ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ₹ 1 ಲಕ್ಷ ದೇಣಿಗೆ ನೀಡಿದ 16 ವರ್ಷದ ಆಟಗಾರ್ತಿ ರಿಚಾ ಘೋಷ್‌

Last Updated 30 ಮಾರ್ಚ್ 2020, 5:45 IST
ಅಕ್ಷರ ಗಾತ್ರ

ನವದೆಹಲಿ/ಕೋಲ್ಕತ್ತ: ಪ್ಯಾರಾ ಅಥ್ಲೀಟ್‌ ಶರದ್‌ ಕುಮಾರ್‌ ಮತ್ತು ಪಶ್ಚಿಮ ಬಂಗಾಳದ ಕ್ರಿಕೆಟ್‌ ಆಟಗಾರ್ತಿ ರಿಚಾ ಘೋಷ್‌ ಅವರು ಕೋವಿಡ್‌ನಿಂದ ಬಳಲುತ್ತಿರುವವರ ನೆರವಿಗೆ ಧಾವಿಸಿದ್ದಾರೆ. ಇವರು ಶನಿವಾರ ತಲಾ ₹ 1 ಲಕ್ಷ ದೇಣಿಗೆ ನೀಡಿದ್ದಾರೆ.

ಹೈಜಂಪ್‌ ಸ್ಪರ್ಧಿ ಶರದ್‌ ಅವರು 2014 ಮತ್ತು 2018ರಲ್ಲಿ ನಡೆದಿದ್ದ ಏಷ್ಯನ್‌ ಪ್ಯಾರಾ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದರು. 2017ರಲ್ಲಿ ಆಯೋಜನೆಯಾಗಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರಿಂದ ಬೆಳ್ಳಿಯ ಪದಕದ ಸಾಧನೆ ಮೂಡಿಬಂದಿತ್ತು.

‘ಪ್ರಧಾನ ಮಂತ್ರಿ ‘ಕೇರ್ಸ್‌’ನಿಧಿಗೆ ನಾನು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದೇನೆ’ ಎಂದು ಬಿಹಾರದ 29 ವರ್ಷ ವಯಸ್ಸಿನ ಅಥ್ಲೀಟ್‌ ಟ್ವೀಟ್‌ ಮಾಡಿದ್ದಾರೆ.

16 ವರ್ಷ ವಯಸ್ಸಿನ ರಿಚಾ, ಇತ್ತೀಚೆಗೆ ನಡೆದಿದ್ದ ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಆಡಿದ್ದರು.

‘ಜವಾಬ್ದಾರಿಯುತ ಪ್ರಜೆಯಾಗಿ ನಾನು ನನ್ನ ಕರ್ತ್ಯವ್ಯವನ್ನು ನಿಭಾಯಿಸಬೇಕಿದೆ. ಹೀಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 1 ಲಕ್ಷ ದೇಣಿಗೆ ಕೊಟ್ಟಿದ್ದೇನೆ’ ಎಂದು ರಿಚಾ ಹೇಳಿದ್ದಾರೆ.

‘ಬಂಗಾಳ ಕ್ರಿಕೆಟ್‌ ಸಂಸ್ಥೆಯ (ಸಿಎಬಿ) 66 ಮಂದಿ ಪಂದ್ಯದ ಅಧಿಕಾರಿಗಳು ಹಾಗೂ 88 ಮಂದಿ ಸ್ಕೋರರ್‌ಗಳು ಕ್ರಮವಾಗಿ ಒಟ್ಟು ₹1.5 ಲಕ್ಷ ಹಾಗೂ 77,420 ರೂಪಾಯಿ ದೇಣಿಗೆ ನೀಡಿದ್ದಾರೆ’ ಎಂದು ಸಿಎಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೊಹಮ್ಮಡನ್‌ ಸ್ಪೋರ್ಟಿಂಗ್‌ ಫುಟ್‌ಬಾಲ್‌ ಕ್ಲಬ್‌ನ ದೀಪಕ್‌ ಸಿಂಗ್‌ ಅವರು ₹ 2 ಲಕ್ಷ ದೇಣಿಗೆ ಕೊಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಹಿರಿಯ ಕ್ರಿಕೆಟ್‌ ಆಟಗಾರ್ತಿ ಮಿಥು ಮುಖರ್ಜಿ ಹಾಗೂ 23 ವರ್ಷದೊಳಗಿನವರ ಮಹಿಳಾ ತಂಡದ ಕೋಚ್‌ ಜಯಂತ್‌ ಘೋಷ್‌ ದೋಸ್ತಿದಾರ್‌ ಅವರು ಕ್ರಮವಾಗಿ ₹25 ಸಾವಿರ ಹಾಗೂ ₹10 ಸಾವಿರ ನೀಡಿದ್ದಾರೆ.

ಬಂಗಾಳ ಕ್ರಿಕೆಟ್‌ ಸಂಸ್ಥೆಯ ಮಾನ್ಯತೆ ಹೊಂದಿರುವ ವೈಟ್‌ ಬಾರ್ಡರ್‌ ಕ್ಲಬ್‌ ಹಾಗೂ ವಿಜಯ ಸ್ಪೋರ್ಟ್ಸ್‌ ಕ್ಲಬ್‌ಗಳು ತಲಾ ₹50,000 ದೇಣಿಗೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT