ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಗ್ನೋಬೆಲ್ ಮತ್ತು ನಗ್ನೋಬೆಲ್!

Last Updated 29 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮಲ್ಲಿ ಫೋಟೊ ಸ್ಟುಡಿಯೋದಲ್ಲಿ ಪರ‌್ಮೇಶಿ ಯಾವುದೋ ಒಂದು ಪೇಪರ್ ಚೂರು ಹಿಡ್ಕೊಂಡು ಏನೋ ಅರ್ಥವಾಗದ ಇಂಗ್ಲಿಷ್ ಶಬ್ಧಗಳನ್ನ ವರಲ್ತಿದ್ದ: `ಎ ರಿಪೋರ್ಟ್ ಅಬೌಟ್ ರಿಪೋರ್ಟ್ಸ್ ದಟ್ ರೆಕಮೆಂಡ್ಸ್ ದಿ ಪ್ರಿಪರೇಶನ್ ಆಫ್ ಎ ರಿಪೋರ್ಟ್ ಅಬೌಟ್ ದಿ ರಿಪೋರ್ಟ್ ಅಬೌಟ್ ರಿಪೋರ್ಟ್ಸ್ ಅಬೌಟ್ ರಿಪೋರ್ಟ್ಸ್...'

ಎಲ್ಲಾ ಕಕವಗಳ  ತರ ಮುಖ ಮುಖ ನೋಡಿಕೊಂಡೆವು. `ಏನೋ ಇದು? ಇದೇನು ಟಂಗ್ ಟ್ವಿಸ್ಟರ‌್ರಾ? ಇಲ್ಲಿ ತಿರುಮುರುಗಾಳಿನಾ?'
`ಲೇಯ್ ಗುಗ್ಗುಗಳಾ, ಇಂದು ಟಂಗ್ ಟ್ವಿಸ್ಟರ್ ಅಲ್ಲ ಕಣ್ರಲೇ! ಇದು ಪ್ರಶಸ್ತಿ ವಿಜೇತ ಶ್ರೇಷ್ಠ ಸಾಹಿತ್ಯ'

ತಲೆ ರೊಯ್ಯೆಂದು ತಿರುಗಿತು. `ಇದೆಂತ ಸಾಹಿತ್ಯನೋ? ನಿನಗೇನು ತಲೆಗಿಲೆ ಕೆಟ್ಟಿದೆಯಾ? ನೈಪಾಲ್ ಸಾಹಿತ್ಯನೇ ನಮ್ಮ ನಾಟಕಕಾರರು ಅಟ್ಟಾಡಿಸಿಕೊಂಡು ಇಟ್ಟಾಡಿಸಿದಾರೆ. ಇದನ್ನ ಸಾಹಿತ್ಯ ಅಂದ್ರೆ ಸುಮ್ನೆ ಬಿಡ್ತಾರಾ? ಕಲ್ಲು ತಗಂಡು ಜಡೀತಾರೆ ಅಷ್ಟೇ!' ದಬಾಯಿಸಿದ ದೀಕ್ಷಿತ.
`ಹೂ ಕಣಲೇ! ನಮ್ ಕಲ್ಲೇಶಿ ಬರೆಯೋ  ಅತಿ ಕೆಟ್ಟ ಕಥನ ಕಾವ್ಯವೂ ಇಷ್ಟು ಬಾಲಿಶವಾಗಿರಲ್ಲವಲ್ಲೋ! ಇದು ಯಾವ ಸೀಮೆ ಸಾಹಿತ್ಯನೋ ?'  ನಾಣಿ ದನಿ ಸೇರಿಸಿದ.

`ಲೇಯ್! ಏನಂದ್ಕೊಂಡಿದೀರ ಇದನ್ನ? ಇದಕ್ಕೆ ಈ ಸಾಲಿನ ಇಗ್ನೊಬೆಲ್ ಪ್ರಶಸ್ತಿ ಬಂದಿದೆ'
`ಇಗ್ನೊಬೆಲ್ಲಾ? ಅದ್ಯಾವುದು ತಾಟಿಬೆಲ್ಲ? ನಮಗೆ ಗೊತ್ತಿರೋದು ಬರೀ ನೊಬೆಲ್ ಪ್ರಶಸ್ತಿ ಅಷ್ಟೇ!'

`ನೊಬೆಲ್ ಪ್ರಶಸ್ತಿ ತರನೇ ಇದು ಇಗ್ನೋಬೆಲ್ ಪ್ರಶಸ್ತಿ. ಎಡವಟ್ಟು ಸಾಧನೆ, ಸಂಶೋಧನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹತ್ತು ಕ್ಷೇತ್ರಗಳಲ್ಲಿ ಇಂತಹ ಪ್ರಶಸ್ತಿ ಕೊಡ್ತಾರೆ. ಈಗ ನಾನು ಹೇಳಿದ್ದು ಅಂತ ಪ್ರಶಸ್ತಿ ಗಿಟ್ಟಿಸಿಕೊಂಡ ಅಮೆರಿಕನ್ ಕಚೇರಿಯೊಂದರ ರಿಪೋರ್ಟ್'
`ಅಯ್ಯೋ ಇದರಜ್ಜೀನ್! ಇಂಥ ರಿಪೋರ್ಟ್‌ಗಳನ್ನ ನಾವೂ ಒಂದು ಸಾವಿರ ಬರೀಬಹುದಿತ್ತಲ್ಲೋ?' ದೀಕ್ಷಿತ ತಲೆ ಚಚ್ಚಿಕೊಂಡ.

`ಹೂ! ಬರೆದು ಬಿಡ್ತೀಯ? ಅದೇನು ಕಾಲೇಜು ಗೋಡೆ ಮೇಲೆ ಗೀಚ್ತಿದ್ಯಲ್ಲ... ಆ ತರ ಟಾಯ್ಲೆಟ್ ಸಾಹಿತ್ಯ ಅಂದ್ಕೊಂಡ್ಯಾ?' ನಾಣಿ ಕೆಣಕಿದ.
`ಇಲ್ಲ ಕಣಲೇ! ಒಂದ್ ವರ್ಷ ಅಮೆರಿಕನ್ ನ್ಯೂಡಿಸ್ಟ್ ಲೈಬ್ರರಿಗೆ ಈ ತರ ಸಾಹಿತ್ಯ ಇಗ್ನೋಬೆಲ್ ಸಿಕ್ಕಿತ್ತು. ಪಾಪ! ದೀಕ್ಷಿತನ ಪ್ರತಿಭೆ ಗುರುತಿಸೋರೇ ಇಲ್ಲ, ಇವನ ಟಾಯ್ಲೆಟ್ ಲೈಬ್ರರಿಗೂ ಇಗ್ನೋಬೆಲ್ ಸಿಗಬೇಕಿತ್ತು'  ಪರ‌್ಮೇಶಿ ಲೊಚಗುಟ್ಟಿದ.

`ಅದಿರ‌್ಲಿ, ಈಗ ಅದೇನೋ ರಿಪೋರ್ಟ್ ಸಾಹಿತ್ಯ ಅಂದ್ಯಲ್ಲ... ಎಲ್ಲಿ ಒಂದು ಒದರು ನೋಡೋಣ..'

`ನಮ್ಮಲ್ಲೂ ಕೆಲವು ಸಾರಿ ರಿಪೋರ್ಟ್ ಸಾಹಿತ್ಯ ಆಗುತ್ತೆ, ಸಾಹಿತ್ಯ ರಿಪೋರ್ಟ್ ಆಗುತ್ತೆ... ನಾನೊಂದು ವರದಿ ವದರ‌್ತೀನಿ ಕೇಳಿ. ಭಿನ್ನಮತರ ವರ್ತನೆ ಕುರಿತು ತನಿಖೆ ನಡೆಸಿದ ವರದಿಯ ಶಿಫಾರಸ್ಸನ್ನು ಪರಾಮರ್ಶಿಸಿ ವರದಿ ನೀಡುವ ಕುರಿತು ವರದಿ ನೀಡಿದ ವರದಿಯನ್ನು ವರದಿಯೇ ಅಲ್ಲ ಎಂದು ಕಡೆಗಣಿಸಿದ ಕುರಿತು ವರದಿ. ಹೇಗಿದೆ?'

`ಎಲ್ಲಾ ಕೂದಲು ಕಿತ್ತುಕೊಂಡರು.:  ಸೂಪರ್ ಕಣಲೇ! ನಿನಗೆ ಎಲ್ಲಿಗಾರಾ ಗಂಟೆ ಕಟ್ಟಿ ಇಗ್ನೊಬೆಲ್ ಪ್ರಶಸ್ತಿ ಕೊಡಲೇಬೇಕು' ಮಲ್ಲಿ ಶಹಬಾಸ್ ಗಿರಿ ಕೊಟ್ಟ.

`ಹೂ ಕಣ್ರೋ! ಇಂಥ ಎಡವಟ್ಟು, ಎಡಬಿಡಂಗಿ ಸಂಶೋಧನೆ ತರ್ಕ ಮಾಡೋದ್ರಲ್ಲಿ ನಾವು ಎತ್ತಿದ ಕೈ. ಆದರೂ ನಮ್ಗೆ ಒಂದು ಇಗ್ನೊಬೆಲ್ ಪ್ರಶಸ್ತಿ ಸಿಕ್ಕಲ್ಲ ಅಂದ್ರೆ ಏನರ್ಥ? ಉದಾಹರಣೆಗೆ ಒಂದು ದೊಡ್ಡ ಗಾತ್ರದ ಬಳೆ ಸುತ್ತಿಸೋಕೆ ಕನಿಷ್ಠ 7 ಜನ ಬೇಕು ಅಂತ ಸಂಶೋಧನೆ ಮಾಡಿ ಒಟ್ಟಾಯ ವಿವಿಯ ವಿಜ್ಞಾನಿಗಳು ಇಗ್ನೊಬೆಲ್ ಗಿಟ್ಟಿಸಿದ್ರು. ಆದರೆ ನಮ್ಮಲ್ಲಿ ಒಂದು ಚಿಕ್ಕ ಬಳೆ 7 ಜನ ಗಂಡಸರನ್ನ ಗಿರ‌್ರನೆ ಗುರುತ್ವಾಕರ್ಷಣೆ ತಪ್ಪಿಸಿ ಸುತ್ತಿಸಲ್ವಾ? ನಮಗೆ ತಾನೇ ಪ್ರಶಸ್ತಿ ಕೊಡಬೇಕು?' ಪರ‌್ಮೇಶಿ ಪ್ರಶ್ನೆ ಮುಂದಿಟ್ಟ.

ಎಲ್ಲಾ ಹೌದೆಂಬಂತೆ ತಲೆದೂಗಿದರು: `ಇನ್ನೂ ಏನೇನಕ್ಕೆ ಇಗ್ನೊಬೆಲ್ ಬಂದಿದೆ?' 

`ಅನಾಟಮಿ ವಿಭಾಗದಲ್ಲಿ ಚಿಂಪಾಂಜಿಗಳು ಇತರೆ ಚಿಂಪಾಂಜಿಗಳನ್ನ ಅವುಗಳ ಹಿಂಭಾಗ ನೋಡಿ ಗುರುತು ಹಿಡಿಯುತ್ತವಂತೆ'
`ನಮ್ಮಲ್ಲೆೀನು ಕಮ್ಮಿ? ಮದುವೆಯಾದ ಗಂಡಸರು ಹಿಂಭಾಗ ನೋಡೇ ಪಕ್ಕದ ಮನೆ ಆಂಟಿರನ್ನ ಕಂಡು ಹಿಡಿಯಲ್ಲವಾ?'  ನಾಣಿ ಹೊಸ ಸಂಶೋಧನೆ ಮಂಡಿಸಿದ. ಎಲ್ಲರ ಕಣ್ಣರಳಿತು.

`ನೋಡುದ್ಯಾ? ನಾನು ಹೇಳಲಿಲ್ಲವಾ? ನಮಗೆ ಅನ್ಯಾಯ ಆಗಿದೆ ಅಂತ. ಮನಃಶಾಸ್ತ್ರ ವಿಭಾಗದಲ್ಲಿ ಎಡಕ್ಕೆ ವಾಲಿದರೆ ಪೀಸಾ ಗೋಪುರ ಚಿಕ್ಕದಾಗಿ ಕಾಣುತ್ತೆ ಅನ್ನೋ ಸಂಶೋಧನೆಗೆ ಪ್ರಶಸ್ತಿ ಸಿಕ್ಕಿದೆ'

`ಹೌದಾ? ನಾವೂ  ಯಡ (ಯಡಯೂರಪ್ಪ)ಕ್ಕೆ ಹೆಚ್ಚು ವಾಲಿದರೆ ಪೈಸಾ ಗೋಪುರ( ಸರ್ಕಾರ) ಬಿದ್ದೇ ಹೋಗುತ್ತೆ ಅನ್ನೊ ತರ ಕನಸು ಬೀಳುತ್ತೆ ಅಂತ ಪ್ರೂವ್ ಮಾಡಿ ಅವಾರ್ಡ್ ಗಿಟ್ಟಿಸಬಹುದಿತ್ತಲ್ಲ...'

`ಇನ್ನೊಂದಿದೆ. ರಸಾಯನ ಶಾಸ್ತ್ರ ವಿಭಾಗದಲ್ಲಿ ಸ್ವೀಡನ್ನಲ್ಲಿ ಕೆಲವು ಜನರ ಕೂದಲು ಏಕೆ ಹಸಿರು ಬಣ್ಣಕ್ಕೆ ತಿರುಗುತ್ತದೆ ಎಂಬುದಕ್ಕೆ ಇಗ್ನೋಬೆಲ್ ಸಿಕ್ಕಿದೆಯಂತೆ'

`ಮದುವೆ ಆದ ಮೇಲೆ ಗಂಡಸರ ಕೂದಲೇ ಏಕೆ ಉದುರಿ ಹೋಗುತ್ತೆ ಅಂತ ನಾವು ಈಗಾಗಲೇ ಸಂಶೋಧನೆ ಮಾಡಿದೀವಲ್ಲ...'

`ಏನು ಪ್ರಯೋಜನ? ಅದು ನೆಗ್ಲಿಜಬಲ್ ಆಗಿದೆಯಲ್ಲ, ಸೋ ನೋ ಇಗ್ನೊಬೆಲ್!  ನರಶಾಸ್ತ್ರದಲ್ಲಿ ಸಂಕೀರ್ಣ ಯಂತ್ರಗಳನ್ನು ಉಪಯೋಗಿಸಿ ಸತ್ತ ಮೆದುಳೂ ಅರ್ಥಪೂರ್ಣ ಚಟುವಟಿಕೆ ನಿರ್ವಹಿಸಬಲ್ಲದು ಅಂತ ಪ್ರೂವ್ ಮಾಡಿ ಪ್ರಶಸ್ತಿ ಬಾಚ್ಕೊಂಡಿದಾರೆ ಗೊತ್ತಾ?'

`ಎಲಾ ಇವರ! ನಮ್ಮಲ್ಲಿ ಬದುಕಿರೋರಿಗೆ ಯಂತ್ರ, ತಂತ್ರ ಏನು ಕಟ್ಟುದ್ರೂ ಮೆದುಳು ಕೆಲಸ ಮಾಡಲ್ಲವಲ್ಲ... ಈ ಸಂಶೋಧನೆಗೆ ಏನೂ ಇಲ್ಲವಾ?'
  `ಅದಿರ‌್ಲಿ, ಮನುಷ್ಯರ ಪೋನಿಟೈಲ್ ಹಾಗೆ ರೂಪ ಪಡ್ಕೊಂಡು ನಿಂತ್ಕೊಳಕ್ಕೆ ಕಾರಣ ಆಗೋ ಸಮತೋಲನ ಬಲಗಳನ್ನು ಕಂಡು ಹಿಡಿದಿದ್ದಕ್ಕೂ ಇಗ್ನೊಬೆಲ್ ಕೊಟ್ಟಿದಾರಲ್ಲ...'

`ನಮ್ಮಲ್ಲಂತೂ ಈ ತರಹದ್ದು ಎಷ್ಟಿದೆ? ನಾಯಿ ಬಾಲ ಯಾಕೆ ಹಾಗೆ ನಿಂತ್ಕೊಳುತ್ತೆ ಅನ್ನೋದರಿಂದ ಹಿಡಿದು ಒಂದು ಹುಡುಗಿಯ ಪೋನಿಟೈಲ್ ಎಷ್ಟು ಹುಡುಗರ ಬಲ ಕಿತ್ಕೊಂಡು ಬಾಲ ಅಲ್ಲಾಡಿಸೋ ಹಾಗೆ ಮಾಡುತ್ತೆ ಅನ್ನೋ ತನಕ ನಾವು ಕಾಲೇಜಲ್ಲಿದ್ದಾಗಲೇ ರಿಸರ್ಚ್ ಮಾಡಿದ್ವಲ್ಲ..'
`ಒಬ್ಬ ಮನುಷ್ಯ ಕಾಫಿ ಕಪ್ ತಗಂಡು ಹೋಗಬೇಕಾದರೆ ಕಪ್‌ನಲ್ಲಾಗೋ ದ್ರವ ಪರಿಭ್ರಮಣದ ಸಂಶೋಧನೆಗೆ ಪ್ರಶಸ್ತಿ ಸಿಕ್ಕಿದೆ
ಅಂತಹ ದ್ರವ ಪರಿಭ್ರಮಣ ಮನುಷ್ಯನೊಳಗೆ ಹೇಗೆ ಪರಿಣಾಮ ಬೀರುತ್ತೆ ಅನ್ನೋದಕ್ಕೆ ರೇಣುಕಾ ಎಫೆಕ್ಟ್ ಅಂತ ಒಂದು ಪ್ರಶಸ್ತಿ ಕೊಡಬಹುದಿತ್ತಲ್ಲ..!' 
`ಒಬ್ಬ ಮನುಷ್ಯ ಮಾತಾಡಿದ್ದನ್ನ ತಾನೇ ಕೇಳೋ ಹಾಗೆ ಮಾಡಿ ಅವನ ಮಾತನ್ನ ತುಂಡರಿಸೋ ಮೆಶಿನ್ ಕಂಡು ಹಿಡಿದವರಿಗೂ  ಪ್ರಶಸ್ತಿ ದಕ್ಕಿದೆಯಂತಪ್ಪ'

`ಹೋಗತ್ಲಗೆ! ನಮ್ ನೇಟಿವಿಟಿನೇ ಕಿತ್ಕೊಂಡು ಬಿಟ್ರಾ? ರಾಜಕೀಯದೋರು ಮಾತಾಡಿದ್ದನ್ನ ಸಾವಿರ ಲಕ್ಷ ಸಾರಿ ಅವರೇ ಕೇಳೋ ಹಾಗೆ ಮಾಡಿ ಬಾಯ್ ಮುಚ್ಚಿಸೋ ಮೆಶಿನ್ ನಾವು ಕಂಡು ಹಿಡಿದು ಯಾವುದೋ ಜಮಾನನೇ ಆಯ್ತು. ಅದಕ್ಕೆ ಈಗ ಪ್ರಶಸ್ತಿನಾ?'
  `ಯಾವುದೋ ಆ ಮೆಶಿನ್ನು?'

`ಇನ್ಯಾವುದು? ನಮ್ ನೇಟೀವ್-ಟಿ.ವಿ, ಟಿ.ವಿ 9 ಕಣ್ರಲೇ..'

`ಯಾವುದು ಕೊಡ್ಲಿ ಬಿಡ್ಲಿ! ನಮ್ ದೇಶದ ಸೌಂದರ್ಯ ರಾಣಿಯರಿಗೆ ನಗ್ನೋ-ಬೆಲ್ ಅಂತೂ ಕೊಡಲೇಬೇಕು?'

`ನಗ್ನೋಬೆಲ್ಲಾ? ಹಾಗಂದ್ರೇನು?'

`ಕರಾಗ್ರೇ ವಸತೇ ಕತ್ರಿನಾ, ಕರಮಧ್ಯೇ ಶೆರಾವತ್,ಕರಮೂಲೇ ಸ್ಥಿತಾ ಪಡುಕೋಣೆ, ಪ್ರಭಾತೇ ನೇಹ (ದೇಹ) ದರ್ಶನಂ  ಅಂತ ಹೇಳ್ಕೊಳೋ ಹೆಮ್ಮೆಯ ಸುಂದರಿಯರ ದೇಶ ಇದು. ಬಟ್ಟೆಗಳಿಗೆ ತೂತಲ್ಲ, ತೂತುಗಳಿಗೆ ಬಟ್ಟೆ ತುಣುಕು ಡಿಸೈನ್ ಮಾಡಿದ ಸೀರೆಯೇ ಉಡದ ಸೌಂದರ್ಯವತಿಯರಿಗೆ ಒಂದು ನಗ್ನೋ-ಬೆಲ್ ಕೊಡಲೇಬೇಕಲ್ಲವಾ?'

`ಒಳ್ಳೇ ಜೋಕ್ ಕಣಲೇ..'

`ಜೋಕ್ ಅನ್ನುತ್ಲೂ ಜ್ಞಾಪಕ ಬಂತು. ಹಾಗೇ ನಮ್ ಹಾಸ್ಯೋತ್ಸವದ ಕಿಲಾಡಿಗಳಿಗೆ ಒಂದು ಇಗ್ನೊಬೆಲ್ ಕೊಡಿಸಬೇಕು. ಇಲ್ಲ ಅಂದ್ರೆ ಅಟ್‌ಲೀಸ್ಟ್ ಒಂದು ನಗ್-ನೊಬೆಲ್ ಆದರೂ ಕೊಡಲೇಬೇಕು... ಏನಂತೀರಿ?'

ಎಲ್ಲಾ ಸೈ ಎಂದು ತಲೆದೂಗಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT