ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ನಲ್ಲಿ ರಣಜಿ ಟ್ರೋಫಿ ಟೂರ್ನಿ

ದೇಶಿ ಕ್ರಿಕೆಟ್‌ ಸೆಪ್ಟೆಂಬರ್‌ನಲ್ಲಿ ಆರಂಭ; ಮಹಿಳಾ ಟೂರ್ನಿಗಳಿಗೂ ಹಸಿರು ನಿಶಾನೆ
Last Updated 17 ಏಪ್ರಿಲ್ 2021, 13:50 IST
ಅಕ್ಷರ ಗಾತ್ರ

ನವದೆಹಲಿ: ದೇಶಿ ಕ್ರಿಕೆಟ್ ಟೂರ್ನಿಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ಆರಂಭಿಸಲು ನಿರ್ಧರಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಡಿಸೆಂಬರ್‌ನಲ್ಲಿ ರಣಜಿ ಟ್ರೋಫಿ ಟೂರ್ನಿಯನ್ನು ಆಯೋಜಿಸಲು ತೀರ್ಮಾನಿಸಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯೊಂದಿಗೆ ದೇಶಿ ಕ್ರಿಕೆಟ್‌ಗೆ ಚಾಲನೆ ಸಿಗಲಿದೆ.

ಕೋವಿಡ್‌–19ರಿಂದಾಗಿ ಕಳೆದ ವರ್ಷ ರಣಜಿ ಟ್ರೋಫಿ ಟೂರ್ನಿಯನ್ನು ರದ್ದು ಮಾಡಲಾಗಿತ್ತು. ಈ ವರ್ಷ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ ಮತ್ತು ಇರಾನಿ ಕಪ್ ಟೂರ್ನಿಗಳನ್ನು ಕೈಬಿಡಲು ನಿರ್ಧರಿಸಲಾಗಿದೆ. ಮಹಿಳೆಯರ ಐದು ಟೂರ್ನಿಗಳನ್ನು ಕೂಡ ನಡೆಸದೇ ಇರಲು ನಿರ್ಧರಿಸಲಾಗಿದೆ.

ಶುಕ್ರವಾರ ವರ್ಚುವಲ್ ಆಗಿ ನಡೆದ ಅಪೆಕ್ಸ್ ಸಮಿತಿಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. 23 ವರ್ಷದೊಳಗಿನ ಪುರುಷ ಮತ್ತು ಮಹಿಳೆಯರ ಟೂರ್ನಿಗಳನ್ನು ಮತ್ತು 19 ವರ್ಷದೊಳಗಿನವರ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಈ ಟೂರ್ನಿಗಳು ಕಳೆದ ವರ್ಷ ನಡೆದಿರಲಿಲ್ಲ.

ಸೆಪ್ಟೆಂಬರ್‌ ತಿಂಗಳಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ, ನವೆಂಬರ್‌ನಲ್ಲಿ ವಿಜಯ್ ಹಜಾರೆ ಏಕದಿನ ಟೂರ್ನಿ, ಡಿಸೆಂಬರ್‌ನಲ್ಲಿ ರಣಜಿ ಟ್ರೋಫಿ ಪ್ರಥಮ ದರ್ಜೆ ಟೂರ್ನಿ ನಡೆಯಲಿದೆ. 23 ವರ್ಷದೊಳಗಿನ ಪುರುಷರ ಏಕದಿನ ಟೂರ್ನಿ ಅಕ್ಟೋಬರ್‌ನಲ್ಲಿ, ಸಿ.ಕೆ.ನಾಯ್ಡು ಟ್ರೋಫಿ ಟೂರ್ನಿ ಡಿಸೆಂಬರ್‌ನಲ್ಲಿ, 19 ವರ್ಷದೊಳಗಿನ ಬಾಲಕರ ವಿನೂ ಮಂಕಟ್ ಏಕದಿನ ಟೂರ್ನಿ ಅಕ್ಟೋಬರ್‌ನಲ್ಲಿ, ಏಕದಿನ ಚಾಲೆಂಜರ್ ಮತ್ತು ಕೂಚ್ ಬೆಹಾರ್ ಟೂರ್ನಿ ನವೆಂಬರ್‌ನಲ್ಲಿ ನಡೆಯಲಿದೆ. 16 ವರ್ಷದೊಳಗಿನ ಬಾಲಕರ ವಿಜಯ್ ಮರ್ಚಂಟ್ ಟ್ರೋಫಿ ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೆ ನಡೆಯಲಿದೆ.

ಮಹಿಳೆಯರ ಟಿ20 ಲೀಗ್‌ ಅಕ್ಟೋಬರ್‌ನಲ್ಲಿ, ಏಕದಿನ ಲೀಗ್‌ ನವೆಂಬರ್‌ನಲ್ಲಿ, 23 ವರ್ಷದೊಳಗಿನವರ ಏಕದಿನ ಲೀಗ್‌ ಮುಂದಿನ ವರ್ಷ ಜನವರಿಯಲ್ಲಿ, 19 ವರ್ಷದೊಳಗಿನವರ ಟಿ20 ಲೀಗ್ ಜನವರಿಯಲ್ಲಿ, ಏಕದಿನ ಲೀಗ್ ಮಾರ್ಚ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT