ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಸುಂದರಿ’ಯ ಸೌಂದರ್ಯ ಗುಟ್ಟು

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬರೋಬ್ಬರಿ 17 ವರ್ಷಗಳ ನಂತರ ಭಾರತಕ್ಕೆ ‘ಮಿಸ್ ವರ್ಲ್ಡ್‌’ ಕಿರೀಟ ತಂದುಕೊಟ್ಟವರು ಮಾನುಷಿ ಛಿಲ್ಲರ್. ವೈದ್ಯೆಯಾಗಬೇಕೆಂಬ ಕನಸಿನ ಜತೆಗೆ ಸೌಂದರ್ಯ ಸ್ಪರ್ಧೆಯಲ್ಲೂ ಗೆಲುವು ಸಾಧಿಸಿರುವ ಮಾನುಷಿಗೆ ಸಾಮಾಜಿಕ ಕಳಕಳಿಯೂ ಉಂಟು.

ಪ್ರಿಯಾಂಕಾ ಚೋಪ್ರಾ (2000) ನಂತರ ಭಾರತದ ಮುಡಿಗೇರಿದ ‘ವಿಶ್ವಸುಂದರಿ’ ಕಿರೀಟದ ಹಿಂದೆ ಮಾನುಷಿಯ ಕಠಿಣ ಪರಿಶ್ರಮವಿದೆ. ಸೌಂದರ್ಯದ ಜತೆಗೆ ಬುದ್ಧಿವಂತಿಕೆಯನ್ನೂ ಬಳವಳಿಯಾಗಿ ಪಡೆದಿರುವ ಮಾನುಷಿ ಉತ್ತಮ ನೃತ್ಯಗಾರ್ತಿಯೂ ಹೌದು.

ಶಿಕ್ಷಣ ಮತ್ತು ಸ್ವಚ್ಛತೆಯಿಂದಾಗಿ ದೇಶದ ಅಭಿವೃದ್ಧಿ ಸಾಧ್ಯ ಎಂದು ನಂಬುವ ಮಾನುಷಿ, ಮಹಿಳೆಯರಿಗಾಗಿ ‘ಆ ದಿನಗಳ’ ಸ್ವಚ್ಛತಾ ಅಭಿಯಾನದಲ್ಲಿ ರಾಯಭಾರಿಯಾಗಿಯೂ ಕೆಲಸ ಮಾಡಿದ್ದಾರೆ. ದೇಶದ 20 ಹಳ್ಳಿಗಳನ್ನು ಸುತ್ತಿ ಐದು ಸಾವಿರ ಮಹಿಳೆಯರ ಜತೆ ಸಂವಾದ ನಡೆಸಿರುವ ಅವರು, ಗ್ರಾಮೀಣರಿಗೆ, ಸ್ವಚ್ಛತೆ ಮತ್ತು ಶಿಕ್ಷಣದ ಮಹತ್ವ ಕುರಿತು ಪಾಠವನ್ನೂ ಮಾಡಿದ್ದಾರೆ.

ಊಟ–ತಿಂಡಿ, ದೈಹಿಕ ಕಸರತ್ತಿನ ಬಗ್ಗೆ ಕಟ್ಟುನಿಟ್ಟಾಗಿರುವ ಮಾನಸಿ, ಈ ಬಗ್ಗೆ ಹಂಚಿಕೊಂಡಿರುವ ವಿವರಗಳು ಇಲ್ಲಿವೆ.

* ಬೆಳಗಿನ ತಿಂಡಿಯನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಇದರಿಂದ ದಿನದ ಕೊನೆಗೆ ಹೆಚ್ಚು ಹಸಿವಾಗುತ್ತದೆ. ರಾತ್ರಿ ಊಟದ ನಂತರ ಆರೇಳು ಗಂಟೆಗಳ ಕಾಲ ಹೊಟ್ಟೆ ಖಾಲಿ ಇರುತ್ತದೆ. ಇಡೀ ದಿನದ ಚಟುವಟಿಕೆಗಳಿಗೆ ಬೆಳಗಿನ ತಿಂಡಿಯಿಂದಲೇ ಶಕ್ತಿ ದೊರೆಯುತ್ತದೆ. ಅಷ್ಟೇ ಅಲ್ಲ ಮಿದುಳಿನ ಆರೋಗ್ಯ ಕಾಪಾಡಲು ಕೂಡಾ ಬೆಳಗಿನ ತಿಂಡಿ ಸಹಕಾರಿ. ಹಾಗಾಗಿ ನಾನು ಎಂದಿಗೂ ಬೆಳಗಿನ ತಿಂಡಿ ತಪ್ಪಿಸುವುದೇ ಇಲ್ಲ.

* ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ತುಸು ಕೊಬ್ಬು ಮತ್ತು ಸಕ್ಕರೆಯ ಅಂಶ ಇರುವಂತೆ ನೋಡಿಕೊಳ್ಳಬೇಕು. ಜಾಸ್ತಿ ತಿನ್ನುವ ಭಯ ನಿಮಗಿದ್ದರೆ, ಸಣ್ಣ ಆಕಾರದ ಊಟದ ತಟ್ಟೆ ಬಳಸಿ.

* ಪ್ರಯಾಣದ ಸಂದರ್ಭದಲ್ಲೂ ಡಯೆಟ್ ಬಗ್ಗೆ ಹೆಚ್ಚು ಕಾಳಜಿ ವಹಿಸುವೆ, ಗ್ರಿಲ್ಡ್‌ ಚಿಕನ್ ಅಥವಾ ಮೀನು ತಿನ್ನುತ್ತೇನೆ. ಅದರ ಜತೆಗೆ ಸಲಾಡ್ ಹಾಗೂ ಕಡಿಮೆ ಕೊಬ್ಬಿನ ಆಹಾರ ಸೇವನೆಗೆ ಪ್ರಾಶಸ್ತ್ಯ.

* ನಿತ್ಯವೂ ತಪ್ಪದೇ ಯೋಗಾಭ್ಯಾಸ ಮಾಡುವುದರಿಂದ ದೇಹದ ಸ್ನಾಯುಗಳು ಸಬಲವಾಗುವುದರ ಜತೆಗೆ ಮನಸಿಗೆ ಶಾಂತಿಯೂ ದೊರೆಯುತ್ತದೆ. ದೈಹಿಕ ಮತ್ತು ಮಾನಸಿಕ ಸ್ವಸ್ಥತೆಗೆ ಯೋಗ ತುಂಬಾ ಪರಿಣಾಮಕಾರಿ.

ಗೆಲುವಿಗೆ ಕಾರಣವಾದ ಮಾತಿದು

‘ವಿಶ್ವಸುಂದರಿ’ ಸ್ಪರ್ಧೆಯ ಅಂತಿಮ ಸುತ್ತಿಗೆ ಬರುವ ಸ್ಪರ್ಧಿಗಳಿಗೆ ಕೊನೆಯದಾಗಿ ಒಂದು ಪ್ರಶ್ನೆ ಕೇಳಲಾಗುತ್ತದೆ. ಈ ಬಾರಿ ‘ಹೆಚ್ಚು ಸಂಬಳ ಪಡೆಯಲು ಅರ್ಹವಾದ ವೃತ್ತಿ ಯಾವುದು ಮತ್ತು ಯಾಕೆ’ ಎಂದು ಕೇಳಿದ ಪ್ರಶ್ನೆಗೆ ಮಾನುಷಿ ನೀಡಿದ ಉತ್ತರವೇ ಅವರ ಗೆಲುವಿಗೆ ಕಾರಣವಾಯಿತು ಎನ್ನುತ್ತಾರೆ ಅನೇಕರು.

ತಾಯ್ತನ ಮತ್ತು ತಾಯಿಯ ಕುರಿತು ಭಾವುಕವಾಗಿ ಮಾತನಾಡಿದ ಮಾನುಷಿ ‘ನನ್ನ ಪ್ರಕಾರ ತಾಯಿಗೆ ಹೆಚ್ಚು ಗೌರವ ಸಲ್ಲಬೇಕು. ಸಂಬಳದ ವಿಷಯಕ್ಕೆ ಬಂದರೆ ಅದು ಕೇವಲ ಹಣದಿಂದ ಅಳೆಯುವಂತದ್ದಲ್ಲ. ಅಮ್ಮ ಎಷ್ಟು ಪ್ರೀತಿ ಹಾಗೂ ಗೌರವ ಪಡೆಯುತ್ತಾಳೆ ಎನ್ನುವುದು ಮುಖ್ಯವಾಗುತ್ತದೆ. ತಾಯಿಯೇ ನನ್ನ ಜೀವನದ ಬಹುದೊಡ್ಡ ಸ್ಫೂರ್ತಿ. ಎಲ್ಲ ತಾಯಂದಿರು ತಮ್ಮ ಮಕ್ಕಳಿಗಾಗಿ ಹಾಗೂ ಸಂಸಾರಕ್ಕಾಗಿ ಎಷ್ಟೊಂದು ತ್ಯಾಗ ಮಾಡುತ್ತಾಳೆ. ಹೀಗಾಗಿ ನನ್ನ ಪ್ರಕಾರ ತಾಯ್ತನಕ್ಕೆ ಹೆಚ್ಚಿನ ಗೌರವ, ಸಂಬಳ ಸಿಗಬೇಕು’ ಎಂದಾಗ ನೆರೆದವರಿಂದ ಚಪ್ಪಾಳೆಯ ಸುರಿಮಳೆಯಾಯಿತು.

***

* ಹುಟ್ಟಿದ್ದು: ಮೇ 14, 1997

* ಬೆಳೆದಿದ್ದು: ಹರಿಯಾಣ, ದೆಹಲಿ

* ಓದಿದ್ದು: ಎಂಬಿಬಿಎಸ್‌ (ಅಂತಿಮ ವರ್ಷದ ವಿದ್ಯಾರ್ಥಿನಿ)

* ಅಪ್ಪ–ಅಮ್ಮ: ಡಾ.ಮಿತ್ರಬಸು ಛಿಲ್ಲರ್, ಡಿಫೆನ್ಸ್‌ ರಿಸರ್ಚ್‌ ಅಂಡ್‌ ಡೆವಲಂಪ್‌ಮೆಂಟ್ ಆರ್ಗನೈಸೇಷನ್‌ನಲ್ಲಿ ವಿಜ್ಞಾನಿ. ತಾಯಿ ಡಾ.ನೀಲಂ ಛಿಲ್ಲರ್ ಅವರು, ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಅಂಡ್ ಅಲೈಡ್ ಸೈನ್ಸ್‌ನ ನ್ಯೂರೊಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆ

* ಹವ್ಯಾಸ: ಕವಿತೆ ಬರೆಯುವುದು ಮತ್ತು ಚಿತ್ರ ಬಿಡಿಸುವುದು

* ವಿಶೇಷ: ಕುಚಿಪುಡಿ ನೃತ್ಯಭ್ಯಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT