ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್‌ ದಿಗ್ಗಜ ಶೇನ್ ವಾರ್ನ್ ಹೃದಯಾಘಾತದಿಂದ ನಿಧನ

Last Updated 5 ಮಾರ್ಚ್ 2022, 5:22 IST
ಅಕ್ಷರ ಗಾತ್ರ

ಸಿಡ್ನಿ (ಎಎಫ್‌ಪಿ/ರಾಯಿಟರ್ಸ್): ತಮ್ಮ ಮೊನಚಾದ ಸ್ಪಿನ್ ಎಸೆತಗಳ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಅಚ್ಚರಿ ಮತ್ತು ಆಘಾತ ಮೂಡಿಸುತ್ತಿದ್ದ ಮೋಡಿಗಾರ, ಆಸ್ಟ್ರೇಲಿಯಾದ ಶೇನ್ ವಾರ್ನ್ (52) ಶುಕ್ರವಾರ ರಾತ್ರಿ ನಿಧನರಾದರು.

‘ಆಸ್ಟ್ರೇಲಿಯಾದ ನಿವೃತ್ತ ಲೆಗ್‌ಸ್ಪಿನ್ನರ್ ಶೇನ್ ಕೀತ್ ವಾರ್ನ್ ಥಾಯ್ಲೆಂಡ್‌ನ ಕೋ ಸೆಮೈನಲ್ಲಿ ನಿಧನರಾದರು. ಅವರಿಗೆ ಹೃದಯಾಘಾತವಾಗಿದೆಯೆನ್ನಲಾಗಿದೆ. ತಮ್ಮ ವಿಲ್ಲಾ (ಬಂಗಲೆ)ದಲ್ಲಿ ಅವರಿದ್ದರು. ಶುಕ್ರವಾರ ಸಂಜೆ ಅವರು ನಿಸ್ತೇಜರಾದಾಗ, ವೈದ್ಯಕೀಯ ತಂಡವು ನೀಡಿದ ಚಿಕಿತ್ಸೆಗಳು ಫಲಕಾರಿಯಾಗಲಿಲ್ಲ‘ ಎಂದು ವಾರ್ನ್‌ ಅವರ ಮ್ಯಾನೇಜ್‌ಮೆಂಟ್ ತಂಡವು ತಿಳಿಸಿದೆ.

‘ವಾರ್ನ್ ನಿಧನದ ವಿಷಯದ ಕುರಿತು ಖಾಸಗಿತನ ಕಾಪಾಡಲು ಅವರ ಕುಟುಂಬವು ಮನವಿ ಮಾಡಿದೆ. ಆದ್ದರಿಂದ ಉಳಿದ ವಿಷಯಗಳನ್ನು ನಂತರ ತಿಳಿಸಲಾಗುವುದು’ ಎಂದೂ ಮ್ಯಾನೇಜ್‌ಮೆಂಟ್ ತಿಳಿಸಿದೆ.

ಲೆಗ್‌ಸ್ಪಿನ್ ಮಾಂತ್ರಿಕ
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶೇನ್ ವಾರ್ನ್ 15 ವರ್ಷಗಳ ವಿಜೃಂಭಿಸಿದವರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 708 ವಿಕೆಟ್‌ಗಳನ್ನು ಗಳಿಸಿದ್ದಾರೆ. ಅವರ ಕಾಲಘಟ್ಟದಲ್ಲಿ ವಿಶ್ವದ ಬೇರೆ ಬೇರೆ ಕ್ರಿಕೆಟ್ ತಂಡಗಳಲ್ಲಿ ಹಲವು ದಿಗ್ಗಜ ಬ್ಯಾಟ್ಸ್‌ಮನ್‌ಗಳು ಆಡುತ್ತಿದ್ದರು.

ಅದರಲ್ಲಿ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಇಂಗ್ಲೆಂಡ್‌ನ ಅಲಸ್ಟೆರ್ ಕುಕ್, ದಕ್ಷಿಣ ಆಫ್ರಿಕಾ ಜಾಕಸ್‌ ಕಾಲಿಸ್, ವೆಸ್ಟ್ ಇಂಡೀಸ್‌ನ ಬ್ರಯನ್ ಲಾರಾ, ಶಿವನಾರಾಯಣ ಚಂದ್ರಪಾಲ್, ಶ್ರೀಲಂಕೆಯ ಅರ್ಜುನ ರಣತುಂಗ, ಸನತ್ ಜಯಸೂರ್ಯ, ಅರವಿಂದ ಡಿಸಿಲ್ವಾ ಪ್ರಮುಖರು.

ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ (800) ಮೊದಲ ಸ್ಥಾನದಲ್ಲಿದ್ದರೆ, ವಾರ್ನ್ ಎರಡನೇ ಸ್ಥಾನದಲ್ಲಿದ್ದಾರೆ.

ಶತಮಾನದ ಕ್ರಿಕೆಟಿಗ: ವಿಶ್ವದ ಐವರು ಕ್ರಿಕೆಟಿಗರನ್ನು ಶತಮಾನದ ಶ್ರೇಷ್ಠ ಆಟಗಾರರು ಎಂದು ವಿಸ್ಡನ್ ಈಚೆಗೆ ಗೌರವಿಸಿದ್ದ ಪಟ್ಟಿಯಲ್ಲಿ ವಾರ್ನ್ ಕೂಡ ಇದ್ದರು. ಡೊನಾಲ್ಡ್ ಬ್ರಾಡ್ಮನ್, ಗ್ಯಾರಿಫೀಲ್ಡ್‌ ಸೋಬರ್ಸ್, ಜ್ಯಾಕ್ ಹಾಬ್ಸ್‌ ಮತ್ತು ವಿವ್ ರಿಚರ್ಡ್ಸ್‌ ಅವರೊಂದಿಗೆ ಶೇನ್ ಈ ಗೌರವ ಹಂಚಿಕೊಂಡಿದ್ದರು.

1999ರಲ್ಲಿ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಾಗ ವಾರ್ನ್ ಕಾಣಿಕೆ ಮಹತ್ವದ್ದಾಗಿತ್ತು.

ಉದ್ದೀಪನ ಮದ್ದಿನ ನಂಟು: 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಟೂರ್ನಿ ಸಂದರ್ಭದಲ್ಲಿ ವಾರ್ನ್ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು.ದೇಹತೂಕ ಇಳಿಸಿಕೊಳ್ಳಲು ಡೈರೆಟಿಕ್ಸ್‌ ಸೇವಿಸಿದ್ದು ಸಾಬೀತಾಗಿತ್ತು. ಆದ್ದರಿಂದ ಅವರನ್ನು ಟೂರ್ನಿಯಿಂದ ಹೊರಹಾಕಲಾಯಿತು.

ದುಃಸ್ವಪ್ನವಾಗಿ ಕಾಡಿದ್ದ ಸಚಿನ್!
ಭಾರತದ ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನ್ ಅವರ ಮುಖಾಮುಖಿಯು ಯಾವಾಗಲೂ ರೋಚಕ ರಸದೌತಣವಾಗಿರುತ್ತಿತ್ತು.

ಆ ಕಾಲಘಟ್ಟದ ಇಬ್ಬರು ಶ್ರೇಷ್ಠ ಆಟಗಾರರಾಗಿದ್ದ ಇಬ್ಬರ ಜಿದ್ದಾಜಿದ್ದಿಯ ಹಲವು ಕಥೆಗಳಿವೆ. ಕೆಲವು ಪಂದ್ಯಗಳಲ್ಲಿ ಸಚಿನ್ ವಿಕೆಟ್ ಪಡೆಯವಲ್ಲಿ ವಾರ್ನ್ ಯಶಸ್ವಿಯಾಗಿದ್ದರು. ಆದರೆ, ಅವರ ಸ್ಪಿನ್‌ ತಂತ್ರಗಾರಿಕೆಯನ್ನು ಸಮರ್ಥವಾಗಿ ಅರಿತು ಆಡಿದ್ದ ಸಚಿನ್ ಪಾರಮ್ಯ ಸಾಧಿಸಿದ್ದರು.ಸಚಿನ್ ನನಗೆ ಕನಸಿನಲ್ಲಿ ಬರುತ್ತಾರೆ. ನನ್ನ ಎಸೆತಗಳನ್ನು ಬೌಂಡರಿಗಟ್ಟಿದಂತಾಗುತ್ತದೆಯೆಂದು ವಾರ್ನ್ ಹೇಳಿದ್ದಾಗಿ ಒಮ್ಮೆ ವರದಿಯಾಗಿತ್ತು.ಆದರೆ 2010ರಲ್ಲಿ ‘ಇದು ಸುಳ್ಳು. ನಾನದನ್ನು ತಿಳಿಹಾಸ್ಯವಾಗಿ ಹೇಳಿದ್ದೆ. ಸಚಿನ್ ಶ್ರೇಷ್ಠ ಆಟಗಾರ, ಅವರಿಗೆ ಬೌಲಿಂಗ್ ಮಾಡುವ ಸವಾಲನ್ನು ಆನಂದಿಸಿದ್ದೇನೆ. ಆದರೆ ಅವರೆಂದೂ ನನಗೆ ದುಃಸ್ವಪ್ನವಾಗಿ ಕಾಡಿರಲಿಲ್ಲ’ ಎಂದು ವಾರ್ನ್ ಹೇಳಿದ್ದರು.

ಶತಮಾನದ ಎಸೆತ: 1993ರ ಆ್ಯಷಸ್ ಸರಣಿಯಲ್ಲಿ ಶೇನ್ ವಾರ್ನ್ ಪ್ರಯೋಗಿಸಿದ ಸ್ಪಿನ್‌ಗೆ ಇಂಗ್ಲೆಂಡ್‌ನ ಮೈಕ್‌ ಗ್ಯಾಟಿಂಗ್ ಔಟಾಗಿದ್ದರು. ಅದನ್ನು ‘ಶತಮಾನದ ಎಸೆತ’ ಎಂದು ಗೌರವಿಸಲಾಗಿದೆ.

ಬಲಗೈ ಬ್ಯಾಟ್ಸ್‌ಮನ್ ಗ್ಯಾಟಿಂಗ್‌ ಅವರಿಗೆ ಹಾಕಿದ್ದ ಎಸೆತವು ಲೆಗ್‌ಸ್ಟಂಪ್‌ನಿಂದ ಹೊರಗೆ ನೆಲಸ್ಪರ್ಶ ಮಾಡಿ ಪುಟಿದೆದ್ದು ಅನೂಹ್ಯ ರೀತಿಯಲ್ಲಿ ತಿರುವು ಪಡೆದು ಆಫ್‌ಸ್ಟಂಪ್‌ಗೆ ಅಪ್ಪಳಿಸಿತು. ಆ ಕಾಲದ ಶ್ರೇಷ್ಠ ಬ್ಯಾಟರ್‌ ಗ್ಯಾಟಿಂಗ್ ಅವಾಕ್ಕಾದರು.

ಐಪಿಎಲ್‌ನಲ್ಲಿ ಸಾಧನೆ: ಐಪಿಎಲ್‌ನಲ್ಲಿ 2008ರಿಂದ 2011ರವರೆಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡಿದ್ದರು. ಅವರ ನಾಯಕತ್ವದಲ್ಲಿ ತಂಡವು ಒಂದು ಬಾರಿ ಚಾಂಪಿಯನ್ ಕೂಡ ಆಗಿತ್ತು.ಆಟದಿಂದ ದೂರ ಸರಿದ ನಂತರವೂ ಐಪಿಎಲ್ ತಂಡಗಳಿಗೆ ಮೆಂಟ‌ರ್ ಆಗಿದ್ದರು. ಅಲ್ಲದೇ ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.

ವಾರ್ನ್ ಮೊದಲ ವಿಕೆಟ್ ರವಿಶಾಸ್ತ್ರಿ
ಶೇನ್ ವಾರ್ನ್ ತಾವು ಭಾರತದ ವಿರುದ್ಧ ಪದಾರ್ಪಣೆ ಪಂದ್ಯದಲ್ಲಿ ದುಬಾರಿ ಬೌಲರ್ ಎನಿಸಿದ್ದರು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ 1992ರಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಭಾರತದ ಆರಂಭಿಕ ಬ್ಯಾಟರ್ ರವಿಶಾಸ್ತ್ರಿಯ ದ್ವಿಶತಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಸಚಿನ್ ತೆಂಡೂಲ್ಕರ್ ಶತಕದ ಭರಾಟೆಯಲ್ಲಿ ವಾರ್ನ್ ಬಸವಳಿದಿದ್ದರು. 150 ರನ್‌ಗಳಿಗೆ ಒಂದು ವಿಕೆಟ್ ಗಳಿಸಿದ್ದರು. ಅವರ ಟೆಸ್ಟ್ ಜೀವನದ ಮೊದಲ ವಿಕೆಟ್ ರವಿಶಾಸ್ತ್ರಿಯಾಗಿದ್ದರು.

ರಾಡ್ನಿ ಮಾರ್ಷ್‌ಗೆ ವಾರ್ನ್ ಸಂತಾಪ
ಶುಕ್ರವಾರ ಬೆಳಗಿನ ಜಾವ ನಿಧನರಾದ ಆಸ್ಟ್ರೇಲಿಯಾದ ರಾಡ್ನಿ ಮಾರ್ಷ್‌ ಅವರ ನಿಧನಕ್ಕೆ ಶೇನ್ ವಾರ್ನ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ನನ್ನ ಗೆಳೆಯ ಮಾರ್ಷ್‌ ಮತ್ತು ಕ್ರಿಕೆಟ್ ಜಗತ್ತಿನ ದಿಗ್ಗಜ ವಿಕೆಟ್‌ಕೀಪರ್ ಮಾರ್ಷ್‌ ಅವರನ್ನು ಕಳೆದುಕೊಂಡಿದ್ದೇವೆ. ಹೋಗಿ ಬಾ ಗೆಳೆಯ ಎಂದು ವಾರ್ನ್ ಟ್ವೀಟ್ ಮಾಡಿದ್ದರು. ಆದರೆ ರಾತ್ರಿಯಷ್ಟೊತ್ತಿಗೆ ವಾರ್ನ್ ನಿಧನದ ಸುದ್ದಿ ಕ್ರಿಕೆಟ್‌ ಲೋಕಕ್ಕೆ ಬಂದೆರಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT