‘ಸ್ವಾತಂತ್ರ್ಯ ಮತ್ತು ಮುಕ್ತ ಅಭಿವ್ಯಕ್ತಿಯ ಅವಕಾಶಗಳೆರಡೂ ಪ್ರಜಾಪ್ರಭುತ್ವದ ಪ್ರಧಾನ ಸ್ತಂಭಗಳು. ಪೊಲೀಸರು ದುರ್ಬಳಕೆ ಮಾಡಿಕೊಳ್ಳಬಹುದಾದಷ್ಟು ಅಸ್ಪಷ್ಟವಾಗಿರುವ ಪದಗುಚ್ಛಗಳನ್ನು ಬಳಸಲಾಗಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ‘66ಎ’ಯನ್ನು ಕಾನೂನು ಪುಸ್ತಕಗಳಿಂದ ಅಳಿಸಿಹಾಕಬೇಕು’ ಇದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎಯನ್ನು ರದ್ದುಪಡಿಸಿದ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ವ್ಯಕ್ತಪಡಿಸಿದ ಅಭಿಪ್ರಾಯ.

ನವ ಮಾಧ್ಯಮದ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ವಚಿಸುವ ಅತಿ ಮುಖ್ಯವಾದ ಈ ತೀರ್ಪಿಗೆ ಕಾರಣವಾದ ಮೊಕದ್ದಮೆಯ ಹಿಂದೆ ಇರುವುದು ಊಟದ ಹೊತ್ತಿನಲ್ಲಿ ಮಗಳೊಬ್ಬಳು ತನ್ನ ವಕೀಲೆ ತಾಯಿಯೊಂದಿಗೆ ನಡೆಸಿದ ಬಿಸಿ ಬಿಸಿ ಚರ್ಚೆ. ಈ ಮಗಳ ಹೆಸರು ಶ್ರೇಯಾ ಸಿಂಘಾಲ್, ತಾಯಿಯ ಹೆಸರು ಮನಾಲಿ ಸಿಂಘಾಲ್.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕ್ರೂರ ಸೆಕ್ಷನ್‌ಗಳ ವಿರುದ್ಧ ಶ್ರೇಯಾ ಸಿಂಘಾಲ್ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು 2012ರ ನವೆಂಬರ್‌ನಲ್ಲಿ. ಆಗ ಆಕೆಗೆ ಇಪ್ಪತ್ತೊಂದು ವರ್ಷ. ಬ್ರಿಸ್ಟಲ್ ವಿಶ್ವವಿದ್ಯಾಲಯ ದಲ್ಲಿ ಖಭೌತಶಾಸ್ತ್ರದಲ್ಲಿ ಪದವಿ ಪಡೆದು ತಾಯ್ನಾಡಿಗೆ ಹಿಂದಿರುಗಿ ಕೆಲವೇ ತಿಂಗಳುಗಳಾಗಿತ್ತು. ಮುಂದಿನ ಹಾದಿ ಕಾನೂನು ಅಧ್ಯಯನದಲ್ಲಿ ಎಂದು ನಿರ್ಧರಿಸಿದ್ದ ಮುಂದಿನ ಶೈಕ್ಷಣಿಕ ವರ್ಷದ ಹೊತ್ತಿಗೆ ಕಾನೂನು ಕಾಲೇಜಿಗೆ ಸೇರುವ ಸಿದ್ಧತೆಯಲ್ಲಿದ್ದರು.

ಈ ಹೊತ್ತಿಗೆ ಶಿವಸೇನೆಯ ಮುಖ್ಯಸ್ಥ ಬಾಳಾ ಠಾಕ್ರೆ ನಿಧನ ಮತ್ತು ಅದಕ್ಕಾಗಿ ಮುಂಬೈನಲ್ಲೊಂದು ಅಘೋಷಿತ ಬಂದ್ ಸಂಭವಿಸಿತು. ಇದನ್ನು ವಿಮರ್ಶಿಸಿ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ ಯುವತಿ ಮತ್ತು ಅದನ್ನು ಲೈಕ್ ಮಾಡಿದ ಮತ್ತೊಬ್ಬಳು ಯುವತಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದರು. ಈ ಸುದ್ದಿ ಶ್ರೇಯಾರನ್ನು ಬಹುವಾಗಿ ಕಾಡಿತು. ಇದೇಕೆ ಹೀಗೆ ಎಂದು ತಾಯಿಯ ಜೊತೆ ಚರ್ಚೆಗಿಳಿದಾಗ ಅವರು ‘ನೀನೇಕೆ ಇದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಬಾರದು’ ಎಂದರು.

ತಾಯಿ ಒಡ್ಡಿದ ಸವಾಲನ್ನು ಕಾನೂನು ಕಲಿಯಲು ತವಕಿಸುತ್ತಿದ್ದ ಮಗಳು ಸ್ವೀಕರಿಸಿಯೇ ಬಿಟ್ಟಳು. 2012ರ ನವೆಂಬರ್ 29ರಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಾಯಿತು. ಈ ಮೊಕದ್ದಮೆಯನ್ನು ಆಗ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ಅಲ್ತಮಸ್ ಕಬೀರ್ ಅವರ ಪೀಠವೇ ಕೈಗೆತ್ತಿಕೊಂಡಿತು. ಅಷ್ಟೇ ಅಲ್ಲ ಸ್ವತಃ ಮುಖ್ಯ ನ್ಯಾಯಾಧೀಶರು ‘ಇಂಥದ್ದೊಂದು ಸೆಕ್ಷನ್‌ನ ವಿರುದ್ಧ ಈ ತನಕ ಯಾರೂ ಪ್ರಶ್ನೆಯೆತ್ತಿಲ್ಲವೇಕೆ?’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಆಗಿನ ಅರ್ಟಾನಿ ಜನರಲ್ ಆಗಿದ್ದ ಜಿ.ವಿ. ವಹನ್ವತಿ ಅವರಿಗೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರತಿಯೊಂದನ್ನು ಕಳುಹಿಸುವುದಕ್ಕೆ ಆದೇಶಿಸಿದ ಅವರು ಮಹಾರಾಷ್ಟ್ರ ಸರ್ಕಾರವನ್ನೂ ಪ್ರತಿವಾದಿಯನ್ನಾಗಿಸಬೇಕೆಂದರು. ಇದು ಸಂಭವಿಸಿದ ಎರಡೂವರೆ ವರ್ಷಗಳ ನಂತರ ‘66ಎ’ ಅಧಿಕೃತವಾಗಿ ರದ್ದಾಗಿದೆ. ಅಂದು ಕಾನೂನು ಕಲಿಯಬೇಕೆಂದು ಬಯಸುತ್ತಿದ್ದ ಶ್ರೇಯಾ ಸಿಂಘಾಲ್ ಈಗ ದೆಹಲಿ ವಿಶ್ವವಿದ್ಯಾಲಯ ಕಾನೂನು ಶಾಲೆಯಲ್ಲಿ ಎರಡನೇ ವರ್ಷದ ವಿದ್ಯಾರ್ಥಿ. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಭಾರತದ ಕಾನೂನಿನ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

ಇಷ್ಟಕ್ಕೂ ಶ್ರೇಯಾ ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸುವುದಕ್ಕೆ ಕಾರಣವಾದದ್ದು ತಾಯಿ ಒಡ್ಡಿದ ಸವಾಲು ಮಾತ್ರವೇ? ಆಕೆಯೇ ವಿವಿಧ ಸಂದರ್ಶನಗಳಲ್ಲಿ ಹೇಳಿರುವಂತೆ ‘ನೀನೇ ಏನಾದರೂ ಮಾಡಬಹುದಲ್ಲ’ ಎಂಬ ತಾಯಿಯ ಮಾತು ಮೊಕದ್ದಮೆ ಹೂಡುವುದಕ್ಕೆ ಕಾರಣ ವಾದದ್ದೇನೋ ನಿಜ. ಇದರ ಜೊತೆಗೆ ಇನ್ನೂ ಅನೇಕ ಅಂಶಗಳೂ ಇದಕ್ಕೆ ಪರೋಕ್ಷ ಕಾರಣವಾಗಿವೆ. 2012ರಲ್ಲಿ ಶ್ರೇಯಾ ಭಾರತಕ್ಕೆ ಹಿಂದಿರುಗಿದಾಗ ‘66ಎ’ಯನ್ನು ಬಳಸಿ ಅನೇಕ ಬಂಧನಗಳು ದೊಡ್ಡ ಸುದ್ದಿಯಾದವು.

ಇದರಲ್ಲಿ ಮೊದಲನೆಯದ್ದು ವ್ಯಂಗ್ಯ ಚಿತ್ರಕಾರ ಅಸೀಮ್ ತ್ರಿವೇದಿಯವರದ್ದು. ಈ ಸುದ್ದಿಯನ್ನು ಓದಿದಾಗ ಶ್ರೇಯಾ ಇದೊಂದು ಅಪವಾದ ಎಂದು ಭಾವಿಸಿದ್ದರಂತೆ. ಆಮೇಲೆ ಇಂಥ ಪ್ರಕರಣಗಳು ದೇಶದ ಬೇರೆ ಬೇರೆ ಕಡೆಗಳಿಂದ ವರದಿಯಾದವು. ಮಹಾರಾಷ್ಟ್ರದ ಯುವತಿಯರನ್ನು ಬಂಧಿಸಿದಾಗ ಮಾಹಿತಿ ತಂತ್ರಜ್ಞಾನ ಕಾಯ್ದೆಯೊಳಗಿನ ಅಪಾಯಕಾರಿ ಅಂಶಗಳು ಸ್ಪಷ್ಟವಾಗಿ ಕಾಣಿಸಲಾರಂಭಿಸಿದವು. ವಕೀಲೆಯಾಗಿದ್ದ ತಾಯಿಯೊಂದಿಗೆ ಈ ಕುರಿತಂತೆ ಚರ್ಚಿಸುವುದಕ್ಕೂ ಕಾರಣವಾಯಿತು.

ಸ್ವತಃ ವಿದ್ಯಾರ್ಥಿ ಪ್ರತಿನಿಧಿಯಾಗಿ ಕೆಲಸ ಮಾಡಿದ್ದ ಶ್ರೇಯಾ ಧೈರ್ಯವಾಗಿ ತಮ್ಮ ಅಭಿಪ್ರಾಯಗಳನ್ನು ಎಲ್ಲಾ ವೇದಿಕೆಗಳಲ್ಲಿ ವ್ಯಕ್ತಪಡಿಸುತ್ತಿದ್ದವರು. ಸೆಕ್ಷನ್ 66ಎ ‘ಕಿರಿಕಿರಿ ಉಂಟುಮಾಡುವ, ಅಸೌಕರ್ಯ ಉಂಟುಮಾಡುವ ಮಾತು’ಗಳನ್ನೂ ‘ಅಪರಾಧದ’ ಪಟ್ಟಿಯಲ್ಲಿ ಸೇರಿಸಿದ್ದನ್ನು ಕಂಡು ತಾನೂ ಒಂದು ದಿನ ಬಂಧನಕ್ಕೊಳಗಾಗಬಹುದು ಅನ್ನಿಸಿತ್ತು. ಈ ಎಲ್ಲದರ ಒಟ್ಟು ಪರಿಣಾಮವೆಂಬಂತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಮುಂದಾದರು.

ಮನಾಲಿ ಸಿಂಘಾಲ್ ಅವರ ಗೆಳೆಯರಾಗಿದ್ದ ನಿನಾದ್ ಲಾಡ್ ಮತ್ತು ರಂಜಿತಾ ರೋಹಟಗಿ ಎಂಬ ಇಬ್ಬರು ನ್ಯಾಯವಾದಿಗಳು ಶ್ರೇಯಾ ಪರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರೂಪಿಸಿದರು. ವಾದ ಮಾಡುವುದಕ್ಕೆ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿಯವರೇ ಮುಂದಾದರು. ಎರಡೂವರೆ ವರ್ಷಗಳಲ್ಲಿ ಈ ಪ್ರಯತ್ನ ಫಲ ನೀಡಿತು. ಇನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರಕ್ಕೆ ಸಂಬಂಧಿಸಿದ ವಿಚಾರ ಬಂದಾಗಲೆಲ್ಲಾ ಶ್ರೇಯಾ ಸಿಂಘಾಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪು ಮತ್ತೆ ಮತ್ತೆ ಉಲ್ಲೇಖವಾಗಲಿದೆ.

ಕಾನೂನಿನ ವಿದ್ಯಾರ್ಥಿಯಾಗಿರುವ ಶ್ರೇಯಾರ ಮಟ್ಟಿಗೆ ಈ ಮೊಕದ್ದಮೆ ಮತ್ತು ತೀರ್ಪು ದೊರೆಯುವ ತನಕದ ಇಡೀ ಪ್ರಕ್ರಿಯೆ ಕೇವಲ ಹೋರಾಟವಷ್ಟೇ ಅಲ್ಲ. ಇದೊಂದು ಕಲಿಕೆಯೂ ಹೌದು. ‘ಅರ್ಜಿಯೊಂದನ್ನು ರೂಪಿಸುವುದಕ್ಕೆ ಎಷ್ಟು ಕೆಲಸ ಮಾಡಬೇಕು ಎಂಬುದು ಗೊತ್ತಾಯಿತು. ವಾದವನ್ನು ಮಂಡಿಸುವುದಕ್ಕೆ ಬೇಕಿರುವ ಅಧ್ಯಯನ ಎಷ್ಟು ಆಳವೂ ವಿಸ್ತಾರವೂ ಆಗಿರಬೇಕು ಎಂಬುದು ಅರ್ಥವಾಯಿತು’ ಎನ್ನುವ ಶ್ರೇಯಾ ‘ಇದನ್ನು ಕೇವಲ ಬಂಧನಕ್ಕೊಳಗಾದ ಯಾರೋ ಒಬ್ಬರಿಗಾಗಿ ಮಾಡಲಿಲ್ಲ ಇದನ್ನು ಎಲ್ಲರಿಗಾಗಿ ಮಾಡಿದೆ ಎಂಬ ತೃಪ್ತಿ ನನಗಿದೆ’ ಎನ್ನುತ್ತಾರೆ.

ಶ್ರೇಯಾರ ಕಾನೂನು ಅಧ್ಯಯನ ಮುಗಿಯುವುದಕ್ಕೆ ಇನ್ನೂ ಒಂದೂವರೆ ವರ್ಷಗಳ ಕಾಲ ಬೇಕು. ಮುಂದೇನು ಎಂಬ ಮಾಧ್ಯಮಗಳ ಪ್ರಶ್ನೆಗೆ ‘ನಾನೀಗ ಬೌದ್ಧಿಕ ಆಸ್ತಿಯ ಹಕ್ಕುಗಳ ಕುರಿತು ಅಧ್ಯಯನ ಮಾಡುತ್ತಿದ್ದೇನೆ. ಆದರೆ ಮುಂದೇನು ಮಾಡುತ್ತೇನೆಂದು ಗೊತ್ತಿಲ್ಲ’ ಎಂದು ಉತ್ತರಿಸಿದ್ದಾರೆ. ಕಾನೂನು ಅಧ್ಯಯನ ಮುಗಿಯುವ ಮೊದಲೇ ಕಾನೂನಿನ ಇತಿಹಾಸ ದಲ್ಲೊಂದು ಶಾಶ್ವತ ಹೆಸರು ಗಿಟ್ಟಿಸಿರುವ ಶ್ರೇಯಾ ಕುಟುಂಬದ ವಕೀಲರ ಪರಂಪರೆಯನ್ನು ಮುಂದುವರಿಸುವ ಸಾಧ್ಯತೆಗಳೇ ಹೆಚ್ಚು.

ಈ ಮೊಕದ್ದಮೆಯ ತೀರ್ಪು ನೀಡಿದ ನ್ಯಾಯಮೂರ್ತಿ ರೋಹಿಂಟನ್ ನರೀಮನ್ ಅವರು ‘ಪ್ರಜಾಪ್ರಭುತ್ವವಿರುವ ದೇಶದ ಪೌರರಾಗಿ ನಾವು ಭಿನ್ನಮತದ ಹಕ್ಕಿಗೆ ಅವಕಾಶ ಕಲ್ಪಿಸುವುದರ ಮಹತ್ವವನ್ನು ಅರಿಯಬೇಕು. ಈ ಭಿನ್ನಮತ ಜನರಿಗೆ ಅಪ್ರಿಯವಾಗಿದ್ದರೂ ಅದನ್ನು ವ್ಯಕ್ತಪಡಿಸುವ ಅವಕಾಶವಿರಬೇಕು’. ಎಂದಿದ್ದಾರೆ. ಈ ದೃಷ್ಟಿಯಲ್ಲಿ ಶ್ರೇಯಾ ಅಪ್ರಿಯವಾದ ಸತ್ಯಗಳನ್ನು ಮುಕ್ತವಾಗಿ ಹೇಳುವ ಅವಕಾಶವನ್ನು ನಮಗೆಲ್ಲಾ ಸೃಷ್ಟಿಸಿಕೊಟ್ಟ ಭಾರತದ ಮಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.