ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಿ ಸಮಾಜವಾದಿ

ವ್ಯಕ್ತಿ
Last Updated 25 ಮೇ 2013, 19:59 IST
ಅಕ್ಷರ ಗಾತ್ರ

ಚಿಂತಕ, ಸಾಧಕ ಕೃಷ್ಣನಾಥ ಶರ್ಮಾ ಅವರ ಹೆಸರನ್ನು ಬಹಳಷ್ಟು ಜನ ಕೇಳಿರಲಿಕ್ಕಿಲ್ಲ. ಸೋಷಲಿಸ್ಟ್ ಪಕ್ಷದ ಜೊತೆ ಜೀವಮಾನವಿಡೀ ಗುರುತಿಸಿಕೊಂಡ ಅವರು, ಇಂದಿಗೂ ಸಮಾಜವಾದದ ಮಂತ್ರ ಜಪಿಸುತ್ತಿದ್ದಾರೆ. ಅವರಿಗೀಗ 79 ವರ್ಷ ವಯಸ್ಸು. ಅವರದು ಸಂಚಾರಿ ಜೀವನ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಕೃಷ್ಣನಾಥ ಶರ್ಮಾ ತಮ್ಮ ಸಮಾಜವಾದಿ ಹೆಜ್ಜೆಗಳನ್ನು ಮೆಲುಕು ಹಾಕಿದ್ದಾರೆ.

ಬನಾರಸ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ನಂತರದ ದಿನಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ಸಮಾಜವಾದಿ ಆಂದೋಲನದಲ್ಲಿ ತೊಡಗಿಸಿಕೊಂಡರು. ಸಂಘರ್ಷಗಳಲ್ಲಿ ಭಾಗಿಯಾಗಿ ಸೆರೆಮನೆವಾಸವನ್ನೂ ಅನುಭವಿಸಿದರು. ಅವರಿಗೆ ರಾಜಕೀಯ ಕ್ಷೇತ್ರ ಹೆಚ್ಚು ರುಚಿಸಲಿಲ್ಲ. `ಆರ್ಥಿಕಿ' ಎಂಬ ಅರ್ಥಶಾಸ್ತ್ರ ಸಂಬಂಧಿತ ತ್ರೈ ಮಾಸಿಕದ ಸ್ಥಾಪಕ ಸಂಪಾದಕರಾದರು. ಅವರ ಸೃಜನಾತ್ಮಕ ಬರವಣಿಗೆಗಾಗಿ `ಲೋಹಿಯಾ ಸಮ್ಮೋನ್' ಪ್ರಶಸ್ತಿ ಕೂಡಾ ಸಂದಿದೆ.

ಕೃಷ್ಣನಾಥ ಶರ್ಮಾ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರರು. ಗಾಂಧೀಜಿಯವರು ಆರಂಭಿಸಿದ ಅಸಹಕಾರ ಆಂದೋಲನದಲ್ಲಿ ಅವರು ಭಾಗವಹಿಸಿದ್ದರು. ಅದೇ ಸಮಯಕ್ಕೆ ಗಾಂಧೀಜಿಗಿಂತಲೂ ಹಿರಿಯರಾದ, ದಾರ್ಶನಿಕ ಡಾ. ಭಗವಾನ್ ದಾಸ್ ಅವರು ಡಾ. ಅನಿಬೆಸೆಂಟ್ ಅವರ ಅಧ್ಯಕ್ಷತೆಯಲ್ಲಿ ಪ್ರಾಚೀನ ಶಾಸ್ತ್ರ ಮತ್ತು ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನವನ್ನು ಆಧಾರವಾಗಿಟ್ಟುಕೊಂಡು `ಸೆಂಟ್ರಲ್ ಹಿಂದೂ ಸ್ಕೂಲ್ ಹಾಗೂ ಸೆಂಟ್ರಲ್ ಹಿಂದೂ ಕಾಲೇಜ್' ಪ್ರಾರಂಭಿಸಿದರು. ಅಲ್ಲಿದ್ದುಕೊಂಡೇ ಅವರ ತಂದೆ ಶಿಕ್ಷಣ ಪೂರೈಸಿ ಕಾಶಿ ವಿದ್ಯಾಪೀಠದಲ್ಲಿ ಶಿಕ್ಷಕರೂ ಆದರು. ಲಾಲ್‌ಬಹದ್ದೂರ್ ಶಾಸ್ತ್ರಿ, ತ್ರಿಭುವನ್ ನಾರಾಯಣ್ ಸಿಂಗ್, ಹರಿಶ್ಚಂದ್ರ ಮೊದಲಾದವರು ಈ ವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದರು. ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿಯ ಸಂಸ್ಥಾಪಕ ಸದಸ್ಯ ಆಚಾರ್ಯ ನರೇಂದ್ರದೇವ್ ಕಾಶಿ ವಿದ್ಯಾ ಪೀಠದ ಪ್ರಾಚಾರ್ಯರಾಗಿದ್ದರು.

ಜಯಪ್ರಕಾಶ್ ನಾರಾಯಣ್, ರಾಮಮನೋಹರ್ ಲೋಹಿಯಾ, ಅಚ್ಯುತ್ ಪಟವರ್ಧನ್ ಮುಂತಾದ ಅನೇಕ ಹಿರಿಯರು ಕೃಷ್ಣನಾಥ ಶರ್ಮಾ ಅವರ ಮನೆಯ ಸದಸ್ಯರೇ ಆಗಿಬಿಟ್ಟಿದ್ದರು. ಕೃಷ್ಣನಾಥ ಶರ್ಮಾ 10ನೇ ತರಗತಿಯಲ್ಲಿರುವಾಗ ಗಾಂಧೀಜಿಯ ಹತ್ಯೆಯಾಯಿತು. ಆ ಸಮಯದಲ್ಲಿ ಆರ್‌ಎಸ್‌ಎಸ್‌ನ ಸದಾಶಿವ ಗೋಳ್ವಾಲ್ಕರ್ ಅವರ ಬನಾರಸ್ ಭಾಷಣಕ್ಕೆ ಅಡ್ಡಿಪಡಿಸಿದ ಕೃಷ್ಣನಾಥ ಶರ್ಮಾ ಬಂಧನಕ್ಕೆ ಒಳಗಾದರು.

ಶರ್ಮಾ ಅವರ ಅಣ್ಣ ಡಾ.ರಂಗನಾಥ್ 1953ರಲ್ಲಿ `ಸಮಾಜವಾದಿ ಯುವಕ ಸಂಘ'ದ (ನಂತರ ಅದು ಸಮಾಜವಾದಿ ಯುವಜನ ಸಭಾ ಎಂದಾಯಿತು) ಸಂಸ್ಥಾಪಕ ಕಾರ್ಯದರ್ಶಿ. ಅದರಲ್ಲಿ  ಶಾಂತವೇರಿ ಗೋಪಾಲ ಗೌಡ, ಜೆ.ಎಚ್.ಪಟೇಲ್ ಕೂಡ ಇದ್ದರು ಎಂಬುದನ್ನು ಶರ್ಮಾ ನೆನಪಿಸಿಕೊಳ್ಳುತ್ತಾರೆ. `ನನಗಾಗ 19 ವರ್ಷ. ಎಂ.ಎ ವಿದ್ಯಾರ್ಥಿಯಾಗ್ದ್ದಿದಾಗ ನಾನು 1956ರಲ್ಲಿ  ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ನಾಲ್ಕು ಜನ ಹರಿಜನರನ್ನು ದರ್ಶನಕ್ಕೆಂದು ಕರೆದುಕೊಂಡು ಹೋಗಿ ಜೈಲು ವಾಸಿಯಾಗಿದ್ದೆ. 1957ರ ಮೇ 10ರಂದು ಬ್ರಿಟಿಷ್ ಸರ್ಕಾರದ ವಿಗ್ರಹವೊಂದನ್ನು ಸಾರ್ವಜನಿಕ ಸ್ಥಳದಿಂದ ತೆಗೆಯಬೇಕೆಂದೂ ಹಾಗೂ ಆಂಗ್ಲ ಭಾಷೆಯ ಪ್ರಯೋಗವನ್ನು ನಿಲ್ಲಿಸಬೇಕೆಂದೂ ಬನಾರಸ್ ವಿಕ್ಟೋರಿಯಾ ಪಾರ್ಕ್‌ನಲ್ಲಿ ವಿಕ್ಟೋರಿಯಾ ಮೂರ್ತಿಯನ್ನು ನಾನು ಮತ್ತು ನನ್ನ ಸಂಗಡಿಗರು ಧ್ವಂಸ ಮಾಡಿದೆವು. ಇದಕ್ಕೆ 19 ತಿಂಗಳ ಸೆರೆವಾಸ ಅನುಭವಿಸಿದೆ' ಎನ್ನುತ್ತಾರೆ.

1960ರಲ್ಲಿ ಕಿಶನ್ ಪಟ್ನಾಯಕ್ ಸಂಪಾದಿಸುತ್ತಿದ್ದ `ಮ್ಯಾನ್ ಕೈಂಡ್' ಪತ್ರಿಕೆಯ ಮೂಲಕ `ವರ್ಲ್ಡ್ ಸತ್ಯಾಗ್ರಹ' ಎಂಬ ಅಹಿಂಸಾ ರೂಪಿ ಆಂದೋಲನವನ್ನು ಶರ್ಮಾ ಹಮ್ಮಿಕೊಂಡ್ದ್ದಿದರು. ಅದಕ್ಕೆ ಸ್ಪಂದಿಸಿದ ಘಾನ, ನೈಜೀರಿಯ, ಇಥಿಯೋಫಿಯ, ಆಫ್ರಿಕಾ, ಅಮೆರಿಕ ದೇಶದ ಜನನಾಯಕರು ಈ ಆಂದೋಲನದಲ್ಲಿ ಭಾಗವಹಿಸಿದ್ದರು. ನಂತರ ಬನಾರಸ್‌ಗೆ ಮರಳಿ ಬಂದ ಶರ್ಮಾ ಕಾಶಿ ವಿದ್ಯಾಪೀಠದಲ್ಲಿ ಅರ್ಥಶಾಸ್ತ್ರ ಶಿಕ್ಷಕರಾದರು.

`1968ರಲ್ಲಿ ಕಾಶಿ ವಿದ್ಯಾಪೀಠದಲ್ಲಿ ಕಲಿಯಲು ಕರ್ನಾಟಕದಿಂದ ರಾಮಕೃಷ್ಣ ಹೆಗಡೆ, ಗಜಾನನ ಶರ್ಮಾ ಮತ್ತು ಭಟ್ ಜಿ ಬಂದರು. ಆ ಕಾಲದಲ್ಲಿ ರೈಲಿನ ಖರ್ಚನ್ನೂ ಭರಿಸುವ ಶಕ್ತಿ ಇಲ್ಲದ್ದುದರಿಂದ, ರಜೆಯ ಸಮಯದಲ್ಲಿ ಅವರು ಅಲ್ಲೇ ಕೆಲಸ ಮಾಡುತ್ತಿದ್ದರು. ನಂತರ ರಾಮಕೃಷ್ಣ ಹೆಗಡೆಯವರು ಲಖನೌ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಎಂ. ಎ ಮಾಡಿ, ಕಾನೂನು ಅಧ್ಯಯನ ಮಾಡುತ್ತಿರುವಾಗ ಅವರನ್ನು ಭೇಟಿ ಮಾಡಿದ್ದೇನೆ. 1967ರಲ್ಲಿ `ಅಂಗ್ರೇಜಿ ಹಠಾವೋ' ಆಂದೋಲನ ನಡೆಸಿದೆವು. ಅಲ್ಲಿ ಯು.ಆರ್. ಅನಂತಮೂರ್ತಿ, ಪ್ರೊ. ನಂಜುಂಡಸ್ವಾಮಿ, ಸ್ನೇಹಲತಾ ರೆಡ್ಡಿ, ಹಿಂದಿಯ ಪ್ರಸಿದ್ಧ ಕವಿ, ಚಿಂತಕ, ವಿಜಯ್ ದೇವ್ ನಾರಾಯಣ್ ಸಾಹಿ ಮೊದಲಾದವರು ಇದ್ದರು. ನಾಟಕಕಾರ ಪ್ರಸನ್ನ ಒಬ್ಬ ಮಾರ್ಕ್ಸಿಸ್ಟ್ ಆಗಿದ್ದರೂ ಈ ಭಾಷಾ ಆಂದೋಲನಕ್ಕೆ ಬೆಂಬಲ ನೀಡಿದ್ದರು. ಜೊತೆಗೆ ಬಿ.ವಿ.ಕಾರಂತ ಕೂಡ ಇದ್ದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವೆಲ್ಲ ಒಂದಾಗಿದ್ದೆವು. ಇಂದಿರಾ ಗಾಂಧಿಯ ಹವಾ ತುಂಬಾ ಜೋರಾಗಿದ್ದ ಸಮಯವದು. ಅಂದು ನಮ್ಮನ್ನು ಮುನ್ನಡೆಸಿದವರು ಮಧು ದಂಡವತೆ, ರಾಜ್ ನಾರಾಯಣ್. ಕಾಂಗ್ರೆಸ್ ಸರ್ಕಾರ ಮತ್ತು ನೆಹರು- ಗಾಂಧಿ ಪರಿವಾರದ ಅಧಿಪತ್ಯವನ್ನು ಕೊನೆಗೊಳಿಸಲು ಒಕ್ಕೂಟ ಸರ್ಕಾರದ ಅಗತ್ಯವಿದೆ ಮತ್ತು ಅದು ರಾಜ್ಯದಿಂದಲೇ ಶುರುವಾಗಬೇಕು ಎಂಬುದು ನಮ್ಮ ಆಲೋಚನೆಯಾಗಿತ್ತು. ಅದರಂತೆ 1974ರಲ್ಲಿ ಒಕ್ಕೂಟ ಸರ್ಕಾರವು ಉತ್ತರ ಪ್ರದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಿತು. ಮುಂದೆ ನಾನು ಜೆ.ಪಿ. ಆಂದೋಲನದಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದೆ.

1974ರಲ್ಲಿ, ರಾಜ್‌ಘಾಟ್‌ನ ಅಸೆಂಬ್ಲಿ ಹಾಲ್‌ನಲ್ಲಿ ಮೊದಲ ಬಾರಿಗೆ ಜಿದ್ದು ಕೃಷ್ಣಮೂರ್ತಿಯವರ ಭೇಟಿ ಹಾಗೂ ದರ್ಶನ ನನಗಾಯಿತು. ಮುಂದೆ ನನ್ನ ಮತ್ತು ಅವರ ನಡುವಿನ ಸಂಬಂಧ ಜೆ.ಕೆಯವರ ಸಾವಿನವರೆಗೂ ನಡೆಯಿತು. ಜೆ.ಕೆಯವರು ನನ್ನನ್ನು ಕೃಷ್ಣಮೂರ್ತಿ ಫೌಂಡೇಶನ್ ಆಫ್ ಇಂಡಿಯಾದ (ಕೆ.ಎಫ್.ಐ) ಸದಸ್ಯನನ್ನಾಗಿಯೂ ಮಾಡಿದರು. `ಪರಿಸಂವಾದ್' ಎಂಬ ತ್ರೈ ಮಾಸಿಕವನ್ನು ಹುಟ್ಟು ಹಾಕಿ ಅದಕ್ಕೆ ಸಂಪಾದಕನಾಗಿ ಸತತ 25 ವರ್ಷಗಳ ಕಾಲ ಜೆ.ಕೆ. ವಿಚಾರಗಳನ್ನು ಪ್ರಚಾರ ಮಾಡಿದೆ' ಎಂದು ಶರ್ಮಾ ನೆನಪಿನ ಸುರುಳಿ ಬಿಚ್ಚುತ್ತಾರೆ.

`1994ರಲ್ಲಿ ಕಾಶಿ ವಿದ್ಯಾ ಪೀಠದಿಂದ ನಿವೃತ್ತನಾದೆ. ನನ್ನದು, ಮಡದಿ- ಮಕ್ಕಳಿಲ್ಲದ ಒಂಟಿ ಜೀವ. ಬೆಂಗಳೂರು-ದೆಹಲಿ-ಸಾರಾನಾಥ್- ಬನಾರಸ್ ತಿರುಗಾಟ. ಬೆಂಗಳೂರಿಗೆ ಬಂದರೆ ವ್ಯಾಲೀ ಶಾಲೆಯಲ್ಲಿ ವಾಸ. ದೆಹಲಿಯಲ್ಲಿ ನನ್ನ ಅಣ್ಣನ ಮಗ ಪ್ರೊ. ಆನಂದ್ ಕುಮಾರ್ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕನಾಗಿದ್ದಾನೆ, ಅವನ ಜೊತೆ ಉಳಿಯುತ್ತೇನೆ. ಸಾರಾನಾಥ್‌ನಲ್ಲಿ ನನ್ನ ಇನ್ನೊಬ್ಬ ಅಣ್ಣನ ಮಗನ ಆಶ್ರಮವಿದೆ ಅಲ್ಲಿ ಉಳಿದುಕೊಳ್ಳುತ್ತೇನೆ. ಬನಾರಸ್‌ನಲ್ಲಿ ಹೇಗೂ ನನ್ನ ಪೂರ್ವಿಕರ ಮನೆಯಿದೆ, ಅಲ್ಲಿ ಉಳಿದುಕೊಳ್ಳುತ್ತೇನೆ' ಎಂದು ದಿನಚರಿಯನ್ನು ಹೇಳುವ ಶರ್ಮಾ, 1981ರಲ್ಲಿ 80 ದಿನಗಳ ಜಾಗತಿಕ ಪ್ರವಾಸ ಕೈಗೊಂಡು, `ಪೃಥ್ವಿ ಪರಿಕ್ರಮ' ಎಂಬ ಪುಸ್ತಕವನ್ನು ಬರೆದರು. ಲಡಾಖ್ ಮೇ ರಾಗ್ ವಿರಾಗ್, ಕಿನ್ನರ್ ಧರ್ಮ ಲೋಕ್, ಸ್ಪಿತಿ ಮೇ ಬಾರೀಶ್, ಹಿಮಾಲಯ್ ಕೆ ಯಾತ್ರಾ, ನಯೆ ಜೀವನ್ ದರ್ಶನ್ ಕೀ ಸಂಭಾವನಾ'ಅವರ ಕೆಲವು  ಪ್ರಮುಖ ಕೃತಿಗಳು.

                                                           ಕೆಲವು ಚುಟುಕು ಪ್ರಶ್ನೆಗೆ ಚುಟುಕು ಉತ್ತರಗಳು:
ಇಂದಿನ ರಾಜಕೀಯದ ಬಗ್ಗೆ ನಿಮ್ಮ ಅಭಿಪ್ರಾಯ ?
ಸಮಾಜವಾದದ ಕನಸು ನುಚ್ಚು ನೂರಾಗಿದೆ. ನಿತೀಶ್ ಕುಮಾರ್ ಬಗ್ಗೆ  ಕೊಂಚ ಭರವಸೆ ಇದೆ. ಇದೊಂದು `ಪರಿವಾರದ ದೇಶ'. ಪಾರಂಪರ್ಯವನ್ನು ವಿರೋಧಿಸುತ್ತಿದ್ದರೂ, ಉತ್ತರ ಪ್ರದೇಶದಲ್ಲಿ ವಿದ್ಯಾವಂತ ಯುವಕನೊಬ್ಬನಿಗೆ ನಾಯಕನ ಪಟ್ಟ ದೊರಕಿದ್ದು ಸಮಾಧಾನಕರ ವಿಷಯ.

ಕರ್ನಾಟಕದ ರಾಜಕೀಯದಲ್ಲಿ ಸಮಾಜವಾದ, ಸಮಾಜವಾದಿಗಳು ನಿಮ್ಮ ದೃಷ್ಟಿಯಲ್ಲಿ ಇದ್ದಾರೆಯೇ..?
ಪ್ರಸಕ್ತ ರಾಜಕೀಯದಲ್ಲಿ ಸಮಾಜವಾದವಿಲ್ಲ, ರಾಜಕೀಯದಲ್ಲಿ ಹೇಳಿಕೊಳ್ಳುವಂತಹ ಸಮಾಜವಾದಿಗಳೂ ಈಗ ಇಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲವು ಸಮಾಜವಾದಿಗಳಿದ್ದಾರೆ. ಇಲ್ಲಿನ ರಾಜಕೀಯದಲ್ಲಿ ಸಾಕಷ್ಟು ಹೆಸರು ಗಳಿಸಿದ ಸಮಾಜವಾದಿಗಳಿದ್ದರು. ಶಾಂತವೇರಿ ಗೋಪಾಲ ಗೌಡ, ಜೆ,ಎಚ್.ಪಟೇಲ್, ರಾಮಕೃಷ್ಣ ಹೆಗಡೆ, ಜಾರ್ಜ್ ಫರ್ನಾಂಡಿಸ್ ಮುಂತಾದವರು. ಆದರೆ ಕರ್ನಾಟಕದ ಸಮಾಜವಾದವನ್ನು, ಸಮಾಜವಾದಿ ಪಕ್ಷವನ್ನು `ಸಾರಾಯಿ' ಕುಡಿದು ಹಾಕಿತು ಎಂಬುದು ವಿಷಾದದ ವಿಷಯ.

ಮತ್ತೆ ಈ ದೇಶದಲ್ಲಿ ಸಮಾಜವಾದದ ಭವಿಷ್ಯ..?
ಸಮಾಜವಾದವು ಮತ್ತೆ ಫೀನಿಕ್ಸ್‌ನಂತೆ ಎದ್ದು ಬರಲಿದೆ. ಈ ದೇಶದ ಮಣ್ಣಲ್ಲಿ ಮತ್ತೆ ಜನ್ಮ ತಾಳಿ ಬರಲಿದೆ ಮತ್ತು ಬರಲಿ ಎನ್ನುವುದೇ ನನ್ನ ಕನಸು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT