ಭುಟಿಯಾ ಎಂಬ ದುರಂತ ನಾಯಕ

ಮಂಗಳವಾರ, ಜೂನ್ 25, 2019
29 °C

ಭುಟಿಯಾ ಎಂಬ ದುರಂತ ನಾಯಕ

Published:
Updated:
Prajavani

ಸಿನಿಮಾ, ಕ್ರೀಡೆ ಮತ್ತು ರಾಜಕೀಯ ನಮ್ಮಲ್ಲೀಗ ಅತಿ ಹೆಚ್ಚು ಸೆಲೆಬ್ರಿಟಿಗಳನ್ನು ಹುಟ್ಟುಹಾಕುವ ಕ್ಷೇತ್ರಗಳು. ಯಶಸ್ವಿ ಕ್ರೀಡಾಪಟುಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸಿನಿಮಾಗಳೂ ಬರುತ್ತಿವೆ. ಸಿನಿಮಾದಲ್ಲಿ ಗಳಿಸಿದ ಜನಪ್ರಿಯತೆಯನ್ನು ಚುನಾವಣೆಯಲ್ಲಿ ನಗದು ಮಾಡಿಕೊಂಡು ರಾಜಕೀಯದಲ್ಲಿ ಮೇಲೇರಿದವರೂ ಸಾಕಷ್ಟು ಜನರಿದ್ದಾರೆ. ಈಗ ಕ್ರೀಡಾಳುಗಳೂ ರಾಜಕೀಯ ಕ್ಷೇತ್ರಕ್ಕೆ ನುಗ್ಗಿ ಶಾಸಕರು, ಸಂಸದರಾಗುವ ಕಾಲ. ಭಾರತ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಗೌತಮ್‌ ಗಂಭೀರ್‌, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸತ್‌ ಸದಸ್ಯರಾದದ್ದು ಈ ಸಲದ ದೊಡ್ಡ ಸುದ್ದಿ.

ಗೆದ್ದವರು ಸುದ್ದಿಯಾಗುವುದು ಸಹಜವೇ. ಆದರೆ ಈ ಸಲದ ಚುನಾವಣೆಯಲ್ಲಿ ಸೋತು ಸುಣ್ಣವಾದ ‘ಕ್ರೀಡಾಂಗಣದ ಹೀರೋ’ ಒಬ್ಬರ ಬಗ್ಗೆ ಹೆಚ್ಚು ಜನರು ಗಮನ ಹರಿಸಿದಂತಿಲ್ಲ. ಈತ ಬೈಚುಂಗ್‌ ಭುಟಿಯಾ!  

ಫುಟ್‌ಬಾಲ್‌ ಮೈದಾನದಲ್ಲಿ ಮಿಂಚಿನಂತೆ ಮುನ್ನುಗ್ಗಿ ಎದುರಾಳಿಗಳ ರಕ್ಷಣಾ ಕೋಟೆಯನ್ನು ಬೇಧಿಸಿ ಅಚ್ಚರಿಯ ಗೋಲು ಬಾರಿಸುತ್ತಿದ್ದ ಬೈಚುಂಗ್‌ ಭುಟಿಯಾರ ಬಲಿಷ್ಠ ಕಾಲುಗಳೀಗ ರಾಜಕೀಯದ ಕೆಸರಿನಲ್ಲಿ ಹೂತುಹೋಗಿವೆ. ಸಿಕ್ಕಿಂ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ, ಭುಟಿಯಾ ಅಕ್ಷರಶಃ ಯಾರ ಕಣ್ಣಿಗೂ ಬೀಳದೆ ಕಣ್ಮರೆಯಾಗಿದ್ದಾರೆ! ಮತದಾರರಿಗೆ ಥ್ಯಾಂಕ್ಸ್‌ ಹೇಳಿದ ಒಂದು ವಿಡಿಯೋ ಬಿಟ್ಟರೆ, ಬೈಚುಂಗ್‌ ಭುಟಿಯಾ ಇನ್ನೆಲ್ಲೂ ಕಾಣಿಸಿಕೊಂಡಿಲ್ಲ. ‘ಸೋಲಿನ ಆಘಾತಕ್ಕೆ ಒಳಗಾಗಿದ್ದಾರೆ, ಅವರು ಯಾರನ್ನೂ ಭೇಟಿಯಾಗಲ್ಲ’ ಎಂದು ಭುಟಿಯಾರ ಗೆಳೆಯರು ಹೇಳುತ್ತಿದ್ದಾರೆ.

ಪುಟ್ಟ ರಾಜ್ಯ ಸಿಕ್ಕಿಂನ ಕುಗ್ರಾಮ ಟಿಂಕಿಟಮ್‌ನಲ್ಲಿ ಹುಟ್ಟಿ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಗಮನಾರ್ಹ ಎತ್ತರಕ್ಕೆ ಬೆಳೆದಾತ ಈ ಭುಟಿಯಾ. ಕೆಲವೇ ವರ್ಷಗಳ ಹಿಂದೆ ಭಾರತ ಫುಟ್‌ಬಾಲ್‌ ತಂಡದ ನಾಯಕನಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಭುಟಿಯಾ, 2011ರಲ್ಲಿ ನಿವೃತ್ತಿಯ ಬಳಿಕ ರಾಜಕೀಯದ ಮೋಹಕ್ಕೆ ಒಳಗಾದರು. ಈ ಸಲದ ಸಿಕ್ಕಿಂ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಪಕ್ಷ ಕಟ್ಟಿ, ಒಟ್ಟು 32ರ ಪೈಕಿ 12 ಸ್ಥಾನಗಳಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಸ್ವತಃ ತಾನು ಗ್ಯಾಂಗ್ಟಕ್‌ ಮತ್ತು ಟುಮಿನ್‌ ಲಿಂಗಿ ಎಂಬ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರು. ಗ್ಯಾಂಗ್ಟಕ್‌ನಲ್ಲಿ ಭುಟಿಯಾಗೆ ಸಿಕ್ಕಿದ ಮತಗಳು ಕೇವಲ 70. ಟುಮಿನ್‌ ಲಿಂಗಿಯಲ್ಲಿ ಪಡೆದ ಮತಗಳು 234. ಭುಟಿಯಾ ಮಾತ್ರವಲ್ಲ, ಅವರ ಪಕ್ಷದಿಂದ ಸ್ಪರ್ಧಿಸಿದ್ದ ಇತರ 12 ಅಭ್ಯರ್ಥಿಗಳೂ ಠೇವಣಿ ಕಳೆದುಕೊಂಡಿದ್ದಾರೆ!

ಫುಟ್‌ಬಾಲ್‌ನಲ್ಲಿ ಭಾರತದ ಅತ್ಯುನ್ನತ ಆಟಗಾರನ ಸ್ಥಾನಕ್ಕೇರಲು ಭುಟಿಯಾಗೆ ಸುಮಾರು 20 ವರ್ಷಗಳೇ ಹಿಡಿದಿದ್ದವು. ‘ಟಿಂಕಿಟಮ್‌ ಎಕ್ಸ್‌ಪ್ರೆಸ್‌’ ಎಂದೇ ಬಿರುದು ಪಡೆದಿದ್ದ ಬೈಚುಂಗ್‌ ಭುಟಿಯಾ, ತನ್ನ ಅತಿವೇಗದ ಡ್ರಿಬ್ಲಿಂಗ್‌ಗಳಿಂದಾಗಿ ಕೋಲ್ಕತ್ತಾದ ದಿಗ್ಗಜ ಆಟಗಾರರಿಗೂ ಮೈದಾನದಲ್ಲಿ ನಡುಕ ಹುಟ್ಟಿಸಿದ್ದರು. ‘ಸಿಕ್ಕಿಮೀಸ್ ಸ್ನೈಪರ್‌’ ಎನ್ನುವುದು ಆತನಿಗಿದ್ದ ಇನ್ನೊಂದು ಅಡ್ಡಹೆಸರು. 

90ರ ದಶಕದ ಉತ್ತರಾರ್ಧದಲ್ಲಿ ಭಾರತ ತಂಡದ ಕ್ಯಾಪ್ಟನ್‌ ಆದ ಭುಟಿಯಾ, ಹಲವು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದವರು. 1999ರಲ್ಲಿ ಇಂಗ್ಲೆಂಡಿನ ಸೆಕೆಂಡ್‌ ಡಿವಿಷನ್‌ ಫುಟ್‌ಬಾಲ್‌ ಕ್ಲಬ್‌, ಬೂರಿ ಎಫ್‌ಸಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿ, ಅಂತರರಾಷ್ಟ್ರೀಯ ಕ್ಲಬ್‌ ಜೊತೆ ಒಪ್ಪಂದ ಮಾಡಿಕೊಂಡ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಹಲವು ವರ್ಷಗಳ ಹಿಂದೆ ಭಾರತದ ಆಟಗಾರ ಮೊಹಮ್ಮದ್‌ ಸಲೀಂ ಯೂರೋಪಿಯನ್‌ ಕ್ಲಬ್‌ ತಂಡದ ಪರ ಆಟವಾಡಿದ್ದರು. ಅದು ಬಿಟ್ಟರೆ ಯೂರೋಪಿಯನ್‌ ಕ್ಲಬ್‌ಗಾಗಿ ಆಟವಾಡಿದ ಎರಡನೇ ಆಟಗಾರ ಬೈಚುಂಗ್‌ ಭುಟಿಯಾ.

2011ರಲ್ಲಿ ಫುಟ್‌ಬಾಲ್‌ಗೆ ವಿದಾಯ ಹೇಳಿದ ಮೂರು ವರ್ಷಗಳ ಬಳಿಕ ರಾಜಕೀಯಕ್ಕೆ ಇಳಿದರು ಭುಟಿಯಾ. 2014ರಲ್ಲಿ ಉತ್ತರ ಬಂಗಾಳದ ಡಾರ್ಜಿಲಿಂಗ್‌ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ವಿಧಾನಸಭೆಗೆ ಸ್ಪರ್ಧಿಸಿದರು. ಅದು ಮೊದಲ ಸೋಲು. 2016ರಲ್ಲಿ ಮತ್ತೆ ತೃಣಮೂಲ ಕಾಂಗ್ರೆಸ್‌ನಿಂದ ಸಿಲಿಗುರಿಯಲ್ಲಿ ಸ್ಪರ್ಧಿಸಿದರೂ ಗೆಲುವು ದಕ್ಕಲಿಲ್ಲ.

ತೃಣಮೂಲ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, 2018ರ ಏಪ್ರಿಲ್‌ನಲ್ಲಿ ‘ಹಮ್ರೊ ಸಿಕ್ಕಿಂ ಪಾರ್ಟಿ’ ಕಟ್ಟಿದರು.  ಸಿಕ್ಕಿಂನಲ್ಲಿ ಆಡಳಿತಾರೂಢ ಪಕ್ಷದ ವ್ಯಾಪಕ ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟ ಎಂದು ಘೋಷಿಸಿದರು. ರಾಜ್ಯದ ಯುವಜನ ತನ್ನ ಬೆನ್ನಿಗಿದ್ದಾರೆ ಎಂದು ನಂಬಿ ರಾಜ್ಯದಾದ್ಯಂತ ಓಡಾಡಿದರು.

ಸಿಕ್ಕಿಂನ ಜನಸಂಖ್ಯೆ ಸುಮಾರು ಆರು ಲಕ್ಷ. ಅದರಲ್ಲಿ ಶೇಕಡಾ 75ರಷ್ಟು ನೇಪಾಳೀಯರು. ಉಳಿದವರು ಭುಟಿಯಾ ಮತ್ತು ಲೆಪ್ಚಾಸ್‌ ಬುಡಕಟ್ಟು ಸಮುದಾಯದವರು. ಬೈಚುಂಗ್‌ ಭುಟಿಯಾ ಭಾರತ ತಂಡದ ನಾಯಕನಾಗಿ ಫುಟ್‌ಬಾಲ್‌ ಮೈದಾನದಲ್ಲಿ ಮಿಂಚುತ್ತಿದ್ದಾಗ ಇವರೆಲ್ಲರೂ ಆತನ ಅಭಿಮಾನಿಗಳಾಗಿ ಪೆವಿಲಿಯನ್‌ನಲ್ಲಿ ಹರ್ಷೋದ್ಗಾರ ಮಾಡುತ್ತಿದ್ದವರು. ಆದರೆ ಚುನಾವಣೆಗೆ ನಿಂತಾಗ ಭುಟಿಯಾ ಸಮುದಾಯದವರೂ ಮತಗಟ್ಟೆಯಲ್ಲಿ ಆತನ ಪಕ್ಷಕ್ಕೆ ಮುದ್ರೆ ಒತ್ತಲಿಲ್ಲ. ಬೈಚುಂಗ್‌ ಭುಟಿಯಾ ಈಗ ಸಿಕ್ಕಿಂನ ದುರಂತ ನಾಯಕ.

ಮೈದಾನದಲ್ಲಿ ಶಕ್ತಿಶಾಲಿ ಶೂಟ್‌ಗಳಿಗೆ ಹೆಸರುವಾಸಿಯಾಗಿದ್ದಾತ ಭುಟಿಯಾ. ಭಾರತೀಯ ಫುಟ್‌ಬಾಲ್‌ನ ಸೂಪರ್‌ಸ್ಟಾರ್‌ ಐ.ಎಂ.ವಿಜಯನ್‌ ‘ಈತ ಭಾರತೀಯ ಫುಟ್‌ಬಾಲ್‌ಗೆ ದೇವರು ಕೊಟ್ಟ ವರ’ ಎಂದು  ಹೊಗಳಿದ್ದುಂಟು. ಕೋಲ್ಕತ್ತಾದ ಈಸ್ಟ್‌ ಬೆಂಗಾಲ್‌ ಕ್ಲಬ್‌ನಲ್ಲಿ ವೃತ್ತಿಜೀವನವನ್ನು ಆರಂಭಿಸಿದ ಬೈಚುಂಗ್‌, ಜೆಸಿಟಿ ಮಿಲ್ಸ್‌ ಮತ್ತು ಮೋಹನ್‌ ಬಾಗನ್‌ ಕ್ಲಬ್‌ ತಂಡಗಳಲ್ಲೂ ಮಿಂಚಿದಾತ. ಒಟ್ಟು 82 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಕ್ಯಾಪ್ಟನ್‌ ಆದದ್ದು, ಎರಡನೆಯ ಅತ್ಯುತ್ತಮ ದಾಖಲೆ.

1995ರ ನೆಹ್ರೂ ಕಪ್‌ ಪಂದ್ಯದಲ್ಲಿ ಉಜ್ಬೆಕಿಸ್ತಾನದ ವಿರುದ್ಧ ಹೊಡೆದ ಮೊದಲ ಗೋಲು ಕೂಡಾ ದಾಖಲೆಯೇ. ಏಕೆಂದರೆ ಆಗ ಈತನ ವಯಸ್ಸು 18 ವರ್ಷ 3 ತಿಂಗಳು. ಜಿರ್ಸಾಂಗಾ ಎಂಬ ಆಟಗಾರನನ್ನು ಬಿಟ್ಟರೆ ಭಾರತದ ಪರ ಅಂತರರಾಷ್ಟ್ರೀಯ ಪಂದ್ಯದಲ್ಲಿ ಗೋಲು ಹೊಡೆದ ಅತ್ಯಂತ ಕಿರಿಯನೀತ.

ವಿವಾದಗಳೂ ಬೈಚುಂಗ್‌ನ ಬೆನ್ನಟ್ಟಿದ್ದುಂಟು. ಮೋಹನ್‌ ಬಾಗನ್‌ ಕ್ಲಬ್‌ಗೆ ಆಡುತ್ತಿದ್ದ ಅವಧಿಯಲ್ಲಿ ಟಿವಿ ರಿಯಾಲಿಟಿ ಷೋ ‘ಜಲಕ್‌ ದಿಕ್‌ಲಾಜಾ’ದಲ್ಲಿ ಡ್ಯಾನ್ಸ್‌ ಮಾಡಿ ₹ 40 ಲಕ್ಷ ಬಹುಮಾನ ಗೆದ್ದದ್ದು ಕ್ಲಬ್‌ ಅಧಿಕಾರಿಗಳ ಸಿಟ್ಟಿಗೆ ಕಾರಣವಾಗಿತ್ತು. ಟಿಬೆಟ್‌ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿ ಒಲಿಂಪಿಕ್ಸ್‌ನಲ್ಲಿ ದೀಪ ಹೊತ್ತೊಯ್ಯುವ ಗೌರವವನ್ನು ನಿರಾಕರಿಸಿದ್ದೂ ಸುದ್ದಿಯಾಯಿತು. ಇನ್ನೂ ಆಟದ ಕಣದಲ್ಲಿ ಇರುವಾಗಲೇ ಫುಟ್‌ಬಾಲ್‌ ಸ್ಟೇಡಿಯಂ ಒಂದಕ್ಕೆ ತನ್ನ ಹೆಸರನ್ನು ಪಡೆದ ಮೊದಲ ಆಟಗಾರನೀತ. ದೆಹಲಿಯಲ್ಲಿ ಈತ ಸ್ಥಾಪಿಸಿದ ಫುಟ್‌ಬಾಲ್‌ ಸ್ಕೂಲ್‌ ನೂರಾರು ಯುವ ಪ್ರತಿಭಾವಂತರನ್ನು ಬೆಳೆಸುತ್ತಿದೆ. ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಗಳೂ ಸಂದಿವೆ.

ಈಗ ವಿಧಾನಸಭಾ ಚುನಾವಣೆಯಲ್ಲಿ ಪಡೆದ ದಯನೀಯ ಸೋಲು, ಬೈಚುಂಗ್‌ ಭುಟಿಯಾಗೆ ತನ್ನ ಯಶೋಗಾಥೆಯ ಬದುಕನ್ನೊಮ್ಮೆ ಹಿಂದಿರುಗಿ ನೋಡುವಂತೆ ಮಾಡಿರಬಹುದು. ಮೈದಾನದಲ್ಲಿ ಮಿಂಚಿನ ವೇಗದಲ್ಲಿ ಎದುರಾಳಿಗಳನ್ನು ದಿಕ್ಕುತಪ್ಪಿಸುವುದು ಸುಲಭ, ಆದರೆ ರಾಜಕೀಯದಲ್ಲಿ ಎದುರಾಳಿಗಳನ್ನು ಸೋಲಿಸುವುದು ಕಷ್ಟ ಎನ್ನುವುದು ಅರಿವಾಗಿರಬಹುದು. ಈ ಸೋಲು ಮತ್ತೆ  ಆತನ ಬದುಕಿಗೆ ಇನ್ನೊಂದು ಹೊರಳು ನೀಡಲಿದೆಯೆ? ಅಥವಾ ರಾಜಕೀಯದ ಮೋಹ ಇನ್ನಷ್ಟು ಗಾಢವಾಗಬಹುದೆ?

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !