ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಬಂತು ಆರೋಪಿಗಳಿಗೆ ‘ಜೀವ’!

Last Updated 23 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

2004ರ ಮಾರ್ಚ್‌ 30. ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ಎನ್.ಪ್ರಹ್ಲಾದಾಚಾರ್ಯ ಅವರು ಸಂಜೆ 5 ಗಂಟೆಗೆ, ಕಿಕ್ಕಿರಿದು ತುಂಬಿದ್ದ ನ್ಯಾಯಾಂಗಣದಲ್ಲಿ ಕೊಲೆ ಕೇಸೊಂದರ ಆದೇಶವನ್ನು ಓದಲು ಆರಂಭಿಸುತ್ತಿದ್ದಂತೆ ಆರೋಪಿಗಳ ಪರ ವಕೀಲನಾಗಿದ್ದ ನನಗೆ ‘ಎಷ್ಟೋ ಕ್ರಿಮಿನಲ್ ಪ್ರಕರಣಗಳಲ್ಲಿ ನಿರಪರಾಧಿಗಳ ನೋವು ಅರಣ್ಯರೋದನ ಆಗುವ ಸಾಧ್ಯತೆಗಳೇ ಹೆಚ್ಚು’ ಎಂಬ ಮಾತು ತಲೆಯಲ್ಲಿ ಸುಂಟರಗಾಳಿಯಂತೆ ಸುತ್ತುತ್ತಿತ್ತು.  ಏಕೆಂದರೆ ಈ ಪ್ರಕರಣ ತನ್ನ ಗರ್ಭದಲ್ಲಿ ಚಿತ್ರ–ವಿಚಿತ್ರ ಸಂಗತಿಗಳನ್ನು ಇರಿಸಿಕೊಂಡಿತ್ತು.
***
ಈ ಕೊಲೆ ಘಟನೆ ನಡೆದದ್ದು 1982ರ ಆಗಸ್ಟ್‌ 22ರ ರಾತ್ರಿ 10.30ರ  ಸುಮಾರಿಗೆ, ಬೆಂಗಳೂರಿನ ಭೀಮಕ್ಕನ ಹಳ್ಳಿ ಗೇಟ್ ಮತ್ತು ಮಲ್ಲಿಮಾಕನಪುರ ಹೊಸಕೋಟೆ ನಂದಗುಡಿ ರಸ್ತೆಯಲ್ಲಿ. ಆ ಕಾಲದಲ್ಲಿ ಹೊಸಕೋಟೆಯ ತಾಲ್ಲೂಕು ರಾಜಕಾರಣ ಕಾಂಗ್ರೆಸ್-ಐ ಮುಖಂಡರಾದ ಚಿಕ್ಕೇಗೌಡರ ಬಿಗಿಮುಷ್ಟಿಯಲ್ಲಿತ್ತು. ಅವರನ್ನು ಹೇಗಾದರೂ ಬಗ್ಗುಬಡಿಯಲು ಬಿ. ಎಂ. ನಾರಾಯಣಸ್ವಾಮಿ ಮತ್ತು ಬಿ.ಎನ್. ಬಚ್ಚೇಗೌಡರು ಹರಸಾಹಸ ಪಡುತ್ತಿದ್ದರು.

70ರಿಂದ 90ರ ದಶಕಗಳಲ್ಲಿ ಹೊಸಕೋಟೆ ತಾಲ್ಲೂಕಿನ ರಾಜಕೀಯ ಮುಖಂಡರು ನಡೆಸುತ್ತಿದ್ದ ಪೈಪೋಟಿಯ ಹೋರಾಟಗಳು ಅವರನ್ನು ಕಠೋರ ವ್ಯಕ್ತಿಗಳನ್ನಾಗಿಸಿದ್ದವು. ಸಂಬಂಧಿಕರು, ಸಮುದಾಯದವರನ್ನು ಲೆಕ್ಕಿಸದ ಈ ಹೋರಾಟಗಳು ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದವು.

ಇಂಥ ಪೈಪೋಟಿಯ ವಾತಾವರಣದಲ್ಲೂ ಬಿ.ಎಂ. ನಾರಾಯಣಸ್ವಾಮಿ ಏಕಕಾಲದಲ್ಲಿ ಅಚ್ಚರಿ ಮತ್ತು ಅಸೂಯೆ ಮೂಡಿಸುವಷ್ಟು ಪ್ರಭಾವಿಯಾಗಿ ಎತ್ತರಕ್ಕೆ ಬೆಳೆದಿದ್ದರು. ಚಿಕ್ಕೇಗೌಡರ ವಿರುದ್ಧ ವಿಧಾನ ಪರಿಷತ್ ಸದಸ್ಯ (ಎಂ.ಎಲ್.ಸಿ) ಆಗುವ ವಿಚಾರದಲ್ಲಿ ಸ್ಪರ್ಧೆಯನ್ನೂ ಒಡ್ಡಿದ್ದರು. ಆಗಿನ ಜನತಾ ದಳ ಪಕ್ಷದಲ್ಲಿ ಒಬ್ಬ ಒಳ್ಳೆಯ ನಾಯಕನಾಗುವ ಸಾಮರ್ಥ್ಯವಿರುವ ಅಭ್ಯರ್ಥಿಯಾಗಿ ಕಂಡುಬರುತ್ತಿದ್ದರು.
***
ನಂದಗುಡಿ ಹೋಬಳಿ, ಏಕರಾಜಪುರ ಸರ್ವೇ ನಂ.36ರಲ್ಲಿ ದಾನಿಯೊಬ್ಬರು ಸ್ಥಳೀಯ ಶಾಲೆಗಾಗಿ 20 ಎಕರೆ ಜಮೀನನ್ನು ದಾನ ಮಾಡಿದ್ದರು. ಚಿಕ್ಕೇಗೌಡರ ಅನುಯಾಯಿ ಅಶ್ವತ್ಥಪ್ಪನವರ ಹಿಂಬಾಲಕರು ಆ ಜಮೀನಿಗೆ ಸಾಗುವಳಿ ಪತ್ರಗಳನ್ನು ಪಡೆದುಕೊಂಡಿದ್ದರು. ಜಮೀನನ್ನು ಸಾಗುವಳಿದಾರರಿಂದ ಬಿಡಿಸಿ ಸ್ಥಳೀಯ ಶಾಲೆಗಳಿಗೆ ವಾಪಸು ಮಾಡುವ ಪ್ರಯತ್ನದಲ್ಲಿ ಬಿ.ಎಂ. ನಾರಾಯಣಸ್ವಾಮಿ ಮತ್ತು ಅವರ ಹಿಂಬಾಲಕರು ಇದ್ದರು. ಅಶ್ವತ್ಥಪ್ಪನವರ ಕಡೆಯವರು ಈ ಜಮೀನಿನ ಚಟುವಟಿಕೆಗಳ ಮಧ್ಯೆ ಪ್ರವೇಶ ಮಾಡದಂತೆ ತಡೆಯಾಜ್ಞೆ ಪಡೆದುಕೊಂಡಿದ್ದರು.

1987ರ ಆಗಸ್ಟ್‌ 22ರಂದು ನಾರಾಯಣಸ್ವಾಮಿ ಅವರು ನಂದಗುಡಿ ಪೊಲೀಸ್ ಠಾಣೆಯಲ್ಲಿ ಅಶ್ವತ್ಥಪ್ಪ ಮತ್ತು ಅವರ ಹಿಂಬಾಲಕರ ವಿರುದ್ಧ ದೂರು ದಾಖಲಿಸಲು ಹೋಗಿದ್ದರು. ಪಿ.ಎಸ್.ಐ. ರಂಗನಾಥ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಡಿ.ಎ. ಪೂಣಚ್ಚ ಯಾವುದೋ ಒಂದು ಕೊಲೆ ಕೇಸಿನ ನಿಮಿತ್ತ ಹೊರಗೆ ಹೋಗಿದ್ದರಿಂದ ಅವರು ಹಿಂತಿರುಗಿ ಬರುವುದಕ್ಕಾಗಿ ಕಾಯುತ್ತಿದ್ದರು.

ರಾತ್ರಿ 9ಗಂಟೆ ಸುಮಾರಿಗೆ ಪೊಲೀಸ್ ಅಧಿಕಾರಿಗಳು  ಬಂದು ಮಾರನೆಯ ದಿನ ಬರುವಂತೆ ಹೇಳಿ ಕಳಿಸಿದರು. ಅದೇ ವೇಳೆಯಲ್ಲಿ ಅಶ್ವತ್ಥಪ್ಪ ತಮ್ಮ ಲಾರಿಯಲ್ಲಿ ಕುಳಿತು ಶ್ರೀನಿವಾಸ, ಕದಿರಪ್ಪ, ರಾಮಚಂದ್ರ ಮುಂತಾದವರೊಂದಿಗೆ ಪೊಲೀಸ್‌ ಠಾಣೆಯಲ್ಲಿ ಆಗುವ  ವಿದ್ಯಮಾನಗಳನ್ನು ಗಮನಿಸಿಕೊಳ್ಳುತ್ತಿರುವಂತೆ ನಾರಾಯಣಸ್ವಾಮಿ ಹಿಂಬಾಲಕರಿಗೆ ಕಂಡುಬಂತು. ಹುಷಾರಾಗಿರುವಂತೆ ನಾರಾಯಣಸ್ವಾಮಿಯವರಿಗೆ ಹಿಂಬಾಲಕರು ಎಚ್ಚರಿಸಿದರು.

ಪೊಲೀಸ್‌ ಠಾಣೆಯಿಂದ ಹೊರಬಂದ ನಾರಾಯಣಸ್ವಾಮಿ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಆಂಜನಪ್ಪ ಅವರನ್ನು ಕೂರಿಸಿಕೊಂಡು ಹೊಸಕೋಟೆ ಕಡೆ ಹೊರಟರು. ಸುಮಾರು 10.30ರ ವೇಳೆಗೆ ಭೀಮಕ್ಕನಹಳ್ಳಿಗೇಟ್ ಮತ್ತು ಮಲ್ಲಿಮಾಕನಪುರದ ಮಧ್ಯೆ ಹೊಸಕೋಟೆ– ನಂದಿಗುಡಿ ರಸ್ತೆಯಲ್ಲಿ ಇರುವ ಜಾಗಕ್ಕೆ ಬಂದಾಗ ತಮ್ಮ ಹಿಂದೆ ಲಾರಿಯೊಂದು ತಮಗೆ ಡಿಕ್ಕಿ ಹೊಡೆಯುವಂತೆ ಬರುತ್ತಿದ್ದುದನ್ನು ಆಂಜನಪ್ಪ ಗಮನಿಸಿದರು.

ಗಾಡಿಯನ್ನು ಎಡಬದಿಗೆ ಸರಿಸುವಂತೆ ನಾರಾಯಣಸ್ವಾಮಿಯವರಿಗೆ ಕೂಗಿ ಹೇಳುವಷ್ಟರಲ್ಲಿಯೇ ಲಾರಿ ದ್ವಿಚಕ್ರ ವಾಹನವನ್ನು ಅಪ್ಪಳಿಸಿಯೇ ಬಿಟ್ಟಿತು. ರಸ್ತೆ ಪಕ್ಕದ ದೊಡ್ಡದೊಂದು ಹಳ್ಳಕ್ಕೆ ಇಬ್ಬರೂ ಬಿದ್ದರು. ನಾರಾಯಣಸ್ವಾಮಿಯವರ ಜೊತೆ ಪೊಲೀಸ್ ಠಾಣೆಗೆ ಹೋಗಿದ್ದ ಅವರ ಹಿಂಬಾಲಕರು ಸ್ಥಳಕ್ಕೆ ಧಾವಿಸುವಷ್ಟರಲ್ಲಿಯೇ ಆಂಜನಪ್ಪ ಸತ್ತಿರುವುದನ್ನು ಮತ್ತು ನಾರಾಯಣಸ್ವಾಮಿಯವರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡರು. ಅವರಲ್ಲಿಬ್ಬರು ನಂದಗುಡಿ ಪೋಲಿಸ್ ಠಾಣೆಗೆ ಹೋಗಿ ವಿಷಯ ತಿಳಿಸಿದರು.

ಕೆಲವರು ನಾರಾಯಣಸ್ವಾಮಿಯವರನ್ನು ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಗೆ ಸಾಗಿಸಿದರು. ಅವರ ದೇಹದ ಅನೇಕ ಭಾಗಗಳಲ್ಲಿ ಮೂಳೆಗಳು ಮುರಿದಿದ್ದವು. ಅವರನ್ನು ಡಾ. ಶ್ರೀಕಾಂತ್ ಎಸ್. ಅಯ್ಯಂಗಾರ್‌ ಚಿಕಿತ್ಸೆಗೆ ಒಳಪಡಿಸಿದರು. ಆದರೆ ಮರುದಿನ ಸಂಜೆಯವರೆಗೂ ನಾರಾಯಣಸ್ವಾಮಿಯವರಿಗೆ ಪ್ರಜ್ಞೆ ಬರಲಿಲ್ಲ.

ಬಿ.ಎಂ. ನಾರಾಯಣಸ್ವಾಮಿಯವರ ಸಹೋದರ ಡಾ. ದಿವಾಕರ್,  ನಾರಾಯಣಸ್ವಾಮಿ ಅವರನ್ನು ಮಲ್ಲೇಶ್ವರದಲ್ಲಿರುವ ಛಾಯಾ ನರ್ಸಿಂಗ್ ಹೋಮ್‌ಗೆ ಸ್ಥಳಾಂತರಿಸಿದರು. ಆಗಸ್ಟ್‌ 23ರಿಂದ ಅಕ್ಟೋಬರ್‌ 8ರವರೆಗೆ ಅವರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಯಿತು.

ಈ ಮಧ್ಯೆ, ಸರ್ಕಲ್ ಇನ್‌ಸ್ಪೆಕ್ಟರ್ ಡಿ.ಎ. ಪೂಣಚ್ಚ ಮತ್ತು ಇತರ ಪೊಲೀಸರು  ನರ್ಸಿಂಗ್ ಹೋಮ್‌ಗೆ  12 ಬಾರಿ ಹೋಗಿ  ಗಾಯಾಳುವಿನ ಹೇಳಿಕೆ ಪಡೆಯಲು ಲಿಖಿತ ಮನವಿಗಳನ್ನು ಕೊಟ್ಟು ಪ್ರಯತ್ನಿಸಿದ್ದರು. ಪ್ರತಿ ಬಾರಿಯೂ ಅಲ್ಲಿನ ವೈದ್ಯರು ಗಾಯಾಳು ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲವೆಂದು ತಿಳಿಸಿದರು. ಇತ್ತ ಪೊಲೀಸರು ಅಶ್ವತ್ಥಪ್ಪನವರ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದರು. ಆದರೆ ಸಂಶಯಾಸ್ಪದವಾದ ಯಾವ ನಡವಳಿಕೆಯೂ ಅವರಲ್ಲಿ ಕಂಡು ಬರದಿದ್ದ ಕಾರಣ ಪೊಲೀಸರೂ ಸುಮ್ಮನಿರಬೇಕಾಗಿತ್ತು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಸೆಪ್ಟೆಂಬರ್‌ 25ರಂದು ನರ್ಸಿಂಗ್ ಹೋಮ್‌ನ ವೈದ್ಯರು, ಪೂಣಚ್ಚರವರಿಗೆ ಕರೆ ಮಾಡಿ ನಾರಾಯಣಸ್ವಾಮಿ ಹೇಳಿಕೆ ಕೊಡುವ ಸ್ಥಿತಿಯಲ್ಲಿದ್ದಾರೆಂದು ತಿಳಿಸಿದರು. ಅವರ ಹೇಳಿಕೆ ಪಡೆದುಕೊಳ್ಳಲಾಯಿತು. ಘಟನೆ ನಡೆದ ರಾತ್ರಿ ಅಪರಿಚಿತ ಆರೋಪಿಗಳ ವಿರುದ್ಧ ಕೊಲೆ ಮತ್ತು ಕೊಲೆ ಪ್ರಯತ್ನದ ಆರೋಪಗಳನ್ನು ಒಳಗೊಂಡ ಪ್ರಕರಣ ದಾಖಲಾಗಿತ್ತು. ಈಗ ‘ಅಪರಿಚಿತ’ರ ಜಾಗದಲ್ಲಿ ನಾರಾಯಣಸ್ವಾಮಿ ಅವರ ಹೇಳಿಕೆ ನಂತರ ಅಶ್ವತ್ಥಪ್ಪ, ಶ್ರೀನಿವಾಸ, ಬಿದರಪ್ಪ ಮತ್ತು ರಾಮಚಂದ್ರ ಎಂದು ನಮೂದು ಮಾಡಲಾಯಿತು. ಈ ನಾಲ್ವರ ವಿರುದ್ಧ ಕೊಲೆ ಮತ್ತು ಕೊಲೆ ಪ್ರಯತ್ನದ ಆರೋಪಗಳು ಸೇರ್ಪಡೆಯಾದವು.

ಹೇಳಿಕೆ ದಾಖಲಿಸಿಕೊಂಡ ಪೊಲೀಸರು ತಮ್ಮ ಖಾಕಿಯ ಕಾವನ್ನು ಶ್ರೀನಿವಾಸ, ಬಿದಿರಪ್ಪ ಮತ್ತು ರಾಮಚಂದ್ರರಿಗೆ ತಾಕಿಸಿದರು. ಅವರನ್ನು ಗಂಟೆಗಟ್ಟಲೆ ಕಠಿಣ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಿದರೂ ಒಂದೇ ಒಂದು ರಹಸ್ಯವನ್ನು ಹೊರಡಿಸಲಾಗಲಿಲ್ಲ. ಸಹಚರರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ ತಮಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದ ಅಶ್ವತ್ಥಪ್ಪ ತಲೆ ಮರೆಸಿಕೊಂಡರು.

ಅವರ ಪರವಾಗಿ ನಿರೀಕ್ಷಣಾ ಜಾಮೀನಿಗಾಗಿ ನಾನು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ ಮಾನ್ಯ ಮಾಡಿತು. ಪೂಣಚ್ಚನವರು ತನಿಖೆಯನ್ನು ಮುಂದುವರೆಸಿ ಈ ನಾಲ್ಕು ಜನರ ವಿರುದ್ಧ ಆಂಜನಪ್ಪನ ಕೊಲೆಗೆ ಮತ್ತು ನಾರಾಯಣಸ್ವಾಮಿಯವರ ಮೇಲೆ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅಂತಿಮ ವರದಿ ಸಲ್ಲಿಸಿದರು.

ಆರೋಪಿಗಳೆಲ್ಲರೂ ಜಾಮೀನು ಪಡೆದುಕೊಂಡಿದ್ದರಿಂದ ವಿಚಾರಣೆ ಮಂದಗತಿಯಲ್ಲಿ ಸಾಗತೊಡಗಿತು. ವಿಚಾರಣೆಯ ಹಂತದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ತಿಮ್ಮರಾಯಪ್ಪ ನೇಮಕವಾಗಿದ್ದು ಅವರು ಸುಮಾರು ಎಂಟು ವೈದ್ಯರನ್ನು ಪ್ರಾಸಿಕ್ಯೂಷನ್ ಪರವಾಗಿ ವಿಚಾರಣೆ ಮಾಡಿದರು. ಇಡೀ ಪ್ರಕರಣ ವೈದ್ಯರ ಹೇಳಿಕೆಗಳನ್ನು ಅವಲಂಬಿಸಿದೆ ಎಂಬ ವಿಚಾರ ಎಲ್ಲರಿಗೂ ಗೊತ್ತಾಗಿತ್ತು. ವೈದ್ಯರ ವಿಚಾರಣೆ ನಡೆಯುವ ದಿನ ಹೊಸಕೋಟೆ ತಾಲ್ಲೂಕಿನಿಂದ ನಾರಾಯಣಸ್ವಾಮಿಯವರ ಹಿಂಬಾಲಕರು ಮತ್ತು ಹಿತೈಷಿಗಳು ದೊಡ್ಡ ಸಂಖ್ಯೆಯಲ್ಲಿ ಕೋರ್ಟಿಗೆ ಬರುತ್ತಿದ್ದರು.

ಪಬ್ಲಿಕ್ ಪ್ರಾಸಿಕ್ಯೂಟರ್ ವಿಚಾರಣೆಗೆ ಒಳಪಡಿಸಿದ ಛಾಯಾ ನರ್ಸಿಂಗ್ ಹೋಮ್‌ನ ವೈದ್ಯರಲ್ಲಿ ಬಹು ಮುಖ್ಯವಾದವರು ಡಾ. ಟಿ. ರೂಪೆಂಡ್. ವೈದ್ಯರ ಪಾಟಿಸವಾಲಿನಲ್ಲಿ ನಾನು ಎಷ್ಟು ಪ್ರಯತ್ನಪಟ್ಟರೂ ನಾರಾಯಣಸ್ವಾಮಿಯವರು ಛಾಯಾ ನರ್ಸಿಂಗ್ ಹೋಮ್‌ನಿಂದ ಡಿಸ್‌ಚಾರ್ಜ್ ಆಗುವ ಮುನ್ನ ಪೊಲೀಸರಿಗೆ ಹೇಳಿಕೆ ಕೊಡುವ ಸ್ಥಿತಿಗೆ ಬಂದಿದ್ದರು ಎಂದು ಸಾಬೀತು ಮಾಡಲು ಆಗಲೇ ಇಲ್ಲ. ಈ ವಿಚಾರದಲ್ಲಿ ಅನೇಕ ವೈದ್ಯರ ಪಾಟಿಸವಾಲು ಮುಗಿದು ಕೊನೆಯಲ್ಲಿ ಉಳಿದಿದ್ದವರು ಡಾ. ರೂಪೆಂಡ್‌ ಮಾತ್ರ.

ಇವರ ಪಾಟಿಸವಾಲಿನಲ್ಲಿ ನಾನು ಇದನ್ನು ಸಾಬೀತುಪಡಿಸಲು ಆಗದಿದ್ದರೆ ಆರೋಪಿಗಳಿಗೆ ತಪ್ಪದೇ ಶಿಕ್ಷೆ ಆಗುವ ಸಾಧ್ಯತೆ ನನ್ನ ಪಂಚೇಂದ್ರಿಯಗಳನ್ನೆಲ್ಲ ಆವರಿಸಿತು.
ಡಾ. ರೂಪೆಂಡ್‌ರವರ ಪಾಟಿಸವಾಲು ಮಾಡುವ ಒಂದು ವಾರಕ್ಕಿಂತ ಮುಂಚಿತವಾಗಿ ಆರೋಪಿ ಅಶ್ವತ್ಥಪ್ಪನವರಿಗೆ ನ್ಯಾಯಾಲಯ ಕೊಟ್ಟಿದ್ದ ನಿರೀಕ್ಷಣಾ ಜಾಮೀನು ಆದೇಶದ ಪ್ರತಿಯನ್ನು ಅಚಾನಕ್ಕಾಗಿ ಕೈಗೆತ್ತಿಕೊಂಡು ಮತ್ತೆ ಮತ್ತೆ ಓದಿಕೊಂಡೆ.

ಅದರಲ್ಲಿ ನನಗೆ ಒಂದು ಹೊಳಹು ಸಿಕ್ಕಂತಾಯಿತು. ಛಾಯಾ ನರ್ಸಿಂಗ್ ಹೋಮ್‌ನಿಂದ ವೈದ್ಯರ ‘ಚಾರ್ಟ್’ ಮತ್ತು ‘ನರ್ಸಸ್ ನೋಟ್‌’ಗಳು ಬೇಕೆಂದು ಮನವಿ ಸಲ್ಲಿಸಿದೆ. 1987–88ರಲ್ಲಿ ಆ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ವೈದ್ಯರು ಆ ವೇಳೆಗಾಗಲೇ ಬೇರೆ ಕಡೆಗಳಿಗೆ ಹೊರಟು ಹೋಗಿ ಬದಲಿ ವೈದ್ಯರು ಬಂದಿದ್ದರು. ಸರ್ಕಲ್ ಇನ್‌ಸ್ಪೆಕ್ಟರ್ ಪೂಣಚ್ಚರವರಿಗೆ ಬಡ್ತಿ ಸಿಕ್ಕಿ ಡಿವೈಎಸ್‌ಪಿಯಾಗಿ ಬೆಂಗಳೂರಿನಿಂದ ಬಹು ದೂರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಆ ದಾಖಲೆಗಳನ್ನು ತರಿಸಲು ತಮ್ಮ ತಕರಾರು ಇಲ್ಲವೆಂದರು. ವೈದ್ಯರು, ತನಿಖಾಧಿಕಾರಿಗಳು ಅಲ್ಲಲ್ಲೇ ಇದ್ದಿದ್ದರೆ ದಾಖಲೆಗಳ ಸ್ಥಿತಿಗತಿ ಏನಾದರೂ ಆಗುತ್ತಿತ್ತೇನೋ. ಆದರೆ ಪುಣ್ಯ ಹಾಗೆ ಆಗಲಿಲ್ಲ.

ದಾಖಲೆಗಳನ್ನು ಹಾಜರುಪಡಿಸಲಾಯಿತು. ಗಾಯಾಳು ನಾರಾಯಣಸ್ವಾಮಿಯವರ ಸಹೋದರ ಡಾ. ದಿವಾಕರ್ ಛಾಯಾ ನರ್ಸಿಂಗ್ ಹೋಮ್‌ನ ವೈದ್ಯ ಆಗಿರಲಿಲ್ಲವಾದರೂ ನಾರಾಯಣಸ್ವಾಮಿಯವರು ಚಿಕಿತ್ಸೆಗೆಂದು ಸೇರಿದ್ದ ದಿನದಿಂದ ಅವರ ಹೇಳಿಕೆಯಾಗುವ ದಿನದವರೆಗೂ ಅವರ ಸನಿಹದಲ್ಲೇ ಇದ್ದುದು ದಾಖಲೆಗಳಿಂದ ತಿಳಿಯಿತು. ಇದನ್ನು ಡಾ. ರೂಪೆಂಡ್‌ರವರ ಪಾಟಿಸವಾಲಿನಿಂದ ಸಾಬೀತು ಮಾಡಿದೆ.

ಇವೆಲ್ಲಕ್ಕೂ ಕಳಶವಿಟ್ಟಂತೆ ಆ ದಾಖಲೆಗಳ ಸಹಾಯದಿಂದ ನನಗೆ ಸಾಬೀತುಪಡಿಸಲು ಸಾಧ್ಯವಾದದ್ದು ನಾರಾಯಣಸ್ವಾಮಿಯವರನ್ನು ಸೆಪ್ಟೆಂಬರ್‌ 22ರಂದೇ ನರ್ಸಿಂಗ್ ಹೋಮಿನಿಂದ ಡಿಸ್‌ಚಾರ್ಜ್ ಮಾಡಲಾಗಿತ್ತು ಎನ್ನುವ ವಿಚಾರ. ಡಿಸ್‌ಚಾರ್ಜ್‌ ಆದ ನಂತರ ನರ್ಸಿಂಗ್ ಹೋಮ್‌ನ ಸಮೀಪವೇ ಇದ್ದ ಅವರ ತಂಗಿಯ ಮನೆಯಲ್ಲಿ ಇದ್ದು ಆ ದಿನದಿಂದಲೇ ಪ್ರತಿನಿತ್ಯ ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದುದು ದಾಖಲೆಯಿಂದ ಕಂಡುಬಂದು ಅದನ್ನು ಕೋರ್ಟ್‌ ಮುಂದಿಟ್ಟೆ. ಆದರೆ ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ನರ್ಸಿಂಗ್‌ ಹೋಮ್‌ ದಾಖಲೆಗಳಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದರೆಂದೇ ತೋರಿಸಲಾಗಿತ್ತು!

ನಾರಾಯಣಸ್ವಾಮಿಯವರು ಸೆ.22ಕ್ಕಿಂತ ಮುಂಚೆಯೇ ಪ್ರಜ್ಞೆಗೆ ಮರಳಿದ್ದರು ಎಂಬುದೂ ಈ ದಾಖಲೆಗಳಿಂದ ಸಾಬೀತಾಯಿತು. ಆ ದಿನದಿಂದ 26ರವರೆಗೆ ಅವರನ್ನು ಕಾಣಲು ಬೆಂಬಲಿಗರು ಹೋಗುತ್ತಿದ್ದುದು, ಈ ಆರೋಪಿಗಳನ್ನು ಕೇಸಿನಲ್ಲಿ ಸಿಕ್ಕಿಸಲಾಗಿದೆ ಎಂಬ ವಿಷಯ ಅವರಿಗೆ ತಿಳಿದುದು ಎಲ್ಲವನ್ನೂ ಸಾಬೀತು ಮಾಡುವಲ್ಲಿ ಯಶಸ್ವಿಯಾದೆ.

ನನ್ನ ವಾದವನ್ನು ಯಥಾವತ್ತಾಗಿ ಆದೇಶದಲ್ಲಿ ಅಳವಡಿಸಿಕೊಂಡ ನ್ಯಾಯಾಧೀಶರು ನಾರಾಯಣಸ್ವಾಮಿ ಮತ್ತು ತನಿಖಾಧಿಕಾರಿ ಪೂಣಚ್ಚ ಅವರ ವಿರುದ್ಧ ಕಠಿಣವಾದ ಮಾತುಗಳನ್ನು ಉಲ್ಲೇಖಿಸಿದರು. ನಿರಪರಾಧಿಗಳು ಈ ಪ್ರಕರಣದಲ್ಲಿ ವಿನಾ ಕಾರಣ ವಿಚಾರಣೆಗೆ ಗುರಿಯಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಷ್ಟಾದರೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ವಿಚಾರಣೆಗೆ ಒಳಪಡಿಸದೇ ಬಿಟ್ಟದ್ದು ನನ್ನನ್ನು ಈಗಲೂ ಕಾಡುತ್ತಿದೆ.

ಕಾರಣ, ಇಡೀ ಪ್ರಕರಣವನ್ನು ನಾನು ಅರ್ಥೈಸಿಕೊಂಡಂತೆ, ಆರೋಪಿಗಳನ್ನು ಸುಳ್ಳು ಆರೋಪದಲ್ಲಿ ಸಿಕ್ಕಿಸುವ ಹಿನ್ನೆಲೆಯಲ್ಲಿ ಇದ್ದವರು ಅವರೇ. ಆದರೆ ಅವರು ಎಲ್ಲಿಯೂ ಮಾತಿಗೆ ಬರದೇ ಹೋದರು. ಈ ಪ್ರಕರಣ ಸುಳ್ಳಿನಿಂದ ಆರಂಭವಾಗಿ ಸತ್ಯದಲ್ಲಿ ಕೊನೆಗೊಂಡಾಗ ಕೊನೆಗೂ ನಿರಪರಾಧಿಗಳ ನೋವು ಅರಣ್ಯರೋದನ ಆಗಲಿಲ್ಲ ಎಂಬ ಸಮಾಧಾನದಿಂದ ಮನ ತುಂಬಿ ಬಂದಿತು. ಆದೇಶ ಹೊರಬಿದ್ದಂತೆ ಅಶ್ವತ್ಥಪ್ಪನವರ ಹಿಂಬಾಲಕರು, ನಾನು ಖುಷಿಯಿಂದ ಉಬ್ಬಿ ಸ್ಫೋಟಗೊಳ್ಳುವಷ್ಟು ಗೌರವ ನೀಡಿದರು.

(ಲೇಖಕ ಹೈಕೋರ್ಟ್‌ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT