ಸರ್ವಾನುಮತಕ್ಕೆ ಕಾದು ಕೂರುವ ರಾಜಕಾರಣಿ ನಾನಲ್ಲ, ನಿರ್ಧಾರಕ್ಕೆ ಬದ್ಧಳಾಗಿ ಮುನ್ನುಗ್ಗುವ ರಾಜಕಾರಣಿ ನಾನು'-ಮಾರ್ಗರೆಟ್ ಬ್ಯಾರನೆಸ್ ಥ್ಯಾಚರ್ (88) ಆಗಾಗ ಹೇಳುತ್ತಿದ್ದ ಈ ಮಾತು ಅವರ ಇಡೀ ವ್ಯಕ್ತಿತ್ವದ ಕೈಗನ್ನಡಿ.

ಹರಿತ ನಾಲಿಗೆ. ನೇರ ಮಾತು. ದಿಟ್ಟ ನಿಲುವು. ಅಳುಕದ ಹೆಜ್ಜೆ. ಸಾಧಿಸುವ ಛಲ. ಸೋಲೊಪ್ಪದ ಮನ. ದೇಶದ ಹಿತದೃಷ್ಟಿಯಿಂದ ತನಗೆ ಸರಿ ತೋಚಿದ್ದನ್ನು ಹಿಂಜರಿಯದೆ ಕಾರ್ಯಗತಗೊಳಿಸುವ ದಿಟ್ಟತನ. ಅಮೆರಿಕಕ್ಕೆ ಹೇಗೆ ಫ್ರಾಂಕ್ಲಿನ್ ರೂಸ್‌ವೆಲ್ಟ್ ಶಕ್ತಿ ತುಂಬಿದರೋ ಹಾಗೆ ಬ್ರಿಟನ್ನಿನ ಪುನಶ್ಚೇತನಕ್ಕೆ ಕಾರಣರಾದವರು ಮಾರ್ಗರೆಟ್ ಥ್ಯಾಚರ್.

ಎಪ್ಪತ್ತರ ದಶಕದಲ್ಲಿ ಬ್ರಿಟನ್ನಿಗೆ ಇಂಥ ನಾಯಕತ್ವದ ಅಗತ್ಯವಿತ್ತು. ಥ್ಯಾಚರ್ ಅಧಿಕಾರದ ಚುಕ್ಕಾಣಿ ಹಿಡಿದದ್ದು ಬ್ರಿಟನ್‌ನ ಸಂದಿಗ್ಧ ಪರಿಸ್ಥಿತಿಯಲ್ಲಿ. ಇಡೀ ಜಗತ್ತಿಗೆ ಕೈಗಾರಿಕಾ ಕ್ರಾಂತಿಯನ್ನು ನೀಡಿದ ಬ್ರಿಟನ್ನಿನ ಆರ್ಥಿಕ ವ್ಯವಸ್ಥೆ ಮುಗ್ಗಲುಗಟ್ಟಿ ನಿಂತಿತ್ತು. ವಿಶ್ವದ ಅನೇಕ ಕಡೆ ಪ್ರಭುತ್ವ ಸಾಧಿಸಿದ್ದ ಬ್ರಿಟನ್, ಆಧುನಿಕ ಜಗತ್ತಿನ ನಕಾಶೆಯಲ್ಲಿ ತನ್ನತನವನ್ನು ಕಾಯ್ದುಕೊಳ್ಳುವಲ್ಲಿ ಹೆಣಗುತ್ತಿತ್ತು.

ಸಿಕ್ ಮ್ಯೋನ್ ಆಫ್ ಯೂರೋಪ್ (ಯೂರೋಪಿನ ರೋಗಿ) ಎಂಬ ಅಪಹಾಸ್ಯಕ್ಕೆ ಗುರಿಯಾಗಿತ್ತು. ಆಗ ಮಂತ್ರದಂಡ ಹಿಡಿದು ಬಂದವರು ಮಾರ್ಗರೆಟ್. ಬ್ರಿಟನ್ನಿನ ಹೊಸ ದೆಸೆ ಆರಂಭವಾದದ್ದು ಆಕೆ ಪ್ರಧಾನಿಯಾದಾಗ. ಅಂತರರಾಷ್ಟ್ರೀಯ ಮಟ್ಟದಲ್ಲೂ ಅವರದು ಅಚ್ಚಳಿಯದ ಛಾಪು. ಅಮೆರಿಕ- ರಷ್ಯಾ ನಡುವಣ ಶೀತಲ ಯುದ್ಧಕ್ಕೆ ತೆರೆ ಎಳೆದುದರಲ್ಲಿ ಅವರದು ಪ್ರಮುಖ ಪಾತ್ರ. ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಗೆ ಬೆಂಬಲ ಕೊಟ್ಟು ಕುಖ್ಯಾತಿಯನ್ನೂ ಅಂಟಿಸಿಕೊಂಡರು.

ರಾಜಕೀಯದಲ್ಲಿ, ಏನಾದರೂ ಮಾತನಾಡುವುದಿದ್ದರೆ ಪುರುಷನನ್ನು ಕೇಳಿ; ಏನಾದರು ಕೆಲಸ ಆಗಬೇಕಿದ್ದರೆ ಮಹಿಳೆಯನ್ನು ಕೇಳಿ ಎಂಬ ಅವರ ಮಾತು ಮಹಿಳಾ ನಾಯಕತ್ವದ ಶಕ್ತಿಗೆ ಪ್ರತೀಕ. ತನ್ನ ವೈಯಕ್ತಿಕ ನಿದರ್ಶನದ ಮೂಲಕವೇ ಆಕೆ ಮಹಿಳೆಯರಿಗೆ ಅವಕಾಶಗಳ ಸಾಧ್ಯತೆಗಳನ್ನು ವಿಸ್ತರಿಸಿದ್ದರು.

ಪ್ರಧಾನಿ ಹುದ್ದೆಗೆ ಒಬ್ಬ ಮಹಿಳೆ ಏರುವುದು ಬ್ರಿಟನ್ನಿನಲ್ಲಿಯೂ ಆಗ ಸುಲಭವಾಗಿರಲಿಲ್ಲ. ಮತ ಚಲಾಯಿಸುವ ಹಕ್ಕನ್ನು ಮಹಿಳೆಯರು ಅಲ್ಲಿ ಪಡೆದುಕೊಂಡದ್ದೇ 1928ರಲ್ಲಿ. ಬಹುತೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದ್ದೇ ಮೊದಲ ಮಹಾಯುದ್ಧದ ಬಳಿಕ. ಇನ್ನು ಚುನಾವಣೆಗೆ ಸ್ಪರ್ಧಿಸುವ ಪರಿಸ್ಥಿತಿ ದೂರವೇ ಇತ್ತು. ಜೊತೆಗೆ ಮಾರ್ಗರೆಟ್ ಯಾವುದೇ ಪ್ರಬಲ ರಾಜಕೀಯ ಹಾಗೂ ಆರ್ಥಿಕ ಹಿನ್ನೆಲೆಯುಳ್ಳವರಲ್ಲ. ತಮ್ಮ ಹಾದಿಯನ್ನು ಅವರು ತಾವೇ ರೂಪಿಸಿಕೊಳ್ಳಬೇಕಿತ್ತು.

ರಾಜಕೀಯದಲ್ಲಿ ಬಹು ಎತ್ತರಕ್ಕೆ ಬೆಳೆದ ಮಾರ್ಗರೆಟ್ ಮೂಲತಃ ವಿಜ್ಞಾನದ ವಿದ್ಯಾರ್ಥಿ. ಹುಟ್ಟಿದ್ದು 1925ರಂದು ಲಿಂಕನ್‌ಶೈರ್‌ನ ಗ್ರಾಂಥಮ್‌ನಲ್ಲಿ. ಅಪ್ಪ ಆಲ್ಫ್ರೆಡ್ ರಾಬರ್ಟ್ಸ್, ಕಿರಾಣಿ ಅಂಗಡಿ ಮಾಲಿಕ. ಅಮ್ಮ ಬ್ಯಾಟ್ರಿಸ್ ಈಥೆಲ್. ಆಕ್ಸ್‌ಫರ್ಡ್‌ನಲ್ಲಿ ರಸಾಯನಶಾಸ್ತ್ರ ಪದವಿ ಪಡೆವ ಸಂದರ್ಭದಲ್ಲೇ ರಾಜಕೀಯದತ್ತ ಆಸಕ್ತಿ ಮೂಡಿತ್ತು.

ಹೆಸರಾಂತ ನೊಬೆಲ್ ಪ್ರಶಸ್ತಿ ವಿಜೇತೆ ಡಿರೋತಿ ಹಾರ್ಕಿನ್ ಮಾರ್ಗದರ್ಶನದಲ್ಲಿ ಎಕ್ಸ್ ರೇ ಕ್ರಿಸ್ಟಲೋಗ್ರಾಫಿಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಸ್ಥಳೀಯ ಕನ್ಸರ್ವೇಟಿವ್ ಒಕ್ಕೂಟಕ್ಕೆ ಸೇರಿಕೊಂಡು ಸಭೆಗಳಲ್ಲಿ ಭಾಗವಹಿಸುತ್ತಿದ್ದ ಮಾರ್ಗರೇಟ್ ರಾಬರ್ಟ್ಸ್, ಸಂಶೋಧನಾ ಕೆಮಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದರು.

ಏಕೈಕ ಮಹಿಳಾ ಅಭ್ಯರ್ಥಿಯಾಗಿ 26ನೇ ವಯಸ್ಸಿಗೆ ರಾಜಕೀಯ ಪ್ರವೇಶಿಸಿದ್ದರು ಮಾರ್ಗರೆಟ್. ಚುನಾವಣೆಯಲ್ಲಿ ಸೋತರೂ ಮಾಧ್ಯಮದ ಹಾಗೂ ಅನೇಕ ರಾಜಕೀಯ ದಿಗ್ಗಜರಿಂದ ಮೆಚ್ಚುಗೆ. ಆಗ ಪರಿಚಯವಾದವರು ಶ್ರಿಮಂತ ಉದ್ಯಮಿ ಡೆನಿಸ್ ಥ್ಯಾಚರ್. ಅವರೊಂದಿಗೆ ಅದೇ ವರ್ಷ ಮದುವೆ. ಪತಿಯ ಸಹಕಾರದಿಂದ ಕಾನೂನು ಅಧ್ಯಯನ ಮುಗಿಸಿ ಬ್ಯಾರಿಸ್ಟರ್ ಆದರು.
ಮಾರ್ಗರೆಟ್ ಬ್ರಿಟನ್ನಿನ ಸಂಸತ್ತನ್ನು ಪ್ರವೇಶಿಸಿದ್ದು 1959ರ ಚುನಾವಣೆಯ ಗೆಲುವಿನ ಬಳಿಕ. ಆಗ ಆಕೆ ಎರಡು ಮಕ್ಕಳ ತಾಯಿ.

ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಮುಂದೆ 1970ರ ಸಾರ್ವತ್ರಿಕ ಚುನಾವಣೆಯಲ್ಲಿ ಎಡ್ವರ್ಡ್ ಹೀತ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಅಧಿಕಾರಕ್ಕೆ ಬಂದಾಗ ಕ್ಯಾಬಿನೆಟ್ ಪ್ರವೇಶಿಸಿದರು. ಶಿಕ್ಷಣ ಹಾಗೂ ವಿಜ್ಞಾನ ಇಲಾಖೆಯ ಸಚಿವರಾದರು (ಸೆಕ್ರೆಟರಿ ಫಾರ್ ಎಜುಕೇಶನ್ ಆಂಡ್ ಸೈನ್ಸ್). ಅಧಿಕಾರ ಸಿಕ್ಕ ಕೂಡಲೇ ಅವರು ಕೈಗೊಂಡ ಮೊದಲ ಕೆಲಸವೆಂದರೆ ಆಡಳಿತಾತ್ಮಕ ವೆಚ್ಚವನ್ನು ಕಡಿಮೆ ಮಾಡುವ ಎಲ್ಲಾ ಕಟ್ಟುನಿಟ್ಟಿನ ತೀರ್ಮಾನಗಳನ್ನು ತೆಗೆದುಕೊಂಡದ್ದು.

ಏಳರಿಂದ ಹತ್ತನೆಯ ತರಗತಿ ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದ ಹಾಲಿನ ಕಾರ್ಯಕ್ರಮವನ್ನು ರದ್ದುಗೊಳಿಸಿದರು. ಪರಿಣಾಮ `ಮಾರ್ಗರೇಟ್ ಥ್ಯಾಚರ್ ಮಿಲ್ಕ್ ಸ್ನ್ಯಾಚರ್' ಎಂದು ಸಾರ್ವಜನಿಕರು ಹಾಗೂ ಮಾಧ್ಯಮಗಳಿಂದ ತೀವ್ರ ಕಟುಟೀಕೆ. ನೊಂದ ಥ್ಯಾಚರ್ ರಾಜಕೀಯದಿಂದ ದೂರ ಸರಿಯಲು ಯೋಚಿಸಿದ್ದುಂಟು. ಇದರಿಂದ ಸಾವರಿಸಿಕೊಂಡು ದಿಢೀರ್ ಬದಲಾವಣೆ ತಂದೊಡ್ಡಿದ ಸಂಕಷ್ಟಗಳಿಂದ ರಾಜಕೀಯದ ಪಟ್ಟುಗಳನ್ನು ಅರಿತುಕೊಂಡರು.

ಈ ಘಟನೆಯ ತರುವಾಯ ರಾಜಕೀಯ ಜೀವನದಲ್ಲಿ ಮಾರ್ಗರೆಟ್ ಸ್ಪಷ್ಟತೆ, ದಿಟ್ಟತನ ತೋರತೊಡಗಿದರು. ತಮ್ಮ ಆಲೋಚನೆಗಳನ್ನು ಸಂಪ್ರದಾಯದ ಚೌಕಟ್ಟಿಗೆ ಸೀಮಿತಗೊಳಿಸಲಿಲ್ಲ. ಒಬ್ಬ ಸ್ವತಂತ್ರ ಮಹಿಳೆಯಾಗಿ ತನ್ನ ರಾಷ್ಟ್ರದ ಪ್ರಗತಿಯ ಬಗ್ಗೆ ಯೋಚಿಸುತ್ತಿದ್ದರು. ಅಧಿಕಾರ, ಅಂತಸ್ತಿಗಾಗಿ ಅವರಿಗೆ ರಾಜಕೀಯ ಬೇಕಿರಲಿಲ್ಲ. ದೇಶವನ್ನು ಮುನ್ನಡೆಸಲು ಸರ್ಕಾರದ ಪಾತ್ರ ಹೇಗಿರಬೇಕೆಂಬುದನ್ನು ಚಿಂತಿಸುತ್ತಿದ್ದರು.

ಸೋವಿಯತ್ ನಿಲುವನ್ನು ಖಂಡಿಸುವ ಅವರ ಭಾಷಣ ಬ್ರಿಟನ್ ಇತಿಹಾಸದಲ್ಲೇ ಖ್ಯಾತಿ ಪಡೆದಂತಹುದು. ಇಡೀ ಜಗತ್ತಿನಲ್ಲಿ ತನ್ನದೇ ಪಾರಮ್ಯವೆಂದು ಮುನ್ನುಗ್ಗುತ್ತಿದ್ದ ಸೋವಿಯತ್ ನಿಲುವುಗಳನ್ನು ಖಂಡತುಂಡವಾಗಿ ಟೀಕಿಸಿದ್ದ ಮಾರ್ಗರೆಟ್ ಅವರನ್ನು ಸೋವಿಯತ್ ಒಕ್ಕೂಟದ ರಕ್ಷಣಾ ಸಚಿವಾಲಯದ ನಿಯತಕಾಲಿಕ ಕ್ರಸ್ನಾಯ್ ಜೈಜಡಾ (ರೆಡ್ ಕ್ರಾಸ್) ಐರನ್ ಲೇಡಿ ಎಂದು ಕಟುವಾಗಿ ಕರೆದಿತ್ತು. ಅದನ್ನು ಮಾರ್ಗರೆಟ್ ಸಕಾರಾತ್ಮಕವಾಗಿ ಸ್ವೀಕರಿಸಿದ್ದರು. ಆ ಅನ್ವರ್ಥನಾಮ ಅಕ್ಷರಶಃ ಅವರೊಂದಿಗೆ ಸೇರಿಬಿಟ್ಟಿತು!

1978ರ ಸಮಯ. ದೇಶದಲ್ಲಿ ಮುಂದುವರೆದ ಆರ್ಥಿಕ ದುಸ್ಥಿತಿ. ಲೇಬರ್ ಪಕ್ಷದ ವೈಫಲ್ಯಗಳು ಮಾರ್ಗರೆಟ್ ಬಾಯಿಗೆ ತುತ್ತಾಗುತ್ತಿದ್ದವು. ಚುನಾವಣೆ ಎದುರಿಸಲು ಹಿಂಜರಿಯುತ್ತಿದ್ದ ಲೇಬರ್ ಪಕ್ಷವನ್ನು ಚಿಕನ್ಸ್ ಎಂದು ಗೇಲಿ ಮಾಡಿದರು. 1977ರಿಂದ 1979ರವರೆಗೆ ನಡೆದ ವಿದ್ಯಮಾನಗಳು ಮಾರ್ಗರೆಟ್ ರಾಜಕೀಯದ ಹೊಸ ಆಯಾಮವನ್ನು ನಿರ್ಧರಿಸಿಬಿಟ್ಟವು. 1979ರಲ್ಲಿ ಸಾರ್ವತ್ರಿಕ ಚುನಾವಣೆ. ಕನ್ಸರ‌್ವೇಟಿವ್ ಪಕ್ಷಕ್ಕೆ ವಿಜಯ ಸಿಕ್ಕು ಮಾರ್ಗರೆಟ್ ಥ್ಯಾಚರ್ ಬ್ರಿಟನ್ನಿನ ಮೊತ್ತ ಮೊದಲ ಮಹಿಳಾ ಪ್ರಧಾನಿಯಾದರು. ಬ್ರಿಟನ್ ಹೊಸ ದಿಕ್ಕಿಗೆ ಹೊರಳಲು ಕಾಲಕೂಡಿಬಂದಿತ್ತು.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಏದುಸಿರು ಬಿಡುತ್ತಿದ್ದ ದೇಶ ಅವರ ಮುಂದೆ ದೊಡ್ಡ ಸವಾಲಿನಂತೆ ನಿಂತಿತ್ತು. ನಿರುದ್ಯೋಗ ಸಮಸ್ಯೆ, ಹಣದುಬ್ಬರ ರಾಷ್ಟ್ರವನ್ನು ಒಂದೇ ಸಮನೆ ಕಾಡುತ್ತಿದ್ದವು. ಪ್ರಧಾನಿ ಗದ್ದೆಗೇರಿದ ಮಾರ್ಗರೆಟ್ ಕೂಡಲೇ ಕಾರ‌್ಯತತ್ಪರರಾದರು. ಅವರು ಪ್ರತಿಪಾದಿಸುತ್ತಾ ಬಂದದ್ದು ಕನಿಷ್ಠ ಸರ್ಕಾರ, ಕನಿಷ್ಠ ತೆರಿಗೆ, ಉದ್ಯಮಿಗಳಿಗೆ ಗರಿಷ್ಠ ಸ್ವಾತಂತ್ರ್ಯ. ಇದನ್ನು ಜಾರಿಗೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ಇಬ್ಬಂದಿತನಕ್ಕೆ ಅವರಲ್ಲಿ ಜಾಗವೇ ಇರಲಿಲ್ಲ. ತೆರಿಗೆಯನ್ನು ಇಳಿಸಲಾಯಿತು. ಬಡ್ಡಿದರ ಏರಿಸಲಾಯಿತು. ಆದರೆ ಮಾರ್ಗರೆಟ್ ನಿರ್ಧಾರಗಳು ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸಿದವು.
ಜನ ಕಂಗಾಲಾದರು.

ಟೀಕಾ ಪ್ರಹಾರದಿಂದ ಮಾರ್ಗರೆಟ್ ಧೃತಿಗೆಡಲಿಲ್ಲ. ಅವರ ನಿರ್ಧಾರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಾಧ್ಯಮಗಳು ಮತ್ತು ರಾಜಕೀಯ ಮುಖಂಡರು ಯೂ ಟರ್ನ್ ಮಾಡಿ ಎಂದು ಸಲಹೆ ನೀಡಿದರು. ಇದಕ್ಕೆ ಥ್ಯಾಚರ್ ಕೊಟ್ಟ ಪ್ರತಿಕಿಯೆ- ಯೂ ಟರ್ನ್ ಇಫ್ ಯೂ ವಾಂಟ್ ಟು, ದಿ ಲೇಡಿ ಈಸ್ ನಾಟ್ ಟರ್ನಿಂಗ್. ಇದು ಅತ್ಯಂತ ಸುದ್ದಿ ಮಾಡಿದ ಹೇಳಿಕೆ. ಅವರ ಬದ್ಧತೆ ಅಂಥದು. ಮುಂದಿನ ಮೂರು ವರ್ಷಗಳಲ್ಲಿ ದೇಶದ ಆರ್ಥಿಕ ಸ್ಥಿತಿ ಒಂದು ಹದಕ್ಕೆ ಬಂದಿತು. 1985ರ ವೇಳೆಗೆ ಬ್ರಿಟನ್ ಆರ್ಥಿಕವಾಗಿ ಮುನ್ನಡೆಯಿತು. ಇದು ಮಾರ್ಗರೆಟ್ ಸಾಧನೆ.

ಥ್ಯಾಚರಿಸ್ಟ್ (ಅಂದರೆ ಥ್ಯಾಚರ್ ಕೈಗೊಂಡ ಕ್ರಮಗಳು)ನ ದಿಟ್ಟ ಹೆಜ್ಜೆಗಳಲ್ಲಿ ಬಹುಮುಖ್ಯವಾದದ್ದು ಖಾಸಗೀಕರಣ. ಸರ್ಕಾರದ ಸ್ವಾಮ್ಯದಲ್ಲಿದ್ದ ಅನೇಕ ಕೈಗಾರಿಕೆಗಳನ್ನು ಪ್ರತಿರೋಧಗಳ ನಡುವೆ ಖಾಸಗೀಕರಣ ಮಾಡಲಾಯಿತು. ಇನ್ನು ಕೈಗಾರಿಕಾ ವಲಯದಲ್ಲಿ ನಿರಂತರ ಹರತಾಳದಿಂದ ಉತ್ಪನ್ನಗಳು ಕುಂಠಿತವಾಗುತ್ತಿದ್ದುದನ್ನು ಗಮನಿಸಿದ ಥ್ಯಾಚರ್ ಕಾರ್ಮಿಕ ಸಂಘಟನೆಗಳನ್ನು ಬಗ್ಗುಬಡಿದರು.

ಶೀತಲ ಯುದ್ಧದ ಸಮಯದಲ್ಲಿ ಅಮೆರಿಕದ ಪರ ವಹಿಸಿದುದು ಥ್ಯಾಚರ್ ಕೈಗೊಂಡ ಪ್ರಮುಖ ನಿಲುವುಗಳಲ್ಲಿ ಒಂದು. ಕಮ್ಯೂನಿಸಂ ತತ್ವವನ್ನು ಅಷ್ಟಾಗಿ ಒಪ್ಪದ ಆಕೆ ಸಹಜವಾಗಿ ಅಮೆರಿಕದ ಬೆಂಬಲಕ್ಕೆ ನಿಂತರು. ಕ್ರಮೇಣ ಜಗತ್ತಿನ ಇತರೆ ಪ್ರಮುಖ ರಾಷ್ಟ್ರಗಳೊಡನೆ ಬ್ರಿಟನ್ ದೇಶವನ್ನು ಬೆಸೆದರು.

ಕಮ್ಯೂನಿಸಂ ಇಷ್ಟವಾಗದಿದ್ದರೂ ಚೀನಾಕ್ಕೆ ಭೇಟಿ ಕೊಟ್ಟು, ಚೀನಾ ನೆಲದ ಮೇಲೆ ಕಾಲಿಟ್ಟ ಮೊದಲ ಬ್ರಿಟನ್ ಪ್ರಧಾನಿ ಎನಿಸಿಕೊಂಡರು. ಬ್ರಿಟನ್- ಸೋವಿಯತ್ ಸಂಬಂಧ ಉತ್ತಮ ಪಡಿಸಲು ಸೋವಿಯತ್‌ಗೂ ಹೋದರು. ಯಾವುದೇ ಸಂಪ್ರದಾಯಕ್ಕೆ ಸೀಮಿತಗೊಳಿಸಿಕೊಳ್ಳದ ಥ್ಯಾಚರ್ ಅಂದಂದಿನ ಬೇಕು-ಬೇಡಗಳಿಗೆ ರಾಷ್ಟ್ರದ ಹಿತಾಸಕ್ತಿಯನ್ನು ಹೇಗೆ ರಕ್ಷಿಸಬೇಕು ಎಂಬುದಕ್ಕೆ ಈ ಭೇಟಿ ಸಾಕ್ಷಿಯಾಯಿತು.

ಮಾರ್ಗರೇಟ್ ನೇತೃತ್ವದಲ್ಲಿ ಕನ್ಸರ್ವೇಟಿವ್ ಪಕ್ಷ ಮೂರು ಬಾರಿ ಜಯಗಳಿಸಿತ್ತು. ಆ ದಿನಗಳಲ್ಲಿ ಸತತ ಮೂರು ಬಾರಿ ಆಕೆ ಪ್ರಧಾನಿ ಹುದ್ದೆಗೇರಿದ್ದರು. ಇವರ ಮೂರನೆಯ ಅಧಿಕಾರದ ಅವಧಿಯಲ್ಲಿ ಯೂರೋಪ್ ಒಕ್ಕೂಟ ರೂಪುಗೊಳ್ಳುತ್ತಿತ್ತು. ಆದರೆ ಆರಂಭದಿಂದಲೂ ಥ್ಯಾಚರ್‌ಗೆ ಇದರ ಬಗ್ಗೆ ಅಸಮಾಧಾನ. ಇದರಿಂದ ಬ್ರಿಟನ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂಬ ಸಂಶಯ.

ಯೂರೋಪ್ ಒಕ್ಕೂಟ ಎನ್ನುವುದು ಒಂದು ನಿಷ್ಪ್ರಯೋಜಕ ಕಾಲ್ಪನಿಕ ಯೋಜನೆ. ಬುದ್ಧಿಜೀವಿಗಳ ಅಹಮ್ಮಿನ ಸ್ಮಾರಕ. ಇದರ ಉದ್ದೇಶಗಳಿಗೆಂದೂ ಗೆಲುವು ದಕ್ಕಲಾರದು... ಎಂದು ಹೇಳುತ್ತಿದ್ದರು. ಆದ್ದರಿಂದ ಎಷ್ಟೇ ಒತ್ತಡವಿದ್ದರೂ ಯೂರೋಪಿಯನ್ ಎಕ್ಸ್‌ಚೇಂಜ್ ರೇಟ್ ಮೆಕ್ಯಾನಿಸಂ ಸೇರಲು ಒಪ್ಪಲಿಲ್ಲ. ಇದರಿಂದ ಬೇಸತ್ತ ಬ್ರಿಟನ್ನಿನ ಉಪಪ್ರಧಾನಿ ಹೇಸಲ್‌ಟೈನ್ ರಾಜೀನಾಮೆ ನೀಡಿದರು. ಅಲ್ಲಿಂದ ಮುಂದೆ ಆದದ್ದೆಲ್ಲಾ ನಾಟಕೀಯ ಬೆಳವಣಿಗೆ.

ಅವರ ಪ್ರಧಾನಿ ಹುದ್ದೆಗೆ ಕುತ್ತು ತಂದದ್ದೇ ಈ ಸಂದರ್ಭ. ಥ್ಯಾಚರ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ ಎದುರಾಗಿತ್ತು. ಕನ್ಸರ್ವೇಟಿವ್ ಪಕ್ಷವು ತನ್ನ ನಾಯಕತ್ವದ ಚುನಾವಣೆಗೆ ಮುಂದಾದಾಗ ಥ್ಯಾಚರ್ ಹೋರಾಟ ನಡೆಸಲು ತೀರ್ಮಾನಿಸಿದರು. ಆದರೆ ಪಕ್ಷದವರೇ ಸ್ಪರ್ಧೆಯಿಂದ ಹಿಂದೆ ಸರಿಯಲು ಸಂಧಾನ ನಡೆಸಿದರು. ಈ ಬೆಳವಣಿಗೆಗಳಿಂದ ನೊಂದ ಥ್ಯಾಚರ್, ಬ್ರಿಟನ್ ರಾಣಿಯನ್ನು ಭೇಟಿಯಾಗಿ, ಸಂಸತ್ತಿನ್ಲ್ಲಲಿ ಕೊನೆಯ ಭಾಷಣ ಮಾಡಿ ಕಣ್ಣೀರಿಡುತ್ತಾ ಅಧಿಕೃತ ನಿವಾಸ ಡೌನಿಂಗ್ ಸ್ಟ್ರೀಟ್‌ನಿಂದ ಹೊರನಡೆದರು. ಆಗ ಪ್ರಧಾನಿಯಾದವರು ಜಾನ್ ಮೇಜರ್.

ದೇಶದ ಹಿತದೃಷ್ಟಿಯಿಂದ ತಮಗೆ ಸರಿ ಎನಿಸಿದ್ದನ್ನು ನಿರ್ದಾಕ್ಷಿಣ್ಯವಾಗಿ ಜಾರಿಗೆ ತಂದ ಥ್ಯಾಚರ್ ಹನ್ನೊಂದೂವರೆ ವರ್ಷ ಕಾಲ ಅಕ್ಷರಶಃ ಪ್ರಧಾನಿಯಾಗಿ ಆಳ್ವಿಕೆ ನಡೆಸಿದ್ದರು. ಮಾರ್ಗರೇಟ್ ಅವರದು ಶಿಸ್ತುಬದ್ಧ ಜೀವನ ಕ್ರಮ. ಆಗರ್ಭ ಶ್ರಿಮಂತನನ್ನು ಮದುವೆಯಾಗಿದ್ದರೂ ದುಂದುವೆಚ್ಚದಿಂದ ಅವರು ಸದಾ ದೂರ. ಆಕೆ ಉತ್ತಮ ವಾಗ್ಮಿ. ಮುಂದೆ ರಾಜಕೀಯದಿಂದ ಕ್ರಮೇಣ ದೂರ ಸರಿದ ಥ್ಯಾಚರ್ ತಮ್ಮ 78ನೇ ವಯಸ್ಸಿನವರೆಗೂ ಸಾರ್ವಜನಿಕ ಭಾಷಣಗಳಲ್ಲಿ ತೊಡಗಿಸಿಕೊಂಡರು.

ಸಾರ್ವಜನಿಕ ಬದುಕಿನುದ್ದಕ್ಕೂ ಥ್ಯಾಚರ್‌ಗೆ ಬೆಂಗಾವಲಾಗಿ ನಿಂತದ್ದು ಪತಿ ಡೆನಿಸ್ ಸಹಕಾರ. 2003ರಲ್ಲಿ ಪತಿ ಮರಣ ಹೊಂದಿದಾಗ ಆಕೆ ಕುಸಿದು ಹೋಗಿದ್ದರು. ಥ್ಯಾಚರ್ ಬರೆದ ಆತ್ಮಕಥನಗಳು ದಿ ಡೌನಿಂಗ್ ಸ್ಟ್ರೀಟ್ ಇಯರ್ (1993) ದಿ ಪಾತ್ ಟು ಪವರ್ (1995). ಅವರ ಮತ್ತೊಂದು ಮಹತ್ವದ ಪುಸ್ತಕ ಸ್ಟೇಟ್ ಕ್ರಾಫ್ಟ್: ಸಟ್ಯೆಾಟಜೀಸ್ ಫಾರ್ ಎ ಚೇಂಜಿಂಗ್ ವರ್ಲ್ಡ್.
ಆರೋಗ್ಯಕಾರಣದಿಂದ ಸಾರ್ವಜನಿಕ ಬದುಕಿನಿಂದ ದೂರವುಳಿದರು ಥ್ಯಾಚರ್. ಹಲವು ವರ್ಷಗಳ ಅನಾರೋಗ್ಯ ಹಾಗೂ ಮಾನಸಿಕ ವಿಕಲ್ಪದಿಂದ ಬಳಲುತ್ತಿದ್ದ ಅವರು ಕಳೆದ ಎಂಟರಂದು ನಿಧನ ಹೊಂದಿದರು.

ತಮ್ಮ ಅಂತ್ಯಸಂಸ್ಕಾರಕ್ಕೆ ಸರ್ಕಾರಿ ಮರ್ಯಾದೆಗಳು ಬೇಡ ಎಂದು ಉಯಿಲಿನಲ್ಲಿ ದಾಖಲಿಸಿದಂತೆ ಏ.17ರಂದು ಸರಳ ಕೌಟುಂಬಿಕ ಕ್ರಿಯೆಯಾಗಿ ಅವರ ಅಂತ್ಯಕ್ರಿಯೆ ಜರುಗಲಿದೆ. ರಾಜಕೀಯದ ಹವಾಮಾನವನ್ನೇ ಬದಲಿಸಿದ ಪ್ರಭಾವೀ ನಾಯಕಿ ಥ್ಯಾಚರ್ ಬದುಕಿನ ಹೆಜ್ಜೆಗಳು ಇತಿಹಾಸದ ಮೈಲುಗಲ್ಲುಗಳಾದದ್ದು ಒಂದು ರೋಚಕ ಸಾಹಸಗಾಥೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.