ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಆಟಗಾರರ ಮೇಲೆ ಹದ್ದಿನ ಕಣ್ಣು

ಎಸಿಯು ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಿಸಿಸಿಐ ಸೂಚನೆ
Last Updated 15 ಡಿಸೆಂಬರ್ 2019, 20:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೇಶದ ವಿವಿಧ ಕ್ರಿಕೆಟ್‌ ಟೂರ್ನಿಗಳಲ್ಲಿ ಇತ್ತೀಚಿಗೆ ಮ್ಯಾಚ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿರುವ ಕಾರಣ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು) ಅಧಿಕಾರಿಗಳು ರಣಜಿ ಪಂದ್ಯಗಳ ವೇಳೆಯೂ ಆಟಗಾರರ ಮೇಲೆ ಹದ್ದಿನ ಕಣ್ಣು ಇಡಲಿದ್ದಾರೆ.

ಆದ್ದರಿಂದ ಪ್ರತಿ ರಣಜಿ ಪಂದ್ಯಕ್ಕೆ ನಿಯೋಜನೆಯಾಗುವ ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿಗೆ ಎಸಿಯು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು; ಇದರಲ್ಲಿ ಕಿಂಚಿತ್ತೂ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಬಿಸಿಸಿಐ ಸೂಚಿಸಿದೆ.

‘ಇತ್ತೀಚಿಗೆ ತಮಿಳುನಾಡು ಪ್ರೀಮಿಯರ್‌ ಲೀಗ್‌ (ಟಿಎನ್‌ಪಿಎಲ್‌) ಮತ್ತು ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟೂರ್ನಿಗಳಲ್ಲಿ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ದರಿಂದ ಪ್ರತಿಷ್ಠಿತ ದೇಶಿ ಟೂರ್ನಿಗೂ ಫಿಕ್ಸಿಂಗ್‌ ಕಳಂಕ ಅಂಟಿಕೊಳ್ಳಬಾರದು ಎನ್ನುವ ಕಾರಣಕ್ಕೆ ಆರಂಭದಿಂದಲೇ ಎಚ್ಚರಿಕೆ ವಹಿಸಲಾಗಿದೆ. ಎಸಿಯು ಅಧಿಕಾರಗಳ ಕರ್ತವ್ಯದಲ್ಲಿ ಲೋಪವಾದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೆಸರು ಹೇಳಲು ಬಯಸದ ಬಿಸಿಸಿಐ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಆಟಗಾರ ಪಂದ್ಯದ ವೇಳೆ ಕಡ್ಡಾಯವಾಗಿ ಗುರುತಿನ ದಾಖಲೆಪತ್ರ ಜೊತೆಯಲ್ಲಿಟ್ಟುಕೊಳ್ಳಬೇಕು. ದಿನದಾಟ ಮುಗಿಯುವ ತನಕ ಮೊಬೈಲ್‌ ಬಳಸುವಂತಿಲ್ಲ. ಪಂದ್ಯ ನಡೆಯುವ ವೇಳೆ ಆಟಗಾರರು ಯಾರ ಬಳಿಯೂ ಮಾತನಾಡುವಂತಿಲ್ಲ ಎನ್ನುವ ನಿಯಮಗಳನ್ನು ಅನುಷ್ಠಾನಗೊಳಿಸುವಲ್ಲಿ ಕೊಂಚವೂ ತಪ್ಪಾಗಬಾರದು ಎಂದು ಬಿಸಿಸಿಐ ಎಸಿಯು ಅಧಿಕಾರಿಗಳಿಗೆ ಸೂಚಿಸಿದೆ.

ಹುಬ್ಬಳ್ಳಿಯಲ್ಲಿ ಡಿ. 17ರಿಂದ ನಡೆಯುವ ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಿನ ರಣಜಿ ಪಂದ್ಯಕ್ಕೆ ಎಸಿಯು ಅಧಿಕಾರಿಯಾಗಿರುವ ವಿಜಯಕುಮಾರ್ ಈ ಬಗ್ಗೆ ಮಾತನಾಡಿ ‘ಬಿಸಿಸಿಐ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಪಂದ್ಯ ನಡೆಯುವ ವೇಳೆ ಆಯ್ಕೆ ಸಮಿತಿಯ ಸದಸ್ಯರೂ ಆಟಗಾರರ ಬಳಿ ಇರುವಂತಿಲ್ಲ. ಆಟಗಾರರು ಕೂಡ ಅವರ ಬಳಿ ಮಾತನಾಡುವಂತಿಲ್ಲ’ ಎಂದು ತಿಳಿಸಿದರು.

‘ಕುಟುಂಬದವರು ಹಾಗೂ ಪರಿಚಯದವರು ಆಟಗಾರರನ್ನು ಭೇಟಿಯಾಗಲು ಬಂದರೆ ನಮ್ಮ ಅನುಮತಿ ಕಡ್ಡಾಯ. ಬಂದವರ ಎಲ್ಲ ಮಾಹಿತಿ ಪಡೆದು ಪಾಸ್‌ ನೀಡಿದ ಬಳಿಕವಷ್ಟೇ ಭೇಟಿಗೆ ಅವಕಾಶ ಕೊಡಲಾಗುತ್ತದೆ. ಪಂದ್ಯ ಮುಗಿದ ಬಳಿಕ ನೇರವಾಗಿ ಬಿಸಿಸಿಐಗೆ ವರದಿ ಸಲ್ಲಿಸಲಾಗುತ್ತದೆ’ ಎಂದರು.

ಪ್ರತಿ ರಣಜಿ ಪಂದ್ಯಕ್ಕೆ ಬಿಸಿಸಿಐ ಎಸಿಯು ಅಧಿಕಾರಿಯನ್ನು ನೇಮಿಸುತ್ತದೆ. ಆ ಅಧಿಕಾರಿ ಪಂದ್ಯ ಮುಗಿದ ಬಳಿಕ ನೇರವಾಗಿ ಬಿಸಿಸಿಐಗೆ ವರದಿ ಸಲ್ಲಿಸುತ್ತಾರೆ
-ವಿನಯ್‌ ಮೃತ್ಯುಂಜಯ, ವಕ್ತಾರ ಕೆಎಸ್‌ಸಿಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT