ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಏಕದಿನ ಕ್ರಿಕೆಟ್: ಆರ್ ಅಶ್ವಿನ್

Last Updated 13 ಜುಲೈ 2022, 14:35 IST
ಅಕ್ಷರ ಗಾತ್ರ

ಮುಂಬೈ: ಟ್ವಿಂಟಿ–20ಕ್ರಿಕೆಟ್ ಭರಾಟೆಯಲ್ಲಿ ಏಕದಿನ ಮಾದರಿಯ ಕ್ರಿಕೆಟ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಭಾರತ ತಂಡದ ಆಫ್‌ಸ್ಪಿನ್ನರ್ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ವಾನಿ ಅ್ಯಂಡ್ ಟಫರ್ಸ್ ಕ್ರಿಕೆಟ್ ಕ್ಲಬ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಅವರು, ‘ಏಕದಿನ ಕ್ರಿಕೆಟ್‌ನ ಸೊಬಗೆಂದರೆ ಆಟದ ಏರಿಳಿತಗಳು. ಈ ಮಾದರಿಯಲ್ಲಿ ಬೌಲರ್‌ಗಳಿಗೂ ತಮ್ಮ ಸಾಮರ್ಥ್ಯ ಪಣಕ್ಕೊಡ್ಡುವ ಸೂಕ್ತ ವೇದಿಕೆ ಇರುತ್ತದೆ. ನೋಡುಗರಿಗೂ ಕ್ರಿಕೆಟ್‌ ಆಟವನ್ನು ಕಡಿಮೆ ಅವಧಿಯಲ್ಲಿ ಆಳವಾಗಿ ತಿಳಿದುಕೊಳ್ಳುವಂತಹ ಅವಕಾಶ ಇರುತ್ತದೆ’ ಎಂದರು.

‘ಏಕದಿನ ಮಾದರಿಯ ಕ್ರಿಕೆಟ್ ಈಗ ಟಿ20 ಮಾದರಿಯ ವಿಸ್ತೃತ ರೂಪವಾಗುತ್ತಿದೆ. 50–50 ಆಟದಲ್ಲಿ ಈ ಮುಂಚಿನ ಸೊಬಗು ಕಾಣುತ್ತಿಲ್ಲ. ಪಂದ್ಯದ ಒಂದು ಹಂತದಲ್ಲಿ ಏಕತಾನತೆ ಕಾಡುವುದರಿಂದ ಟಿವಿ ಸ್ವಿಚ್ ಆಫ್ ಮಾಡಿಬಿಡುತ್ತೇವೆ’ ಎಂದಿದ್ಧಾರೆ.

‘ಸದ್ಯದ ಏಕದಿನ ಮಾದರಿಯಲ್ಲಿ ಎರಡು ಹೊಸ ಚೆಂಡುಗಳನ್ನು ಬಳಸಲಾಗುತ್ತಿದೆ. ಆದರೆ, ಮೊದಲಿನಂತೆ ಒಂದೇ ಚೆಂಡು ಬಳಸಿದರೆ ಒಳ್ಳೆಯದು’ ಎಂದು ಸಲಹೆ ನೀಡಿದರು.

ಸ್ವಿಚ್‌ಹಿಟ್‌ಗೂ ಇರಲಿ ಎಲ್‌ಬಿಡಬ್ಲ್ಯು

ಲೆಗ್‌ಸ್ಟಂಪ್‌ ಲೈನ್‌ನಿಂದ ಹೊರಗೆ ನೆಲಸ್ಪರ್ಶ ಮಾಡುವ ಎಸೆತವು ಬ್ಯಾಟರ್ ಸ್ವಿಚ್‌ ಹಿಟ್ ಮಾಡುವ ಪ್ರಯತ್ನದಲ್ಲಿ ವಿಫಲವಾಗಿ ಪ್ಯಾಡ್‌ಗೆ ಅಪ್ಪಳಿಸಿದರೆ ಎಲ್‌ಬಿಡಬ್ಲ್ಯು ನೀಡಬೇಕು ಎಂದು ಅಶ್ವಿನ್ ಹೇಳಿದ್ದಾರೆ.

‘ಬ್ಯಾಟರ್‌ಗಳು ಸ್ವಿಚ್ ಹಿಟ್ ಆಡಲಿ, ರಿವರ್ಸ್ ಸ್ವೀಪ್ ಆಡಲಿ. ಆದರೆ, ಅವರು ತಮ್ಮ ಶೈಲಿಯನ್ನು ಬದಲಿಸಿ ತಿರುಗಲು ಅವಕಾಶವಿದೆ. ಆದರೆ ಬೌಲರ್‌ಗೆ ಎಲ್‌ಬಿಡಬ್ಲ್ಯು ತೀರ್ಪು ಪಡೆಯುವ ಅವಕಾಶ ಏಕಿಲ್ಲ. ಈ ರೀತಿಯ ತಾರತಮ್ಯ ಏಕೆ? ಬ್ಯಾಟರ್ ಮತ್ತು ಬೌಲರ್ ಇಬ್ಬರಿಗೂ ಸಮಾನ ಅವಕಾಶ ನೀಡಬೇಕು’ ಎಂದು ಅಶ್ವಿನ್ ತಮ್ಮ ಯೂಟ್ಯೂಬ್‌ ವಾಹಿನಿಯಲ್ಲಿ ಹೇಳಿದ್ದಾರೆ.

‘ಈಚೆಗೆ ನಡೆದ ಭಾರತ ಮತ್ತು ಇಂಗ್ಲೆಂಡ್‌ ಟೆಸ್ಟ್‌ ಪಂದ್ಯದಲ್ಲಿ ಜೋ ರೂಟ್ ಸುಮಾರು 10 ಬಾರಿ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸಿದರು. ಅದರಲ್ಲಿ ಸುಮಾರು ಒಂಬತ್ತು ಸಲ ಅವರು ಯಶಸ್ವಿಯಾಗಲಿಲ್ಲ. ಆಗ ಚೆಂಡು ಪ್ಯಾಡ್‌ಗೆ ತಗುಲಿತ್ತು’ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT