ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಇಂಡಿಯಾ, ತನ್ನ ಒಪ್ಪಂದದ ಮೊತ್ತದಲ್ಲಿ ₹ 130 ಕೋಟಿ ರಿಯಾಯಿತಿ ನೀಡಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಕೋರಿದೆ.
ಸೋಮವಾರ ವರ್ಚುವಲ್ ವೇದಿಕೆಯಲ್ಲಿ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ತುರ್ತು ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.
ಸ್ಟಾರ್ ಇಂಡಿಯಾ 2018 ರಿಂದ 2023ರ ಅವಧಿಗೆ ಭಾರತದಲ್ಲಿ ನಡೆಯುವ ಪಂದ್ಯಗಳ ಪ್ರಸಾರದ ಹಕ್ಕು ತನ್ನದಾಗಿಸಿಕೊಂಡಿತ್ತು. ಇದಕ್ಕಾಗಿ ಮಂಡಳಿಗೆ ₹ 6,138 ಕೋಟಿ ನೀಡಿತ್ತು.
ಆದರೆ ಕೋವಿಡ್ ಕಾರಣ ಕೆಲವೊಂದು ಪಂದ್ಯಗಳು ನಡೆದಿರಲಿಲ್ಲ. ಆದ್ದರಿಂದ ಒಪ್ಪಂದದ ಮೊತ್ತದಲ್ಲಿ ಅಲ್ಪ ರಿಯಾಯಿತಿ ನೀಡಬೇಕು ಎಂದು ಕೇಳಿಕೊಂಡಿದೆ.
‘ಈ ವಿಷಯದ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಆದರೆ ಸ್ಟಾರ್ ಇಂಡಿಯಾ ಕೋರಿಕೆಯನ್ನು ತಿರಸ್ಕರಿಸುವ ಅಥವಾ ಒಪ್ಪಿಕೊಳ್ಳುವ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ’ ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ರಿಯಾಯಿತಿ ಕೋರಿಲ್ಲ: ‘ನಾವು ಬಿಸಿಸಿಐನಲ್ಲಿ ಯಾವುದೇ ರಿಯಾಯಿತಿ ಕೋರಿಲ್ಲ. ಒಪ್ಪಂದದ ಪ್ರಕಾರ ಶುಲ್ಕ ಪಡೆದುಕೊಳ್ಳುವಂತೆ ಕೇಳಿದ್ದೇವೆ. 2020ರಲ್ಲಿ ನಡೆಯಬೇಕಿದ್ದ ಕೆಲವು ಪಂದ್ಯಗಳು ಕೋವಿಡ್ ಕಾರಣ ಮುಂದೂಡಲ್ಪಟ್ಟು 2022 ರಲ್ಲಿ ನಡೆದಿದೆ. ಆ ಪಂದ್ಯಗಳಿಗೆ 2020ರಲ್ಲಿದ್ದ ಶುಲ್ಕ ವಿಧಿಸಬೇಕೇ ಹೊರತು 2022ರ ಶುಲ್ಕ ವಿಧಿಸಬಾರದು ಎಂದಿದ್ದೇವೆ. ರಿಯಾಯಿತಿಯ ಪ್ರಶ್ನೆಯೇ ಬಂದಿಲ್ಲ’ ಎಂದು ಸ್ಟಾರ್ ಇಂಡಿಯಾದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಬ್ಯಾಂಕ್ ಖಾತರಿ ಮೊತ್ತ ನಗದೀಕರಿಸಲು ಬೈಜುಸ್ ಕೋರಿಕೆ: ಭಾರತ ಕ್ರಿಕೆಟ್ ತಂಡದ ಪ್ರಾಯೋಕಜತ್ವದಿಂದ ಹೊರನಡೆಯಲು ಬಯಸಿರುವ ಬೈಜುಸ್, ಬ್ಯಾಂಕ್ ಖಾತರಿಯಾಗಿ ಇಟ್ಟಿರುವ ₹140 ಕೋಟಿ ಮೊತ್ತವನ್ನು ನಗದೀಕರಿಸುವಂತೆ ಬಿಸಿಸಿಐನಲ್ಲಿ ಕೇಳಿದೆ.
ಪೋಷಾಕು ಪ್ರಾಯೋಜತ್ವದಿಂದ ದೂರ ಸರಿಯುತ್ತಿರುವುದಾಗಿ ಬೈಜುಸ್, ಕಳೆದ ನವೆಂಬರ್‌ನಲ್ಲಿ ಬಿಸಿಸಿಐಗೆ ಹೇಳಿತ್ತು. ಆದರೆ 2023ರ ಮಾರ್ಚ್‌ವರೆಗೆ ಮುಂದುವರಿಯುವಂತೆ ಮಂಡಳಿಯು ಕೇಳಿಕೊಂಡಿತ್ತು.
ಒಪ್ಪಂದದಂತೆ ಬೈಜುಸ್, ₹ 140 ಕೋಟಿಯನ್ನು ಬ್ಯಾಂಕ್ ಖಾತರಿಯಾಗಿ ಇಟ್ಟಿತ್ತು. ಇನ್ನುಳಿದ ಸುಮಾರು ₹ 160 ಕೋಟಿ ಹಣವನ್ನು ಕಂತಿನಲ್ಲಿ ಪಾವತಿಸಬೇಕಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.