ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಿ ಬಂದ್ !!!

Last Updated 9 ಜೂನ್ 2012, 19:30 IST
ಅಕ್ಷರ ಗಾತ್ರ

“ಅಲ್ರೀ.... ಈ ಭಾರತ ಬಂದ್, ಬೆಲೆ ಏರಿಕೆ ವಿರುದ್ಧ ಆಂದೋಲನ, ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ಎಷ್ಟು ದಿನ ಮಾಡ್ತಾರೆ?” ಬೆಳಿಗ್ಗೆ ಹಾಲು ಮಾರಾಟ ಮಾಡುವ ನಂದಿನಿ ಹಾಲು ವಿತರಕ ಕೃಷ್ಣ ಹೇಳುತ್ತಲಿದ್ದನು.

ಮಹಾ ವಾಚಾಳಿ ರಂಗಯ್ಯ ನಿತ್ಯದ ವಾಕಿಂಗ್ ಬಳಿಕ ಪ್ಯಾಕೇಟು ಹಾಲು ಖರೀದಿಸಲು ಅಲ್ಲಿಗೆ ಹಾಜರಾದರು. ಕೃಷ್ಣ ಅದೇ ರಾಗದಿಂದ ಹೇಳುತ್ತಿದ್ದುದನ್ನು ಗಮನಿಸಿ “ಅಯ್ಯ ಬಿಡಯ್ಯ....

ಸ್ವಾತಂತ್ರ್ಯ ಹೋರಾಟದ ಕಿಚ್ಚು ಈಗ ಯಾರಲ್ಲಿ ಉಳಿದಿದೆ. ಎಲ್ಲ ರಾಜಕೀಯ ಪಕ್ಷದ ನಾಯಕರ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟ” ಎಂದಷ್ಟೆ ಪ್ರತಿಕ್ರಿಯಿಸಿದರು.

“ಕರೆಕ್ಟ್ ಕಣ್ರಿ. ತಾಲ್ಲೂಕು ಬಂದ್, ಜಿಲ್ಲೆ ಬಂದ್, ರಾಜ್ಯ ಬಂದ್, ರಾಷ್ಟ್ರ ಬಂದ್ ಅನ್ನೋ ನಾಟಕದ ಅಂಕ ನೋಡಿ ನೋಡಿ ಸಾಕಾಗಿದೆ. ಎಲ್ಲಿಯತನಕ ಈ ರಾಜಕಾರಣಿಗಳು ಅಧಿಕಾರದ ಆಸೆ, ಹಣದಾಸೆ ಬಿಡುವುದಿಲ್ಲವೋ ಅಲ್ಲಿಯತನಕ ನಮ್ಮ ದೇಶದಲ್ಲಿ ಅರಾಜಕತೆ, ಬೆಲೆ ಏರಿಕೆ, ಭ್ರಷ್ಟಾಚಾರ ನಿಲ್ಲುವುದೇ ಇಲ್ಲ” ಎಂಬ ಖಡಾಖಂಡಿತ ವಾದ ಮಂಡಿಸಿದ ಕೃಷ್ಣ.

“ನಂದಿನಿ ಹಾಲಿನ ಬೆಲೆ ಏರಿತು. ಧವಸಧಾನ್ಯಗಳ ಬೆಲೆ ದಿನನಿತ್ಯ ಏರಿಕೆಯಾಗುತ್ತಲೇ ಇದೆ. ತರಕಾರಿ-ಹೂವು- ಹಣ್ಣು ಹಂಪಲು ಬೆಲೆಯೂ ಏರುತ್ತಲಿದೆ. ಇನ್ನು ಸಿಮೆಂಟ್-ಕಬ್ಬಿಣ ಇತ್ಯಾದಿ ಬೆಲೆಯೂ ಚಿನ್ನ-ಬೆಳ್ಳಿ-ತಾಮ್ರದ ಬೆಲೆಯಂತೆ ಏರುತ್ತಲಿದೆ. `ಬಂದ್~ ಒಂದು ದಿನ ಮಾಡಬಹುದು. ಉಪವಾಸ ಒಂದು ದಿನ ಮಾಡಬಹುದು. ಆದ್ರೆ ದಿನನಿತ್ಯ ಏರಿಕೆಯಾಗುವ ಬೆಲೆಗಳನ್ನು ತಡೆಯಲು ದಿನನಿತ್ಯ ಕ್ಷಣಕ್ಷಣವೂ `ಬಂದ್~ ಮಾಡಬಹುದೇ?” ಹಾಲಿಗೆ ಬಂದಿದ್ದ ರಾಯರು ಮೆತ್ತಗೆ ನುಡಿದರು.

“ ಪ್ರತಿಭಟನೆ ಹೋರಾಟ ನಡೆಸಿದ್ದರೂ ಬೆಲೆ ಇಳಿಕೆ ಆಗಲು ಅಸಾಧ್ಯ. ಸದ್ಯ ಪೆಟ್ರೋಲ್ ಬೆಲೆ ಏರಿಕೆಯಾಗಿದೆ ಎನ್ನುವ ವಾದ. ಆದರೆ ದ್ವಿಚಕ್ರ ವಾಹನಗಳ ಬೆಲೆ, ಕಾರುಗಳ ಬೆಲೆ ಏರಿಕೆಯಾದುದನ್ನು ಯಾರೂ ಗಮನಿಸುವುದಿಲ್ಲ. ನಮ್ಮ ದೇಶದ ಜನರ ಸಮಸ್ಯೆಗಳು ಬೆಲೆ ಏರಿಕೆಯನ್ನೂ ಮೀರಿವೆ”. ಎನ್ನುತ್ತಾ ಕೃಷ್ಣ ಅರ್ಧ, ಒಂದು ಲೀಟರ್ ಹಾಲು ಪ್ಯಾಕೇಟು ಎರಡೂ ಕೈಗಳಲ್ಲಿ ಗಿರಾಕಿಗಳಿಗೆ ಕೊಡುತ್ತಲಿದ್ದನು.

ರಾಯರು ಚಿಟಿಕೆ ನಸ್ಯ ಮೂಗಿಗೇರಿಸಿ “ಹತ್ತು ರೂಪಾಯಿ ಏರಿಕೆ ಮಾಡಿ, ಎರಡು ರೂಪಾಯಿ ಇಳಿಕೆ ಮಾಡುವ ಕೇಂದ್ರ ಸರ್ಕಾರದ ಧೋರಣೆಗೆ ಈ ಭಾರತ ಬಂದ್ ಬಿಸಿ ತಟ್ಟುವಂತಿಲ್ಲ. ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರದಿಂದ ಸಂಪಾದಿಸುವ ರಾಜಕಾರಣಿ ಮಂತ್ರಿಮಹೋದಯರು ಮತದಾರ ಮಹಾಪ್ರಭುಗಳೆಲ್ಲರನ್ನೂ ಮರೆತಿದ್ದಾರೆ. ಅವರು ಮಾತ್ರ ಹಾಯಾಗಿ ಮೆರೆಯುತ್ತಿದ್ದಾರೆ” ಎನ್ನುವ ಸಬೂಬು ಕೊಟ್ಟರು.

“ಕರ್ನಾಟಕದಲ್ಲಿ ಗಣಿ ಅಕ್ರಮ ಸಂಪಾದನೆ, ಡಿನೋಟಿಫಿಕೇಶನ್ ಎಂದೆಲ್ಲಾ ಹುಯಿಲೆಬ್ಬಿಸಿದಾಗ ಸರ್ಕಾರವೆ ಬಿದ್ದು ಹೋಗುತ್ತದೆಯೋ ಎನ್ನುತ್ತಿದ್ದರು. ಏನೂ ಆಗಿಲ್ಲ. ಭದ್ರ ಸರ್ಕಾರವು ಅಭಿವೃದ್ಧಿ ಮಂತ್ರ ಜಪಿಸುತ್ತಿದೆ. ಒಳಜಗಳ ಇದ್ದರೂ ಪ್ರತಿಪಕ್ಷಗಳ ಟೀಕೆಗೂ, ಲೋಕಾಯುಕ್ತ ಆದೇಶಗಳಿಗೂ ಸೊಪ್ಪು ಹಾಕಿದಂತಿಲ್ಲ!!” ರಂಗಯ್ಯನವರು ರಾಜ್ಯ ರಾಜಕಾರಣದ ಚಿತ್ರಣ ಬಿಂಬಿಸಿದರು.

“ಅಣ್ಣಾ ಹಜಾರೆ, ಕೇಜ್ರಿವಾಲ್‌ರವರು, ತಂಡದವರೂ ಪ್ರಧಾನಿಯವರನ್ನು ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿಸಿದ್ದಾರೆ. ಅತ್ತ ರಾಮದೇವ್ ಕಪ್ಪುಹಣದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಅಖಾಡಾ ನಿರ್ಮಿಸಿದ್ದಾರೆ. ಇತ್ತ ಭಾ.ಜ.ಪ. ಮತ್ತು ಎನ್.ಡಿ.ಎ. ಮಿತ್ರ ಪಕ್ಷಗಳ ನಾಯಕರ ಧೋರಣೆಯು ಕೇಂದ್ರ ಸರ್ಕಾರದ ವಿರುದ್ಧವಿದ್ದರೂ ಸ್ಪಷ್ಟ ನೀತಿಯು ಬಹಿರಂಗವಾಗಿಲ್ಲ” ರಾಯರು ತಕ್ಕಡಿಯಲ್ಲಿ ಬೆಣ್ಣೆ ತೂಗುವ ಧಾಟಿಯಲ್ಲಿ ಟೀಕಿಸಿದರು.

“ಎಲ್ಲವೂ ಅಷ್ಟೇ ಸ್ವಾಮಿ ಕರ್ನಾಟಕದಲ್ಲಿ ಬರಗಾಲ ಇದ್ದರೂ ರಾಜಧಾನಿಯಲ್ಲಿ ವೈಭವದ ಸನ್ಮಾನ, ಅಭಿನಂದನೆ ಸಮಾರಂಭಗಳು ನಡೆಯುತ್ತಲೇ ಇದೆ. ಕೇಂದ್ರ ಸರ್ಕಾರದವರು ರಾಜ್ಯದತ್ತ ಬೊಟ್ಟು ಮಾಡುತ್ತಾರೆ. ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾರೆ. ನಾವು ಪ್ರಜಾವರ್ಗದವರು ಟಿ.ವಿ. ಮತ್ತು ಪೇಪರ್‌ನಲ್ಲಿ ಇವರ ಮೋಜಿನಾಟ ನೋಡುವವರಾಗಿದ್ದೇವೆ” ಕೃಷ್ಣ ಹಾಲು ಪ್ಯಾಕೇಟು ಮಾರಾಟ ಮಾಡುತ್ತಿದ್ದರೂ ಕುಟುಕುತ್ತಲಿದ್ದನು.

“ಸಿ.ಬಿ.ಐ. ದಾಳಕ್ಕೆ ಹೆದರುವ ಬಗ್ಗೆ ಯು.ಪಿ.ಎ. ಕೇಂದ್ರ ಸರ್ಕಾರ ನಡೆಸುವವರಿಗೆ ಚೆನ್ನಾಗಿ ಗೊತ್ತು. ಆಂಧ್ರದಲ್ಲಿ ಜಗನ್ ಬಂಧನವಾದರೆ ಇಲ್ಲಿಯೂ ಸಿ.ಬಿ.ಐ. ಗಾಳಕ್ಕೆ ಯಾರ‌್ಯಾರೋ ಸಿಕ್ಕಿಬೀಳುವ ಸಾಧ್ಯತೆ ಇದೆಯಂತೆ ಕೇಂದ್ರ ಸರ್ಕಾರದವರು “ಜೈಲ್ ಭರೋ” ಆಂದೋಲನವನ್ನೇ “ಕೈ”ಗೆತ್ತಿಕೊಂಡಿದ್ದಾರೆ!!” ರಾಯರು ಬಾಂಬ್ ಸಿಡಿಸಿದಂತೆ ಹೇಳಿದರು.

“ಈ `ಭಾರತ್ ಬಂದ್~ನಿಂದ ಯಾವ ಸಂದೇಶ ರವಾನೆ ಆಗುತ್ತೊ, ಆಯಿತೋ ತಿಳಿಯುತ್ತಿಲ್ಲ. ಅಂತೂ ನಮ್ಮೆಲ್ಲರ “ಬಾಯಿ ಬಂದ್‌” ಆಗಿರುವುದಂತೂ ನಿಜ” ಎಂದು ಕೃಷ್ಣನೂ ಹಾಲಿನ ಮಾರಾಟ ಮಾಡಿ ಅಂಗಡಿ ಶಟರ್ ಎಳೆಯಲು ಮುಂದಾದನು.

“ಕೋಣನ ಮುಂದೆ ವೀಣೆ ನುಡಿಸಿದಂತೆ..... ನಮ್ಮ ಹೋರಾಟಕ್ಕೂ ಬೆಲೆ ಕೊಡದವರು ಶ್ರೀಸಾಮಾನ್ಯರಿಗಾದ ಬೆಲೆಯೇರಿಕೆ ಕಷ್ಟಕ್ಕೆ ಸ್ಪಂದಿಸುತ್ತಾರೆಯೇ.... ಛೇ..... ಛೇ..... ಕೃಷ್ಣನೆಂದಂತೆ “ಬಾಯಿ ಬಂದ್‌” ಚಳುವಳಿಗೆ ಜೈ ಎನ್ನೋಣ” ಎನ್ನುತ್ತಾ ರಾಯರು ಮನೆಯತ್ತ ಹೆಜ್ಜೆ ಹಾಕಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT