ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Raksha Bandhan 2023: ಸಹೋದರಿಯ ರಕ್ಷಣೆಯ ಸಂಕಲ್ಪ ದಿನ

Published 29 ಆಗಸ್ಟ್ 2023, 20:21 IST
Last Updated 29 ಆಗಸ್ಟ್ 2023, 20:21 IST
ಅಕ್ಷರ ಗಾತ್ರ

ಶ್ರಾವಣಮಾಸದಲ್ಲಿ ಹಬ್ಬಗಳ ಸಾಲು ಆರಂಭವಾಗುತ್ತದೆ. ಹೀಗೆ ಬರುವ ಸಾಲು ಸಾಲು ಹಬ್ಬಗಳಲ್ಲಿ ಒಂದು ರಕ್ಷಾಬಂಧನ; ಶ್ರಾವಣಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ.

ರಕ್ಷಾಬಂಧನ. ಈ ಹೆಸರಿನಲ್ಲಿಯೇ ಈ ದಿನದ ಮಹತ್ವವನ್ನು ಕಾಣಬಹುದು. ನಮಗೆ ಹುಟ್ಟಿನಿಂದ ಸಾಯುವವರೆಗೂ ಹಲವು ವಿಧದ ಬಂಧನಗಳು ಕೂಡಿಕೊಳ್ಳುತ್ತವೆ. ಇಲ್ಲಿ ‘ಬಂಧನ’ ಎಂದರೆ ಬಾಂಧವ್ಯ; ಅದು ನಮಗೂ ಇನ್ನೊಬ್ಬರಿಗೂ ಒದಗುವ ನಂಟು. ಬಾಂಧವ್ಯಗಳು ರಕ್ತಸಂಬಂಧದ ರೂಪದಲ್ಲೂ ಇರಬಹುದು; ನೈಮಿತ್ತಿಕವಾಗಿಯೂ ಏರ್ಪಡಬಹುದು; ಹೊಸದಾಗಿ ಏರ್ಪಡುವ ನಂಟಸ್ತಿಕೆಯ ಸ್ವರೂಪದಲ್ಲೂ ಸಿದ್ಧವಾಗಬಹುದು; ಯಾವುದಾದರೊಂದು ಹೊಣೆಗಾರಿಕೆಯ ಕಾರಣದಿಂದಲೂ ಮೂಡಬಹುದು. ರಕ್ಷಾಬಂಧನ ಈ ಎಲ್ಲ ರೂಪದ ಬಾಂಧವ್ಯಗಳ ನೆಲೆಯಿಂದಲೂ ಅರ್ಥೈಸಬಹುದಾದ ವಿಶಿಷ್ಟ ದಿನವಾಗಿದೆ.

‘ನಿನ್ನನ್ನು ಅಪಾಯಗಳಿಂದ ರಕ್ಷಿಸುವೆ’ – ಹೀಗೆಂದು ಸಹೋದರನು ಸಹೋದರಿಯಲ್ಲಿ ಶಪಥ ಮಾಡುತ್ತಾನೆ. ಆಗ ’ನಿನ್ನ ಈ ಶಪಥ ನಿನ್ನಿಂದ ಮರೆಯಾಗದಿರಲಿ; ಅದರ ಜ್ಞಾಪಕವಾಗಿ ಈ ಪವಿತ್ರ ನೂಲನ್ನು ನಿನಗೆ ಕಟ್ಟುತ್ತಿರುವೆ‘ ಎಂದು ಸಹೋದರಿಯು ಸಹೋದರನಿಗೆ ’ರಕ್ಷಾಬಂಧನ‘ವನ್ನು ಅಥವಾ ’ರಕ್ಷೆ’ಯನ್ನು ಕಟ್ಟುತ್ತಾಳೆ. ಇದೇ ರಕ್ಷಾಬಂಧನ ಪರ್ವದ ಸಾರಾಂಶ. ಇಲ್ಲಿ ನಾವು ಗಮನಿಸಬೇಕಾದ್ದು, ಈ ಸಹೋದರ–ಸಹೋದರಿಯರು ರಕ್ತಸಂಬಂಧದ ಒಡಹುಟ್ಟಿದವರೂ ಆಗಬಹುದು; ಭಾವಬಂಧನದ ಸಹೋದರ–ಸಹೋದರಿಯರೂ ಆಗಬಹುದು.

ರಕ್ಷಾಬಂಧನದ ತಾತ್ಪರ್ಯ: ಹೆಣ್ಣನ್ನು ರಕ್ಷಿಸುವ ಹೊಣೆಗಾರಿಕೆ ಕುಟುಂಬದ ಮೇಲೆಯೂ ಸಮಾಜದ ಮೇಲೆಯೂ ಇದೆ ಎಂಬುದು. ಇದರ ಅರ್ಥ, ಪರಂಪರೆಯಲ್ಲಿ ಹೆಣ್ಣನ್ನು ಅಬಲೆಯಾಗಿ ಕಂಡಿದ್ದಾರೆ ಎಂದಲ್ಲ; ಪುರುಷಾಹಂಕಾರಕ್ಕೆ ಎಚ್ಚರಿಕೆಯನ್ನು ‘ರಕ್ಷಾಬಂಧನ‘ದ ಕಲ್ಪನೆಯಲ್ಲಿ ನೋಡಬಹುದು. ದಿಟವಾದ ಪುರುಷನ ಲಕ್ಷಣ ಎಂದರೆ ಹೆಣ್ಣಿನ ಕಷ್ಟವನ್ನು ದೂರ ಮಾಡುವುದು; ಅವಳ ರಕ್ಷಣೆಗೆ ಮುಂದಾಗುವುದು. ಇಂಥ ಕರ್ತವ್ಯಬುದ್ಧಿಗೆ ಸಮಾಜವನ್ನು ತೊಡಗಿಸುವುದೇ ರಕ್ಷಾಬಂಧನದ ಆಚರಣೆಯ ಮೂಲೋದ್ದೇಶ. ಅಂದಿನಿಂದ ಇಂದಿನವರೆಗೂ ಸಮಾಜದಲ್ಲಿ ಹೆಣ್ಣಿನ ಮೇಲೆ ನಿರಂತರವಾಗಿ ದಬ್ಭಾಳಿಕೆ ಬೇರೆ ಬೇರೆ ರೂಪದಲ್ಲಿ ನಡೆಯುತ್ತಲೇ ಬಂದಿದೆ. ನಾವು ಆಧುನಿಕರು, ವಿದ್ಯಾವಂತರು, ನ್ಯಾಯಪರರು – ಹೀಗೆಲ್ಲ ಘೋಷಿಸಿಕೊಳ್ಳುವ ನಮ್ಮ ಈ ಕಾಲದಲ್ಲೂ ಹೆಣ್ಣಿನ ಮೇಲೆ ಕ್ರೌರ್ಯ ನಿಂತಿಲ್ಲ. ಹೀಗಾಗಿ ರಕ್ಷಾಬಂಧನದ ಮೂಲವನ್ನು ನಾವು ಪುರಾಣಗಳಲ್ಲಿ ಕಾಣಬಹುದಾದರೂ, ಅದರ ಪ್ರಸ್ತುತತೆ ಮಾತ್ರ ಇಂದಿಗೂ ಸಲ್ಲುತ್ತದೆಯೆನ್ನಿ. ಹೆಣ್ಣನ್ನು ರಕ್ಷಿಸುವುದು ಕೇವಲ ಅವಳ ಒಡಹುಟ್ಟಿದ ಅಣ್ಣ–ತಮ್ಮಂದಿರ ಕರ್ತವ್ಯ ಮಾತ್ರವೇ ಅಲ್ಲ; ಅವಳನ್ನು ಅಪಾಯದಿಂದ ರಕ್ಷಿಸಲು ಇಡಿಯ ಸಮಾಜವೇ ಕಂಕಣಬದ್ಧವಾಗತಕ್ಕದ್ದು ಎಂಬ ಸಂಕಲ್ಪಶಕ್ತಿಗೆ ರಕ್ಷಾಬಂಧನವು ಪ್ರೇರಣೆಯಾಗಬೇಕಿದೆ.

ಶ್ರಾವಣಹುಣ್ಣಿಮೆಯನ್ನು ಸಂಸ್ಕೃತದಿನವನ್ನಾಗಿಯೂ ಆಚರಿಸುವುದುಂಟು. ಸಂಸ್ಕೃತ ಎಂದರೆ ಭಾರತದ ಪ್ರಾಚೀನ ಪರಂಪರೆಯ ಪ್ರತಿಮೆ. ಭಾರತೀಯ ಸಂಸ್ಕೃತಿಯ ನೆಲೆಗಳನ್ನು ನಾವು ಸಂಸ್ಕೃತದಲ್ಲಿ ಕಾಣಬಹುದು. ಭಾವಕ್ಕೂ ಬುದ್ಧಿಗೂ ಸುಂದರವಾಗಿ ಒಗ್ಗುವ ಭಾಷೆ ಸಂಸ್ಕೃತ. ನಮ್ಮ ಪೂರ್ವಸೂರಿಗಳ ಗೊತ್ತು–ಗುರಿಗಳ ದಿಕ್ಕನ್ನು ಈ ಭಾಷೆಯ ಮೂಲಕ ಕಂಡುಕೊಳ್ಳಬಹುದಾಗಿದೆ. ಹೀಗಾಗಿ ಸಂಸ್ಕೃತದ ರಕ್ಷಣೆ ಎಂದರೆ ಅದು ನಮ್ಮ ಋಷಿಪರಂಪರೆಯ ರಕ್ಷಣೆಯೇ ಹೌದು. ಈ ದೃಷ್ಟಿಯಲ್ಲಿ ಇಂದು ಪರಂಪರೆಯ ‘ರಕ್ಷಾಬಂಧನ‘ವೂ ಹೌದೆನ್ನಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT