ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಣದಲ್ಲಿ ಕೋಪ; ಸಾಮಾಜಿಕ ತಾಣದಲ್ಲಿ ಸಹತಾಪ

Last Updated 16 ಡಿಸೆಂಬರ್ 2020, 15:13 IST
ಅಕ್ಷರ ಗಾತ್ರ

ಅಂಗಣದಲ್ಲಿ ಸಹ ಆಟಗಾರನ ವಿರುದ್ಧ ರೇಗಿ ಹಲ್ಲೆ ಮಾಡಲು ಮುಂದಾದ ಮುಷ್ಫಿಕುರ್ ರಹೀಮ್ ಅಭಿಮಾನಿಗಳ ‘ಕೋಪ’ಕ್ಕೆ ಮಣಿದು ತಣ್ಣಗಾಗಿದ್ದಾರೆ; ಸಾಮಾಜಿಕ ತಾಣಗಳಲ್ಲಿ ಕ್ಷಮೆ ಯಾಚಿಸಿ ಮತ್ತೊಮ್ಮೆ ‘ವೈರಲ್’ ಆಗಿದ್ದಾರೆ.

ಬಾಂಗ್ಲಾದೇಶದ ದೇಶಿ ಕ್ರಿಕೆಟ್ ಲೀಗ್–ಬಂಗಬಂಧು ಟಿ20 ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಕ್ಯಾಚ್ ತೆಗೆದುಕೊಳ್ಳುವ ವೇಳೆ ಅಡ್ಡ ಬಂದ ನಾಸುಂ ಅಹಮ್ಮದ್ ಅವರ ಮೇಲೆ ಹಲ್ಲೆಗೆ ಮುಷ್ಫಿಕುರ್ ಮುಂದಾಗಿದ್ದರು. ಆ ವಿಡಿಯೊ ವೈರಲ್ ಆಗುತ್ತಿದ್ದಂತೆ ಕ್ರೀಡಾಪ್ರೇಮಿಗಳು ಮತ್ತು ಮುಷ್ಫಿಕುರ್ ಅಭಿಮಾನಿಗಳು ಟೀಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಮಂಗಳವಾರ ಅವರು ಬಹಿರಂಗ ಕ್ಷಮೆ ಕೋರಿದ್ದಾರೆ. ಜಿಮ್‌ನಲ್ಲಿ ಬೆಂಚ್‌ ಮೇಲೆ ನಾಸುಂ ಅವರನ್ನು ಅಪ್ಪಿಕೊಂಡು ಕುಳಿತ ಚಿತ್ರವನ್ನು ಪೋಸ್ಟ್ ಮಾಡಿರುವ ಮುಷ್ಫಿಕುರ್ ‘ಅಂಗಣದಲ್ಲಾಗಲಿ ಅಂಗಣದ ಆಚೆಯಾಗಲಿ ನನ್ನಿಂದ ಇನ್ನು ಮುಂದೆ ಯಾವುದೇ ತಪ್ಪು ಆಗದಂತೆ ನೋಡಿಕೊಳ್ಳುತ್ತೇನೆ’ ಎಂದು ಬರೆದಿದ್ದಾರೆ.

ಢಾಕಾದಲ್ಲಿ ನಡೆದ ಟೂರ್ನಿಯ ಎಲಿಮಿನೇಟರ್ ಹಂತದ ಪಂದ್ಯದಲ್ಲಿ ಬೆಕ್ಸಿಮ್ಕೊ ಢಾಕಾ ಮತ್ತು ಫಾರ್ಚೂನ್ ಬರಿಶಾಲ್ ತಂಡಗಳ ನಡುವೆ ಹಣಾಹಣಿ ನಡೆದಿತ್ತು. ಬೆಕ್ಸಿಮ್ಕೊ ತಂಡದ ನಾಯಕನೂ ಆಗಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಷ್ಫಿಕುರ್ ಪಂದ್ಯದ ಕೊನೆಯ ಓವರ್‌ನಲ್ಲಿ ಅನುಚಿತ ವರ್ತನೆ ತೋರಿದ್ದರು. ಫಾರ್ಚೂನ್ ತಂಡಕ್ಕೆ 19 ಎಸೆತಗಳಲ್ಲಿ 45 ರನ್‌ ಬೇಕಾಗಿದ್ದಾಗ ನಾಸುಂ ಅಹಮ್ಮದ್ ಅವರ ಎಸೆತವನ್ನು ಅಫೀಫ್ ಹೊಸೇನ್ ಅವರು ಫೈನ್‌ ಲೆಗ್ ಕಡೆಗೆ ಹುಕ್ ಮಾಡಿದರು. ಚೆಂಡು ಮೇಲಕ್ಕೆ ಚಿಮ್ಮಿತು. ವಿಕೆಟ್ ಕೀಪರ್ ಮುಫ್ಪಿಕುರ್ ಸುಲಭ ಕ್ಯಾಚ್ ಪಡೆದರು. ಆದರೆ ಕ್ಯಾಚ್‌ಗಾಗಿ ಓಡಿ ಬಂದಿದ್ದ ನಾಸುಂ ಅವರು ಮುಷ್ಫಿಕುರ್‌ಗೆ ಅಡ್ಡಿಪಡಿಸಿದ್ದರು. ಕ್ಯಾಚ್ ಪೂರ್ಣಗೊಳಿಸಿದ ಕೂಡಲೇ ಮುಷ್ಫಿಕುರ್, ನಾಸುಂ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು. ನಾಸುಂ ಒಂದು ಕ್ಷಣ ಗಾಬರಿಗೆ ಒಳಗಾದರೂ ನಂತರ ಸಾವರಿಸಿಕೊಂಡು ನಾಯಕನನ್ನು ಸಮಾಧಾನಪಡಿಸಿ ಮುಂದೆ ಸಾಗಿದರು. ತಕ್ಷಣ ಅಲ್ಲಿಗೆ ಬಂದ ಸಹ ಆಟಗಾರರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

‘ಮುಷ್ಫಿಕುರ್ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು, ಅಂಗಣದಲ್ಲಿ ಹೀಗೆಲ್ಲ ವರ್ತಿಸಬಾರದು’ ಎಂದು ಅಭಿಮಾನಿಗಳು ಬುದ್ದಿ ಹೇಳಿದ್ದರು. ಪಂದ್ಯ ಮುಗಿದ ನಂತರ ಕ್ಷಮೆ ಕೋರಲು ಮುಷ್ಫಿಕುರ್ ಸಿದ್ಧರಿರಲಿಲ್ಲ. ಆದರೆ ಟೀಕೆಗಳ ಮಳೆ ಸುರಿಯಲು ಶುರುವಾಗುತ್ತಿದ್ದಂತೆ ತಣ್ಣಗಾಗಿದ್ದಾರೆ.

‘ಅಂಗಣದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳಲ್ಲಿ ಕ್ಷಮೆ ಕೋರುತ್ತೇನೆ. ಸಹಆಟಗಾರ ನಾಸುಂ ಅಹಮ್ಮದ್ ಅವರಲ್ಲಿ ಪಂದ್ಯ ಮುಕ್ತಾಯಗೊಂಡ ನಂತರ ಕ್ಷಮೆ ಯಾಚಿಸಿದ್ದೆ. ಈ ರೀತಿಯ ವರ್ತನೆಗೆ ದೇವರಲ್ಲೂ ನಾನು ಕ್ಷಮೆ ಕೋರುತ್ತೇನೆ. ಎಲ್ಲರಂತೆ ನಾನೂ ಒಬ್ಬ ಮನುಷ್ಯ. ಸಹಜವಾಗಿ ಆ ಸಂದರ್ಭದಲ್ಲಿ ಕೋಪಿಸಿಕೊಂಡಿದ್ದೆ. ಆದರೆ ಹಾಗೆ ಆಗಬಾರದಿತ್ತು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT