ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಮನಿತರ ನಡುವೆ ಸಿಡಿದ ಬಂಡಾಯ ಕಿಡಿ ಚಿನುವಾ

Last Updated 23 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಚಿನುವಾ ಅಚಿಬೆ ಆಫ್ರಿಕಾದ ಚೈತನ್ಯ. ಆ ನಾಡಿನ ಆತ್ಮ, ಅಲ್ಲಿನ ಆದಿವಾಸಿಗಳ ಸಾಹಸ, ಎದೆಗಾರಿಕೆ, ಕೆಚ್ಚು... ಒಟ್ಟಾರೆ ಅವರು ಒಂದು ಸಮೃದ್ಧ ಸಂಸ್ಕೃತಿಯ ಪ್ರತೀಕ. ಕಗ್ಗತ್ತಲೆಯ ಖಂಡವೆಂದೇ ಅಜ್ಞಾತ ಲೋಕದಲ್ಲಿ ಅವಿತು ಹೋಗಿದ್ದ ಆಫ್ರಿಕಾದ ಬುಡಕಟ್ಟು ಜನಾಂಗಗಳ ಸಂಸ್ಕೃತಿಯನ್ನು ದಮನಿತ ಕಥೆಗಳ ಮೂಲಕ ಬಿಚ್ಚಿಟ್ಟ ಕ್ರಾಂತಿಕಾರಿ. ಸಮಕಾಲೀನ ಜಾಗತಿಕ ಸಾಹಿತ್ಯದಲ್ಲಿ ಬಂಡಾಯದ ದನಿಯನ್ನು ಸೇರಿಸಿದ ಪ್ರಭಾವೀ ಕಾದಂಬರಿಕಾರ. ಹೊಸ ಜನಾಂಗಕ್ಕೆ ಮೂಲನೆಲೆಯ ಸತ್ವವನ್ನು ತೋರಿಸಿಕೊಟ್ಟ ಪ್ರೇರಣ ಶಕ್ತಿ. ವಿಶ್ವ ಸಾಹಿತ್ಯದ ಎತ್ತರದಲ್ಲಿ ಆಧುನಿಕ ಆಫ್ರಿಕಾದ ಸಾಹಿತ್ಯವನ್ನು ಮಿಳಿತಗೊಳಿಸಿದ ಮಹಾನ್ ಲೇಖಕ.

ನೈಜೀರಿಯಾ ಸಾಹಿತ್ಯದ ಭೀಷ್ಮ (ತಾತ) ಎಂದೇ ಖ್ಯಾತರಾದವರು ಚಿನುವಾ ಅಚಿಬೆ. ಆಧುನಿಕ ಆಫ್ರಿಕನ್ ಸಾಹಿತ್ಯಕ್ಕೆ ನಿಜಕ್ಕೂ ಅವರೊಂದು ದಿಕ್ಸೂಚಿ. ಬಂಡಾಯ ಅವರ ಬದುಕಿನಲ್ಲಿ- ಬರಹಗಳಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಸದಾ ಜಾಗೃತ. ಪಾಶ್ಚಿಮಾತ್ಯ ಧರ್ಮ- ಸಂಸ್ಕೃತಿಗಳಲ್ಲಿ ಅವಮಾನಕ್ಕೆ, ತಾತ್ಸಾರಕ್ಕೆ ತುತ್ತಾಗುತ್ತಾ ಕ್ರಮೇಣ ನಶಿಸಿ ಹೋಗುತ್ತಿದ್ದ ತನ್ನ ನಾಡಿನ ರಕ್ಷಣೆಗಾಗಿ ಅಚಿಬೆ ಆಯ್ದುಕೊಂಡದ್ದು ಬರವಣಿಗೆ. ಆಫ್ರಿಕಾ ಖಂಡಕ್ಕೆ ಮಾತ್ರವಲ್ಲ ಇಡೀ ಜಗತ್ತಿನ ಎಲ್ಲಾ ದಮನಿತ ದೇಶಗಳ ಜನರಿಗೆ ಅಗತ್ಯವಾದ ಸ್ಫೂರ್ತಿ ಅವರ ವಿಚಾರಗಳಲ್ಲಿದೆ. “ಅಚಿಬೆಯ ಸಾಂಗತ್ಯದಲ್ಲಿ ಸೆರಮನೆಯ ಗೋಡೆಗಳು ಕುಸಿದು ಬಿದ್ದಿದ್ದವು“ ಎನ್ನುತ್ತಾರೆ ನೆಲ್ಸನ್ ಮಂಡೇಲಾ.

ಚಿನುವಾ ಅಚಿಬೆ ಹುಟ್ಟಿದ್ದು ನೈಜೀರಿಯಾದ ಸ್ವಾತಂತ್ರ್ಯಕ್ಕೂ ಮೂವತ್ತು ವರ್ಷ ಮುನ್ನ. ಅಂದರೆ 1930ರಲ್ಲಿ. ಜನ್ಮಸ್ಥಳ ಆಗ್ನೇಯದಲ್ಲಿರುವ ಒಗಿಡಿ ಪಟ್ಟಣದ ಇಗ್‌ಬೊ. ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ. ಬಾಲ್ಯದಿಂದಲೂ ಓದಿನ ಗೀಳು. ಹೀಗಾಗಿ ಅವರಿಗಿದ್ದ ಅಡ್ಡಹೆಸರು `ಡಿಕ್ಷನರಿ'. ಜಾಗತಿಕ ಧರ್ಮಗಳ ಬಗೆಗೆ, ಆಫ್ರಿಕಾದ ಮೂಲ ಬುಡಕಟ್ಟು ಸಂಸ್ಕೃತಿಗಳ ಬಗೆಗೆ ವಿಶೇಷ ಸೆಳೆತ. ಕಾಲೇಜಿನಲ್ಲಿರುವಾಗಲೇ ಕತೆಗಳ ರಚನೆ. ಪದವಿಯ ಬಳಿಕ ನೈಜೀರಿಯಾದ ಆಕಾಶವಾಣಿಯಲ್ಲಿ ಕೆಲಸ. ನಂತರ ಸೇರಿದ್ದು ಬಿಬಿಸಿಗೆ. 1961ರಲ್ಲಿ  ಕ್ರಿಸ್ತಿ ಒಕೊಲಿಯೊಂದಿಗೆ ಮದುವೆಯಾದ ಅಚಿಬೆ ಅವರದು ನೆಮ್ಮದಿಯ ಸಾಂಸಾರಿಕ ಬದುಕು. ಮೂರು ಮಕ್ಕಳು ಹಾಗೂ ಆರು ಮೊಮ್ಮಕ್ಕಳ ತುಂಬು ಕುಟುಂಬ.

ತನ್ನ ಮೊದಲ ಕೃತಿ `ಥಿಂಗ್ಸ್ ಫಾಲ್ ಅಪಾರ್ಟ್' ಮೂಲಕ ಜಗತ್ತಿನ ಗಮನ ಸೆಳೆದ ಅಚಿಬೆ ಒಬ್ಬ ಪ್ರಖರ ಬರಹಗಾರ. ಅವರು ಈ ಪುಟ್ಟ ಕಾದಂಬರಿಯ ಹಸ್ತಪ್ರತಿಯನ್ನು ಸಿದ್ಧಪಡಿಸಿದ್ದು ಲಂಡನ್ನಿನಲ್ಲಿ. ಆಗ ಅವರಿಗೆ 28 ವರ್ಷ. ಬ್ರಿಟಿಷ್ ವಸಾಹತುಶಾಹಿಗಳ ಕೈಯಲ್ಲಿ ನೈಜೀರಿಯಾದ ಆದಿವಾಸಿ ಜನಾಂಗ ಹೇಗೆ ಅಧಃಪತನವಾಗುತ್ತಿದೆ ಎಂಬುದನ್ನು ಚಿತ್ರಿಸುವ ಈ ಕೃತಿ ಜಗತ್ತಿನ ಬಹುತೇಕ ದೇಶಗಳ ಶಾಲಾ- ಕಾಲೇಜುಗಳಲ್ಲಿ ಪಠ್ಯಪುಸ್ತಕವಾಗಿ ಜನಮನ್ನಣೆ ಪಡೆದಿದೆ. ಇದುವರೆಗೆ ಇದರ ಒಂದು ಕೋಟಿ ಪ್ರತಿಗಳು ಮಾರಾಟವಾಗಿದ್ದು, 50ಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡಿದೆ. ಆಫ್ರಿಕಾದ ವಿದ್ವಾಂಸ ಕ್ವಾಮೆ ಆಂಥೋನಿ ಅಪಿಯಾ ಅವರ ಪ್ರಕಾರ: “ಆಫ್ರಿಕಾದ ಬರವಣಿಗೆಯನ್ನು ಈ ಕೃತಿ ಹೇಗೆ ಪ್ರಭಾವಿಸಿದೆ ಎಂಬುದನ್ನು ಹೇಳುವುದು ಅಸಾಧ್ಯ. ಆಂಗ್ಲ ಬರಹಗಾರರ ಮೇಲಿನ ಷೇಕ್ಸ್‌ಪಿಯರ್‌ನ ಛಾಯೆಯಂತೆ; ರಷ್ಯನ್ ಲೇಖಕರ ಮೇಲಿನ ಪುಷ್ಕಿನ್ ಪ್ರಭಾವದಂತೆ ಚಿನುವಾ ಅಚಿಬೆ...”

ವಿಪರ್ಯಾಸವೆಂದರೆ ಇಡೀ ಜಗತ್ತಿನಾದ್ಯಂತ ವ್ಯಾಪಕ ಓದು ಹಾಗೂ ಪ್ರತಿಕ್ರಿಯೆಗಳಿಗೆ ಪಾತ್ರವಾದ ಈ ಕಾದಂಬರಿಯನ್ನು ಪ್ರಕಟಿಸಲು ಆರಂಭದಲ್ಲಿ ಯಾವ ಪ್ರಕಾಶಕರೂ ಮುಂದೆ ಬರಲಿಲ್ಲ. ಆಫ್ರಿಕಾದ ಲೇಖಕರ ಕಾದಂಬರಿಗೆ ಮಾರುಕಟ್ಟೆಯಿಲ್ಲ ಎಂಬ ತಾತ್ಸಾರ. ಎಲ್ಲೋ ಒಂದೆಡೆ ದೂಳು ಹೊತ್ತು ಹುದುಗಿಯೇ ಹೋಗಿದ್ದ ಈ ಹಸ್ತಪ್ರತಿ ಅಚಿಬೆ ಅವರಿಗೆ ವಾಪಸ್ಸು ಸಿಕ್ಕಿದ್ದೇ ಒಂದು ಪವಾಡ. ಎಲ್ಲೆಡೆ ತಿರಸ್ಕರಿಸಲ್ಪಟ್ಟ ಈ ಕಾದಂಬರಿ ಹರಸಾಹಸಪಟ್ಟು ಪ್ರಕಟವಾಗಿದ್ದು 1958ರಲ್ಲಿ. ಮೊದಲು 2000 ಪ್ರತಿಗಳು ಮುದ್ರಣಗೊಂಡವು. ದಿ ನ್ಯೂಯಾರ್ಕ್ ಟೈಮ್ಸನ ವಿಮರ್ಶೆ ಕೂಡ 500 ಪದಗಳನ್ನು ದಾಟಿರಲಿಲ್ಲ. ಹೀಗಿದ್ದಾಗ್ಯೂ ಈ ಕೃತಿ ಜನರನ್ನು- ಜಗತ್ತನ್ನು ಆಕರ್ಷಿಸಲು ಹೆಚ್ಚು ಕಾಲ ಬೇಕಾಗಲಿಲ್ಲ. 20ನೇ ಶತಮಾನದ ಅತಿಮುಖ್ಯ ಕೃತಿಗಳಲ್ಲಿ ಒಂದೆಂಬ ಖ್ಯಾತಿ ಗಳಿಸಿತು. “ಪ್ರತಿಯೊಬ್ಬರೂ ತಮ್ಮ ಜೀವಮಾನದಲ್ಲಿ ಓದಲೇಬೇಕಾದ ಐದು ಪ್ರಮುಖ ಕೃತಿಗಳಲ್ಲಿ ಇದೂ ಒಂದು” ಎನ್ನುತ್ತಾರೆ ಓಪ್ರಾ ವಿನ್ಫ್ರೆ.

“ಆಧುನಿಕ ಗ್ರೀಕ್ ದುರಂತ ಕಥೆ' ಎಂದೇ ಖ್ಯಾತವಾದ ಈ ಕಾದಂಬರಿಯ ನಾಯಕ ಇಗ್‌ಬೊ ಯೋಧ ಒಕಾಂಕ್ವೊ. ಆತ ಪರಿಶ್ರಮಿ, ಬಲಶಾಲಿ ಹಾಗೂ ದುರಂತ ನಾಯಕ. “ಆ ಬಿಳಿಯ ಬಲು ಚಾಣಾಕ್ಷ. ಆತ ಸದ್ದಿಲ್ಲದೆ ಶಾಂತಿಯಿಂದಲೇ ತನ್ನ ಧರ್ಮವನ್ನು ಹೊತ್ತು ಬಂದ. ನಾವು ಮೊದಮೊದಲು ಹಾಸ್ಯಮಾಡಿ ನಕ್ಕ ನಾವು ಅವನಿಗೆ ನೆಲೆ ನಿಲ್ಲಲು ಜಾಗ ಕೊಟ್ಟೆವು. ಈಗ ನಮ್ಮ ಸೋದರರನ್ನೇ ಆತ ಸೆಳೆದುಬಿಟ್ಟ. ನಮ್ಮ ಜನಾಂಗವೀಗ ಒಂದಾಗಿ ನಿಲ್ಲಲಾರದು...” ಒಕೊಂಕ್ವೋನ ಗೆಳೆಯ ಒಬಿರಿಕಾ ಕಾದಂಬರಿಯಲ್ಲಿ ಹೇಳುವ ಮಾತುಗಳಿವು. ಅಚಿಬೆ ಪುಸ್ತಕದ ಶೀರ್ಷಿಕೆಗೆ ಅಯ್ದುಕೊಂಡಿದ್ದು ವಿಲಿಯಂ ಬಟ್ಲರ್ ಯೇಟ್ಸ್‌ನ `ದಿ ಸೆಕೆಂಡ್ ಕಮಿಂಗ್' ಕವನದ `ಥಿಂಗ್ಸ್ ಫಾಲ್ ಅಪಾರ್ಟ್, ದಿ ಸೆಂಟರ್ ಕೆನಾಟ್ ಹೋಲ್ಡ್' ಸಾಲಿನಿಂದ.

`ನೋ ಲಾಂಗರ್ ಅಟ್ ಈಸ್'- 1960ರಲ್ಲಿ ಪ್ರಕಟವಾದ ಈ ಕಾದಂಬರಿಯ ನಾಒಕಾಂಕ್ವೋನ ಮೊಮ್ಮಗ ಓಬಿ. ಇದು ನೈಜೀರಿಯಾದ ಸ್ವಾತಂತ್ರ್ಯದ ಹೊಸ್ತಿಲಿನ ಸಂದರ್ಭ. ತನ್ನ ಕುಟುಂಬ, ಜನಾಂಗ, ಹಳ್ಳಿ ಹಾಗೂ ಸಮಾಜದ ನಿರೀಕ್ಷೆಗಳ ಗೋಜಲಿನಲ್ಲಿ ಸಿಕ್ಕಿಕೊಳ್ಳುವ ನಾಯಕನ ಕಥೆ ಇದು. ಆಧುನಿಕ ನೈಜೀರಿಯಾ ಇಲ್ಲಿ ಅನಾವರಣಗೊಂಡಿದೆ. ಈ ಸರಣಿಯ ಮೂರನೆಯ ಕಾದಂಬರಿ ಆರೋ ಆಫ್ ಗಾಡ್. ಇಗ್‌ಬೊ ಮತ್ತು ಯೂರೋಪಿನ ಕ್ರಿಶ್ಚಿಯನ್ ಧರ್ಮಗಳ ಒಳಸುಳಿಗಳ ಮುಂದುವರಿದ ಸನ್ನಿವೇಶಗಳು ಇಲ್ಲಿವೆ. ಆ್ಯಂಟ್ ಹಿಲ್ಸ್ ಆಫ್ ಸವನ್ನಾ ಎಂಬುದು ಅಚಿಬೆಯವರ ರಾಜಕೀಯ ವಿಡಂಬನಾತ್ಮಕ ಕೃತಿ.

ತನ್ನ ರಾಷ್ಟ್ರ ನೈಜೀರಿಯಾದ ಕ್ರಾಂತಿಕಾರಿ ಹೋರಾಟದ ಉದ್ದಕ್ಕೂ ನಿಂತ ಅಚಿಬೆ, ಸ್ವಾತಂತ್ರ್ಯದ ನಂತರ ದೇಶ ಸರ್ವಾಧಿಕಾರಿ ಧೋರಣೆಗೆ ತಿರುಗಿದಾಗ ಸಿಡಿದೆದ್ದವರು. ನೈಜೀರಿಯಾದ ನಾಗರಿಕ ಯುದ್ಧಕ್ಕೂ ಮುನ್ನ ಪ್ರಕಟಗೊಂಡ ಎ ಮ್ಯೋನ್ ಆಫ್ ದಿ ಪೀಪಲ್- ಕಾದಂಬರಿ ಬಯಾಫ್ರಾದ ಬಂಡಾಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. 1967ರಲ್ಲಿ ನೈಜೀರಿಯಾದಿಂದ ಸಿಡಿದು ಸ್ವಾತಂತ್ರ್ಯ ಘೋಷಿಸಿಕೊಂಡ ಬಯಫ್ರಾ ನಿಲುವನ್ನು ಅಚಿಬೆ ಬೆಂಬಲಿಸಿದರು. ಹೊಸ ರಾಷ್ಟ್ರದ ರಾಯಭಾರಿಯಾದರು. ಆದರೆ ಈ ಬೆಳವಣಿಗೆ ಬಹುಕಾಲ ನಿಲ್ಲಲಿಲ್ಲ. ತೀವ್ರ ಹೋರಾಟ, ಘರ್ಷಣೆ ಆರಂಭವಾದವು. ಆಗ ಅಚಿಬೆ ಯೂರೋಪ್ ಹಾಗೂ ಅಮೆರಿಕದ ಜನತೆಗೆ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದರು. ಮೂರೇ ವರ್ಷದಲ್ಲಿ ನೈಜೀರಿಯಾ ಬಯಫ್ರಾವನ್ನು ಮತ್ತೆ ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಆಗ ಕೆಲಕಾಲ ಅಚಿಬೆ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಬಹುಕಾಲ ಆ ವಾತಾವರಣದಲ್ಲಿ ನಿಲ್ಲಲಾಗಲಿಲ್ಲ. ನಾಯಕರುಗಳ ಹುಸಿ ಪ್ರತಿಷ್ಠೆ ಹಾಗೂ ಮೌಲ್ಯರಹಿತ ವರ್ತನೆಗಳಿಗೆ ಬೇಸತ್ತು ಅಚಿಬೆ ರಾಜಕೀಯದಿಂದ ನಿವೃತ್ತರಾದರು. ಕಳೆದ ವರ್ಷ ಬಹುಕಾಲದ ನಿರೀಕ್ಷೆಯಾಗಿ ಹೊರಬಂದ ಅವರ ಈ ನೆನಪುಗಳ ದಾಖಲಾತಿ ಕೃತಿ: ದೆರ್ ವಾಸ್ ಎ ಕಂಟ್ರಿ, ಎ ಪರ್ಸನಲ್ ಹಿಸ್ಟರಿ ಆಫ್ ಬಯಾಫ್ರ.

ಮುಂದೆ 70ರ ದಶಕದಲ್ಲಿ ಅಮೆರಿಕದಲ್ಲೇ ಬಹುಕಾಲ ಉಳಿದ ಅವರು 1990ರ ಕಾರ್ ಅಪಘಾತದ ಬಳಿಕ ಅಮೆರಿಕದಲ್ಲೇ ಉಳಿದುಬಿಟ್ಟರು. ಅಮೆರಿಕದ ಬಾರ್ಡ್ ಕಾಲೇಜ್ ಹಾಗೂ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಅವರು ಪ್ರೊಫೆಸರ್ ಆಗಿದ್ದರು. ಅಪಘಾತದ ನಂತರ ತಮ್ಮ ಆಯುಷ್ಯದ ಕಾಲು ಭಾಗವನ್ನು ಅವರು ಕಳೆದದ್ದು ಗಾಲಿಕುರ್ಚಿಯಲ್ಲಿಯೇ. 

“ಅಪಮಾನ ಮತ್ತು ಹೀನ ಸ್ಥಿತಿಗಳಲ್ಲಿ ಹುದುಗಿ, ಸಂಕೀರ್ಣ ಸನ್ನಿವೇಶಗಳಲ್ಲಿ ಸಿಲುಕಿಕೊಂಡಿರುವ ನನ್ನ ಸಮಾಜ ತನ್ನ ಮೇಲಿನ ನಂಬಿಕೆಯನ್ನು ಮತ್ತೆ ಪಡೆದುಕೊಳ್ಳಲು ನಾನು ನೆರವಾಗಬೇಕು” ಎಂದು ಅಚಿಬೆ ಲೇಖನವೊಂದರಲ್ಲಿ ಹೇಳುತ್ತಾರೆ. ಬ್ರಿಟಿಷರ ಕಣ್ಣುಗಳಲ್ಲಿ ಬಿಂಬಿತವಾಗುತ್ತಿದ್ದ ತನ್ನ ನಾಡಿನ ಇತಿಹಾಸವನ್ನು ತಿದ್ದಿ, ಮರುಸೃಷ್ಟಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಆಫ್ರಿಕಾದ ಬಗೆಗಿನ ಪಾಶ್ಚಿಮಾತ್ಯ ಸಾಹಿತ್ಯದ ಕುರಿತು ಅಚಿಬೆ ಅವರಿಗೆ ಇದ್ದದ್ದು ನೋವು, ಸಿಟ್ಟು. ಜೋಸೆಫ್ ಕಾನ್ರಾಡ್‌ನ ಪ್ರಸಿದ್ಧ ಕಾದಂಬರಿ ಹಾರ್ಟ್ ಆಫ್ ಡಾರ್ಕ್‌ನೆಸ್ ಕುರಿತು ಅಚಿಬೆ ಕಿಡಿಕಾರುತ್ತಾರೆ. “ಪಾಶ್ಚಿಮಾತ್ಯ ಬುದ್ಧಿಜೀವಿಗಳು ಕೂಡ ಹೇಗೆ ಜನಾಂಗೀಯ ಭಾವಕ್ಕೆ ಹೊರತಾಗಿಲ್ಲ. ಅನ್ಯರ ನಾಗರಿಕತೆಯನ್ನು ಅವರ ಮನಸ್ಸುಗಳು ಅನಾಗರಿಕವಾಗಿ, ಬರ್ಬರವಾಗಿ ನೋಡುತ್ತವೆ..” ಎಂದು ಖಂಡಿಸಿದ್ದಾರೆ.

ಶುಕ್ರವಾರ ಇಹಲೋಕ ತ್ಯಜಿಸಿದಾಗ ಅವರ ವಯಸ್ಸು 82. ಈ ನಡುವಿನ 53 ವರ್ಷಗಳ ಅಂತರದಲ್ಲಿ ಅವರು ಬರೆದದ್ದು ಐದು ಕಾದಂಬರಿ. ಹಲವಾರು ಲೇಖನಗಳು, ಪ್ರಬಂಧಗಳು, ಮಕ್ಕಳ ಕಥೆಗಳು, ಇತ್ಯಾದಿ. ನೊಬೆಲ್ ಪ್ರಶಸ್ತಿಗೆ ಅಚಿಬೆ ಯೋಗ್ಯ ವ್ಯಕ್ತಿ ಎಂದು ಅವರ ಓದುಗರು ಹಾಗೂ ವಿಮರ್ಶಕರು ನಿರೀಕ್ಷಿಸಿದ್ದರೂ ಅಚಿಬೆಗೆ ನೊಬೆಲ್ ಬಾರದೇ ಹೋದದ್ದು ಆಶ್ಚರ‌್ಯ. ಆದರೆ 2007ರಲ್ಲಿ ಅವರಿಗೆ ಮ್ಯೋನ್ ಬೂಕರ್ ಅಂತರರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. `ಅಚಿಬೆಯ ಮೊದಲ ಕೃತಿಯಿಂದ ಹಿಡಿದು ಕೊನೆಯವರೆಗಿನ ಪ್ರತಿ ಬರಹವನ್ನು ಓದಿ, ಓದಿ, ಓದಿ. ಆತ ಎಲ್ಲಾ ಕಾಲ, ದೇಶಗಳಿಗೂ ಸೇರಿದ ವ್ಯಕ್ತಿ' ಆ ಸಂದರ್ಭದಲ್ಲಿ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿದ್ದ ದಕ್ಷಿಣ ಆಫ್ರಿಕಾದ ನೊಬೆಲ್ ಪ್ರಶಸ್ತಿ ವಿಜೇತೆ ನಾಡಿನ್ ಗಾರ್ಡಿಮರ್ ಹೇಳಿದ ಮಾತುಗಳಿವು.

ಚಿನುವಾ ಅಚಿಬೆ ಅವರದು ಖಚಿತ ನಿರೂಪಣೆ. ಸ್ಪಷ್ಟ ನಿಲುವು. ಜನಪದದ ನುಡಿಗಟ್ಟುಗಳು, ಕಥೆ-ಉಪಕಥೆಗಳು ಹಾಗೂ ಇಗ್‌ಬೊ ಮಾತಿನ ಸೊಬಗು ಅವರ ಬರವಣಿಗೆಯ ವೈಶಿಷ್ಟ್ಯ. ಇಗ್‌ಬೊ ಜನಾಂಗದ ಜೀವಾಳವೇ ಕಥೆಗಾರಿಕೆ. ಬಾಲ್ಯದಲ್ಲಿ ಅಮ್ಮ ಹಾಗೂ ಅಕ್ಕನಿಂದ ಪದೇಪದೇ ಕೇಳುತ್ತಿದ್ದ ಅಸಂಖ್ಯಾತ ಕತೆಗಳು ಅವರ ಬರವಣಿಗೆಯ ಮೇಲೆ ಬೀರಿದ ಪ್ರಭಾವ ಅಪಾರ. ಹೀಗಾಗಿ ಅವರ ಭಾಷೆಯಲ್ಲಿ ಅಪರೂಪದ ಸೊಬಗಿದೆ.

ತಮ್ಮ ಬದುಕಿನುದ್ದಕ್ಕೂ ತನ್ನ ಮೂಲನೆಲೆಯ ಆತ್ಮಶೋಧ ಹಾಗೂ ಸಂಸ್ಕೃತಿಯ ಘನತೆಗಾಗಿ ಪ್ರಯತ್ನಿಸಿದ ಅಚಿಬೆ ತಮ್ಮ ಅಭಿವ್ಯಕ್ತಿಗೆ ಆಯ್ದುಕೊಂಡಿದ್ದು ಇಂಗ್ಲಿಷ್ ಭಾಷೆ. “ಆಫ್ರಿಕನ್ ರೈಟರ್ ಅಂಡ್ ಇಂಗ್ಲಿಷ್ ಲ್ಯಾಂಗ್ವೇಜ್‌“ ಲೇಖನದಲ್ಲಿ ಆ ಕುರಿತು ಹೀಗೆ ಹೇಳುತ್ತಾರೆ:

ವಸಾಹತುಶಾಹಿಯು ತನ್ನೆಲ್ಲ ಕೆಡಕುಗಳ ಜೊತೆಯಲ್ಲಿ - ನಾನಾ ಸ್ಥಳೀಯ ಭಾಷೆ ಹಾಗೂ ಸಂಸ್ಕೃತಿಗಳ ಜನ ಪರಸ್ಪರರಲ್ಲಿ ಸಂವಹಿಸಬಲ್ಲ ಒಂದು ಸಾಮಾನ್ಯ ಭಾಷೆಯನ್ನು ನೀಡಿದೆ. ನೈಜೀರಿಯಾದ ಆಚೆಗೂ ಓದುಗರನ್ನು ತಲುಪಲು ಇಂಗ್ಲಿಷ್ ಅನಿವಾರ‌್ಯವಾಯಿತು.' ನಿಜ, ಇದರಿಂದ ಆಳುವ ದೇಶಗಳ ಜನರಿಗೂ ದಮನಿತ ಮನಿಗಳ ಬಡಿತ ಕೇಳಲು ಸಾಧ್ಯವಾಯಿತು. ಬಹು ಸಂಸ್ಕೃತಿ, ಬಹು ಭಾಷೆಗಳ ನಮಗೆ ಆಫ್ರಿಕಾದ ಈ ಸಂದಿಗ್ಧ ಸನ್ನಿವೇಶ ಹೆಚ್ಚು ಮನದಟ್ಟಾಗುತ್ತದೆ.

ತನ್ನ ದೇಶದಲ್ಲಿನ ಭ್ರಷ್ಟಾಚಾರದ ಬಗ್ಗೆ ಅಚಿಬೆ ಟೀಕೆ ಮಾಡುತ್ತಲೇ ಬಂದರು. ಖಂಡಿತವಾದಿಯಾದ ಅವರು ನೈಜೀರಿಯಾ ಸರ್ಕಾರ ನೀಡಲು ಬಂದ ರಾಷ್ಟ್ರದ ಅತ್ಯುನ್ನತ- ಕಮಾಂಡರ್ ಆಫ್ ದಿ ಫೆಡರಲ್ ರಿಪಬ್ಲಿಕ್- ಗೌರವವನ್ನು 2004 ಹಾಗೂ 2011ರಲ್ಲಿ ಎರಡೂ ಬಾರಿ ತಿರಸ್ಕರಿಸಿದರು. `ನೈಜೀರಿಯಾದಲ್ಲಿ ಕಾನೂನು ಸತ್ತು ಬಿದ್ದಿದೆ' ಎಂಬ ಅವರ ತೀವ್ರ ವಿಷಾದವನ್ನು ಪ್ರತಿಧ್ವನಿಸುವಂತೆ ನೈಜೀರಿಯಾದ ಕಾನೊ ನಗರದಲ್ಲಿ ಕಳೆದ ವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಅಚಿಬೆಯವರ ಇಗ್ಬೊ ಜನಾಂಗಕ್ಕೆ ಸೇರಿದ 22 ಜನ ಬಲಿಯಾದರು. ಈ ಹತ್ಯಾಕಾಂಡ ಅಚಿಬೆ ಅವರಿಗೆ ಸಾವಿಗೂ ಮುನ್ನ ತೀವ್ರ ನೋವುಂಟು ಮಾಡಿತ್ತು ಎನ್ನುತ್ತಾರೆ ಆಫ್ರಿಕಾದ ಮೊದಲ ನೊಬೆಲ್ ಪ್ರಶಸ್ತಿ ವಿಜೇತ ವೊಲೆ ಸೊಯಿಂಕಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT