ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ, ಎಲ್ಲರೂ ಮನೆಯಲ್ಲೇ ಇರಿ: ಸುನಿಲ್ ಚೆಟ್ರಿ

Last Updated 29 ಮಾರ್ಚ್ 2020, 10:38 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ‘ಕೊರೊನಾ ಮಹಾಮಾರಿಯ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಮುಖ್ಯವಾಗಿ ಎಲ್ಲರೂ ಮನೆಯಲ್ಲಿ ಇರಬೇಕು. ಆಗ ಮಾತ್ರ ಈ ಪಿಡುಗನ್ನು ಬೇಗನೆ ನಿಯಂತ್ರಿಸಬಹುದು’ ಎಂದು ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಹೇಳಿದ್ದಾರೆ.

ಕೋವಿಡ್‌–19 ವಿರುದ್ಧ ಸಮರ ಸಾರಿರುವ ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಎಎಫ್‌ಸಿ) ಇದಕ್ಕಾಗಿ ‘ಬ್ರೇಕ್‌ ದಿ ಚೈನ್‌’ ಎಂಬ ಅಭಿಯಾನ ಆರಂಭಿಸಿದೆ. ಏಷ್ಯಾದ ಪ್ರಮುಖ ಫುಟ್‌ಬಾಲ್‌ ತಾರೆಗಳ ಮೂಲಕ ವಿಡಿಯೊ ಸಂದೇಶಗಳನ್ನು ಹೇಳಿಸಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಈ ಕಾರ್ಯಕ್ಕೆ ಭಾರತದ ಚೆಟ್ರಿ ಹಾಗೂ ಹಿರಿಯ ಆಟಗಾರ ಬೈಚುಂಗ್‌ ಭುಟಿಯಾ ಕೈಜೋಡಿಸಿದ್ದಾರೆ.

‘ಇಡೀ ಜಗತ್ತೇ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೀಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲರೂ ಚಾಚೂ ತಪ್ಪದೆ ಪಾಲಿಸಿ. ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಹತ್ತಿರದ ಆಸ್ಪತ್ರೆ ಇಲ್ಲವೇ ಆರೋಗ್ಯ ಕೇಂದ್ರಗಳಿಗೆ ಹೋಗಿ ಪರೀಕ್ಷಿಸಿಕೊಳ್ಳಿ. ಸುರಕ್ಷತೆ ನಮ್ಮೆಲ್ಲರ ಆದ್ಯತೆಯಾಗಲಿ’ ಎಂದು ಕರೆ ನೀಡಿದ್ದಾರೆ.

‘ಈ ಸಮಯದಲ್ಲಿ ನಾವೆಲ್ಲ ಒಂದು ತಂಡವಾಗಿ ಹೋರಾಡಬೇಕಿದೆ. ಆಗ ಮಾತ್ರ ಈ ವೈರಾಣುವಿನ ಉಪಟಳವನ್ನು ತಹಬದಿಗೆ ತರಲು ಸಾಧ್ಯ. ಕೊರೊನಾ ಬಿಕ್ಕಟ್ಟು ಆದಷ್ಟು ಬೇಗ ಬಗೆಹರಿಯುವ ವಿಶ್ವಾಸ ಇದೆ. ಹೀಗಾಗಿ ಎಲ್ಲರೂ ತಾಳ್ಮೆಯಿಂದ ಮನೆಯಲ್ಲಿರಿ’ ಎಂದಿದ್ದಾರೆ.

‘ಒಬ್ಬರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬರು’ ಈ ಸೂತ್ರವನ್ನು ನಾವೆಲ್ಲಾ ಪಾಲಿಸಬೇಕಿದೆ. ಸೋಪಿನಿಂದ ಪದೇ ಪದೇ ಕೈಗಳನ್ನು ತೊಳೆಯುತ್ತಿರಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಈ ಮೂಲಕ ನಮ್ಮೆಲ್ಲರ ಶತ್ರುವಾಗಿರುವ ಕೊರೊನಾ ಸೋಂಕನ್ನು ಸುಲಭವಾಗಿ ತಡೆಗಟ್ಟಬಹುದು’ ಎಂದು ಹಿರಿಯ ಆಟಗಾರ್ತಿ ಹಾಗೂ ಚೀನಾ ಫುಟ್‌ಬಾಲ್‌ ಸಂಸ್ಥೆಯ (ಸಿಎಫ್‌ಎ) ಉಪಾಧ್ಯಕ್ಷೆ ಸನ್‌ ವೆನ್‌ ಅವರು ಮನವಿ ಮಾಡಿದ್ದಾರೆ.

ಎಎಫ್‌ಸಿಯ ಅಭಿಯಾನಕ್ಕೆ ಏಷ್ಯಾದ 50ಕ್ಕೂ ಹೆಚ್ಚು ಆಟಗಾರರು ಮತ್ತು ನೆರವು ಸಿಬ್ಬಂದಿ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT