ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿಗೆ ಹಣೆ ಹಚ್ಚಿ, ಎದೆಮುಟ್ಟಿ...

Last Updated 10 ಜುಲೈ 2015, 19:30 IST
ಅಕ್ಷರ ಗಾತ್ರ

ಇಂದಿಗೆ ಬರೋಬ್ಬರಿ 11 ವರ್ಷಗಳು ಕಳೆದು ಹೋದವು. ರಂಗಭೂಮಿಗಾಗಿ ಒಂದು ಕಾಯಂ ವೇದಿಕೆ ಬೇಕು ಎನಿಸಿ. ಆಗ ಗರಿಗಳಿಂದಲೇ ಪುಟ್ಟದೊಂದು ಕಲಾಕುಟೀರ ಕಟ್ಟಿದ್ದೆ. ತಂಡದವರೆಲ್ಲ ಹೆಗಲುಗೂಡಿಸಿದ್ದರು.‘ನಟನಾ’ ಸಂಸ್ಥೆ ಹುಟ್ಟಿದ್ದೂ ಹಾಗೆಯೇ. ಆದರೆ ಎಲ್ಲದಕ್ಕೂ ತಲೆಯ ಮೇಲೊಂದು ಸೂರಿರಬೇಕು. ಹೆಜ್ಜೆ ಹಾಕಲು ವೇದಿಕೆಯಿರಬೇಕು. ಬೆಳಕು ಬಿದ್ದಾಗ ಅದು ನಮ್ಮದೇ ಆಗಿರಬೇಕು. ಧ್ವನಿ ವ್ಯವಸ್ಥೆಯೂ ನಮ್ಮಿಂದಲೇ ಬಂದಿರಬೇಕು. ಈ ನಮ್ಮತನದ ಹುಚ್ಚು ಹುಳ ತಲೆಗೆ ಬಂದದ್ದೇ ಶುರು ಆಯಿತು ರಂಗಭೂಮಿ ಕಟ್ಟಬೇಕು ಎಂಬ ತಹತಹ.

ಆ ತಹತಹ ತಡೆಯಲು ಸಾಧ್ಯವಾದುದು ಅದು ನಿರ್ಧಾರವಾಗಿ ಮನಸಿನಲ್ಲಿ ಮೊಳೆತಾಗಲೇ. ದುಡಿದದ್ದೆಲ್ಲ ರಂಗಮಂದಿರಕ್ಕೆ ಎನ್ನುವಂತಾಯಿತು. ಸದ್ಯ ನನ್ನ ಕುಟುಂಬ ನನ್ನ ಈ ಹುಚ್ಚುತನವನ್ನೂ ನನ್ನಂತೆಯೇ ಸ್ವೀಕರಿಸಿದರು. ಪೋಷಿಸಿದರು. ಬೆಂಬಲಿಸಿದರು. ಹೀಗಳೆಯಲಿಲ್ಲ. ಜಗಳವಾಡಲಿಲ್ಲ. ಈಗ ನೋಡಿ 240 ಜನ ಪ್ರೇಕ್ಷಕರು ಒಟ್ಟಿಗೆ ಒಂದು ನಾಟಕವನ್ನು ನೋಡುವಂಥ ‘ನಟನ’ ರಂಗ ಮಂದಿರ ನಾಳೆ ಉದ್ಘಾಟನೆಗೆ ಕಾದು ನಿಂತಿದೆ. ಸಿಂಗರಿಸಿಕೊಂಡಿದೆ. ಇಲ್ಲಿಯ ಒಂದೊಂದು ಇಟ್ಟಿಗೆಯಲ್ಲಿಯೂ ನನ್ನ, ನನ್ನ ತಂಡದ ಪರಿಶ್ರಮವಿದೆ. ಸಹೃದಯರ ಅಂತಃಕರುಣವಿದೆ...

ಎಲ್ಲಿಯೂ ನಾನು ಮಾಡಿದೆನೆಂಬ ಅಹಂ ನನ್ನಲ್ಲಿ ಇಲ್ಲ.  ಮಾಡಿ ಮುಗಿಸಿದೆನೆಂಬ ತೃಪ್ತಿಯೂ ಇಲ್ಲ.  ಎಲ್ಲರಿಂದ ಸಾಧ್ಯವಾಯಿತು ಎನ್ನುವ ವಿನೀತ ಭಾವ ನನ್ನೊಳಗಿದೆ. ಎಲ್ಲರಿಗಾಗಿ ಮಾಡಿರುವುದು ಎನ್ನುವ ಎಚ್ಚರಿಕೆ ಸದಾ ನನ್ನ ಬದ್ಧತೆಯನ್ನು ಕಾಯುತ್ತದೆ. ಯಾಕೆ ಬೇಕಿತ್ತು ರಂಗಮಂದಿರ, ಯಾಕೆ ಬಿಡಲಿಲ್ಲ ರಂಗಭೂಮಿಯ ನಂಟು ಎನ್ನುವ ಪ್ರಶ್ನೆಯೊಂದಿಗೆ ಹೇಳುತ್ತೇನೆ ಈ ಪ್ರಯತ್ನದ ಕತೆಯ.. ರಂಗಭೂಮಿಗೆ ಹಣೆ ಹಚ್ಚಿ, ಎದೆ ಮುಟ್ಟಿ ನಿಮ್ಮ ಮುಂದೆ ಇದೋ...

‘ನನ್ನದು ಸಮೃದ್ಧ ಬಾಲ್ಯ. ಸಾಂಸ್ಕೃತಿಕವಾಗಿ ಸಮೃದ್ಧವಾದುದು. ನಾಟಕಗಳನ್ನು, ಪಟಕಥೆ, ಬಯಲಾಟ, ಕಂಪೆನಿ ನಾಟಕ ಎಲ್ಲವನ್ನೂ ನೋಡುತ್ತಲೇ ಬೆಳೆದೆ. ಅಪ್ಪನ ಹೆಗಲ ಮೇಲೆ ಕುಳಿತು ನೋಡುತ್ತಲೇ ಪಾತ್ರವಾಗಿ ಬಿಡುತ್ತಿದ್ದೆ. ಆ ಲಯ, ಗತಿ, ನನ್ನೊಳಗಿನ ಅಂತರಂಗದೊಂದಿಗೆ ತಾದಾತ್ಮ್ಯ ಸೃಷ್ಟಿಸುತ್ತಿತ್ತು. ರಂಗಭೂಮಿ ಹವ್ಯಾಸವಾಯಿತು. ವೃತ್ತಿಯಾಯಿತು. ಎಲ್ಲಕ್ಕಿಂತಲೂ ಹೆಚ್ಚಾಗಿ ಜೀವನಪ್ರೀತಿಯಾಯಿತು. ರಂಗಭೂಮಿ ಇಲ್ಲದಿದ್ದರೆ... ಅದು ಯೋಚಿಸಲಾಗದ ಕ್ಷಣ. ರಂಗ ಭೂಮಿಯಲ್ಲಿ ಇರುವವರೆಲ್ಲರೂ ಒಂದೆರಡಲ್ಲ, ಪಾತ್ರಗಳಿದ್ದಷ್ಟು ಪಾತ್ರಗಳನ್ನು ಬದುಕುತ್ತಾರೆ. ಅದು ನಮ್ಮೊಳಗೆ ಒಂದು ಜೀವನದಿಂದ ಹಲವು ಬದಕುಗಳನ್ನು ಜೀವಿಸುವ ಕಲೆ. ಅದು ನಮ್ಮಲ್ಲಿ ಸೋಲನ್ನು ಸ್ವೀಕರಿಸುವ ಶಕ್ತಿ ನೀಡುತ್ತದೆ. ಸೋಲನ್ನು ಸಂಭ್ರಮಿಸುವ ಶಕ್ತಿಯನ್ನು ನೀಡುತ್ತದೆ.

ಸಂಕಟವನ್ನು ಸಂತಸವಾಗಿಸುವ ಬಲ ನೀಡುತ್ತದೆ. ಕಾರಣ ನಟನೆ ಕೇವಲ ನಟನೆಯಲ್ಲ. ಅದು ಅಧ್ಯಯನ. ಅದಕ್ಕೆ ಓದು ಬೇಕು. ಗ್ರಹಿಕೆ ಬೇಕು. ಓದಿದ್ದು, ಗ್ರಹಿಸಿದ್ದು, ನಮ್ಮೊಳಗೆ ಅವಾಹಿಸಿಕೊಳ್ಳಬೇಕು. ಅವಾಹಿಸಿಕೊಂಡಿದ್ದು, ಪ್ರಕಟವಾಗಬೇಕು. ಇಷ್ಟೆಲ್ಲ ಸೂಕ್ಷ್ಮ ಸಂವೇದನೆಯ ಈ ಕಲೆ ನಮ್ಮನ್ನು ಒಳಗಿನಿಂದಲೇ ಗಟ್ಟಿಗೊಳಿಸುತ್ತ ಹೋಗುತ್ತದೆ.

ಹಾಗಾಗಿ ಇದನ್ನು ಕೇವಲ ರಂಗಮಂದಿರವೆಂದು ಕಟ್ಟುತ್ತಿಲ್ಲ. ರಂಗಶಾಲೆಯೆಂದೇ ನಿರ್ಮಾಣ ಮಾಡಿದ್ದು. ಇದು ನಟನೆಯನ್ನಷ್ಟೇ ಅಲ್ಲ, ಬದುಕನ್ನೂ ಕಲಿಸುವ ಶಾಲೆ. ಇಲ್ಲೊಂದು ಗ್ರಂಥಾಲಯವಿದೆ. ರಂಗಭೂಮಿಗೆ ಸಂಬಂಧಿಸಿದ 10 ಸಾವಿರ ಪುಸ್ತಕಗಳಿರುವ ಗ್ರಂಥಾಲಯ. ಹೊರ ದೇಶಗಳಿಂದ ಬಂದು ಇಲ್ಲಿ ಕಲಿಸುವವರಿಗಾಗಿ ಪುಟ್ಟದೊಂದು ಅತಿಥಿಗೃಹ, ಕಚೇರಿ ಎಲ್ಲವೂ ಈ ಶಾಲೆಯಲ್ಲಿದೆ. ಕನಸು ದೊಡ್ಡದಾಗಿರಲಿಲ್ಲ. ಆದರೆ ಕಟ್ಟುತ್ತ ಕಟ್ಟುತ್ತ ಅದರ ಧ್ಯೇಯಗಳು ದೊಡ್ಡವಾದವು. ಇದಕ್ಕೆ ಬಿ.ಜಯಶ್ರೀ ಅವರ ಪ್ರೋತ್ಸಾಹ ಕಾರಣವಾಯಿತು. ಜಯಮಾಲಾ, ಉಮಾಶ್ರೀ ಬೆಂಬಲವಾಗಿ ನಿಂತರು.

ಒಂದು ಹಂತದಲ್ಲಿ ದ್ವಾರಕೀಶ್‌ ಅವರು ಬೆನ್ನು ತಟ್ಟಿ ಮೆಚ್ಚುಗೆ ಸೂಸಿದ್ದರು. ಅದು ಕಣ್ತುಂಬಿ ಬರುವ ಕ್ಷಣ. ಮಾಸ್ಟರ್‌ ಹಿರಣಯ್ಯ ಸಹ ನನ್ನ ಬೆನ್ನುತಟ್ಟಿ ಹಿಂದೆ ನಿಂತರು. ಇವೆಲ್ಲವೂ ಆರ್ಥಿಕ ಸಂಕಷ್ಟದಲ್ಲಿದ್ದಾಗ ಹತಾಶೆಯಿಂದ ಹಿಂದೆ ಸರಿಯದಂತೆ ಮಾಡಿದವು. ಪ್ರಸನ್ನ, ಸುಬ್ಬಣ್ಣ, ಕಾರಂತ್‌ ಇವರೆಲ್ಲರ ಒಡನಾಟವಿರದಿದ್ದರೆ ರಂಗಭೂಮಿ ಜೀವನದ ಅವಿಭಾಜ್ಯ ಅಂಗವಾಗುತ್ತಿರಲಿಲ್ಲ. ಈಗ ಜೀವ, ಜೀವನ, ಜೀವನ ಪ್ರೀತಿ ಎಲ್ಲವೂ ಆಗಿದೆ. ಹಾಗಾಗಲು ಕಾರಣವಾದ ಅಪ್ಪ, ಅಕ್ಕ, ಹೆಂಡತಿ ಮಗಳು ಎಲ್ಲರನ್ನೂ ನೆನೆಯುತ್ತೇನೆ.

ನನ್ನೊಡನೆ ಬಾಳನ್ನೂ ವೇದಿಕೆಯನ್ನೂ ಹಂಚಿಕೊಂಡ ಕಲಾವಿದರ ತಂಡ ಹತಾಶೆಗೊಳಗಾಗದಂತೆ ನೋಡಿಕೊಂಡಿತು. ಸಹಾಯಾರ್ಥ ಪ್ರದರ್ಶನಗಳಿಗೆ ತಮ್ಮ ಮನೆಯ ಶುಭಸಮಾರಂಭವೆಂಬಂತೆ ಸ್ಪಂದಿಸಿದರು. ಅದೆಲ್ಲವನ್ನೂ ನೆನಪಿಸಿಕೊಂಡರೆ ಕಣ್ಣಮುಂದಿನ ರಂಗಮಂದಿರ ಮಂಜುಮಂಜಾಗಿ ಕಾಣುತ್ತದೆ. ಮೊಣಕಾಲೂರಿ, ಹಣೆ ಹಚ್ಚಿ, ಎದ್ದಾಗ ಎದೆ ಮುಟ್ಟಿಕೊಂಡಾಗ ಅಲ್ಲಿ ಅಭಿಮಾನಿಗಳ, ಪ್ರೇಕ್ಷಕರ ಪ್ರೀತಿ ಬದುಕು ಹಸಿರಾಗಿಸುತ್ತದೆ... ನಾಳೆ ಮೈಸೂರಿಗೆ ಬನ್ನಿ. ‘ನಟನಾ’ ರಂಗಮಂದಿರದ ಸಂಭ್ರಮದಲ್ಲಿ ಪಾಲ್ಗೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT