ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಚಂದ್ರದ ನೆಪದಲ್ಲಿ...

ಸಲಹೆ
Last Updated 6 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಮದುವೆಯ ಸಂಭ್ರಮದಲ್ಲಿಯೇ ಮಧುಚಂದ್ರದ ಕನವರಿಕೆ ಆರಂಭವಾಗಿರುತ್ತದೆ. ಮದುವೆಯ ದಿನ ನಿರ್ಧಾರವಾದೊಡನೆ ಮಧುಚಂದ್ರದ ಯೋಜನೆಯನ್ನೂ ಆರಂಭಿಸಿ. ಜೇಬಿಗೆ ಹಗುರವಾಗುತ್ತದೆ, ಸಾಕಷ್ಟು ಸಮಯ ಸಿಗುತ್ತದೆ.

ಕಡಿಮೆ ಖರ್ಚಿಗಾಗಿ ಬೇಗ ಯೋಜನೆ
ವಿಮಾನ ಪ್ರಯಾಣ ದರ, ಹೋಟೆಲ್ ಕೊಠಡಿ ಎಲ್ಲ ನಿಗದಿಮಾಡಿಕೊಳ್ಳಲು ಸ್ವಲ್ಪ ಹೆಚ್ಚಿನ ಸಮಯ ಬೇಕಾಗುತ್ತದೆ. ಮಧುಚಂದ್ರಕ್ಕೆ ಹೋಗುವ ಏಳೆಂಟು ತಿಂಗಳು ಮೊದಲೇ ಎಲ್ಲಿಗೆ ಪ್ರಯಾಣ ಮಾಡಬೇಕು. ಆ ಸ್ಥಳದಲ್ಲಿ ಏನೆಲ್ಲಾ ನೋಡಬೇಕು ಎಂಬ ಬಗ್ಗೆ ಯೋಜನೆ ರೂಪಿಸುವುದರಿಂದ ಕಡಿಮೆ ಖರ್ಚಿನಲ್ಲಿ ಏರ್‌ ಟಿಕೆಟ್‌ ಪಡೆಯಬಹುದು.

ಒಟ್ಟಿಗೆ ನಿರ್ಧರಿಸಿ
ಸಮುದ್ರ ದಡದಲ್ಲಿ ಚೆಲ್ಲಾಟವಾಡಬೇಕು ಎಂದು ನಿಮ್ಮ ಸಂಗಾತಿಗೆ ಅನಿಸಿದರೆ, ಪರ್ವತದ ಮಡಿಲೊಳಗೆ ನಿಸರ್ಗದ ಸೊಬಗು ಸವಿಯಬೇಕು ಎಂದು ನಿಮಗನಿಸಬಹುದು. ಒಬ್ಬರಿಗೆ ಇಷ್ಟವಾದ ಸ್ಥಳ ಮತ್ತೊಬ್ಬರಿಗೆ ಇಷ್ಟವಾಗದೇ ಇರಬಹುದು. ಹಾಗಾಗಿ ನಿಮ್ಮ ಆಸಕ್ತಿಗಳ ಬಗ್ಗೆ ಒಟ್ಟಿಗೆ ಚರ್ಚಿಸಿ. ಒಬ್ಬರೇ ಎಲ್ಲವನ್ನೂ ನಿರ್ಧರಿಸಬೇಡಿ. ನಿಮ್ಮ ಸಂಗಾತಿಯ ಇಷ್ಟವನ್ನೂ ಕೇಳಿ.

ಪರರ ಚಿಂತೆ ನಿಮಗ್ಯಾಕೆ?
ಪಕ್ಕದ ಮನೆಯವರು ಮನಾಲಿಗೆ ಹೋಗಿದ್ದರು, ಗೆಳತಿ ರಷ್ಯಾ ನೈಟ್‌ಲೈಫ್‌ ನೋಡಿ ಬಂದಳು, ಹೀಗೆ ಪರರು ಎಲ್ಲಿ ಹೋಗಿದ್ದರು ಎನ್ನುವುದನ್ನು ಹೋಲಿಸಿಕೊಂಡು, ನೀವು ಎಲ್ಲಿ ಹೋಗಬೇಕೆನ್ನುವುದನ್ನು ಮರೆಯಬೇಡಿ. ನಿಮ್ಮ ಆರ್ಥಿಕ ಸ್ಥಿತಿ, ಆಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲಿಗೆ ಹೋಗಬೇಕೆನ್ನುವುದನ್ನು ನಿರ್ಧರಿಸಿ.

ಗೂಗಲ್‌ ಮಂತ್ರ!
ಎಲ್ಲದಕ್ಕೂ ಗೂಗಲಿಸಿ ನೋಡುವ ಈ ಹೊತ್ತಿಗೆ ಹನಿಮೂನ್ ಪ್ಯಾಕೇಜ್‌ಗಳಿಗೆ ಅಂತರ್ಜಾಲದಲ್ಲಿ ಕೊರತೆ ಇಲ್ಲ. ಸಲಹೆ ಸೂಚನೆ, ವಿಶೇಷ ರಿಯಾಯಿತಿಗಾಗಿ ಅಂತರ್ಜಾಲವನ್ನು ಅವಲಂಬಿಸಬಹುದು. ಆದರೆ ಇಲ್ಲಿರುವುದೆಲ್ಲವೂ ಸತ್ಯವಲ್ಲ. ಕೆಲವೊಮ್ಮೆ ನಕಲಿ ಫೋಟೊಗಳನ್ನು ಹಾಕಿ ಮೋಸಮಾಡುವವರು ಇದ್ದಾರೆ. ಟ್ರಾವೆಲ್ ಏಜೆಂಟ್‌ ಅಥವಾ ಅಧಿಕೃತ ಕಂಪನಿಯಿಂದ ಕೊಠಡಿಗಳನ್ನು ಬುಕ್‌ ಮಾಡಿಕೊಳ್ಳಿ.

ಆರ್ಥಿಕ ತಜ್ಞರಾಗಿ
ಪ್ರವಾಸದಲ್ಲಿ ಇರುವಾಗ ಹಣ ನಿರ್ವಹಣೆ ಮಾಡುವುದು ಸವಾಲಿನ ವಿಷಯ. ಹಾಗಂತ ಕಳಪೆ ಹೋಟೆಲ್‌ಗಳೊಂದಿಗೆ ರಾಜಿಯಾಗಿ ಸಂತಸದ ಕ್ಷಣಗಳನ್ನು ಹಾಳು ಮಾಡಿಕೊಳ್ಳಬೇಡಿ. ಓಡಾಟಕ್ಕೆ ಎಷ್ಟು ಬೇಕು, ಹೋಟೆಲ್, ಶಾಪಿಂಗ್ ಎಲ್ಲದಕ್ಕೂ ಇಂತಿಷ್ಟೇ ಖರ್ಚು ಮಾಡಬೇಕು ಎಂಬುದನ್ನು ಲೆಕ್ಕ ಮಾಡಿಟ್ಟುಕೊಳ್ಳಿ. ಅನಗತ್ಯವಾಗಿ ಯಾವುದಕ್ಕೋ ಖರ್ಚುಮಾಡಿ, ಅಗತ್ಯವಿರುವಲ್ಲಿ ಜಿಪುಣತನ ಮಾಡಬೇಡಿ.

ಸಮತೋಲನ
ಖಾಸಗಿ ಕ್ಷಣಗಳಿಗೆ ಹಾಗೂ ಸುತ್ತಾಟಕ್ಕೆಂದೇ ನಿಮ್ಮ ದಿನಗಳನ್ನು ಯೋಜಿಸಿಕೊಳ್ಳಿ. ಇದು ನೀವಿಬ್ಬರೂ ಪರಮಾಪ್ತವಾಗುವ ಸಮಯವಾಗಿದೆಯೆಂಬುದು ನೆನಪಿರಲಿ. ಸುತ್ತಾಟ, ವಿಶ್ರಾಂತಿ, ಖಾಸಗಿ ಕ್ಷಣ ಎಲ್ಲವನ್ನೂ ಸಮತೋಲನ ಮಾಡುವಂತೆ ಯೋಜಿಸಿಕೊಳ್ಳಿ.

ಪರಕೀಯ ಭಾವ ಬೇಡ
ಹೊಸ ಸ್ಥಳಕ್ಕೆ ಭೇಟಿ ನೀಡಿದಾಗ ಪರಕೀಯ ಭಾವ ಬೇಡ. ಅಲ್ಲಿನ ಸಂಸ್ಕೃತಿ, ಆಹಾರ ಶೈಲಿ, ಜನ ಜೀವನಕ್ಕೆ ಹೊಕ್ಕು ಸ್ಫೂರ್ತಿ ಪಡೆಯಿರಿ. ಇದು ಬದುಕಿನಲ್ಲಿ ಬಣ್ಣವನ್ನು ತುಂಬುತ್ತದೆ. ಹೊಸ ಸಮುದಾಯದ ಸಂಸ್ಕೃತಿ ನಮ್ಮದಾಗಿಸಿಕೊಳ್ಳತ್ತಾ ಹೊಸ ರುಚಿಗೆ ಬದುಕು ತೆರೆದುಕೊಳ್ಳುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಸಲಹೆ
ಇದು ಒಳ್ಳೆಯ ಸಲಹೆ ಅಲ್ಲದಿದ್ದರೂ, ಕೆಲವೊಮ್ಮೆ ಉಪಯೋಗಕ್ಕೆ ಬರುತ್ತದೆ. ಮಧುಚಂದ್ರಕ್ಕೆ ಎಲ್ಲಿಗೆ ಹೋಗಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಬಹುದು.

ಅಚ್ಚರಿ, ಸೋಜಿಗ, ಸಂಭ್ರಮ
ಮಧುಚಂದ್ರದ ನಡುವೆ ಒಂದಿಷ್ಟು ಕೌತುಕದ ಕ್ಷಣಗಳಿರಲಿ. ಸಂಗಾತಿಗೆ ಉಡುಗೊರೆ ನೀಡಿ, ನಿಮ್ಮ ಸಂಗಾತಿಗಾಗಿ ವಿಶೇಷ ಊಟ ತಯಾರಿಸಿ ಕೊಡಿ. ನೆನಪಿನಲ್ಲಿ ಉಳಿಯುವಂಥ ಒಂದಿಷ್ಟು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗಿ.

ಮದುವೆಯ ಮರುದಿನವೇ..
ಮದುವೆಯಾದ ಮರುದಿನವೇ ಮಧುಮಂಚಕ್ಕೆ ಹಾರುವುದು ಸಿನಿಮಾಗಳಲ್ಲಿ ಬಿಡಿ. ನಿಜದಲ್ಲಿ ಹೀಗೆಲ್ಲಾ ಹೋಗಲು ಸಾಧ್ಯವಿಲ್ಲ. ಮದುವೆ ಸಮಾರಂಭ ಮುಗಿದು, ನೆಂಟರ ಮನೆ; ಅಲ್ಲಿ ಇಲ್ಲಿ ಹೋಗಿ ಬಂದು ಸಹಜ ಬದುಕಿಗೆ ಮರಳಲು ವಾರವಾದರೂ ಬೇಕು. ಬದುಕಿಡೀ ನೆನಪಿನಲ್ಲಿ ಉಳಿವ ರಸಮಯ ಕ್ಷಣಗಳನ್ನು ಕಳೆಯಬೇಕೆಂದಾಗ ತರಾತುರಿಯಲ್ಲಿ ಹೋಗಿ ಅಭಾಸ ಆಗುವುದಕ್ಕಿಂತ, ಒಂದೆರಡು ದಿನ ವಿಶ್ರಾಂತಿ ಪಡೆದು ನಂತರ ಮಧುಚಂದ್ರಕ್ಕೆ ಹೋಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT