಿಗಳನ್ನು ಕೊಠಡಿಯಿಂದ ಆಚೆ ಕರೆದುಕೊಂಡು ಹೋಗಿ ಹಾರುವ ಹಕ್ಕಿಗಳನ್ನು ತೋರಿಸುತ್ತ ಹೇಗೆ ಅರ್ಥ ಮಾಡಿಸಿದರು ಎಂದು ಅಬ್ದುಲ್ ಕಲಾಂ ಅವರು ಸ್ಮರಿಸುತ್ತಾರೆ. ನೈಜ ಬದುಕಿಗೆ ಹೊಂದಿಸಿ, ಸೃಜನಶೀಲ ಮಾರ್ಗಗಳ ಮೂಲಕ ಮಕ್ಕಳಲ್ಲಿ ಗಣಿತ ಕಲಿಯುವ ಆಸಕ್ತಿಯನ್ನು ಮೂಡಿಸುವುದು ಸಾಧ್ಯವಿದೆ. ಬದುಕಿನ ಎಲ್ಲ ಆಯಾಮಗಳಲ್ಲಿ ಲೆಕ್ಕದ ಬಳಕೆ ಆಗುತ್ತಲೇ ಇರುತ್ತದೆ!

ಅಡುಗೆ ಮನೆಯಲ್ಲಿ ಎಷ್ಟು ಅಕ್ಕಿಗೆ ಎಷ್ಟು ನೀರು ಇಡಬೇಕು, ದೋಸೆ ಮಾಡಲು ಹಿಟ್ಟು ಮಾಡಲು ಯಾವ ಧಾನ್ಯಗಳನ್ನು ಯಾವ ಪ್ರಮಾಣದಲ್ಲಿ ಬೆರೆಸಬೇಕು ಎಂಬ ಲೆಕ್ಕಾಚಾರ ಅಡುಗೆ ಮಾಡುವವರಿಗೆ ಎಷ್ಟು ಕರಾರುವಾಕ್ಕಾಗಿ ತಿಳಿದಿರುತ್ತದೆ. ಆ ಪೋಷಕರು ಲೆಕ್ಕ ಮಾಡಲು ಬಾರದ ದಡ್ಡರೇ?

ಕ್ರಿಕೆಟ್ ಆಟದಲ್ಲಿ ಎಷ್ಟು ಓವರುಗಳಲಿ ಎಷ್ಟು ರನ್ ಗಳಿಸಬೇಕು ಎಂದು ನಿಖರವಾಗಿ ಅಂದಾಜು ಮಾಡುವ ವಿದ್ಯಾರ್ಥಿಗಳು ಶಾಲಾ ಲೆಕ್ಕಗಳನ್ನು ಮಾಡುವಾಗ ಮಾತ್ರ ದಡ್ಡರಾಗಿಬಿಡುವರೇ?!

ಹಿಂದಿನ ಕಾಲದವರು ಒಗಟುಗಳನ್ನು ಹೇಳುತ್ತಿದ್ದರು. ಒಗಟು ಬಿಡಿಸಲು ಮೆದುಳು ಸಮಸ್ಯೆಯನ್ನು ವಿಶ್ಲೇಷಿಸಿ, ತಿಳಿದಿರುವ ಅಂಶಗಳನ್ನು ಕ್ರೋಢೀಕರಿಸಿ ಉತ್ತರವನ್ನು ಕೊಡುತ್ತಿದ್ದರು. ಶಾಲೆಯಲ್ಲಿ ಕೊಡುವ ಲೆಕ್ಕದಲ್ಲಿ “ಎಕ್ಷ್” ಅನ್ನು ಕಂಡು ಹಿಡಿಯುವುದೂ ಈ ಒಗಟು ಬಿಡಿಸಿದಂತೆಯೇ ಅಲ್ಲವೆ!

ಪದಬಂಧ, ಸುಡೋಕುಗಳಲ್ಲಿಯೂ ಇದೇ ಕ್ರಮವನ್ನು ಅನುಸರಿಸುವುದು. ಆಟಗಳ ಮೂಲಕ, ಕಥೆಗಳ ಮೂಲಕ ಗಣಿತದಲ್ಲಿ ಆಸಕ್ತಿಯನ್ನು ಮೂಡಿಸುವುದು ಸಾಧ್ಯವಿದೆ.

ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿ, ಅವರಲ್ಲಿ ಸಮಸ್ಯೆ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಬಹುದು. ಅದರಲ್ಲಿ ಗೆದ್ದವರನ್ನು ಮಾತ್ರ ಹೊಗಳದೆ ಸೋತವರ ಪ್ರಯತ್ನವನ್ನೂ ಹೊಗಳಬೇಕು. ಅವರ ಪ್ರಯತ್ನದಲ್ಲಿ ಆದ ಲೋಪಗಳನ್ನು ಅವರೇ ಗುರುತಿಸಿ ತಿದ್ದುಕೊಳ್ಳುವಂತೆ ಮಾಡಬೇಕು.

ಇತ್ತೀಚೆಗೆ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಬದುಕಿನ ಪಾಠ ಕಲಿಸುವಾಗ ನೀವೇನಾಗ ಬಯಸುವಿರಿ ಎಂದು ಕೇಳಿದಾಗ ಶಿಕ್ಷಕಿಯಾಗಲು ಬಯಸುವೆ ಎಂದು ಒಬ್ಬ ಹತ್ತನೆಯ ವಿದ್ಯಾರ್ಥಿನಿ ಹೇಳಿದಳು. ತಾನೂ ಅವರಂತೆ ಆಗಬೇಕು ಎನ್ನುವ ಭಾವನೆಯನ್ನು ಮೂಡಿಸುವ ಶಿಕ್ಷಕರು ಕಲಿಸುವ ವಿಷಯಗಳನ್ನು ಕಲಿಯಲು ವಿದ್ಯಾರ್ಥಿಗಳು ವಿಶೇಷ ಆಸಕ್ತಿಯನ್ನು ತೋರಿಸುವರು. ವಿಷಯದಲ್ಲಿ ಆಸಕ್ತಿ ಮೂಡಿಸುವುದೇ ಶಿಕ್ಷಕರು ಮಾಡಬೇಕಾದ ಬಹುಮುಖ್ಯ ಕೆಲಸ.

ಏನು ಮಾಡಬಹುದು?

  • ಪ್ರತಿದಿನ ಒಂದೆಡೆ ಕುಳಿತು, ಕಣ್ಣು ಮುಚ್ಚಿ ಎರಡು ನಿಮಿಷ ದೀರ್ಘ ಉಸಿರಾಡಿ. 

  • ಗಣಿತದ ಸಮಸ್ಯೆಗಳನ್ನು ಬಿಡಿಸಲು ಮನಸ್ಸು ಮುಕ್ತವಾಗಿ, ಆತಂಕರಹಿತವಾಗಿರಬೇಕು. ಇದಕ್ಕೆ ಮಂದಗತಿಯ, ದೀರ್ಘ ಉಸಿರಾಟ ನೆರವಾಗುವುದು. 

  • ಮನಸ್ಸಿನಲ್ಲಿಯೇ ಕೆಲವು ಅಂಕಿಗಳ ಗುಣಾಕಾರ ಮತ್ತು ಭಾಗಾಕಾರವನ್ನು ಮಾಡುತ್ತ ಹೋಗಿ. ಹೀಗೆ ಮಾಡುವಾಗ ಉತ್ತರಕ್ಕೆ ಆದ್ಯತೆ ನೀಡದೆ ಗುಣಾಕಾರ/ಭಾಗಾಕಾರ ಮಾಡುವಿಕೆಗೆ ಗಮನ ಕೊಡಿ. ದೊಡ್ಡ ಸಂಖ್ಯೆಗಳನ್ನ ಹಾಕಿಕೊಳ್ಳುವುದು ಉತ್ತಮ. ಗಣಿತ ಕುರಿತಂತೆ ನಕಾರಾತ್ಮಕ ಆಲೋಚನೆಗಳನ್ನು ಕೈ ಬಿಡಿ.

  • ಲೆಕ್ಕ ಮಾಡುವಾಗ ಅಯ್ಯೋ, ಲೆಕ್ಕ ಎಂದು ಮುಂದೂಡದೆ, ಅನ್ಯ ಆಕರ್ಷಣೆಗಳಿಗೆ ಅವಕಾಶವಿಲ್ಲದಂತೆ ಗಣಿತದ ಸಮಸ್ಯೆಗಳನ್ನು ಬಿಡಿಸುವುದರ ಕಡೆ ಗಮನ ಕೊಡಿ.

  • ಸಿದ್ಧಾಂತವನ್ನು ಹಂತಹಂತವಾಗಿ ವಿಂಗಡಿಸಿಕೊಂಡು ಬರೆದು, ಅರ್ಥ ಮಾಡಿಕೊಳ್ಳಲು ಸಮಯವನ್ನು ಕೊಡಿ.

  • ಸಿದ್ದಾಂತಗಳನ್ನು ಬಾಯಿಪಾಠ ಮಾಡಬೇಡಿ. ಅರ್ಥ ಮಾಡಿಕೊಳ್ಳಿ.

  • ‘ನನಗೆ ಗಣಿತ ಬರದು’ ಎನ್ನುವ ಯೋಚನೆ ಬಂದಾಗ, ‘ನನಗೆ ಯಾಕೆ ಬರದು? ಅದೆಷ್ಟೋ ಮಂದಿಗೆ ಬರುತ್ತದೆ. ಅಂದಮೇಲೆ ನನಗೂ ಬರುವುದು’ ಎಂಬ ಉತ್ತೇಜಕ ವಾಕ್ಯ ಭರವಸೆ ಮೂಡಿಸಬಲ್ಲದು.

  • ಸತತ ಅಭ್ಯಾಸ ನೆನಪಿನಲ್ಲುಳಿಯಲು ನೆರವಾಗುವುದು.ಒಂದು ಸಮಸ್ಯೆಯನ್ನು ಬಿಡಿಸಿದ ನಂತರ, ಉತ್ತರದಿಂದ ಹಿಂದಕ್ಕೆ ಸಮಸ್ಯೆಯವರೆಗೆ ಓದಿ. ಇದು ಕ್ರಮವನ್ನು ನೆನಪಿಡಲು ನೆರವಾಗುವುದು.

  •  ಬದುಕಿಗೆ ಅನ್ವಯಿಸಿಕೊಳ್ಳಿ. ಹುರುಪು ಸಿಗುತ್ತದೆ.

  • ಕೆಲವು ಗೆಳೆಯರು ತಂಡ ಮಾಡಿಕೊಂಡು ಒಟ್ಟಿಗೆ ಕಲಿಯಲು ಪ್ರಯತ್ನ ಮಾಡಿದರೆ, ಭಯ ಖಂಡಿತ ದೂರ ಹೋಗುವುದು.

  • ಲೆಕ್ಕದಲ್ಲಿ ಕೊಟ್ಟಿರುವ ಅಂಶಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿಕೊಂಡರೆ, ಎಲ್ಲ ಅಂಶಗಳೂ ಒಟ್ಟಾಗಿ ಕಾಣಿಸುತ್ತವೆ. ಅನಂತರ ಅದನ್ನು ಬಿಡಿಸುವುದು ಸುಲಭವಾಗುವುದು.

  • ಗಣಿತವನ್ನು ಮಣಿಸಿ ಮುನ್ನುಗ್ಗುವ ಶಕ್ತಿ ನಿಮ್ಮ ಮನಸ್ಸಿಗಿದೆ ಎಂಬುದನ್ನು ಸದಾಕಾಲ
    ನೆನಪಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT