ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಸ್ಬೇನ್ ಬಗ್ಗೆ ಬಿಸಿಸಿಐಗೆ ತಕರಾರು ಇಲ್ಲ

ಮೆಲ್ಬರ್ನ್‌ನಿಂದ ಸಿಡ್ನಿಗೆ ಹೊರಟ ಭಾರತದ ಆಟಗಾರರು; ಉಭಯ ತಂಡಗಳ ಕೋವಿಡ್–19 ವರದಿ ನೆಗೆಟಿವ್
Last Updated 4 ಜನವರಿ 2021, 12:09 IST
ಅಕ್ಷರ ಗಾತ್ರ

ಸಿಡ್ನಿ: ಕಠಿಣ ಕ್ವಾರಂಟೈನ್ ನಿಯಮಗಳಿಂದ ಬೇಸರಗೊಂಡಿರುವ ಭಾರತ ತಂಡ ನಾಲ್ಕನೇ ಟೆಸ್ಟ್ ಪಂದ್ಯವನ್ನು ಬ್ರಿಸ್ಬೇನ್‌ನಲ್ಲಿ ಆಡಲು ಸಿದ್ಧವಿಲ್ಲ ಎಂಬ ವರದಿಗಳನ್ನು ಕ್ರಿಕೆಟ್ ಆಸ್ಟ್ರೇಲಿಯಾದ (ಸಿಎ) ಮುಖ್ಯ ಕಾರ್ಯನಿರ್ವಾಹಕ ನಿಕ್ ಹಾಕ್ಲಿ ಸೋಮವಾರ ತಳ್ಳಿ ಹಾಕಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಕ್ವೀನ್ಸ್‌ಲ್ಯಾಂಡ್‌ನಲ್ಲಿ ಜಾರಿಗೆ ತಂದಿರುವ ಕ್ವಾರಂಟೈನ್ ನಿಯಮಗಳ ಬಗ್ಗೆ ಯಾವುದೇ ಬೇಸರವಿಲ್ಲ ಮತ್ತು ಎಲ್ಲ ರೀತಿಯ ಸಹಕಾರ ನೀಡಲು ಅದು ಒಪ್ಪಿಕೊಂಡಿದೆ ಎಂದು ಹಾಕ್ಲಿ ಸ್ಪಷ್ಟಪಡಿಸಿದ್ದಾರೆ.

‘ಅಗತ್ಯ ವಿಷಯಗಳ ಬಗ್ಗೆ ಚರ್ಚಿಸಲು ಬಿಸಿಸಿಐಗೂ ನಮಗೂ ಯಾವುದೇ ಮುಜುಗರವಿಲ್ಲ. ಬಿಸಿಸಿಐ ಇಲ್ಲಿನ ಎಲ್ಲ ನಿಯಮಗಳನ್ನೂ ಪಾಲಿಸಲು ಬದ್ಧವಾಗಿದೆ. ನಿಗದಿಯಂತೆ ಪಂದ್ಯಗಳಲ್ಲಿ ಆಡಲು ಎರಡೂ ತಂಡಗಳು ಸಜ್ಜಾಗಿವೆ ಎಂದು ಅವರು ಹೇಳಿದ್ದಾರೆ.

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಇದೇ ಏಳರಂದು ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯ ಗಳಿಸಿದ್ದರೆ, ಎರಡನೇ ಪಂದ್ಯದಲ್ಲಿ ಭಾರತ ತಿರುಗೇಟು ನೀಡಿತ್ತು. ನಾಲ್ಕನೇ ಪಂದ್ಯ ಇದೇ 15ರಿಂದ ಗಾಬಾದಲ್ಲಿ ನಡೆಯಲಿದೆ.

ನವೆಂಬರ್‌ನಲ್ಲೇ ಆಸ್ಟ್ರೇಲಿಯಾಗೆ ಬಂದಿರುವ ಭಾರತ ತಂಡದವರು ಇಲ್ಲಿನ ಕ್ವಾರಂಟೈನ್ ನಿಯಮಗಳಿಗೆ ಈಗಾಗಲೇ ಬೇಸರಗೊಂಡಿದ್ದು ಬ್ರಿಸ್ಬೇನ್‌ಗೆ ಪಯಣಿಸಲು ಹಿಂದೇಟು ಹಾಕುತ್ತಿದ್ದಾರೆ, ಕೊನೆಯ ಪಂದ್ಯವನ್ನು ಸಿಡ್ನಿಯಲ್ಲೇ ಆಯೋಜಿಸುವಂತೆ ಒತ್ತಾಯಿಸಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿದ್ದವು.

ಸಿಡ್ನಿ ರಾಜಧಾನಿಯಾಗಿರುವ ನ್ಯೂ ಸೌತ್ ವೇಲ್ಸ್‌ನಲ್ಲಿಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅಲ್ಲಿಂದ ಪಯಣಿಸುವವರನ್ನು ಒಳಗೆ ಬಿಡಲು ಕ್ವೀನ್ಸ್‌ಲ್ಯಾಂಡ್ ಆಡಳಿತ ಒಪ್ಪುತ್ತಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಆಟಗಾರರು ನಡೆಸಿರುವ ಕೋವಿಡ್ ಟೆಸ್ಟ್‌ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದು ಎರಡೂ ತಂಡಗಳ ಆಟಗಾರರು ಸೋಮವಾರ ಸಿಡ್ನಿಗೆ ಪಯಣಿಸಿದ್ದಾರೆ.

ಉಪನಾಯಕ ರೋಹಿತ್ ಶರ್ಮಾ, ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್, ವಿಕೆಟ್ ಕೀಪರ್ ರಿಷಭ್ ಪಂತ್, ವೇಗಿಗಳಾದ ನವದೀಪ್ ಸೈನಿ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರು ಕೋವಿಡ್ ನಿಯಮಾವಳಿ ಉಲ್ಲಂಘಿಸಿ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಐವರನ್ನೂ ಐಸೊಲೇಷನ್‌ನಲ್ಲಿ ಇರಿಸಲಾಗಿದೆ. ಇದರ ಬೆನ್ನಲ್ಲೇ ಹಾಕ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಆಟಗಾರರು ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದರೆ ವಿಡಿಯೊವನ್ನು ನವಲ್‌ದೀಪ್ ಸಿಂಗ್ ಎಂಬ ವ್ಯಕ್ತಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ನಂತರ ವಿವಾದ ಉಂಟಾಗಿತ್ತು. ಈ ಕುರಿತು ಬಿಸಿಸಿಐ ಜೊತೆಗೂಡಿ ತನಿಖೆ ನಡೆಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಈಗಾಗಲೇ ಹೇಳಿದೆ.

ಮೂರನೇ ಟೆಸ್ಟ್‌ಗೆ ಪ್ಯಾಟಿನ್ಸನ್ ಇಲ್ಲ

ಪಕ್ಕೆಲುಬಿನಲ್ಲಿ ನೋವು ಕಾಣಿಸಿಕೊಂಡಿರುವ ಕಾರಣ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್‌ ಅವರು ಭಾರತ ಎದುರಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಲಭ್ಯ ಇರುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಅವರ ಬದಲಿಗೆ ಸದ್ಯ ಯಾರನ್ನೂ ಆಯ್ಕೆ ಮಾಡಲಿಲ್ಲ, ನಾಲ್ಕನೇ ಟೆಸ್ಟ್‌ಗೆ ಅವರನ್ನು ಪರಿಗಣಿಸಬಹುದೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದೂ ಅದು ಸ್ಪಷ್ಟಪಡಿಸಿದೆ.

ಈ ವರೆಗೆ 21 ಟೆಸ್ಟ್ ಪಂದ್ಯಗಳನ್ನು ಆಡಿರುವ ಪ್ಯಾಟಿನ್ಸನ್ 81 ವಿಕೆಟ್ ಕಬಳಿಸಿದ್ದಾರೆ. ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ಕೊನೆಯದಾಗಿ ಕಣಕ್ಕೆ ಇಳಿದಿದ್ದರು. 30 ವರ್ಷದ ಅವರು ಭಾರತದ ಎದುರಿನ ಮೊದಲ ಎರಡು ಪಂದ್ಯಗಳಿಗೆ ಆಯ್ಕೆ ಮಾಡಿದ್ದ ತಂಡದಲ್ಲಿ ಸ್ಥಾನ ಗಳಿಸಿರಲಿಲ್ಲ. ಮಿಷೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್‌, ಪ್ಯಾಟ್ ಕಮಿನ್ಸ್ ಮತ್ತು ನೇಥನ್ ಲಯನ್ ಅವರೊಂದಿಗೆ ಮೂರನೇ ಟೆಸ್ಟ್‌ ಪಂದ್ಯಕ್ಕಾಗಿ ಪ್ರಕಟಿಸಿದ್ದ ತಂಡದಲ್ಲಿ ಪ್ಯಾಟಿನ್ಸನ್‌ಗೆ ಸ್ಥಾನ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT