ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೃಷ್ಟ ಯಾವಾಗಲೂ ಶೂರರಿಗೆ ಸೇರಿದ್ದು

Last Updated 16 ಜೂನ್ 2018, 9:19 IST
ಅಕ್ಷರ ಗಾತ್ರ

ಕಾಮನ್‌ವೆಲ್ತ್ ಕ್ರೀಡೆಗಳ ವರದಿಗಾಗಿ ನವದೆಹಲಿಗೆ ಹೋಗಿದ್ದಾಗ ಗೆಳೆಯ ಸಚ್ಚಿ, ಲಾಲಾ ಅಮರನಾಥ್ ಅವರ ಪುಸ್ತಕ ಕೊಟ್ಟರು. ಲಾಲಾ ಅವರ ಪುತ್ರ ರಾಜಿಂದರ್ ಈ ಪುಸ್ತಕ ಬರೆದಿದ್ದಾರೆ. ಭಾರತ ಕ್ರಿಕೆಟ್ ರಂಗ ಕಂಡ ಮೊದಲ ಬಂಡಾಯಗಾರ ಲಾಲಾ ಅಮರನಾಥ್. ಭಾರತ ಪರ ಟೆಸ್ಟ್‌ಗಳಲ್ಲಿ ಮೊಟ್ಟಮೊದಲ ಶತಕ ಹೊಡೆದ ಗೌರವವೂ ಅವರದ್ದೇ ಆಗಿತ್ತು. ನೇರ ನಡೆನುಡಿಯ ಲಾಲಾ ಯಾರಿಗೂ ತಲೆಬಾಗಿದವರಲ್ಲ. ಅದು ಅವರನ್ನು ಸಾಕಷ್ಟು ಸಲ ಇಕ್ಕಟ್ಟಿಗೆ ಸಿಲುಕಿಸಿದ್ದರೂ ಅದಕ್ಕವರು ಅಂಜಿರಲಿಲ್ಲ. ಇಂಗ್ಲೆಂಡ್ ಪ್ರವಾಸದ ಮಧ್ಯದಲ್ಲೇ ಅವರನ್ನು ವಾಪಸ್ಸು ಕಳಿಸಲಾಗಿತ್ತು. ಅವರ ಮಗ ಮೊಹಿಂದರ್ ಕೂಡ ಸ್ವಲ್ಪ ಹಾಗೆಯೇ ಇದ್ದರು. ಭಾರತ 1983ರ ವಿಶ್ವಕಪ್ ಗೆಲ್ಲುವಲ್ಲಿ ಅವರ ಪಾತ್ರವೂ ಮುಖ್ಯವಾಗಿತ್ತು. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳೆರಡರಲ್ಲೂ ಅವರೇ ‘ಪಂದ್ಯ ಪುರುಷೋತ್ತಮ’ನಾಗಿದ್ದರು.

ಭಾರತ ಕ್ರಿಕೆಟ್ ತಂಡದ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರನ್ನು ‘ಜೋಕರುಗಳು’ ಎಂದು ಬಹಿರಂಗವಾಗಿಯೇ ಟೀಕಿಸಿದವರು ಮೊಹಿಂದರ್ ಅಮರನಾಥ್. ಅವರನ್ನು ತಂಡದಿಂದ ತೆಗೆದುಹಾಕಿದಾಗಲೆಲ್ಲ ‘ಫೀನಿಕ್ಸ್’ ಹಕ್ಕಿಯಂತೆ ಮೇಲೆದ್ದು ಬಂದವರು. ಸುನೀಲ್ ಗಾವಸ್ಕರ್ ಕೂಡ ಕ್ರಿಕೆಟ್ ಮಂಡಳಿ ವಿರುದ್ಧ ಕೆಂಡ ಕಾರಿದವರೇ ಆದರೂ ಬಹಳ ಸ್ವಾರ್ಥಿಯಾಗಿದ್ದರು ಎಂಬ ಮಾತು ಕೇಳಿಬರುತ್ತಿತ್ತು.

ಆದರೆ ಇವರೆಲ್ಲರ ಬಂಡಾಯ ಭಾರತ ಕ್ರಿಕೆಟ್‌ನಲ್ಲಿಯ ಹುಳುಕುಗಳನ್ನು ಎತ್ತಿ ತೋರಿಸಿದ್ದಂತೂ ನಿಜ. ಈಗ ಅಂಥ ಬಂಡಾಯವೇ ಇಲ್ಲ. ಎಲ್ಲರೂ ವ್ಯವಸ್ಥೆಗೆ ಹೊಂದಿಕೊಂಡು ಬಿಟ್ಟಿದ್ದಾರೆ. ಮಹೇಂದ್ರ ಸಿಂಗ್ ದೋನಿ ಬದಲು ತಮಗೆ ನಾಯಕಪಟ್ಟ ಕೊಡಬೇಕಿತ್ತು ಎಂದು ಯುವರಾಜ್ ಸಿಂಗ್ ಸಿಡಿಮಿಡಿಗೊಂಡರಾದರೂ ದೊಡ್ಡ ದನಿ ಎತ್ತಲಿಲ್ಲ. ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟವಾಗಿರುವ ಪರಿಸ್ಥಿತಿಯಲ್ಲಿ ಅವರ ಸಿಟ್ಟು, ದುರಹಂಕಾರ ಬಹಳ ಕಡಿಮೆಯಾಗಿದೆ. ವಿಶ್ವ ಕಪ್ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿದ್ದೇ ದೊಡ್ಡದು.

ವಿಶ್ವ ಕಪ್‌ಗಿಂತ ಐಪಿಎಲ್‌ನಲ್ಲಿ ಆಡುವುದೇ ಹೆಚ್ಚು ಲಾಭಕರ ಎಂದು ಕೆಲವು ಆಟಗಾರರು ಭಾವಿಸಿದಂತಿದೆ. ಮಾನ ಹರಾಜಾದರೂ ಜೇಬು ತುಂಬುವುದೇ ಮುಖ್ಯ ಎಂಬುದೇ ಎಲ್ಲ ಕ್ರಿಕೆಟಿಗರ ಮಂತ್ರ. ಕಳೆದ ಮೂರು ದಶಕಗಳಿಂದ ನಾನು ಕಂಡಿರುವ ಸತ್ಯ ಇದು. ಇವರಲ್ಲಿ ಕೆಲವರು ಒಳ್ಳೆಯವರೂ ಸಭ್ಯರೂ ಇದ್ದಾರೆ. ಆದರೆ ಹಣಕಾಸಿನ ವಿಷಯದಲ್ಲಿ ಮಾತ್ರ ಇವರೂ ಬಹಳ ಬಿಗಿಯಾಗಿಯೇ ಇದ್ದಾರೆ. ತಾವು ಬೆಳೆಯಲು ಕಾರಣರಾದ ವ್ಯಕ್ತಿಗಳು ಅಥವಾ ನೂರಾರು ಪುಟಗಳಷ್ಟು ಪ್ರಚಾರ ಕೊಟ್ಟ ಪತ್ರಿಕಾ ಸಂಸ್ಥೆಗಳು ಕರೆದರೂ ಸಭ್ಯರೆನಿಸಿಕೊಂಡ ಆಟಗಾರರೂ ಹಣ ಕೇಳಿರುವ ಉದಾಹರಣೆಯೂ ಇದೆ. ಐಪಿಎಲ್ ಹರಾಜಿನಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಯಾವ ತಂಡವೂ ಖರೀದಿಸಲಿಲ್ಲ. ಇದು ದೊಡ್ಡ ಅವಮಾನ ಎಂದು ಕೋಲ್ಕತ್ತದ ಜನ ಭಾವಿಸುತ್ತಾರೆ. ಉಳಿದವರಂತೆ ತಾವೂ ತಂಡವೊಂದರ ಗುಲಾಮನಾಗಲಿಲ್ಲ ಎಂದು ಸೌರವ್ ಭಾವಿಸುವುದಿಲ್ಲ. ಹಿಂದೆ ನಾಯಕ ನಾಗಿದ್ದಾಗ ತಂಡದಲ್ಲಿ ಮಾಡಿದ ರಾಜಕೀಯ, ನಡೆಸಿದ ಮಹಾರಾಜನ ದರ್ಬಾರು ಮರೆತು ಹೋಗುತ್ತದೆ. ಆಡುವ ದಿನಗಳು ಮುಗಿದರೂ, ಕೊಳೆಯುವಷ್ಟು ಹಣ ಇದ್ದರೂ ಅವರಿಗೆ ಐಪಿಎಲ್‌ನಲ್ಲಿ ತಮ್ಮನ್ನು ಕೋಟಿಗಟ್ಟಲೆ ಹಣ ಸುರಿದು ಕೊಳ್ಳಬೇಕೆಂಬ ದುರಾಸೆ ಎದ್ದು ಕಾಣುತ್ತದೆ.

ರಾಬಿನ್ ಉತ್ತಪ್ಪ ಆಗಲೀ ವಿನಯಕುಮಾರ್ ಆಗಲೀ, ಐಪಿಎಲ್‌ನಲ್ಲಿ ತಮ್ಮ ಬೆಲೆ ಹೆಚ್ಚಿದ್ದಕ್ಕಿಂತ ವಿಶ್ವಕಪ್ ತಂಡದಲ್ಲಿ ಸ್ಥಾನ  ಪಡೆದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುವುದಿಲ್ಲ. ರಾಬಿನ್ ಉತ್ತಪ್ಪ ಅವರಿಗಂತೂ ಭಾರತ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆಯೇ ಇರಲಿಲ್ಲ. ಸಂಭವ ನೀಯ ಪಟ್ಟಿಯಲ್ಲೂ ಅವರಿರಲಿಲ್ಲ. ವಿನಯ ಕುಮಾರ್ ಇದ್ದರು. ಆದರೆ ಜಹೀರ್ ಖಾನ್, ಆಶಿಶ್ ನೆಹ್ರಾ, ಮುನಾಫ್ ಪಟೇಲ್, ಪ್ರವೀಣ ಕುಮಾರ್ ಅವರ ಅನುಭವವನ್ನು ಆಯ್ಕೆಗಾರರು ಪರಿಗಣಿಸಿದ್ದರಿಂದ ವಿನಯ್‌ಗೆ ಸ್ಥಾನ ಸಿಗಲಿಲ್ಲ. ಅವರು 50 ಓವರುಗಳ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಮಗೆ ಸಿಕ್ಕ ಅವಕಾಶಗಳಲ್ಲೂ (ಎರಡು ಪಂದ್ಯಗಳಲ್ಲಿ ಎರಡು ವಿಕೆಟ್) ಅದ್ಭುತ ಎನಿಸುವ ಪ್ರದರ್ಶನವನ್ನೇನೂ ತೋರಿಲ್ಲ. ಅವರಿಗೆ ಇನ್ನೂ ಉತ್ತಮ ಅವಕಾಶಗಳು ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಭಾರತ ತಂಡದಲ್ಲಿ ಅದರಲ್ಲೂ ವಿಶ್ವ ಕಪ್‌ನಲ್ಲಿ ಆಡುವ ತಂಡದಲ್ಲಿ ಸ್ಥಾನ ಪಡೆಯಬೇಕೆಂಬ ಗುರಿ ಈಡೇರಬೇಕಾದರೆ ಅರ್ಹತೆಯೂ ಇರಬೇಕಾಗುತ್ತದೆ.

1996ರ ವಿಶ್ವಕಪ್‌ಗೆ ಮೊದಲು ರಾಹುಲ್ ದ್ರಾವಿಡ್ ‘ಪ್ರಜಾವಾಣಿ’ಗೆ ನೀಡಿದ್ದ ಸಂದರ್ಶನದಲ್ಲಿ, ‘ಈ ಸಲ ತಂಡಕ್ಕೆ ಆಯ್ಕೆಯಾಗುವ ಅರ್ಹತೆ ಯಾವುದೇ ಆಟಗಾರನಿಗಿದ್ದರೆ ಅದು ತಮಗೆ ಮಾತ್ರ’ ಎಂದು ಬಹಳ ವಿಶ್ವಾಸದಿಂದ ಹೇಳಿದ್ದರು. ಆದರೆ ಅವರನ್ನು ಆಯ್ಕೆಗಾರರು ಆರಿಸಿರಲಿಲ್ಲ. ರಾಹುಲ್ ಆಗಿನ್ನೂ ‘ಗೋಡೆ’ ಎಂದು ಕರೆಸಿಕೊಂಡಿರಲಿಲ್ಲ. ಗೋಡೆ ಯಾವಾಗಲೂ ಗಟ್ಟಿಯೇ ಎಂಬುದು ಆಯ್ಕೆಗಾರರಿಗೆ ಅರಿವಾಗಿರಲಿಲ್ಲ. ಈಗ ಅವರಂತೆ ಹೇಳುವ ಒಬ್ಬ ಆಟಗಾರನೂ ಕಾಣುವುದಿಲ್ಲ.

ಈ ವಿಶ್ವಕಪ್‌ಗೆ ಭಾರತ ತಂಡವನ್ನು ಆರಿಸುವಲ್ಲಿ ಆಯ್ಕೆಗಾರರಿಗೆ ಹೆಚ್ಚು ಕಷ್ಟವಾಗಿರಲಿಕ್ಕಿಲ್ಲ. ದೋನಿ ಅವರಲ್ಲಿ ಹಟಮಾರಿ ನಾಯಕನೂ ಕಂಡುಬರುವುದಿಲ್ಲ. ತಲೆಯ ಮೇಲಿನ ಉದ್ದ ಕೂದಲು ಹೋದರೂ ಒಳಗೆ ಶಾಂತ ಹಾಗೂ ಸ್ಥಿರ ಮಿದುಳಂತೂ ಇದೆ. ಕ್ರಿಕೆಟ್‌ನಲ್ಲಿಯ ರಾಜಕೀಯವನ್ನು ಸಂಪೂರ್ಣವಾಗಿ ತೊಡೆಯಲು ಯಾವ ನಾಯಕನಿಗೂ ಸಾಧ್ಯವಿಲ್ಲವಾದರೂ ಅದರ ಪ್ರಭಾವವನ್ನು ಕಡಿಮೆ ಮಾಡುವ ಸಾಮರ್ಥ್ಯ ದೋನಿ ಅವರಿಗೆ ಇರುವಂತಿದೆ. ಅವರ ಕೆಳಗೆ ಯುವ ಆಟಗಾರರು ಉತ್ಸಾಹದಿಂದಲೇ ಆಡುತ್ತಾರೆ. ಇದರಿಂದಾಗಿ ಆಯ್ಕೆಗಾರರು ‘ಜೋಕರುಗಳು’ ಎಂಬ ಆಕ್ರೋಶಕ್ಕೊಳಗಾಗುವ ಸಂದರ್ಭ ಈ ಸಲ ಉದ್ಭವಿಸಿಲ್ಲ. ತಮಿಳುನಾಡಿನ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರ ಆಯ್ಕೆಗೆ ಅಧ್ಯಕ್ಷ ಕೆ. ಶ್ರೀಕಾಂತ್ ಅವರೇ ಕಾರಣ ಎಂದು ನೇರವಾಗಿ ಹೇಳಬಹುದಾದರೂ ಅದು ಅಂಥ ದೊಡ್ಡ ವಿಷಯವಾಗೇನೂ ಬೆಳೆದಿಲ್ಲ. ತಂಡದಲ್ಲಿಯ 13, 14 ಮತ್ತು 15ನೇ ಸ್ಥಾನಗಳು ಯಾವಾಗಲೂ ವಶೀಲಿ ಸ್ಥಾನಗಳೇ ಆಗಿರುತ್ತವೆ.

ಹರಭಜನ್ ಗಾಯಗೊಂಡರೆ ಅಥವಾ ಮೊದಲಿನ ಪಂದ್ಯಗಳಲ್ಲಿ ಸಂಪೂರ್ಣ ವಿಫಲರಾದರೆ ಮಾತ್ರ ಅಶ್ವಿನ್‌ಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುತ್ತದೆ. ಹರಭಜನ್ ಜೊತೆ ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ, ಯುವರಾಜ್ ಸಿಂಗ್, ಯೂಸುಫ್ ಪಠಾಣ್ ಕೂಡ ಆಫ್‌ಸ್ಪಿನ್ ಬೌಲ್ ಮಾಡಬಲ್ಲವರಾದ್ದರಿಂದ ವೈವಿಧ್ಯದ ದೃಷ್ಟಿಯಿಂದ ಲೆಗ್‌ಸ್ಪಿನ್ನರ್ ಪಿಯುಶ್ ಚಾವ್ಲಾ ಅವರನ್ನು ಆರಿಸಿರುವುದು ಸೂಕ್ತವೆನಿಸುತ್ತದೆ. ಒಬ್ಬ ಲೆಗ್ ಸ್ಪಿನ್ನರ್ ದುಬಾರಿಯೂ ಆಗಬಲ್ಲ, ಜೊತೆಗೆ ಪಂದ್ಯದ ಗತಿಯನ್ನು ದಿಢೀರನೆ ಬದಲಿಸುವ ಬೌಲರ್ ಕೂಡ ಆಗಬಲ್ಲ. ಏಳು ಮಂದಿ ಬ್ಯಾಟ್ಸಮನ್ನರು, ಏಳು ಮಂದಿ ಬೌಲರುಗಳು ಮತ್ತು ಒಬ್ಬ ಆಲ್‌ರೌಂಡರ್ ಎಂದು ಆರಿಸಲಾಗಿ ರುವ ತಂಡದಲ್ಲಿ ನಕಾರಾತ್ಮಕ ಅಂಶಗಳು ಹೆಚ್ಚೇನೂ ಕಾಣುವುದಿಲ್ಲ. ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಮಹೇಂದ್ರಸಿಂಗ್ ದೋನಿ, ಹರಭಜನ್ ಸಿಂಗ್, ಜಹೀರ್ ಖಾನ್, ಆಶಿಶ್ ನೆಹ್ರಾ, ಪ್ರವೀಣಕುಮಾರ್ ಅವರೇ ಆಡಲು ಇಳಿಯುವ ಮೊದಲ ಹನ್ನೊಂದು ಮಂದಿ ಆಗುತ್ತಾರೆ. ಆಲ್‌ರೌಂಡರ್ ಯೂಸುಫ್ ಪಠಾಣ್ ಒಳಗೆ ಬರಲು ಒಬ್ಬ ಬ್ಯಾಟ್ಸಮನ್ ಹೊರಗೆ ಹೋಗಬೇಕಾಗುತ್ತದೆ. ಇಬ್ಬರು ಸ್ಪಿನ್ನರುಗಳನ್ನು ಆಡಿಸಬೇಕೆಂದರೂ ಒಬ್ಬ ಬ್ಯಾಟ್ಸಮನ್ ಹೊರಗುಳಿಯಬೇಕಾಗುತ್ತದೆ.

ಅಂತಿಮ ತಂಡದ ಆಯ್ಕೆ ಪಿಚ್ ಮೇಲೆಯೂ ಅವಲಂಬಿತವಾಗಿ ರುತ್ತದೆ. ಲೀಗ್ ಹಂತದ ಆರು ಪಂದ್ಯಗಳಲ್ಲಿ ಪ್ರಯೋಗ ಮಾಡುವ ಅವಕಾಶ ಇರುತ್ತದೆ. ಕ್ವಾರ್ಟರ್‌ಫೈನಲ್‌ನಲ್ಲಿ ಹೋರಾಟದ ಸ್ವರೂಪವೂ ಬದಲಾಗುತ್ತದೆ. ನಾಣ್ಯದಲ್ಲಿ ಅಡಗಿರುವ ಅದೃಷ್ಟದ ಪಾತ್ರ ಇದ್ದರೂ ಪ್ರಯತ್ನವಿಲ್ಲದೇ ಅದೃಷ್ಟವೊಂದನ್ನೇ ನೆಚ್ಚಿಕೊಳ್ಳುವುದು ಮೂರ್ಖತನ. ಅದೃಷ್ಟ ಯಾವಾಗಲೂ ಶೂರರನ್ನೇ ಬೆಂಬಲಿಸುತ್ತದೆ. ದೋನಿ ಪಡೆ ಶೂರರ ಪಡೆಯಾಗಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT