ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನ್ ಆಸ್ಟಿನ್; ಆಡುಮಾತಿನ ರಾಣಿ

Last Updated 8 ಜೂನ್ 2013, 19:59 IST
ಅಕ್ಷರ ಗಾತ್ರ

`ಇಫ್ ಐ ಹ್ಯಾವ್ ಟೋಲ್ಡ್ ಯೂ ಒನ್ಸ್, ಐ ಹ್ಯಾವ್ ಟೋಲ್ಡ್ ಯೂ ಹಂಡ್ರೆಡ್ ಟೈಮ್ಸ'- ಇಂಗ್ಲಿಷ್ ರೊಮ್ಯೋಂಟಿಕ್ ಕಾದಂಬರಿ `ಎಮ್ಮೋ' ದಲ್ಲಿ ಬರುವ ಮಾತು. ಇದನ್ನು ಎಲ್ಲೋ ಕೇಳಿದಂತಿದೆ ಎನ್ನುವಿರಾ? ರಜನೀಕಾಂತ್ ಅಭಿನಯದ `ಭಾಷಾ' ಚಿತ್ರದಲ್ಲಿ `ನಾನ್ ಒರುದರಂ ಸೊನ್ನಾಲ್ ನೂರು ದರಂ ಸೊನ್ನಬ್ಬಡಿ' (ನಾನು ಒಂದು ಸಲ ಹೇಳಿದರೆ ನೂರು ಸಲ ಹೇಳಿದಂತೆ) ಎನ್ನುವ ಡೈಲಾಗ್ ನಿಮಗೀಗ ನೆನಪಾಗಿರಬಹುದು.

ಅದೊಂದು ಪ್ರಸಿದ್ಧ ಡೈಲಾಗ್. ಬಾಯಿಂದ ಬಾಯಿಗೆ ನೂರಾರು ಬಾರಿ ಹರಿದು ಜನ ಸಡಗರಿಸಿದ ಸಂಭಾಷಣೆ. ಈ ಡೈಲಾಗ್ ಹುಟ್ಟಿದ್ದು ಎರಡು ಶತಮಾನಗಳ ಹಿಂದೆ ಎಂದರೆ ನಂಬುವಿರಾ? ಬ್ರಿಟನ್ನಿನ ಖ್ಯಾತ ಲೇಖಕಿ ಜೇನ್ ಆಸ್ಟಿನ್ ಹೊಸೆದ ವಾಕ್ಯವಿದು. ಇಂಗ್ಲಿಷ್ ಸಾಹಿತ್ಯದಲ್ಲಿ ಅತಿ ದೊಡ್ಡ ಓದುಗರ ಬಳಗ ಪಡೆದ ಪ್ರಮುಖ ಐವರು ಬರಹಗಾರರಲ್ಲಿ 19ನೇ ಶತಮಾನದ ಜೇನ್ ಆಸ್ಟಿನ್ ಒಬ್ಬರು. ಆಕೆಯ ಕೃತಿಗಳು ತೆಳು ಹಾಸ್ಯ, ಪ್ರೇಮ, ವ್ಯಂಗ್ಯ ಹಾಗೂ ನಾಟಕೀಯ ಗುಣಗಳಿಂದ ಕಾಲ, ದೇಶಗಳ ಎಲ್ಲೆ ಮೀರಿ ಓದುಗರ ಮನ ಸೂರೆಗೊಂಡಿವೆ.

ಕಳೆದ ವಾರ ವೇಲ್ಸ್‌ನ ಹೇ-ಆನ್‌ವೇನಲ್ಲಿ ನಡೆದ ವಾರ್ಷಿಕ ಸಾಹಿತ್ಯೋತ್ಸವದಲ್ಲಿ ಜೇನ್ ಆಸ್ಟಿನ್ ಕುರಿತಂತೆ ಹೊಸ ವಿಚಾರಗಳು ಹೊರಬಿದ್ದಿವೆ. ಆಧುನಿಕ ಭಾಷೆಯ ಮೇಲೆ ಜೇನ್‌ಳ ಪ್ರಭಾವ ಹೇರಳವಾದುದೆಂಬ ಸತ್ಯವನ್ನು ಆಕ್ಸ್‌ಫರ್ಡ್ ವಿದ್ವಾಂಸೆ ಷಾರ್ಲೆಟ್ ಬೂಯರ್ ಬಹಿರಂಗಗೊಳಿಸಿದ್ದಾರೆ. ವೇಲ್ಸ್‌ನಲ್ಲಿರುವ ಹೇ-ಆನ್‌ವೇ ಒಂದು ಪುಟ್ಟ ಮಾರುಕಟ್ಟೆ ಪಟ್ಟಣ. ವೈ ನದಿಯ ಪೂರ್ವ ದಡದಲ್ಲಿರುವ ಇದು ಪುಸ್ತಕಗಳ ಪಟ್ಟಣವೆಂದೇ ಹೆಸರುವಾಸಿ. ಪ್ರತಿವರ್ಷ ಇಲ್ಲಿ ವಾರ್ಷಿಕ ಸಾಹಿತ್ಯೋತ್ಸವ ನಡೆಯುತ್ತದೆ. ಹತ್ತು ದಿನಗಳ ಇಲ್ಲಿನ ಸಾಹಿತ್ಯ ಕಲಾಪಗಳಲ್ಲಿ ಎಲ್ಲರ ಗಮನ ಸೆಳೆದದ್ದು ಜೇನ್ ಆಸ್ಟಿನ್‌ಳ ಕುರಿತಾದ ಕೆಲವು ಗಮನಾರ್ಹ ಸಂಗತಿಗಳು.

ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟುವಿನ ಮೊದಲ ಆವೃತ್ತಿ (1928)ಯಲ್ಲಿ ಜೇನ್ ಆಸ್ಟಿನ್ ಪ್ರಭಾವ ದಟ್ಟವಾಗಿದೆ. ಫ್ಯಾಮಿಲಿ ಪೋಟ್ರೇಟ್, ಡೋರ್ ಬೆಲ್, ಬ್ರೇಸ್ ಯುವರ್‌ಸೆಲ್ಫ್, ಫ್ಲವರ್ ಸೀಡ್, ನೈಸ್ ಲುಕಿಂಗ್, ಆಫ್ ದಿ ಮೊಮೆಂಟ್, ಟು ಡ್ರೆಸ್ ಎ ಸಲಾಡ್... ನಂತಹ 320ಕ್ಕೂ ಹೆಚ್ಚು ನುಡಿಗಟ್ಟುಗಳನ್ನು ಆಕೆಯ ಕೃತಿಗಳಿಂದ ಆಯ್ದುಕೊಂಡಿದ್ದು, ಈ ನಿಘಂಟುವಿನ ಹೊಸ ಆವೃತ್ತಿಯಲ್ಲಿ 1640 ಬಾರಿ ಜೇನ್‌ಳ ಹೆಸರನ್ನು ಬಳಸಲಾಗಿದೆ.

ಇನ್ನು ಜೇನ್ ಆಸ್ಟಿನ್ ತನ್ನ ಕೃತಿಗಳಲ್ಲಿ ಹೆಚ್ಚು ಬಳಸಿದ್ದು- ಶಟಪ್, ಡರ್ಟ್ ಚೀಪ್, ಡಾಗ್ ಟಯರ್ಡ್‌... ನಂತಹ ನಿತ್ಯ ಬಳಕೆಯ ಮಾತುಗಳನ್ನು. ತನ್ನ ಸಮಕಾಲೀನ ಲೇಖಕರು ಯಾವ ಪದಗಳನ್ನು ಬರವಣಿಗೆಯಲ್ಲಿ ಅಸಭ್ಯವೆಂದು ಭಾವಿಸಿದ್ದರೋ ಅವನ್ನು ಜೇನ್ ಯಾವ ಮುಜುಗರವಿಲ್ಲದೇ ಶಿಷ್ಟ ಭಾಷೆಗೆ ಸೆಡ್ಡು ಹೊಡೆದಂತೆ ಪ್ರಯೋಗಿಸಿದ್ದಾಳೆ. ಈ ಎಲ್ಲ ಕಾರಣಕ್ಕೆ ಆಕೆಯನ್ನು ಆಧುನಿಕ ಆಡುಮಾತಿನ ರಾಣಿ ಎಂದು ಹೆಮ್ಮೆಯಿಂದ ಕರೆಯಲಾಗುತ್ತಿದೆ.

ಇಂದು ವಿದ್ವಾಂಸರ, ಓದುಗರ ಮನ್ನಣೆಗೆ ಪಾತ್ರಳಾದ ಜೇನ್ ಆಸ್ಟಿನ್, ತನ್ನ ಜೀವಿತಕಾಲದಲ್ಲಿ ಹೆಚ್ಚುಕಮ್ಮಿ ಅನಾಮಧೇಯಳಾಗಿಯೇ ಸರಿದು ಹೋದವಳು. ಬರವಣಿಗೆ, ವಿಚಾರಗಳೆಲ್ಲ ಪುರುಷರ ಸೊತ್ತು, ಗೃಹಕೃತ್ಯಗಳಿಗೆ ಸೀಮಿತವಾದ ಹೆಣ್ಣು ಪುರುಷರಂತೆ ಗಂಭೀರವಾಗಿ ಬರೆಯಲು ಸಾಧ್ಯವಿಲ್ಲ ಎಂಬ ಧೋರಣೆಯಿದ್ದ ಕಾಲದಲ್ಲಿ ಜೇನ್ ಕಾದಂಬರಿಗಳನ್ನು ಬರೆದದ್ದು. ಹೀಗಾಗಿ ಕೆಲವು ಉತ್ತಮ ವಿಮರ್ಶೆಯ ಮಾತು ಬಿಟ್ಟರೆ ಅಂದು ಜೇನ್ ಯಾವ ಕೀರ್ತಿಯನ್ನೂ ಕಾಣಲಿಲ್ಲ. ಮುಂದೆ 1869ರಲ್ಲಿ ಆಕೆಯ ಸೋದರಳಿಯ ಹೊರತಂದ `ಎ ಮೆಮಾಯಿರ್ ಆಫ್ ಜೇನ್ ಆಸ್ಟಿನ್' ಪುಸ್ತಕ ಸಾರ್ವಜನಿಕರು ಜೇನ್‌ಳನ್ನು ಅರ್ಥಮಾಡಿಕೊಳ್ಳಲು ಕೊಂಚಮಟ್ಟಿಗೆ ನೆರವಾಯಿತು. ಹೆಚ್ಚಿನ ಜನರಿಗೆ ಜೇನ್ ತಲುಪಿದ್ದು 20ನೇ ಶತಮಾನದಲ್ಲಿ. ಶೈಕ್ಷಣಿಕ ಲೋಕ ಜೇನ್ ಆಸ್ಟಿನ್‌ಳನ್ನು ಉತ್ತಮ ಆಂಗ್ಲ ಬರಹಗಾರ್ತಿ ಎಂದು ಒಪ್ಪಿಕೊಂಡಿದ್ದು 1940ರಲ್ಲಿ.

  ಜೇನ್ ತನ್ನ ಇಡೀ ಜೀವನ ಕಳೆದದ್ದು ಕುಟುಂಬದ ಚೌಕಟ್ಟಿನಲ್ಲಿ. ಆಕೆಗೆ ಆರು ಸೋದರರು ಹಾಗೂ ಒಬ್ಬ ಅಕ್ಕ. ಜೇನ್ ಹೆಚ್ಚು ಹಚ್ಚಿಕೊಂಡಿದ್ದು ಅಕ್ಕ ಕಸಾಂಡ್ರಾ ಎಲಿಜಬೆತ್‌ಳನ್ನು. ಆಕೆಯ ಪ್ರತಿ ಕೃತಿಯಲ್ಲೂ ಅಕ್ಕನ ದಟ್ಟ ಪ್ರಭಾವವಿದೆ. ಬಾಲ್ಯದಲ್ಲಿ ಅಪ್ಪ, ನಂತರ ಅಣ್ಣಂದಿರಿಂದ ಓದು- ಬರಹ ಕಲಿತ ಜೇನ್, ಸ್ವಂತ ಓದಿನಿಂದ ಜ್ಞಾನ ಹಿಗ್ಗಿಸಿಕೊಂಡವಳು. ಚಿಕ್ಕ ವಯಸ್ಸಿನಲ್ಲಿಯೇ ಬರೆಯುವ ಹುಚ್ಚು ಹಿಡಿದರೂ ಅದು ಕುಟುಂಬದ ಮನರಂಜನೆಗೆ ಮಾತ್ರ ಮೀಸಲಾಗಿತ್ತು. ವೃತ್ತಿಪರ ಬರಹಗಾರ್ತಿಯಾಗಲು ಅವಕಾಶವಿರಲಿಲ್ಲ. ಆದರೂ ಜೇನ್ ಸುಮ್ಮನಿರಲಿಲ್ಲ.

35 ವರ್ಷಗಳವರೆಗೂ ಬೇರೆ ಬೇರೆ ಬರವಣಿಗೆಯ ಪ್ರಯೋಗಗಳಲ್ಲಿ ತೊಡಗಿಕೊಂಡಳು. ತನ್ನ ಕೊನೆಯ ಆರು ವರ್ಷಗಳಲ್ಲಿ ಆಕೆ ರಚಿಸಿದ್ದು ನಾಲ್ಕು ಮಹತ್ವಪೂರ್ಣ ಕಾದಂಬರಿಗಳನ್ನು- ಸೆನ್ಸ್ ಆಂಡ್ ಸೆನ್ಸಿಬಿಲಿಟಿ; ಪ್ರೈಡ್ ಆಂಡ್  ಪ್ರಿಜುಡೀಸ್; ಮ್ಯೋನ್ಸ್‌ಫೀಲ್ಡ್ ಪಾರ್ಕ್ ಮತ್ತು ಎಮ್ಮೋ. ಆಕೆಯ ಮರಣೋತ್ತರದಲ್ಲಿ ಪ್ರಕಟವಾದ ಕೃತಿಗಳು- ನಾರ್ಥಾಂಗರ್ ಅಬ್ಬೇ ಮತ್ತು ಪರ್ಸುಯೇಷನ್. ಸ್ಯಾಂಡೀಷನ್ ಎಂಬ ಕಾದಂಬರಿ ಪೂರ್ಣಗೊಳ್ಳುವ ಮುನ್ನ 42ನೇ ವಯಸ್ಸಿನಲ್ಲಿ ಜೇನ್ ಕಾಯಿಲೆಯಿಂದ ಮರಣ ಹೊಂದಿದಳು.

ಜೇನ್ ಬದುಕೊಂದು ಮೌನ ಹೋರಾಟ. ಹೆಣ್ಣಿನ ಬಾಳಿಗೆ ಮದುವೆಯೇ ಆತ್ಯಂತಿಕ ಗುರಿ ಎಂಬ ಆ ಕಾಲದ ಗ್ರಹಿಕೆಯೇ ಜೇನ್ ಕಾದಂಬರಿಗಳ ಪ್ರಮುಖ ವಿಷಯ. `ಹೃದಯದ ಸ್ನಿಗ್ಧತೆಗಿಂತ ಆಕರ್ಷಕವಾದದ್ದು ಮತ್ತೊಂದಿಲ್ಲ'- ಎನ್ನುವ ಜೇನ್ ಪ್ರೀತಿ, ನಿಷ್ಠೆ ಹಾಗೂ ಸಂಬಂಧಗಳಿಗೆ ತನ್ನ ಕೃತಿಗಳಲ್ಲಿ ಹೊಸ ವ್ಯಾಖ್ಯೆ ಬರೆದಳು. ಆಕೆಯ ಕೃತಿಗಳಲ್ಲಿ ಹನಿಯುವ ಪ್ರೀತಿ ಅಮೂರ್ತ ಭಾವನೆಗಳ ಸೆಲೆ. ಆದರೆ ಜೇನ್ ಹಾಗೂ ಆಕೆಯ ಅಕ್ಕ ಇಬ್ಬರೂ ಮದುವೆಯಾಗಲಿಲ್ಲ. ಜೇನ್ ಹೇಳುತ್ತಾಳೆ: `ಜಗತ್ತನ್ನು ನಾನು ಹೆಚ್ಚು ಹೆಚ್ಚು ಅರ್ಥಮಾಡಿಕೊಂಡಷ್ಟು ನಿಜಕ್ಕೂ ನಾನು ಪ್ರೀತಿಸಬಲ್ಲ ವ್ಯಕ್ತಿ ಸಿಗುವುದಿಲ್ಲವೆಂಬುದು ನನಗೆ ಮನದಟ್ಟಾಗುತ್ತಿದೆ.' ಪ್ರೀತಿಯ ಬಗ್ಗೆ ಉತ್ಕಟವಾಗಿ ಬರೆದವಳ ಬಾಳಿನಲ್ಲಿ ಪ್ರೀತಿ ಫಲಿಸಲೇ ಇಲ್ಲ.

ಅದು ಹಲವಾರು ಸಾಮಾಜಿಕ ನಿರ್ಬಂಧಗಳಲ್ಲಿ ಮಹಿಳೆ ಮುದುರಿಕೊಂಡಿದ್ದ ಕಾಲಘಟ್ಟ. ವೃತ್ತಿಗಳು, ರಾಜಕೀಯ, ಯೂನಿವರ್ಸಿಟಿ ಯಾವೊಂದೂ ಹೆಣ್ಣಿಗೆ ತೆರೆದಿರಲಿಲ್ಲ. ಮಧ್ಯಮ ವರ್ಗದ ಮಹಿಳೆಯರು ಗವರ್ನೆಸ್ ಅಥವಾ ಸಹಾಯಕಿ ಆಗಿ ಮಾತ್ರ ಕೆಲಸ ಮಾಡಬಹುದಿತ್ತು. ಆದರೆ ಅದಕ್ಕೆ ಅಂಥ ಗೌರವವೇನೂ ಇರಲಿಲ್ಲ. ಮೇಲ್ವರ್ಗದ ಮಹಿಳೆಯರು ಚಿತ್ರಕಲೆ, ಸಂಗೀತ, ಇಟಲಿ/ ಫ್ರೆಂಚ್ ಕಲಿಕೆಗಳಲ್ಲಿ ತೊಡಗಿದ್ದರೂ ಅದೆಲ್ಲಾ ಮದುವೆಗಾಗಿ ಮಾತ್ರ. ಹೀಗಾಗಿ ಸಾಮಾಜಿಕ ರಕ್ಷಣೆ ಹಾಗೂ ಆರ್ಥಿಕ ಭದ್ರತೆಗಾಗಿ ಮಹಿಳೆಗೆ ಮದುವೆ ಅನಿವಾರ್ಯವಾಗಿತ್ತು.

ಅವಿವಾಹಿತಳಾಗಿ ಉಳಿಯುವ ಹೆಣ್ಣು ಬಡತನಕ್ಕೆ ಗುರಿಯಾಗಬೇಕಿತ್ತು. ತಂದೆ ಅಥವಾ ಸೋದರರ ನೆರಳಲ್ಲಿ ಜೀವನ ಕಳೆಯಬೇಕಿತ್ತು. ಇಂಥ ಪರಾವಲಂಬಿ ವ್ಯವಸ್ಥೆಯಲ್ಲಿಯೇ ಮದುವೆಯಾಗದ ಜೇನ್ ಹಾಗೂ ಆಕೆಯ ಅಕ್ಕ ಬದುಕು ಸಾಗಿಸಿದ್ದರು. ಸದಾ ವಿನೀತಳಾಗಿ, ಸಂಕೋಚ ಹಾಗೂ ನಾಚಿಕೆಗಳಲ್ಲಿ ವ್ಯಕ್ತಿತ್ವವನ್ನು ಹಿಡಿಯಾಗಿಸಿಕೊಂಡಿದ್ದ ಮಹಿಳೆಯನ್ನು ಬರಹಗಾರ್ತಿಯಾಗಿ ನೋಡಲು ಇಷ್ಟಪಡದ ವಾತಾವರಣದಲ್ಲಿ ಜೇನ್ ಪೆನ್ನು ಹಿಡಿದು ನಿಂತಿದ್ದಳು. 

ಯೂರೋಪಿನಲ್ಲಿ 18ನೇ ಶತಮಾನಕ್ಕೆ ಜ್ಞಾನೋದಯದ ಯುಗವೆಂದೇ ಹೆಸರು. ವೊಲ್ಟೇರ್, ಡೇವಿಡ್ ಹ್ಯೂಮ್, ಆಡಮ್ ಸ್ಮಿತ್‌ರಂತಹ ಖ್ಯಾತ ಲೇಖಕರ ವಿಚಾರಗಳು ಎಲ್ಲೆಡೆ ಸಂಚಲನ ಹುಟ್ಟಿಸಿದ್ದವು. ಮಾನವನ ಹಕ್ಕುಗಳನ್ನು, ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಇವರ ಆಲೋಚನೆಗಳಿಗೆ ತೀವ್ರ ಸ್ಪಂದನ ಕಂಡುಬಂದಿತ್ತು. ಜೊತೆಗೆ ನಿರಂಕುಶ ರಾಜಪ್ರಭುತ್ವವನ್ನೇ ಬುಡಮೇಲು ಮಾಡಿದ ಫ್ರೆಂಚ್ ಕ್ರಾಂತಿಯ ಅಲೆಗಳು ದಟ್ಟವಾಗಿದ್ದ ದಿನಗಳವು. ಇಡೀ ರಾಷ್ಟ್ರವನ್ನು ವ್ಯಾಪಿಸುತ್ತಿದ್ದ ಹೊಸ ಬಗೆಯ ಆಲೋಚನೆಗಳಿಗೆ ಯೂರೋಪ್ ತೆರೆದುಕೊಳ್ಳುತ್ತಿತ್ತು...

ತನ್ನ ಸುತ್ತ ಆಗುತ್ತಿದ್ದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದ ಜೇನ್ ಬುದ್ಧಿವಂತೆ, ವಿಚಾರವಂತೆ. ನಾಲ್ಕು ಗೋಡೆಯ ನಡುವೆ ಕರಗಿ ಹೋಗುತ್ತಿದ್ದ ಮಹಿಳೆಗೆ ಆರ್ಥಿಕ ಸ್ವಾತಂತ್ರ್ಯವೇ ಇಲ್ಲವೇ? ಬಡತನದಿಂದ ಕುಟುಂಬ ಬೇಯುತ್ತಿರುವಾಗ ತನ್ನ ಬರವಣಿಗೆಯನ್ನು ಹಣ ಗಳಿಕೆಗೆ ಬಳಸಿಕೊಳ್ಳುವುದು ಅಗೌರವ ಹೇಗಾದೀತು? ಅಧಿಕಾರ ಹಾಗೂ ಹಕ್ಕುಗಳ ಮಾತುಗಳೆಲ್ಲ ಪುರುಷರಿಗೆ ಮಾತ್ರ ಸೀಮಿತವೇ? ಇವಾವೂ ಮಹಿಳೆಗೆ ಅನ್ವಯಿಸುವುದೇ ಇಲ್ಲವೇ? ಪುರುಷನಂತೆ ಆಲೋಚಿಸಬಲ್ಲ ಬುದ್ಧಿ ಇದ್ದೂ ಏನೊಂದೂ ಮಾತನಾಡದಂತೆ, ವಿಚಾರ ಮಾಡದಂತೆ ಮೌನವಾಗಿ ಉಳಿಯುವುದಾದರೂ ಹೇಗೆ?... ಹೀಗೆ ತನ್ನ ಅಸ್ತಿತ್ವಕ್ಕಾಗಿ ಆಕೆಯ ಮನಸ್ಸು ಚಡಪಡಿಸುತ್ತಿತ್ತು. ಅಭಿವ್ಯಕ್ತಿಗಾಗಿ ಕಾತರಿಸುತ್ತಿತ್ತು.

ಈ ಎಲ್ಲ ಪ್ರೌಢ ವಿಚಾರಗಳ ಪ್ರತಿಬಿಂಬವೇ ಜೇನ್ ಬರವಣಿಗೆ. ಅಂದ ಹಾಗೆ ಈ ವರ್ಷ ಜೇನ್ ಆಸ್ಟಿನ್‌ಳ ಪ್ರಸಿದ್ಧ ಕಾದಂಬರಿ `ಪ್ರೈಡ್ ಆಂಡ್ ಪ್ರಿಜುಡೀಸ್'ಗೆ ಇನ್ನೂರು ವರ್ಷದ ಸಂಭ್ರಮಾಚರಣೆ. ಈ ರೊಮ್ಯೋಂಟಿಕ್ ಕಾಮಿಡಿ ಪ್ರಕಟಗೊಂಡಿದ್ದು 1813ರಲ್ಲಿ. ಇದು ಜೇನ್‌ಳ ಅದ್ಭುತ ಪ್ರತಿಭೆಯ ಅನಾವರಣ.

ಐವರು ಸೋದರಿಯರ ಮದುವೆಯ ಕಥೆ ಇದು. ಸಾಮಾನ್ಯವೆನಿಸುವ ಕಥೆಗೆ ಗಾಂಭೀರ‌್ಯ ಹಾಗೂ ಆಳ ವಿಚಾರಗಳ ದಟ್ಟ ಹಂದರವಿದೆ. ತಮ್ಮ ಪ್ರೇಮಿಗಳ ಹುಡುಕಾಟದಷ್ಟೇ ತೀವ್ರವಾಗಿ ಸೋದರಿಯರ ನಡುವಿನ ಸಂಬಂಧಗಳ ಸೆಳಕುಗಳು ಇಲ್ಲಿನ ಮೂಲ ಸೆಳೆತಗಳಲ್ಲೊಂದು.

ಪುಟದಿಂದ ಪುಟಕ್ಕೆ ಓದುಗನನ್ನು ಕುತೂಹಲದಿಂದ ಮುನ್ನಡೆಸುವ ಮಾಂತ್ರಿಕ ಬರವಣಿಗೆ ಇದರ ಯಶಸ್ಸಿನ ಗುಟ್ಟು. ವಿಭಿನ್ನ ಮನಸ್ಥಿತಿಯ ಕಥಾನಾಯಕ ಡಾರ್ಸಿ ಹಾಗೂ ನಾಯಕಿ ಎಲಿಜಬೆತ್ ಸನ್ನಿವೇಶದಿಂದ ಸನ್ನಿವೇಶಕ್ಕೆ ಹತ್ತಿರವಾಗುತ್ತಾ, ಹಾಗೆಯೇ ದೂರ ಸರಿಯುತ್ತಾ, ಮತ್ತೆ ಸನಿಹಕ್ಕೆ ಬರುವ ಪ್ರತಿ ಘಟ್ಟವೂ ರೋಚಕವಾದದ್ದು. ಇಂದಿಗೂ ಯುವತಿಯರ ಮನಸ್ಸಿನಲ್ಲಿ ನೆಚ್ಚಿನ ನಾಯಕನಾಗಿ ನಿಲ್ಲಬಲ್ಲ ಡಾರ್ಸಿಯ ಪಾತ್ರ ಜೇನ್‌ಳ ಅವಿಸ್ಮರಣೀಯ ಸೃಷ್ಟಿಗಳಲ್ಲೊಂದು.

`ಈ ಕಾದಂಬರಿಯಲ್ಲಿ ಇಳಿದುಬಿಟ್ಟರೆ ಎಲಿಜಬೆತ್ ಹಾಗೂ ಡಾರ್ಸಿ ನಡುವೆ ಪ್ರೇಮ ಸಾಧ್ಯವಾಗುವ ತನಕ ಯಾವ ವಿಷಯಗಳೂ ನಮಗೆ ಮುಖ್ಯವೆನಿಸುವುದಿಲ್ಲ... ಯಾವ ಜಗತ್ತಿನಲ್ಲಿದ್ದೇವೆ, ನೆಪೋಲಿಯನ್ ಯುದ್ಧಗಳಾಗಲೀ, ಮಹಿಳೆಯ ಸ್ಥಿತಿಯಾಗಲೀ, ಅಷ್ಟೇ ಅಲ್ಲ ತಲೆಯ ಮೇಲೆ ಸೂರು ಕಳಚಿ ಬಿದ್ದರೂ, ಸುನಾಮಿ ನಮ್ಮೂರನ್ನು ಕೊಚ್ಚಿಕೊಂಡು ಹೋದರೂ, ನಮ್ಮ ಪ್ರೀತಿಯ ವ್ಯಕ್ತಿ ನಮ್ಮನ್ನು ತೊರೆದು ಹೋಗುತ್ತಿದ್ದರೂ ಅತ್ತ ಲಕ್ಷ್ಯ ವಹಿಸದಷ್ಟು ನಾವು ಡಾರ್ಸಿ ಹಾಗೂ ಎಲಿಜಬೆತ್ ಪ್ರೀತಿಯ ಪಲ್ಲಟಗಳತ್ತ ಗಮನ ನೆಟ್ಟಿರುತ್ತೇವೆ... ಪ್ರತಿ ಬಾರಿ ಈ ಪುಸ್ತಕ ಓದಿದಾಗಲೂ ಡಾರ್ಸಿ ತನ್ನ ಅಹಮ್ಮಿನ ಪೊರೆ ಕಳಚಲಾರನೇನೋ ಎಂಬ ಆತಂಕ ನನ್ನಲ್ಲಿ ತುಂಬಿಕೊಳ್ಳುತ್ತದೆ' ಎನ್ನುತ್ತಾರೆ ಮ್ಯೋನ್ ಬುಕರ್ ಪ್ರಶಸ್ತಿ ವಿಜೇತ ಹಾವರ್ಡ್ ಜಾಕೊಬ್ಸನ್.

ಪಾತ್ರಗಳೊಂದಿಗೆ ಓದುಗರನ್ನು ಹೊಸೆದು ಬಿಡುವ ಇಂಥ ಜಾಣ್ಮೆಯಿಂದಾಗಿ ಜೇನ್ ಆಸ್ಟಿನ್ ಕಾದಂಬರಿಗಳು ಇಂದಿಗೂ ಆಕರ್ಷಕ. ಅನೇಕ ಭಾಷೆಗಳಲ್ಲಿ ಸಿನಿಮಾ, ಧಾರಾವಾಹಿಗಳಾಗಿ ರೂಪಾಂತರಗೊಳ್ಳುತ್ತಲೇ ಇವೆ. ಜೇನ್ ಕಾಲಚಕ್ರದಲ್ಲಿ ಹುದುಗಿ ಹೋಗಬಹುದಾದ ಪ್ರಶ್ನೆಯೇ ಇಲ್ಲ. `ಕಾಲದ ಕಾರ‌್ಯಾಚರಣೆಗಳು ಎಷ್ಟು ಅದ್ಭುತ, ಎಷ್ಟೊಂದು ಅತ್ಯದ್ಭುತ, ಅಂತೆಯೇ ಮನುಷ್ಯನ ಮನಸ್ಸಿನ ಮಾರ್ಪಾಡುಗಳು!' - ಎಂಬ ಆಕೆಯ ಮಾತು ಪಕ್ಕದಲ್ಲೇ ಪಿಸುನುಡಿದಂತೆ ಭಾಸವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT