ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಿಲೀಕ್ಸ್ ಅಸಾಂಜ್ - ಆಶ್ರಯ ಪ್ರಶ್ನೆ ತಂದ ವಿವಾದ

Last Updated 25 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ವಿವಾದಾಸ್ಪದ ಆನ್‌ಲೈನ್ ಮಾಧ್ಯಮವಾಗಿರುವ `ವಿಕಿಲೀಕ್ಸ್~ನ ಸ್ಥಾಪಕ ಜೂಲಿಯನ್ ಅಸಾಂಜ್‌ಗೆ ಈಕ್ವೆಡಾರ್ ರಾಜಕೀಯ ಆಶ್ರಯ ನೀಡಿರುವ ಬೆಳವಣಿಗೆ ಕೇವಲ ಒಂದೂವರೆ ಕೋಟಿ ಜನಸಂಖ್ಯೆ ಇರುವ ದಕ್ಷಿಣ ಅಮೆರಿಕ ರಾಷ್ಟ್ರದ ವಿರುದ್ಧ ಎಲ್ಲಾ ರೀತಿಯಿಂದಲೂ ಪ್ರಬಲ ರಾಷ್ಟ್ರವಾದ ಇಂಗ್ಲೆಂಡ್ ಕಿಡಿ ಕಾರುವಂತೆ ಮಾಡಿದೆ.

ಇದಲ್ಲದೇ ಒಂದು ಕಾಲಕ್ಕೆ ಸ್ಪೈನ್‌ನ ಕಾಲೋನಿಯಾಗಿದ್ದ ಈಕ್ವೇಡಾರ್ ಯೂರೋಪಿನ ಇನ್ನೊಂದು ರಾಷ್ಟ್ರ ಸ್ವೀಡನ್ ಹಾಗೂ ವಿಶ್ವದ ದೊಡ್ಡಣ್ಣ ಅಮೆರಿಕದ ಕೆಂಗಣ್ಣಿಗೂ ಗುರಿಯಾಗುವಂತೆ ಮಾಡಿದೆ.

ಇಡೀ ವಿಶ್ವವನ್ನು ತನ್ನ ಸ್ಫೋಟಕ ತನಿಖಾ ವರದಿಗಳಿಂದ ತಲ್ಲಣಗೊಳಿಸಿದ `ವಿಕಿಲೀಕ್ಸ್~ನ ಸ್ಥಾಪಕ ಅಸಾಂಜ್ ಅವರು ಈಗ ಸ್ವೀಡನ್‌ನಲ್ಲಿ ಮಾನಭಂಗ ಹಾಗೂ ಲೈಂಗಿಕ ಹಲ್ಲೆಯ ಆರೋಪಕ್ಕೊಳಗಾಗಿದ್ದಾರೆ. ಲಂಡನ್‌ನಲ್ಲಿದ್ದ ಅಸಾಂಜ್ ಅವರನ್ನು ಸ್ವೀಡನ್‌ಗೆ ಒಪ್ಪಿಸುವ ಯತ್ನವನ್ನು ಬ್ರಿಟಿಷ್ ಸರ್ಕಾರ ನಡೆಸುತ್ತಿತ್ತು. ಕಳೆದ ಎರಡು ತಿಂಗಳಿನಿಂದ ಲಂಡನ್‌ನ ಈಕ್ವೆಡಾರ್ ರಾಯಭಾರಿ ಕಚೇರಿಯಲ್ಲಿ ವಾಸಿಸುತ್ತಿರುವ ಅಸಾಂಜ್ ಅವರಿಗೆ ಈ ಬಗ್ಗೆ ಸುಳಿವು ಸಿಕ್ಕಿತು. ಅಲ್ಲಿಂದಲೇ ಆ ದೇಶದ ರಾಷ್ಟ್ರಾಧ್ಯಕ್ಷ ರಾಫೆಲ್ ಕೋರಿಯಾರನ್ನು ಸಂಪರ್ಕಿಸಿ ರಾಜಕೀಯ ಆಶ್ರಯ ಕೇಳಿದರು.  ಕೆಲವೇ ಗಂಟೆಗಳಲ್ಲಿ ಅಸಾಂಜ್ ಅವರ ಬೇಡಿಕೆ ಮನ್ನಿಸಿ, ಅವರಿಗೆ ಈಕ್ವೆಡಾರ್ ಸರ್ಕಾರ ಆಶ್ರಯ ನೀಡಿತು. ಈಗ ಅಸಾಂಜ್ ಅವರು ಲಂಡನ್‌ನಲ್ಲಿರುವ ಈಕ್ವೆಡಾರ್ ರಾಯಭಾರಿ ಕಚೇರಿಯಲ್ಲೇ ರಾಜಕೀಯ ಆಶ್ರಯದಲ್ಲಿದ್ದಾರೆ. ನಾವು ಚಾಪೆ ಕೆಳಗೆ ತೂರುವುದಕ್ಕೆ ನೋಡುತ್ತಿದ್ದರೆ ಅಸಾಂಜ್ ಹಾಗೂ ಈಕ್ವೆಡಾರ್ ಸರ್ಕಾರದಿಂದ ರಂಗೋಲಿ ಕೆಳಗೆ ತೂರುವ ಪ್ರಯತ್ನ ನಡೆಯುತ್ತಿದೆಯಲ್ಲಾ ಎನ್ನುವ ಅಸಹನೆ ಬ್ರಿಟನ್ ಸರ್ಕಾರಕ್ಕಿದೆ. ಆದರೆ ರಾಜಕೀಯ ಆಶ್ರಯದ ಅಂತರರಾಷ್ಟ್ರೀಯ ನಿಯಮಗಳು ಬ್ರಿಟನ್ ದೇಶದ ಕೈಕಟ್ಟಿಹಾಕಿವೆ.

ಅಸಾಂಜ್ ಅವರ ಮೇಲೆ ಬ್ರಿಟನ್‌ನ ಗಳಸ್ಯ ಕಂಠಸ್ಯ ರಾಷ್ಟ್ರವಾದ ಅಮೆರಿಕಕ್ಕೆ ವಿಪರೀತ ಸಿಟ್ಟಿರುವುದಕ್ಕೆ ಕಾರಣವೂ ಇದೆ. 2010ರ ಅಂತ್ಯದಲ್ಲಿ ಪ್ರತಿಷ್ಠಿತ `ವಾಷಿಂಗ್ಟನ್ ಪೋಸ್ಟ್~ ಪತ್ರಿಕೆಯೂ ಸೇರಿದಂತೆ ಇನ್ನೂ ನಾಲ್ಕು ಜನಪ್ರಿಯ ಪತ್ರಿಕೆಗಳಲ್ಲಿ  ಸರ್ಕಾರದ ಅನೇಕ ರಹಸ್ಯಗಳನ್ನು ತಮ್ಮದೇ ಆದ ರೀತಿಯ ತನಿಖೆಯಿಂದ ಬಯಲು ಮಾಡಿ ಅಮೆರಿಕಾ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದಲ್ಲದೇ ಆ ದೇಶದ ಡೋಂಗಿ ಮುಖವನ್ನು ಜಗತ್ತಿಗೆ ಗೊತ್ತಾಗುವಂತೆ ಮಾಡಿದ ಅಸಾಂಜ್ ಅವರನ್ನು ಹೇಗಾದರೂ ಬಂಧಿಸಿ ಆತನನ್ನು ಕಂಪ್ಯೂಟರ್ ಹ್ಯಾಕಿಂಗ್ ಹಾಗೂ ದೇಶದ ಅನೇಕ ರಹಸ್ಯಗಳ ತಿಳಿವಳಿಕೆಗಾಗಿ ಅಡ್ಡದಾರಿ ಹಿಡಿದ ಆರೋಪಕ್ಕೆ ವಿಚಾರಣೆಗೆ ಒಳಪಡಿಸಬೇಕೆನ್ನುವ ಗುರಿ ಸರ್ಕಾರಕ್ಕಿದೆ. ಅದಕ್ಕೆ ಬ್ರಿಟನ್ ಸರ್ಕಾರವೂ ಕೈ ಜೋಡಿಸಿದೆ ಎಂದು ಅಸಾಂಜ್ ಆಪಾದಿಸುತ್ತಾರೆ. ತಮ್ಮ ಮೇಲಿನ ಆರೋಪ ಕೇವಲ ಷಡ್ಯಂತ್ರವಲ್ಲದೇ ಬೇರೇನೂ ಅಲ್ಲ ಎನ್ನುವುದು ಅವರ ವಾದ. 

 ಅಸಾಂಜ್ ಅವರ ಸ್ಫೋಟಕ ವರದಿಗಳು ಅಮೆರಿಕವನ್ನು ಮಾತ್ರವಲ್ಲದೇ ಮನಮೋಹನ್ ಸಿಂಗ್ ಸರ್ಕಾರವನ್ನೂ ಇಕ್ಕಟ್ಟಿಗೆ ಸಿಕ್ಕಿಸುವ ರೀತಿ ಇತ್ತು. ವಿದೇಶಿ ಬ್ಯಾಂಕುಗಳಲ್ಲಿ ಕಪ್ಪು ಹಣ ಇಟ್ಟಿರುವ ಭಾರತೀಯರ ಪಟ್ಟಿಯನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿತು. ಇದಲ್ಲದೇ 2006ರಲ್ಲಿ ಸರ್ಕಾರ ಅಮೆರಿಕದ ಒತ್ತಾಯಕ್ಕೆ ಮಣಿದು ಆ ರಾಷ್ಟ್ರದ ಪರ ವಾಲಿದ್ದಾಗಿಯೂ ವಿಕಿಲೀಕ್ಸ್ ವರದಿ ಮಾಡಿತ್ತು. ಇವೆಲ್ಲಾ ಭಾರತದ ಸಂಸತ್ತಿನಲ್ಲಿ ತೀವ್ರ ಚರ್ಚೆಗೆ ಒಳಗಾಯಿತು.  

 ವಿಶೇಷವೆಂದರೆ ಅಸಾಂಜ್ ಅವರ ಹೋರಾಟಕ್ಕೆ ಬೆಂಬಲವೂ ಸಿಗುತ್ತಿದೆ. ಈಚೆಗೆ ಲಂಡನ್‌ನಲ್ಲಿರುವ ಈಕ್ವೆಡಾರ್‌ನ ರಾಯಭಾರಿ ಕಚೇರಿಯ ಒಳಾಂಗಣದಲ್ಲೇ  ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿರುವ ಅಸಾಂಜ್, ಅಮೆರಿಕ ತಮ್ಮಂತಹ ಸತ್ಯಾನ್ವೇಷಣೆಯ  ಪತ್ರಕರ್ತರ ಮೇಲೆ ವಿನಾಕಾರಣ ಸೇಡಿನ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಬಿಡಬೇಕೆಂದು ಹೇಳಿದರು. ತಮಗೆ ಸಹಾಯ ಮಾಡಿದ್ದಾರೆ ಎನ್ನುವ ತಪ್ಪು ಆರೋಪ ಹೊರಿಸಿ, ಸೇನೆಯಲ್ಲಿ ಕೆಲಸ ಮಾಡುತ್ತಿದ್ದ  ಬ್ರಾಡ್ಲಿಮ್ಯೋನಿಂಗ್ ಎನ್ನುವ ವ್ಯಕ್ತಿಯನ್ನು ಬಂಧಿಸಿ ಎಂಟು ನೂರು ದಿನಗಳ ಕಾಲ ವಿಚಾರಣೆ ನಡೆಸದೇ ಜೈಲಿನಲ್ಲಿಟ್ಟಿದ್ದಾರೆ. ಅದು ಪ್ರಜಾಪ್ರಭುತ್ವದ ವಿರುದ್ಧ ಆಗುತ್ತಿರುವ ಹಲ್ಲೆ. ನಿಷ್ಟಾವಂತ ಪತ್ರಕರ್ತರ ವಿರುದ್ಧ ಈ ರೀತಿ ಕ್ರಮ ಜರುಗಿಸುವುದು ಅಮೆರಿಕದ ಡೋಂಗಿ ನಿಲುವುಗಳನ್ನು ಪ್ರಕಟಪಡಿಸುತ್ತಿದೆ ಎಂದು ತಮ್ಮ ಹತ್ತು ನಿಮಿಷದ ಭಾಷಣದಲ್ಲಿ ಅಸಾಂಜ್ ಅವರು ಒತ್ತಿ ಹೇಳಿದರು.

ಅಸಾಂಜ್ ಅವರು ಇದಕ್ಕೆ ಮುನ್ನ ತಮಗೆ ಇಂಗ್ಲೆಂಡ್‌ನಿಂದ ಸುರಕ್ಷಿತವಾಗಿ ಹೊರಹೋಗುವುದಕ್ಕೆ ಲಂಡನ್‌ನಲ್ಲಿ  ನ್ಯಾಯಾಂಗ ಹೋರಾಟಕ್ಕೆ ಇಳಿದರೂ ಬ್ರಿಟನ್ ಸರ್ಕಾರ ತಮ್ಮನ್ನು ಸ್ವೀಡನ್‌ಗೆ ಒಪ್ಪಿಸುವ ನಿರ್ಧಾರಕ್ಕೆ ಕೋರ್ಟಿನಲ್ಲಿ  ತಡೆಯಾಜ್ಞೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಬ್ರಿಟನ್ ಸರ್ಕಾರ ತಮ್ಮನ್ನು ಬಂಧಿಸುತ್ತದೆ ಎನ್ನುವ ಭೀತಿಯಿಂದಲೇ ಅವರು ಈಕ್ವೆಡಾರ್‌ನ ರಾಯಭಾರಿ ಕಚೇರಿಗೆ ಭೇಟಿ ನೀಡಿದ್ದು.

ಜೊತೆಗೆ ಸ್ವೀಡನ್ ಸರ್ಕಾರ ತನ್ನ ಮೇಲೆ ಮಾಡಿರುವ ಆರೋಪವನ್ನು ನ್ಯಾಯಾಲಯದ ಮುಂದೆ ತರುವುದನ್ನು ಬಿಟ್ಟು ತಮ್ಮನ್ನು ಅಮೆರಿಕಕ್ಕೆ ಒಪ್ಪಿಸುವ ಕುಟಿಲೋಪಾಯವನ್ನು ಮಾಡಿದೆ ಎಂದು ಅಸಾಂಜ್ ಆಪಾದಿಸುತ್ತಾರೆ.   

ಈಚೆಗೆ ಈ ಗೊಂದಲದಿಂದ ಹೊರಬರಲು ಬ್ರಿಟನ್ ಸರ್ಕಾರ ಒಂದು ಮಾತಿನ ಬಾಂಬನ್ನು ಈಕ್ವೆಡಾರ್ ಸರ್ಕಾರದ ವಿರುದ್ಧ ಹರಿಯ ಬಿಟ್ಟಿದೆ. ಸ್ವೀಡನ್ ಹಾಗೂ ಬ್ರಿಟನ್ ದೇಶದ ಕಾನೂನಿಗೆ ಬೆಲೆ ಕೊಡದೇ ತನ್ನ ಹಟ ಮುಂದುವರೆಸಿದರೆ ಲಂಡನ್‌ನಲ್ಲಿರುವ ರಾಯಭಾರಿ ಕಚೇರಿಗೆ ನುಗ್ಗಿ ಅಸಾಂಜ್ ಅವರನ್ನು ಬಂಧಿಸುವುದಾಗಿ ಇಂಗ್ಲೆಂಡ್ ಎಚ್ಚರಿಸಿದೆ. ಇದಕ್ಕೆ 1987ರಲ್ಲಿ ಜಾರಿಗೆ ಬಂದ ರಾಜತಾಂತ್ರಿಕ ಹಾಗೂ ರಾಯಭಾರ ಕಚೇರಿಯ ಒಂದು ಹೊಸ ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಇಂತಹ ಪ್ರಯತ್ನಕ್ಕೆ ಅವಕಾಶ ಇದೆ ಎಂದು ಬ್ರಿಟನ್ ವಾದಿಸುತ್ತಿದೆ. ಅಸಾಂಜ್ ಅವರನ್ನು ನಮ್ಮ ಗಡಿಯಿಂದ ಹೊರ ಹೋಗುವುದಕ್ಕೆ ಬಿಡುವುದಿಲ್ಲ, ಅವರನ್ನು ಬಂಧಿಸುವುದು ಖಾತ್ರಿ ಎಂದು ಬ್ರಿಟನ್ ಸರ್ಕಾರದ ವಿದೇಶಿ ಕಾರ್ಯದರ್ಶಿ ವಿಲಿಯಂ ಹೇಗ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಬೆದರಿಕೆಗೆ ಈಕ್ವೆಡಾರ್ ಸೊಪ್ಪು ಹಾಕಿಲ್ಲ.

 ಈಕ್ವೆಡಾರ್‌ನ ವಿದೇಶಾಂಗ ವ್ಯವಹಾರಗಳ ಸಚಿವ ರಿಕಾರ್ಡೋ ಪ್ಯಾಟಿನೋ ಅವರು ರಾಜಧಾನಿ ಕ್ವಿಟೋದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅಸಾಂಜ್ ತಮ್ಮ ದೇಶದ ರಾಜಕೀಯ ಆಶ್ರಿತರು ಎಂದು ಬಣ್ಣಿಸಿದ್ದಾರೆ. ಜೊತೆಗೆ ಅಮೆರಿಕದಲ್ಲಿ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜೀವ ಭಯ ಹಾಗೂ ಅಮೆರಿಕದಲ್ಲಿ ಸರಿಯಾದ ರೀತಿಯಲ್ಲಿ ನ್ಯಾಯ ಸಿಗದೇ ಹೋಗುವ ಭೀತಿ ಇರುವುದರಿಂದ ಈಕ್ವೆಡಾರ್ ರಾಷ್ಟ್ರ ಅಸಾಂಜ್ ಅವರ ಬೇಡಿಕೆಯನ್ನು ಒಪ್ಪಬೇಕಾಯಿತು ಎಂದು ತಮ್ಮ ಅಧ್ಯಕ್ಷರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಇದರ ಬಗ್ಗೆ ನಮ್ಮಲ್ಲಿ  ವಿಶ್ವಾಸಾರ್ಹವಾದ ದಾಖಲೆಗಳೂ ಇವೆ. ಅಂತರರಾಷ್ಟ್ರೀಯ  ಕಾನೂನುಗಳ ಪ್ರಕಾರ ನಾವು ತೆಗೆದುಕೊಂಡಿರುವ ನಿರ್ಧಾರವನ್ನು ತನ್ನ ಮೂಗಿನ ನೇರಕ್ಕೆ ವಿಶ್ಲೇಷಣೆ ಮಾಡುತ್ತಿರುವ ಬ್ರಿಟನ್ ಸರ್ಕಾರ ನಮ್ಮ ನಿರ್ಧಾರ ಎರಡು ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧವನ್ನು ಹದಗೆಡಿಸಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಇದೊಂದು ರೀತಿಯ ಬ್ಲಾಕ್‌ಮೇಲ್ ತಂತ್ರವಷ್ಟೆ. ಆದರೇ ಇದನ್ನು ಕೇಳಿ ಹೆದರುವುದಕ್ಕೆ ನಾವೇನೂ ಬ್ರಿಟನ್‌ನ ಗುಲಾಮರಲ್ಲ ಎಂದು ಪ್ಯಾಟಿನೋ ಹೇಳಿದ್ದಾರೆ.

ಈಚೆಗೆ ಈಕ್ವೆಡಾರ್‌ನ ಅಧ್ಯಕ್ಷರಾದ ಕೋರಿಯಾ ಅವರು ಬ್ರಿಟನ್‌ಗೆ ಅನಗತ್ಯವಾದ ಬೆದರಿಕೆ ಹಾಕುವುದನ್ನು ಬಿಟ್ಟು ಚರ್ಚೆಗೆ ಸಿದ್ದರಾಗಿ ಎಂದು ಹೇಳಿದ್ದಾರೆ. 

 ಹೀಗೆ ಅಸಾಂಜ್ ಅವರ ರಾಜಕೀಯ ಆಶ್ರಯ ಈಗ ವಿಶ್ವ ಮಟ್ಟದಲ್ಲಿ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT