ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದಲ್ಲೆ ಕಳೆದದ್ದು ಹುಡುಕುತ್ತ...

Last Updated 17 ಜನವರಿ 2015, 19:30 IST
ಅಕ್ಷರ ಗಾತ್ರ

ನಮ್‌ ಕಚೇರಿ ಗೆಳತಿ ಮೊನ್ನೆಮೊನ್ನೆ ತನ್ನ ಬ್ಯಾಗು ಕಳಕೊಂಡು, ಕುಗ್ಗಿಹೋಗಿದ್ಲು. ರೊಕ್ಕ, ಕ್ಯಾಮೆರಾ, ಕಾರ್ಡುಗಳು, ಮನೀಕೀಲಿ ಎಲ್ಲಾನೂ ಕಳಕೊಂಡಿದ್ಲು. ಒಂದೆರಡೇ ಕ್ಷಣ... ಕೋಳಿ ಮರಿನ ಹದ್ದು ಬಡದ್ಹಂಗ ಬಡಕೊಂಡು ಹೋಗಿದ್ರು ಕಳ್ರು.

ಎಲ್ಲಾ ಕಳಕೊಂಡ ದುಃಖ ಒಂದು ಕಡೆ. ಇನ್ನೊಂದು ಕಡೆ ದೂರು ಕೊಡಾಕ ಹೋದಾಗ ಪೊಲೀಸರ ದರ್ಪದ ಮಾತು. ‘ನಾವು ಹೇಳಿದ ಹಂಗೇ ಬರೀರಿ. ಕಳವು ಅನಬ್ಯಾಡ್ರಿ. (ಕಳುವಿಗೆ ಕಳವು ಅನಬಾರದಂತ!) ‘ಮಿಸ್ಸಿಂಗ್‌ ಅನ್ರಿ... ನಿಮ್‌ ಬೇಜವಾಬ್ದಾರಿ ಅದು... ಕಳವಂದ್ರ ಎಫ್‌ಐಆರ್‌ ಆಗಬೇಕು. ಮತ್ತೂ ನೀವು ಕಳವು ಅಂತ ಬರದ್ರ ಅದೇನು ಸಿಗ್ತದೇನು? ನಿಮ್‌ ಅಧಿಕಪ್ರಸಂಗತನ ಹೆಚ್ಚಾತು!’ ಹಿಂಗೇ ಮಾತು ಲಂಗುಲಗಾಮಿಲ್ದೆ ಸಾಗಿತ್ತು. ಎಲ್ಲಾ ಕಳಕೊಂಡು ಬರಿಗೈಯೊಳಗಿದ್ದ ಗೆಳತಿಗೆ ಸಮಾಧಾನದ ಮಾತು ಬ್ಯಾಡ, ಸೌಜನ್ಯದ ನಡತಿನೂ ಸಾಕಾಗಿತ್ತು. ಆದ್ರ ಪೊಲೀಸರ... ಮಾತು, ಅಸಹನೆಯಿಂದ ಗಟ್ಟಿ ಘಟವಾಣಿ ಹೆಣ್ಮಗಳು ಸೈತ ಕಣ್ಣೀರು ಸುರಸಿದ್ಲು.  ಕಳಕೊಂಡ ಹತಾಶೆಗಿಂತಲೂ ಹೆಚ್ಚು ನೋವಾಗಿದ್ದು ಈ ಅಪಮಾನಕ್ಕ.

ಹೌದು, ಹೆಣ್ಮಕ್ಕಳು ಭಾಳ ಕುಗ್ಗೂದು ಇಂಥ ಅಪಮಾನಗಳಿಗೆ. ಒಳಗೊಳಗೇ ಕುಸಿದು ಹೋಗುವುದು ಇಂಥ ಅನುಮಾನಗಳಿಗೆ. ಬೇಜವಾಬ್ದಾರಿ ಅನ್ನೂ ಪದ ತೀರ ನಮ್ಮ ಅಸ್ತಿತ್ವದ ಬುನಾದಿಯನ್ನೇ ಅಳಗ್ಯಾಡಿಸಿ ಬಿಡ್ತದ. ಯಾಕಂದ್ರ ನಾವು ನಮ್ಮನ್ನೇ ಮರತು ಯಾವ್ಯಾವುದೋ ಪಾತ್ರ ನಿಭಾಯಸಾಕ ಹೆಣಗಾಡ್ತಿರ್ತೀವಿ.

ಇದನ್ನ ಸರಳಗೆ ಹೇಳಬೇಕಂದ್ರ ಒಂದು ಉದಾಹರಣೆ ಕೊಡ್ತೀನಿ ನೋಡ್ರಿ, ಮೊನ್ನೆ ನನ್ನ ಗಂಡನ ಸ್ನೇಹಿತನ ಮನ್ಯಾಗ ಒಂದು ಸಂತೋಷ ಕೂಟ ಇತ್ತು. ಎಲ್ಲಾರೂ ತಂ ತಮ್‌ ಬಗ್ಗೆ ಯಾರಿಗೂ ಗೊತ್ತಿರದ ವಿಷಯ ಹೇಳ್ರಿ ಅಂತ ಆಟಕ್ಕ ಕರದ್ರು. ಎಲ್ಲಾ ಹೆಣ್ಮಕ್ಕಳು ಏನು ಅಂತ ನೆನಪು ಮಾಡ್ಕೊಳ್ಳೂದ್ರಾಗ ಅವರ ಸ್ನೇಹಿತನ ಹೆಂಡತಿ ‘ನಾನು ರಾಷ್ಟ್ರ ಮಟ್ಟದ ಖೊಕ್ಕೋ ಆಟಗಾತಿ’ ಅಂದ್ಲು. ನಾನು ಬಿಟ್ಟಕಣ್ಣು ಬಿಟ್ಗೊಂಡು ನೋಡ್ತಿದ್ದೆ. ಯವಾಗಲೂ ಮಗನಿಗೆ ಏನುಣ್ಣಸಲಿ, ಏನು ತಿನ್ನಸಲಿ, ಯಾರ ಜೊತಿಗೆ ಜಗಳಾಡದಾ ಅಂತ ಹೆಣಗಾಡೂ ಹುಡುಗಿ ಒಂದು ಜಮಾನಾದಾಗ ರಾಷ್ಟ್ರದ ತಂಡದೊಳಗಿದ್ಲು..!

ಇನ್ನೊಬ್ಬರು ನೃತ್ಯಗಾತಿ ಆಗಿದ್ರು.
ನನ್ನ ಪಾಳಿ ಬರೂದ್ರೊಳಗ ಆಟ ಅಲ್ಲಲ್ಲೇ ಚದುರಿ ಹೋಗಿತ್ತು. ಹಂಗಾಗಿ ಬಚಾವ್‌. ಆದ್ರ ನನ್ನೊಳಗ ಆ ಸಂಗತಿ ಇನ್ನಾ ಕೊರೀತಿತ್ತು. ನಾವೇನೋ ಕಳಕೋತೀವಿ. ಏನೋ ಅಲ್ಲ, ಎಲ್ಲವನ್ನೂ ಕಳಕೋತೀವಿ. ನಮ್ಮನ್ನೂ ಕಳಕೋತೀವಿ. ಒಂದು ಕುಟುಂಬ ಅನ್ನೂ ವ್ಯವಸ್ಥೆಗೆ ಕೂಡಿದ ಕೂಡಲೆ ನಾವು ಕಳದು ಹೋಗುವ ಪ್ರಕ್ರಿಯೆ ಸುರು ಆಗ್ತದ. ಮೊದಲು ಹಟ ಕಳಕೋತೀವಿ. ‘ಬೇಕು, ಬೇಕೇಬೇಕು’ ಅಂತ ಹಟಾ ಹಿಡೀತಿದ್ದೋರು, ‘ಈಗಲ್ಲಂದ್ರ ಇನ್ನೊಮ್ಮೆ ಬಿಡು’ ಅನ್ನುವ ಹೊಂದಾಣಿಕಿಯೊಳಗ ಹಟಾ ಕಳಕೋತೀವಿ.

ವ್ಯಾಳಿ ಸಾಲೂದಿಲ್ಲ. ಮಕ್ಕಳನ್ನ ಬೆಳಸೂದ್ರೊಳಗ ಹವ್ಯಾಸ ಕಳಕೋತೀವಿ. ಒಂದು ಸಿನಿಮಾ ನೋಡದಿದ್ರ, ಪ್ರೀತಿಯ ಕಾರ್ಯಕ್ರಮ ನೋಡದಿದ್ರ ಏನೋ ಕಳಕೊಂಡಂಗ ಚಡಪಡಸ್ತಿದ್ದ ಮನಸು, ಹೋದ್ರ ಹೋಗಲಿ ಬಿಡು... ನೋಡಲಿಕ್ರ ಜೀವನಾ ಮುಂದೋಡುದಿಲ್ಲೇನು ಅಂತ ಸುಮ್ನಾಗೂದ್ರೊಳಗ ಚಟಾ ಕಳಕೊಂತಿವಿ.

ದಿನಕ್ಕ ಹತ್ತು ಸಲೆ ಕನ್ನಡಿ ಮುಂದ ನಿಂದ್ರೋರು, ಮನಿಯಿಂದ ಹೊರಗ ಹೋಗೂಮುಂದ ತಲಿಮ್ಯಾಲೆ ಬಾಚಣಕಿ ಆಡಿಸಿ, ಹಣಿಗೆ ಕುಂಕುಮ ಇಟ್ಕೊಂಡು, ನಾವಿರೂದ ಹಿಂಗ... ಯಾರನ್ನ ಮೆಚ್ಚಿಸಿ ಏನು ಮಾಡೂದದ ಅನ್ನೂಹಂಗ ಹೊಂಟು ಬಿಡ್ತೀವಿ. (ಭಾಳಷ್ಟು ಮಂದಿ ಇದಕ್ಕ ಅಪವಾದ. ಕೆಲವರು ನಮ್ಹಂಗ, ನಿಮ್ಹಂಗ ಇದ್ದೇ ಇರ್ತಾರ. ಆ ಮಾತು ಬ್ಯಾರೆ)

ನಾವು ನಮ್ಮನ್ನೇ ಕಳಕೋತೀವಿ. ಮಾತು ಬಂದಾಗ ನಾವೇನು ಅಂತ ಸಾಬೀತು ಪಡಿಸಾಕ ಹೆಣಗಾಡ್ತೀವಿ. ನಮ್ಮ ಚಾರಿತ್ರ್ಯದ ವಿಷಯ ಬಂದಾಗ ಒಳಗೊಳಗೆ ವಿಲವಿಲ ಒದ್ದಾಡಿದ್ರೂ ಗಂಟಲ ನರಾ ಹರಿಯೂಹಂಗ ಚೀರಾಡಿ ಬಿಡ್ತೀವಿ. ಭೋರ್‌್ಯಾಡಿ ಅಳ್ತೀವಿ. ಎದುರಿನೋರಿಗೆ ಅದೆಲ್ಲ ನಾಟಕ ಅನ್ನಸ್ತದ. ಮತ್ತ ನಾವು ಕಳಕೋತೀವಿ.

ಹಿಂಗ ಕಳಕೊಂಡ ಭಾವ ಬಂದಾಗಲೆಲ್ಲ ಈ ಮಾತು ನೆನಪಾಗ್ತದ. ಕಳದದ್ದು ಕಳದಲ್ಲೇ ಹುಡುಕುಬೇಕು. ಹೌದು ನಾವು ಕಳಕೊಂಡಿದ್ದು, ನಮ್ಮಲ್ಲೇ ಔತುಕೊಂಡಿರ್ತದ. ಅವಾಗವಾಗ  ಅವಕ್ಕಲೆ ಅಂತ ಹೊರಗ ಇಣಕ್ತಿರ್ತದ. ಅವಾಗ ಅದಕ್ಕೊಂದು ಸಣ್ಣ ನೇವರಿಕಿ ಬೇಕು. ಅದಕ್ಕೊಂದು ಸಣ್ಣ ಪ್ರೋತ್ಸಾಹ ಬೇಕು. ನೆಚ್ಚಕಿ ಮಾತು ಬೇಕು. ಬೆಚ್ಚನ ವಾತಾವರಣ ಬೇಕು.

ಆದ್ರ ಇವೆಲ್ಲ ಎಲ್ಲಿ ಸಿಗ್ತಾವ ಬಿಡ್ರಿ... ಅಂತ ನಿಟ್ಟುಸಿರು ಹಾಕಬ್ಯಾಡ್ರಿ. ಗಂಡಸ್ರ ಕುಲಾ ಬೈಯ್ಯಾಕ ನಿಂದರಬ್ಯಾಡ್ರಿ. ಈ ಮಾತು ಯಾಕ ಹೇಳ್ತೀನಂದ್ರ ನಮ್ಮನಿ ಹತ್ರ ಮೌಶಿ ಒಬ್ರು ಇದ್ರು. ಅವರಿಗೆ ಏನರೆ ಹೇಳೂತ್ಲೆ, ಕಾಕಾನ್ನ ಬೈತಿದ್ರು. ‘ಇವರಿಗೆ ಕಟ್ಗೊಂಡು ಎಲ್ಲಾ ಬಿಟ್ಟಂಗಾತು’ ಅಂತಿದ್ರು. ಒಂಜರಾ ಬಿಡುವು ಮಾಡ್ಕೊಂಡು ‘ಮೇರಿ ಕೋಮ್‌’ ಚಿತ್ರಾ ನೋಡ್ರಿ... ಎಂಥಾ ವಿರುದ್ಧದ ಪ್ರಸಂಗದೊಳಗೂ ಅಕಿ ತನ್ನ ಜಿದ್ದು ಸಾಧಿಸಿದ್ಲು. ಆ ಹಾಡು ಮಾತ್ರ ಮಸ್ತ್‌ ಐತಿ.. ‘ದಿಲ್‌ ಯೇ ಜಿದ್ದಿ ಹೈ... ದಿಲ್‌ ಯೇ ಜಿದ್ದಿ ಹೈ... ದಿಲ್‌ ಯೇ ಜಿದ್ದಿ ಹೈ ಜಿದ್ದಿ ಹೈ ದಿಲ್‌ ಯೇ ಜಿದ್ದಿ ಹೈ’

ನಾವು ಮನಸು ಮಾಡಿದ್ರ ಮನಸಿನೊಳಗೇ ಸಮಾಧಿ ಮಾಡಿದ ಹತ್ತಾರು ವಿಷಯಗಳನ್ನ ಹೊರಗ ತಗೀಬಹುದು. ಹಟಾ ಹಿಡೀಲಿಕ್ರೂ, ಚಟಾ ಆಗಲಿಕ್ರೂ... ಅವಾಗವಾಗ ನಮ್ಮ ಮನಸು ಹಗುರಾಗುವಷ್ಟರೆ ನಾವು ನಾವಾಗಬೇಕು.

ನಮ್ಮಮ್ಮ ನಾವು ಸಣ್ಣೋರಿದ್ದಾಗ 12 ತೊಲಿ ಬಂಗಾರ ಕಳಕೊಂಡಿದ್ಲಂತ. ಅದೇ ನೆವಾ ಮಾಡಿ ನಮ್ಮಾಯಿ ನಮ್ಮಮ್ಮ ಅಪ್ಪಗ ದೂರ ಮಾಡಿದ್ಲು. ಪಿಯುಸಿ ಓದಿ ಮದಿವ್ಯಾಗಿದ್ದ ಅಮ್ಮ, 10 ವರ್ಷಗಳೊಳಗ ಐದು ಮಕ್ಕಳನ್ನ ಹೆತ್ತ ಮ್ಯಾಲೆ ಕಾಲೇಜಿಗೆ ಸೇರಿದ್ಲು. ಬಿ.ಎ, ಬಿ.ಎಡ್‌ ಮಾಡಿದ ಕೂಡ್ಲೆ ನೌಕರಿ ಸಿಕ್ಕಿತ್ತು. ಹಳ್ಳೀ ಸಾಲೀಗೆ ಹೋಗಿ ಪಾಠ ಮಾಡಿ ಬರ್ತಿದ್ಲು. ಆಮ್ಯಾಲೆ ಓದುವ ನಶಾ ಹತ್ತಿತು. ಕೊನೀ ಮಗಳು ನಾನೂ ಸಾಲೀಗೆ ಹೋಗಾಕತ್ತಿದೆ. ಮತ್ತ ಎಂ.ಎ ಕನ್ನಡ ಮಾಡಿದ್ಲು. ಧಾರವಾಡದ ಮ್ಯಾಲಿನ ಪ್ರೀತಿ ಅದು. ಮುಂದ ಎಂ.ಎಡ್‌ ಆತು. ಎಂ.ಎ ಇತಿಹಾಸ ಮಾಡಿದ್ಲು... ದುಡ್ಕೊಂತ... ರೊಕ್ಕ ಉಳಸ್ಕೊಂತ ಕಳದಿದ್ದೆಲ್ಲ ಬಂಗಾರ ಮತ್ತ ಮಾಡಿದ್ಲು. ಅಜ್ಜಿ ಕೊನಿಗಾಲಕ್ಕ ಇದ್ದದ್ದು ನಮ್ಮಮ್ಮನ ಹತ್ರ. ಮರಿಮೊಮ್ಮಗ ಹುಟ್ಟದಾಗ ಅಕಿನ ಮ್ಯಾಲೆ ಬಂಗಾರದ ಹೂ ಹಾರಿಸಿದ್ಲು ನಮ್ಮಮ್ಮ. ಅಕಿನ ಬ್ಯಾಸರ, ಸಿಟ್ಟು ಸೆಡವು ಎಲ್ಲಾ ಕಡಿಮಿ ಆಗಿದ್ದು ಅವಾಗ. ಆದ್ರ ಅಷ್ಟು ಆಗೂದ್ರೊಳಗ ಮೂರನೆಯ ತಲೆಮಾರು ಬಂದಿತ್ತು.

ನಾವು ಕಳಕೊಳ್ಳೂದು ದೊಡ್ಡದಲ್ಲ. ಕಳದಿದ್ದು ಪಡಕೊಳ್ಳೂದು ದೊಡ್ಡದು. ಇನ್ನ ಮತ್ತ ಕಚೇರಿ ಗೆಳತಿ ಸುದ್ದಿಗೆ ಬರತೇನು. ತಡಕೊಳ್ಳೂತನ ತಡಕೊಂಡ ಆ ಹೆಣ್ಮಗಳು ಪೊಲೀಸರಿಗೆ ತಾನೇನು ಕೆಲಸ ಮಾಡ್ತಾಳ, ಕಾನೂನು ಎಷ್ಟು ಗೊತ್ತದ ಅಂತ ಹೇಳಿದ ಕೂಡ್ಲೆ ಅವರು ಮಾತಾಡೂ ಧಾಟಿನೇ ಬದಲಾತಂತ. ಇದ್ದಕ್ಕಿದ್ಹಂಗ ಮೇಡಂ ಅನ್ನಾಕ ಚಾಲೂ ಮಾಡಿದ್ರಂತ. ನಮ್ಮ ಜ್ಞಾನ, ಸಂಯಮ ಎರಡೂ ನಮ್ಮನ್ನ ನಾವು ಹುಡುಕಾಗ ಅನುವು ಮಾಡಿಕೊಡುವ ಕೀಲಿಕೈ. ನಾವು ಕಳಕೊಂಡಾಗೆಲ್ಲ ಇವನ್ನೇ ಬಳಸಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT