ಶುಕ್ರವಾರ, ಡಿಸೆಂಬರ್ 3, 2021
20 °C
ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ಗೆ ಮಣಿದ ಮಹಮ್ಮದುಲ್ಲಾ ಬಳಗ; ಒಮನ್ ಎದುರಾಳಿ

ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್: ಬಾಂಗ್ಲಾದೇಶಕ್ಕೆ ಗೆಲುವು ಅನಿವಾರ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಲ್‌ ಅಮೆರತ್, ಒಮನ್: ಮೊದಲ ಪಂದ್ಯದಲ್ಲೇ ಸೋಲಿನ ಆಘಾತ ಕಂಡಿರುವ ಬಾಂಗ್ಲಾದೇಶ ತಂಡ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಗುಂಪು ಹಂತದ ನಿರ್ಣಾಯಕ ಪಂದ್ಯದಲ್ಲಿ ಮಂಗಳವಾರ ಒಮನ್‌ ವಿರುದ್ಧ ಸೆಣಸಲಿದೆ. 

ಸ್ಕಾಟ್ಲೆಂಡ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬಾಂಗ್ಲಾದೇಶ ಆರು ರನ್‌ಗಳಿಂದ ಸೋತಿತ್ತು. ಒಮನ್ ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿ ಭರವಸೆಯಲ್ಲಿದೆ. ಸೂಪರ್ 12 ಹಂತದ ಕನಸು ಜೀವಂತವಾಗಿ ಉಳಿಯಬೇಕಾದರೆ ಬಾಂಗ್ಲಾದೇಶಕ್ಕೆ ಮಂಗಳವಾರ ಜಯ ಅನಿವಾರ್ಯವಾಗಿದೆ.

ತವರಿನಲ್ಲಿ ನಡೆದ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾವನ್ನು ಮಣಿಸಿರುವ ಬಾಂಗ್ಲಾದೇಶ ವಿಶ್ವ ಟ್ವೆಂಟಿ–20 ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೂ ಉತ್ಸಾಹಿ ಸ್ಕಾಟ್ಲೆಂಡ್‌ ಎದುರು ನಿರೀಕ್ಷಿತ ಸಾಮರ್ಥ್ಯ ತೋರಲು ತಂಡಕ್ಕೆ ಸಾಧ್ಯವಾಗಿರಲಿಲ್ಲ. ಈಗ, ಭರವಸೆಯ ಅಲೆಯಲ್ಲಿ ತೇಲುತ್ತಿರುವ ಒಮನ್‌ ವಿರುದ್ಧ ಯಾವ ರಣತಂತ್ರಗಳನ್ನು ಹೆಣೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ.  

ಬೌಲಿಂಗ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಬಾಂಗ್ಲಾ ಬಳಗ ಸ್ಕಾಟ್ಲೆಂಡ್ ತಂಡವನ್ನು 140 ರನ್‌ಗಳಿಗೆ ನಿಯಂತ್ರಿಸಿತ್ತು. ಆದರೆ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವೈಫಲ್ಯ ಕಂಡಿತ್ತು. ಇದನ್ನು ಪಂದ್ಯದ ನಂತರ ನಾಯಕ ಮಹಮ್ಮದುಲ್ಲ ಕೂಡ ಒಪ್ಪಿಕೊಂಡಿದ್ದರು. ಬ್ಯಾಟಿಂಗ್ ವೈಫಲ್ಯಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದರು. 

ಇಲ್ಲಿನ ಪಿಚ್‌ ನಿಧಾನಗತಿಯದ್ದಾಗಿದ್ದು ಭರ್ಜರಿ ಹೊಡೆತಗಳಿಗೆ ನೆರವು ಸಿಗುವುದಿಲ್ಲ. ಆದ್ದರಿಂದ ಬ್ಯಾಟರ್‌ಗಳು ಜಾಗರೂಕತೆಯಿಂದ ಆಡಬೇಕಾಗಿದೆ. ಆರಂಭಿಕ ಜೋಡಿ ಲಿಟನ್ ದಾಸ್ ಮತ್ತು ಸೌಮ್ಯ ಸರ್ಕಾರ್ ಹೆಗಲ ಮೇಲೆ ಭಾರಿ ಹೊರೆ ಇದೆ. ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಲಯ ಕಂಡುಕೊಳ್ಳಬೇಕಾಗಿದೆ.

‍‍‍ಪಪುವ ನ್ಯೂಗಿನಿ ತಂಡವನ್ನು ಮಣಿಸಿರುವ ಒಮನ್‌ಗೆ ನಾಯಕ, ಎಡಗೈ ಸ್ಪಿನ್ನರ್ ಜೀಶನ್ ಮಖ್ಸೂದ್, ಆರಂಭಿಕ ಬ್ಯಾಟರ್ ಭಾರತ ಮೂಲದ ಜತಿಂದರ್ ಸಿಂಗ್‌, ಆಖಿಬ್ ಇಲಿಯಾಸ್ ಮತ್ತಿತರರ ಬಲವಿದೆ.

ತಂಡಗಳು: ಬಾಂಗ್ಲಾದೇಶ: ಮಹಮ್ಮದುಲ್ಲ (ನಾಯಕ), ಲಿಟನ್ ದಾಸ್‌, ಮೊಹಮ್ಮದ್ ನಯೀಮ್, ಮೆಹದಿ ಹಸನ್‌, ಶಕೀಬ್ ಅಲ್ ಹಸನ್, ಸೌಮ್ಯ ಸರ್ಕಾರ್‌, ಮುಷ್ಫಿಕುರ್ ರಹೀಮ್, ನೂರುಲ್ ಹಸನ್ (ವಿಕೆಟ್ ಕೀಪರ್‌), ಅಫೀಫ್‌ ಹೊಸೇನ್‌, ನಸುಮ್ ಅಹಮ್ಮದ್‌, ತಸ್ಕಿನ್ ಅಹಮ್ಮದ್, ಶಮೀಮ್ ಹೊಸೇನ್‌, ಮುಸ್ತಫಿಜುರ್‌ ರಹಮಾನ್‌, ಮೊಹಮ್ಮದ್ ಸೈಫುದ್ದೀನ್‌.

ಒಮನ್‌: ಜೀಶನ್ ಮಖ್ಸೂದ್‌ (ನಾಯಕ), ಆಖಿಬ್ ಇಲಿಯಾಸ್‌, ಜತಿಂದರ್ ಸಿಂಗ್‌, ಖವರ್ ಅಲಿ, ಮೊಹಮ್ಮದ್ ನದೀಮ್‌, ಅಯಾನ್ ಖಾನ್‌, ಸೂರಜ್ ಕುಮಾರ್‌, ಸಂದೀಪ್ ಗೌಡ್, ನೆಸ್ಟರ್‌ ಧಂಬ, ಖಲೀಮುಲ್ಲ, ಬಿಲಾಲ್ ಖಾನ್‌, ನಾಸಿಂ ಖುಷಿ, ಸೂಫಿಯಾನ್ ಮೆಹಮೂದ್‌, ಫಯಾಜ್ ಬಟ್‌, ಖುರಂ ನವಾಜ್ ಖಾನ್.

ಆರಂಭ: ರಾತ್ರಿ 7.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ಪಪುವ ನ್ಯೂಗಿನಿ–ಸ್ಕಾಟ್ಲೆಂಡ್ ಮುಖಾಮುಖಿ

ಅಲ್ ಅಮೆರತ್‌ (ಪಿಟಿಐ): ಮೊದಲ ಪಂದ್ಯದಲ್ಲಿ ಜಯ ಗಳಿಸಿರುವ ಸ್ಕಾಟ್ಲೆಂಡ್ ಮತ್ತು ಒಮನ್‌ಗೆ ಮಣಿದಿರುವ ಪಪುವ ನ್ಯೂಗಿನಿ ತಂಡಗಳು ಮಂಗಳವಾರ ಮುಖಾಮುಖಿಯಾಗಲಿವೆ.

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೂ ಬೌಲಿಂಗ್‌ನಲ್ಲೂ ಅಮೋಘ ಸಾಮರ್ಥ್ಯ ತೋರಿದ ಸ್ಕಾಟ್ಲೆಂಡ್‌ಗೆ ಫೀಲ್ಡರ್‌ಗಳು ಕೂಡ ಅತ್ಯುತ್ತಮ ಸಹಕಾರ ನೀಡಿದ್ದರು. ಆರು ವಿಕೆಟ್‌ಗಳಿಗೆ 53 ರನ್ ಗಳಿಸಿ ಸಂಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಕ್ರಿಸ್ ಗ್ರೀವ್ಸ್‌ 28 ಎಸೆತಗಳಲ್ಲಿ 45 ರನ್ ಗಳಿಸಿ ಮಿಂಚಿದ್ದರು. ಮಂಗಳವಾರ ಪಂದ್ಯದಲ್ಲೂ ಅವರ ಮೇಲೆ ತಂಡ ನಿರೀಕ್ಷೆ ಇರಿಸಿಕೊಂಡಿದೆ. ಆದರೆ ಬ್ಯಾಟಿಂಗ್‌ನಲ್ಲಿ ಆರಂಭದಲ್ಲಿ ಅನುಭವಿಸಿದ ವೈಫಲ್ಯಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿದೆ. 

ಮಂಗಳವಾರದ ಪಂದ್ಯದಲ್ಲೂ ಜಯ ಗಳಿಸಿದರೆ ಸ್ಕಾಟ್ಲೆಂಡ್ ತಂಡದ ಸೂಪರ್‌ 12 ಹಂತದ ಹಾದಿ ಸುಗಮ ಆಗಲಿದೆ. ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸತತ 12 ಪಂದ್ಯಗಳಲ್ಲಿ ಸೋತಿರುವ ಪಪುವ ನ್ಯೂಗಿನಿ ಗೆಲುವಿನ ಲಯಕ್ಕೆ ಮರಳುವ ಪ್ರಯತ್ನದಲ್ಲಿದೆ. ಸೂಪರ್‌ 12 ಹಂತಕ್ಕೇರಲು ಸ್ಕಾಟ್ಲೆಂಡ್ ಎದುರು ಉತ್ತಮ ರನ್‌ರೇಟ್‌ನಿಂದ ಗೆಲ್ಲುವ ಒತ್ತಡವೂ ಪಪುವ ನ್ಯೂಗಿನಿ ಮೇಲೆ ಇದೆ. 

ತಂಡಗಳು: ಸ್ಕಾಟ್ಲೆಂಡ್‌: ಕೈಲ್ ಕೊಯಿಟ್ಜರ್‌ (ನಾಯಕ), ರಿಚರ್ಡ್ ಬೆರಿಂಗ್ಟನ್‌, ಡೈಲನ್ ಬಜ್‌, ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್‌), ಜೋಶ್ ಡಾವಿ, ಅಲಿ ಇವಾನ್ಸ್‌, ಕ್ರಿಸ್ ಗ್ರೀವ್ಸ್‌, ಮೈಕೆಲ್ ಲೀಸ್ಕ್‌, ಕಲಂ ಮೆಕ್ಲೀಡ್‌, ಜಾರ್ಜ್‌ ಮುನ್ಸಿ, ಸಫ್ಯಾನ್ ಶರೀಫ್‌, ಹಂಝ ತಾಹಿರ್‌, ಕ್ರೆಗ್ ವೆಲೇಸ್‌, ಮಾರ್ಕ್ ವ್ಯಾಟ್, ಬ್ರಾಡ್ ವ್ಹೀಲ್‌.

ಪಪುವ ನ್ಯೂಗಿನಿ: ಅಸಾದ್ ವಲ (ನಾಯಕ), ಚಾರ್ಲ್ಸ್‌ ಅಮಿನಿ, ಲೀಗಾ ಸಿಯಾಕ, ನಾರ್ಮನ್ ವನುವಾ, ನೊಸೇನ ಪೊಕಾನ, ಕಿಪ್ಲಿಂಗ್ ಡೊರಿಗ, ಟೋನಿ ಉರ, ಹಿರಿ ಹಿರಿ, ಗುವಾಡಿ ಟೋಕ, ಸೆಸೆ ಬವು, ಡ್ಯಾಮಿಯನ್ ರವು, ಕಬುವ ವಗಿ ಮೊರಿಯ, ಸಿಮೋನ್ ಅತಾಯಿ, ಜೇಸನ್ ಕಿಲ, ಚಡ್ ಸಾಪರ್‌, ಜಾಕ್ ಗಾರ್ಡನರ್‌.

ಪಂದ್ಯ ಆರಂಭ: ಸಂಜೆ 3.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು