ಭಾನುವಾರ, ಜೂನ್ 26, 2022
29 °C
ಇಸಿಬಿ ಭರವಸೆ

ಭಾರತೀಯರ ವಿರುದ್ಧ ಜನಾಂಗೀಯ ನಿಂದನೆ ಆರೋಪ: ಮಾರ್ಗನ್‌, ಬಟ್ಲರ್ ತನಿಖೆಗೆ ಆದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಭಾರತೀಯರ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಏಯಾನ್ ಮಾರ್ಗನ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್‌ ಅವರನ್ನು ಜನಾಂಗೀಯ ನಿಂದನೆ ಆರೋಪದ ಮೇಲೆ ತನಿಖೆಗೆ ಒಳಪಡಿಸಲಾಗಿದೆ. 

ಮಾರ್ಗನ್ ಮತ್ತು ಬಟ್ಲರ್ ಅವರ ಟ್ವೀಟ್‌ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿಗಳ ವಿರುದ್ಧ ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ.

ಏಷ್ಯಾದ ಜನರನ್ನು ನಿಂದಿಸಿ, ಮಹಿಳೆಯರ ಬಗ್ಗೆ ಕೀಳು ಅಭಿಪ್ರಾಯ ವ್ಯಕ್ತಪಡಿಸಿ 2012 ಮತ್ತು 2013ರಲ್ಲಿ ಮಾಡಿದ ಟ್ವೀಟ್‌ಗೆ ಸಂಬಂಧಿಸಿ ವೇಗದ ಬೌಲರ್ ಒಲಿ ರಾಬಿನ್ಸನ್ ಅವರನ್ನು ಇಸಿಬಿ ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಿತ್ತು. ಇದರ ಬೆನ್ನಲ್ಲೇ ಮಾರ್ಗನ್ ಮತ್ತು ಬಟ್ಲರ್ ಭಾರತೀಯರನ್ನು ‘ಸರ್‌’ ಎಂದು ಸಂಬೋಧಿಸಿ ಟ್ವಿಟರ್‌ನಲ್ಲಿ ಗೇಲಿ ಮಾಡಿದ್ದರು. 

‘ವಿವಾದಾತ್ಮಕ ಟ್ವೀಟ್‌ಗಳ ಬಗ್ಗೆ ಕಳೆದ ವಾರವೇ ಆಟಗಾರರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಅನೇಕ ಟ್ವೀಟ್‌ಗಳು ಸಾಮಾಜಿಕ ತಾಣಗಳಲ್ಲಿ ಉಳಿದಿರುವುದು ಅಚ್ಚರಿಯ ವಿಷಯ. ನಮ್ಮಲ್ಲಿ ಕ್ರೀಡಾಕ್ಷೇತ್ರದಲ್ಲಿ ಭೇದ ಭಾವಕ್ಕೆ ಎಡೆಯಿಲ್ಲ. ಇದೊಂದು ಪ್ರಕರಣ ಮಾತ್ರವಲ್ಲ, ಅವಮಾನ ಮಾಡುವ ಉದ್ದೇಶದಿಂದ ಈ ಹಿಂದೆ ಯಾರಾದರೂ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಾಕಿದ್ದರೆ ಅವುಗಳ ಬಗ್ಗೆಯೂ ಗಮನಹರಿಸಲಾಗುವುದು’ ಎಂದು ಇಸಿಬಿ ತಿಳಿಸಿದೆ.

ಬಟ್ಲರ್ ಮತ್ತು ಮಾರ್ಗನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಪಾಲ್ಗೊಂಡಿದ್ದಾರೆ. ಬಟ್ಲರ್ ರಾಜಸ್ತಾನ್ ರಾಯಲ್ಸ್‌ನಲ್ಲಿದ್ದರೆ ಮಾರ್ಗನ್‌ ಕೋಲ್ಕತ್ತ ನೈಟ್ ರೈಡರ್ಸ್‌ನಲ್ಲಿ ಆಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು