ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ | ಆಸ್ಟ್ರೇಲಿಯಾಗೆ ಶರಣಾದ ಪಾಕ್‌: 500 ವಿಕೆಟ್ ಮೈಲಿಗಲ್ಲು ಸಾಧಿಸಿದ ಲಯನ್

Published 17 ಡಿಸೆಂಬರ್ 2023, 15:52 IST
Last Updated 17 ಡಿಸೆಂಬರ್ 2023, 15:52 IST
ಅಕ್ಷರ ಗಾತ್ರ

ಪರ್ತ್: ಆತಿಥೇಯ ಆಸ್ಟ್ರೇಲಿಯಾ ತಂಡವು ಇಲ್ಲಿ ನಡೆದ ಪಾಕಿಸ್ತಾನ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಸ್ಪಿನ್ನರ್ ನೇಥನ್ ಲಯನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಗಳಿಸಿದ ಆಟಗಾರರ ಸಾಲಿಗೆ ಸೇರಿದರು.

450 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ ತಂಡವು ನಾಲ್ಕನೇ ದಿನದಾಟದಲ್ಲಿ 30.2 ಓವರ್‌ಗಳಲ್ಲಿ 89 ರನ್‌ ಗಳಿಸಿ ಆಲೌಟ್ ಆಯಿತು. 360 ರನ್‌ಗಳ ಭರ್ಜರಿ ಜಯ ಸಾಧಿಸಿತು. ಪ್ರವಾಸಿ ಪಾಕ್ ತಂಡವು ಆಸ್ಟ್ರೇಲಿಯಾ ನೆಲದಲ್ಲಿ ಸತತ 15ನೇ ಸೋಲು ಅನುಭವಿಸಿತು.

ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್, ಜೋಶ್‌ ಹ್ಯಾಜಲ್‌ವುಡ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ಅವರ ವೇಗದ ದಾಳಿಗೆ ಪಾಕಿಸ್ತಾನದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕುಸಿದರು.  ಹ್ಯಾಜಲ್‌ವುಡ್‌ ಮತ್ತು ಸ್ಟಾರ್ಕ್‌ ಜೋಡಿ ಆರು ವಿಕೆಟ್‌ ಪಡೆದರೆ, ಕಮಿನ್ಸ್, ಪಾಕ್‌ ಮಾಜಿ ನಾಯಕ ಬಾಬರ್ ಅಜಮ್‌ (14) ಅವರ ವಿಕೆಟ್‌ ಕಬಳಿಸಿದರು. 

ಫಹೀಮ್ ಅಶ್ರಫ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದ ಲಯನ್ 500 ವಿಕೆಟ್‌ಗಳ ಮೈಲಿಗಲ್ಲು ತಲುಪಿದರು.  ಗ್ಲೆನ್ ಮೆಕ್‌ಗ್ರಾ ಮತ್ತು  ದಿವಂಗತ ಶೇನ್ ವಾರ್ನ್ ಅವರ ನಂತರ ಈ ಸಾಧನೆ ಮಾಡಿದ ಆಸ್ಟ್ರೇಲಿಯಾ ಆಟಗಾರನೆಂಬ ಶ್ರೇಯ ಅವರದ್ದಾಯಿತು. ಒಟ್ಟಾರೆ ಈ ಸಾಧನೆ ಮಾಡಿದ ಎಂಟನೇ ಬೌಲರ್ ಆಗಿದ್ಧಾರೆ. ಲಯನ್ ಅದೇ ಓವರ್‌ನಲ್ಲಿ ಆಮಿರ್ ಜಮಾಲ್ ಅವರನ್ನೂ ಕ್ಲೀನ್ ಬೌಲ್ಡ್‌ ಮಾಡಿದರು.  

ಮೊದಲ 7 ಓವರ್‌ಗಳಲ್ಲಿ ಪಾಕಿಸ್ತಾನ 3 ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿತ್ತು. ಆರಂಭಿಕ ಬ್ಯಾಟರ್‌ ಅಬ್ದುಲ್ಲಾ ಶಫೀಕ್ ಮೊದಲ ಓವರ್‌ನಲ್ಲಿ ಸ್ಟಾರ್ಕ್ ಎಸೆತಕ್ಕೆ ಔಟಾದರು. ಎಡಗೈ ವೇಗಿ ಸ್ಟಾರ್ಕ್ ತಮ್ಮ ತವರಿನಲ್ಲಿ  200ನೇ ವಿಕೆಟ್ ಪಡೆದರು.

ಮೂರು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ ಮೆಲ್ಬೋರ್ನ್‌ನಲ್ಲಿ ಬಾಕ್ಸಿಂಗ್‌ ಡೇ (ಡಿ. 26) ದಿನದಂದು ಆರಂಭವಾಗಲಿದೆ. ಮೂರನೇ ಟೆಸ್ಟ್‌  ಜನವರಿ 3ರಿಂದ 7ರವರೆಗೆ ಸಿಡ್ನಿಯಲ್ಲಿ ನಡೆಯಲಿದೆ. 

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 487, ಪಾಕಿಸ್ತಾನ: 101.5 ಓವರ್‌ಗಳಲ್ಲಿ 271 (ಇಮಾಮ್‌ ಉಲ್ ಹಕ್ 62, ಸೌದ್‌ ಶಕೀಲ್‌ 28, ಆಘಾ ಸಲ್ಮಾನ್ ಔಟಾಗದೇ 28: ಪ್ಯಾಟ್ ಕಮಿನ್ಸ್‌ 35ಕ್ಕೆ 2, ನೇಥನ್‌ ಲಯನ್‌ 66ಕ್ಕೆ3): ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ 63.2 ಓವರ್‌ಗಳಲ್ಲಿ 233ಕ್ಕೆ5 ಡಿಕ್ಲೆರ್ಡ್ (ಖ್ವಾಜಾ 90, ಮಾರ್ಷ್‌ ಔಟಾಗದೇ 63: ಖುರ್‍ರಂ ಶೆಹಜಾದ್ 45ಕ್ಕೆ 3): ಪಾಕಿಸ್ತಾನ 30.2 ಓವರ್‌ಗಳಲ್ಲಿ 89 (ಸೌದ್ ಶಕೀಲ್ 24, ಬಾಬರ್ ಅಜಂ 14, ಮಿಚೆಲ್ ಸ್ಟಾರ್ಕ್ 31ಕ್ಕೆ3, ಜೋಶ್‌ ಹ್ಯಾಜಲ್‌ವುಡ್ 13ಕ್ಕೆ3, ನೇಥನ್ ಲಯನ್ 14ಕ್ಕೆ 2)

ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 360 ರನ್‌ಗಳ ಜಯ ಹಾಗೂ ಸರಣಿಯಲ್ಲಿ  1–0 ಮುನ್ನಡೆ. ಪಂದ್ಯಶ್ರೇಷ್ಠ: ಮಿಚೆಲ್ ಮಾರ್ಷ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT