ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿದೀಪದ ಜನಕ ಫ್ರಾಂಕ್ಲಿನ್

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಲೈಟು ಹೋದ್ವು, ಲೈಟು ಹೋದ್ವು. ಮಕ್ಕಳೆಲ್ಲಾ ಕೂಗಾಡತೊಡಗಿದರು. ಬೇಸಿಗೆಯ ಸುಡು ಬಿಸಿಲು. ಹಗಲು ಹೇಗಾದರೂ ತಡೆದುಕೊಂಡಾರು. ರಾತ್ರಿ ಹೇಗೆ? ಎಲ್ಲರಿಗೂ ಸಮಸ್ಯೆ. ಮಾರ್ಚ್ - ಏಪ್ರಿಲ್ ತಿಂಗಳು ಪರೀಕ್ಷೆಯ ಕಾಲ ಬೇರೆ. ವಿದ್ಯಾರ್ಥಿಗಳ ಓದಿಗೂ ಸಂಚಕಾರ.ಹೀಗಿದ್ದಾಗ ಹುಡುಗರು ಗದ್ದಲವೆಬ್ಬಿಸಿ ಓಣಿಯ ತುಂಬಾ ಓಡಾಡತೊಡಗಿದರು. ಗದ್ದಲ ಕೇಳಿಯೋ ಏನೋ ಎಂಬಂತೆ ಲೈಟುಗಳು ಬಂದವು. ಹೋದ ಜೀವ ಬಂದಂತಾಯ್ತು. ಮನೆಯಲ್ಲಿ ಟೀವಿ, ಫ್ಯಾನ್‌ಗಳು ಚಾಲು ಆದವು.

ಓಣಿಯಲ್ಲಿ ಕೆಲ ಹುಡುಗರು ಲೈಟು ಕಂಬದ ಬೆಳಕಿನಲ್ಲಿ ನಿಂತು ಆಟವಾಡುತ್ತಿದ್ದರು. ಯಾವನೋ ಒಬ್ಬ ಕಿಡಿಗೇಡಿ ಹುಡುಗ ಪಕ್ಕದ ಕಂಬವೊಂದರ ಲೈಟಿಗೆ ಕಲ್ಲೆಸೆದಿದ್ದ. ಅಲ್ಲಿ ಕತ್ತಲಿತ್ತು.
ಅಲ್ಲಿಗೆ ವಿಜ್ಞಾನ ಬೋಧಿಸುವ ಮೇಷ್ಟ್ರು ಬಂದ್ರು.

ಮಕ್ಕಳು ಗಲಾಟೆ ಮಾಡುತ್ತಿದ್ದುದನ್ನು ಮೇಷ್ಟ್ರು ನೋಡಿದರು. ಮಕ್ಕಳನ್ನು ಕರೆದು, `ಲೈಟು ಕಂಬಗಳ ದೀಪದ ಕಥೆಯನ್ನು ಹೇಳುತ್ತೇನೆ' ಎಂದು ಹೇಳಿ, ಲಕ್ಷ್ಮೀ ಗುಡಿಯ ಕಟ್ಟೆಗೆ ಕೂಡಿಸಿದರು.

“ಅಮೇರಿಕಾ ದೇಶದಲ್ಲಿ ಒಂದು ಊರಿನಲ್ಲಿ ಫ್ರಾಂಕ್ಲಿನ್ ಎಂಬ ವ್ಯಕ್ತಿಯೊಬ್ಬ ನಮ್ಮ ಹಾಗೆ ಊರವರ ಜೊತೆ ವಾಸಿಸುತ್ತಿದ್ದ. ಫ್ರಾಂಕ್ಲಿನ್ ವಾಸ ಮಾಡುವ ಮನೆಯ ಎದುರಿನ ರಸ್ತೆ ತಗ್ಗು ದಿನ್ನೆಗಳಿಂದ ಕೂಡಿತ್ತು. ನಡೆದಾಡುವ ಜನ ರಾತ್ರಿಯಲ್ಲಿ ಎಡವಿ ಬೀಳುತ್ತಿದ್ದರು. ಎಡವಿ ಬಿದ್ದು ಗಾಯವಾದವರಿಗೆಲ್ಲ ಫ್ರಾಂಕ್ಲಿನ್ ಉಪಚಾರ ಮಾಡುತ್ತಿದ್ದನು. ಹೀಗೆ ಬಹಳ ದಿನಗಳ ಕಾಲ ನಡೆಯಿತು. ಕಡೆಗೆ ಅವನಿಗೊಂದು ವಿಚಾರ ಬಂತು.

ಬೀದಿಯಲ್ಲಿ ಕಂಬವೊಂದನ್ನು ನೆಡಿಸಿ ಮನೆಯಲ್ಲಿಯ ದೀಪವೊಂದನ್ನು ತಂದು ಕಂಬಕ್ಕೆ ಹಾಕಿದನು. ಜನ ಅದಕ್ಕೂ ಬಯ್ದರು. ಅವನಿಗೆ ಸೊಕ್ಕು ಬಂದಿದೆ. ಶ್ರೀಮಂತ ಇದ್ದೇನೆ ಎಂಬುದನ್ನು ತೋರಿಸುತ್ತಿದ್ದಾನೆ. ಆ ಕಾರಣವಾಗಿ ಕಂಬ ನೆಟ್ಟು ದೀಪ ಹಾಕಿದ್ದಾನೆ ಎಂದು ಆಡಿಕೊಂಡರು.
ಇನ್ನು ಕೆಲವರು ಒಳ್ಳೆಯ ಕೆಲಸ ಮಾಡಿದ್ದಾನೆ ಫ್ರಾಂಕ್ಲಿನ್, ಎಂದರು. ಇನ್ನು ಮುಂದೆ ಈ ರಸ್ತೆಯಲ್ಲಿ ನಡೆದಾಡುವವರು ಎಡವಿ ಬೀಳುವುದೂ ತಪ್ಪಿತು ಎಂದರು. ಫ್ರಾಂಕ್ಲಿನ್ ಎಂಬ ವ್ಯಕ್ತಿಯಿಂದ ಆತನ ಮನೆಯ ಮುಂದೆ ಬೆಳಕಾಯಿತು. ಜನಕ್ಕೂ ದಾರಿ ಕಂಡಿತು.

ಅಂದು ಫ್ರಾಂಕ್ಲಿನ್ ಉರಿಸಿದ `ಕಂಬದ ದೀಪ' ಮುಂದೆ ದಾರಿದೀಪವಾಗಿ ಬೆಳಗತೊಡಗಿದವು. ಊರ ತುಂಬೆಲ್ಲಾ ದೀಪದ ಕಂಬಗಳನ್ನು ಹಾಕಿ ದೀಪದ ಬೆಳಕು ಮಾಡಿದರು. ಹೀಗೆ ಒಬ್ಬ ವ್ಯಕ್ತಿಯ ಆಲೋಚನೆ ಇಡೀ ಜಗತ್ತಿಗೆ ಮಾರ್ಗದರ್ಶನವಾಯಿತು”.
ಕಥೆ ಕೇಳಿ ಮಕ್ಕಳು ಖುಷಿಯಾದರು.ಅಬ್ಬಾ! ಫ್ರಾಂಕ್ಲಿನ್ ಎಷ್ಟು ಜಾಣ ಎಂದರು ಮಕ್ಕಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT