ಸಾಮಾನ್ಯವಾಗಿ ಒಂದು ಸಿನಿಮಾ ಯಾಕೆ ಇಷ್ಟವಾಗುತ್ತದೆ? ಅದ್ಭುತ ಕಥೆಯಿಂದ, ಬಿಗಿ ಸಂಭಾಷಣೆಯಿಂದ, ತಾಂತ್ರಿಕ ಗಟ್ಟಿತನದಿಂದ, ಪ್ರಬುದ್ಧ ಅಭಿನಯದಿಂದ, ನಿರೂಪಣೆಯ ತಾಜಾತನದಿಂದ...

ಇವೆಲ್ಲವುಗಳ ಹೊರತಾಗಿಯೂ ಕೆಲವು ಸಿನಿಮಾಗಳು ನಮ್ಮ ಬದುಕಿನ ಕಟು ಸತ್ಯಗಳನ್ನು ನಮಗೇ ತೋರಿಸಿ ಬೆಚ್ಚಿಬೀಳಿಸುವ ಕಾರಣಕ್ಕೆ ಇಷ್ಟವಾಗುತ್ತದೆ. ‘ಪಿಂಕ್’ ಅಂಥ ಸಿನಿಮಾ.

ಹೆಣ್ಣಿನ ದೇಹವನ್ನು, ಅವಳ ಚೈತನ್ಯವನ್ನು ಕುಗ್ಗಿಸುವ, ಪಳಗಿಸುವ ಪರಿಕರವಾಗಿ ಬಳಸಿಕೊಳ್ಳುವ ಗಂಡಿನ ಕ್ರೌರ್ಯ– ಅದಕ್ಕೆ ಪೂರಕವಾಗಿ ಒದಗಿಬರುವ ವ್ಯವಸ್ಥೆ, ಸಂಪ್ರದಾಯಗಳು, ಭಾಷೆ ಎಲ್ಲವನ್ನೂ ರಪ್ ಎಂದು ಮುಖಕ್ಕೆ ರಾಚುವ ಹಾಗೆ ಕಾಣಿಸುವ ಸಿನಿಮಾ ‘ಪಿಂಕ್’.

ಅನಿರುದ್ಧ್ ರಾಯ್ ಚೌಧರಿ ನಿರ್ದೇಶನದ ಈ ಹಿಂದಿ ಸಿನಿಮಾ ಬಿಡುಗಡೆಯಾಗಿದ್ದು 2016ರಲ್ಲಿ.

ನಾವು ದಿನನಿತ್ಯ ಬಳಸುವ ಅದೇ ಭಾಷೆ, ಶಬ್ದ, ವಾಕ್ಯಗಳು ಹೇಗೆ ಹೆಣ್ಣಿನ ‘ಕ್ಯಾರೆಕ್ಟರ್’ ವಿಷಯಕ್ಕೆ ಬಂದಾಗ ಹರಿತ ಶಸ್ತ್ರಾಸ್ತ್ರಗಳಾಗಿ ಬದಲಾಗುತ್ತವೆ ಎಂಬುದನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ‘ಕೆಟ್ಟ ಹುಡುಗ’ ಎಂಬ ಶಬ್ದ ಹೊರಡುವ ಅರ್ಥವಿನ್ಯಾಸಕ್ಕೂ ‘ಕೆಟ್ಟ ಹುಡುಗಿ’ ಎಂಬ ಶಬ್ದ ಹುಟ್ಟಿಸುವ ಅರ್ಥವಿನ್ಯಾಸಕ್ಕೂ ಎಷ್ಟು ಅಂತರವಿದೆಯಲ್ಲವೇ? ಸಮಾಜ ‘ಕೆಟ್ಟ ಹುಡುಗ’ರ ಜತೆಗೆ ನಡೆದುಕೊಳ್ಳುವ ರೀತಿಗೂ ‘ಕೆಟ್ಟ ಹುಡುಗಿ’ಯ ಜತೆಗೆ ನಡೆದುಕೊಳ್ಳುವ ಸುಲಭಕ್ಕೆ ಸಿಗುವವಳು ಎಂಬ ಭಾವಕ್ಕೂ ಎಷ್ಟು ಫರಕ್ಕಿದೆ ಅಲ್ಲವೇ?

‘ಎಲ್ಲಿ ವಾಸಿಸುತ್ತಾಳೆ? ಒಬ್ಬಳೇ ಇರ್ತಾಳಾ? ರಾತ್ರಿ ಎಷ್ಟೊತ್ತಿಗೆ ಮನೆಗೆ ಬರ್ತಾಳೆ? ಜತೆಗೆ ಯಾರು ಇರ್ತಾರೆ? ಕುಡಿತಾಳಾ? ಹುಡುಗರ ಜತೆಗೆಲ್ಲ ನಗುನಗುತ್ತಾ ಮಾತಾಡ್ತಾಳಾ? ಯಾವ ರೀತಿ ಡ್ರೆಸ್ ಹಾಕೊತಾಳೆ? ಎಂಥ ಜೋಕ್ ಹೇಳ್ತಾಳೆ? ನಾರ್ಥೀಸ್ಟಾ?’ ಅಬ್ಬ! ಹುಡುಗಿಯನ್ನು ನಡತೆಗೆಟ್ಟವಳು ಎಂದು ತೀರ್ಮಾನಿಸಲು ಎಷ್ಟೆಲ್ಲ ಮಾನದಂಡಗಳಿವೆ ನೋಡಿ ನಮ್ಮಲ್ಲಿ? (ಹುಡುಗರ ವಿಷಯದಲ್ಲಿ ಇವ್ಯಾವುವೂ ಲೆಕ್ಕಕ್ಕೇ ಬರುವುದಿಲ್ಲ) ಮತ್ತು ಈ ಮೇಲಿನ ಯಾವುದರ ಮೂಲಕ ‘ನಡತೆಗೆಟ್ಟವಳು’ ಎಂಬ ಹಣೆಪಟ್ಟಿ ಕಟ್ಟಿಕೊಂಡರೂ ಅವಳು ಎಲ್ಲರಿಗೂ ‘ಸುಲಭಕ್ಕೆ ಸಿಗುವವಳು’ ಆಗಿಬಿಡುತ್ತಾಳಲ್ಲ.

ಬರೀ ‘ಬಾಡಿ ಪಾಲಿಟಿಕ್ಸ್’ ಅಷ್ಟೇ ಅಲ್ಲ, ನಮ್ಮ ಬದುಕಿನಲ್ಲಿ ಕಣ್ಣುಜ್ಜಿಕೊಂಡು ನೋಡದ ಹೊರತು ಗೊತ್ತಾಗದೇ ಹೋಗಬಹುದಾದ ಈ ‘ಲಾಂಗ್ವೇಜ್ ಪಾಲಿಟಿಕ್ಸ್’ ವಿರುದ್ಧ ಕೂಡ ಇಂದು ಪ್ರಜ್ಞಾವಂತರು ಹೋರಾಡಬೇಕಾಗಿದೆ.

ಈ ಎಲ್ಲವನ್ನೂ ತಪರಾಕಿ ಕೊಟ್ಟಷ್ಟು ಸ್ಪಷ್ಟವಾಗಿ ನಿಖರವಾಗಿ ಹೇಳುವ ಸಿನಿಮಾ ‘ಪಿಂಕ್’. ನಿರ್ದಿಷ್ಟವಾದದ್ದನ್ನು ಹೇಳುವ ಉದ್ದೇಶದಿಂದಲೇ ರೂಪುಗೊಂಡ ಸಿನಿಮಾ ಇದಾಗಿರುವುದು ಒಂದು ಮಿತಿಯೂ ಆಗಿರಬಹುದು. ಆದರೆ ಅಭಿವ್ಯಕ್ತಿ ಮಾಧ್ಯಮದ ಯಶಸ್ಸು–ವೈಫಲ್ಯದ ಮಿತಿಯನ್ನೂ ಮೀರಿ ಈ ಸಿನಿಮಾ ನಮ್ಮನ್ನು ಎಚ್ಚರಗೊಳಿಸುವ ಕಾರಣಕ್ಕೆ ತುಂಬ ಮುಖ್ಯವಾಗುತ್ತದೆ.

ಒಂದೆಡೆ ‘ಮಹಿಳೆಯರು ಧರಿಸುವ ದಿರಿಸುಗಳು ಗಂಡು ಅವಳನ್ನು ನೋಡುವ ದೃಷ್ಟಿಯನ್ನು ನಿರ್ಧರಿಸುತ್ತದೆ. ಆದ್ದರಿಂದಲೇ ಡ್ರೆಸ್ ಕೋಡ್ ಬೇಕು’ ಎಂದು ಬೊಬ್ಬೆ ಹೊಡೆಯುವ– ತಮ್ಮನ್ನು ತಾವೇ ನಿಯಂತ್ರಿಸಿಕೊಳ್ಳಲಾಗದ ದುರ್ಬಲ ಮನಸ್ಥಿತಿಯ ಉಗ್ರ ಮೌಢ್ಯವಾದಿಗಳು, ಇನ್ನೊಂದೆಡೆ ಮಹಿಳಾವಾದದ ಹೆಸರಿನ ಬ್ಯಾನರ್ ಇಟ್ಟುಕೊಂಡು ಫೋಟೊಕ್ಕೆ ಫೋಸ್ ಕೊಡುತ್ತ ಪಾರ್ಟಿಗಳಲ್ಲಿ ಕಳೆದುಹೋಗುವ ಸೋ ಕಾಲ್ಡ್ ಫೆಮಿನಿಸ್ಟ್‌ಗಳು... ಜತೆಗೆ ಇವೆರಡು ಬ್ಲಾಕ್ ಅಂಡ್ ವೈಟ್ ತೀರಗಳ ನಡುವೆ ಬದುಕುತ್ತಿರುವ ನಮ್ಮೆಲ್ಲರನ್ನೂ ತಲ್ಲಣಗೊಳಿಸುವ ಶಕ್ತಿ ಈ ಸಿನಿಮಾಕ್ಕಿದೆ.

ಅಮಿತಾಭ್ ಬಚ್ಚನ್, ನಿತೇಶ್ ಕಲ್‌ಬಂಡೆ, ತಾಪ್ಸಿ ಪನ್ನು, ಕೃತಿ ಕುಲ್ಹಾರಿ, ಆ್ಯಂಡ್ರಿಯಾ ಟಾರಿಯಂಗ್ ಅವರ ಅಭಿನಯವೂ ಬಹುದಿನದವರೆಗೆ ಕಾಡುವಂತಿದೆ.

ಸಿನಿಮಾ ಮುಗಿಸಿ ಹೊರಬರುವಾಗ ನಮ್ಮ ಮನಸಲ್ಲಿ ದಟ್ಟವಾಗಿ ಕಟ್ಟುವ ವಿಷಾದದ ಛಾಯೆ ಸಿನಿಮಾದಲ್ಲಿನ ಮೂರು ಹುಡುಗಿಯರ ಯಾತನೆಯ ಕುರಿತಾದ್ದಲ್ಲ, ಬದಲಿಗೆ ನಮ್ಮ ಬದುಕಿನ ವ್ಯವಸ್ಥೆ ಇನ್ನೊಂದು ಜೀವದ ಬದುಕಿನ ಮೇಲೆ ಅಂಥ ಯಾತನಾಮಯ ಗಾಯ ಮಾಡಬಹುದು ಎಂದು ಯಾವತ್ತೂ ಅನ್ನಿಸದೇ ಬದುಕಿದ್ದೇವಲ್ಲ, ಅಂಥ ನಮ್ಮ ಕುರಿತಾಗಿಯೇ ಹುಟ್ಟುವ ವಿಷಾದ ಅದು.

ಸಿನಿಮಾದ ಕೊನೆಯಲ್ಲಿ ಅಮಿತಾಭ್ ಹೇಳುವ ‘ಬೇಡ ಎಂದರೆ ಅದರರ್ಥ ಬೇಡ ಎಂದಷ್ಟೆ’ ಎನ್ನುವ ಮಾತು ಈ ಜಗತ್ತಿಗೆ ಎಂದು ನಿಜ ಅನ್ನಿಸುವುದೋ...?

‘ಪಿಂಕ್’ ಸಿನಿಮಾ ಯೂಟ್ಯೂಬ್‌ನಲ್ಲಿ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.