ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರ ಪ್ರವಾಸ, ಉದ್ಯೋಗ ಕಡಿತ: ಕ್ರಿಕೆಟ್ ಆಸ್ಟ್ರೇಲಿಯಾ ಕ್ರಮ

Last Updated 17 ಜೂನ್ 2020, 8:47 IST
ಅಕ್ಷರ ಗಾತ್ರ

ಮೆಲ್ಬರ್ನ್: ಅಪಾರ ಆರ್ಥಿಕ ನಷ್ಟವನ್ನು ಎದುರಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಕೆಲವು ಕಠಿಣ ಕ್ರಮಗಳಿಗೆ ಮುಂದಾಗಿದೆ.

ಆಸ್ಟ್ರೇಲಿಯಾ ’ಎ‘ ತಂಡಗಳ ವಿದೇಶ ಪ್ರವಾಸಗಳನ್ನು ಸ್ಥಗಿತಗೊಳಿಸಿದೆ. 40 ಉದ್ಯೋಗಿಗಳನ್ನೂ ತೆಗೆದುಹಾಕಲು ನಿರ್ಧರಿಸಿದೆ.

ಹಂಗಾಮಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನಿಕ್ ಹಾಕ್ಲೆ ಅವರ ಸಮಿತಿಯು ಈ ನಿರ್ಧಾರ ಕೈಗೊಂಡಿದೆ.

’2021ರ ಪರಿಷ್ಕೃತ ಯೋಜನೆಯ ಪ್ರಕಾರ ₹ 300 ಕೋಟಿ ವೆಚ್ಚವನ್ನು ಕಡಿತಗೊಳಿಸಬೇಕಿದೆ. ಇದರಿಂದ ಮುಂದಿನ ದಿನಗಳಲ್ಲಿ ನಡೆಯುವ ಕ್ರಿಕೆಟ್ ಚಟುವಟಿಕೆಗಳು ಮತ್ತು ಸರಣಿಗಳಲ್ಲಿ ಜೀವ ಸುರಕ್ಷಾ ವಿಧಾನಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ. ಪಂದ್ಯಗಳ ನಿರ್ವಹಣೆ, ಆಟಗಾರರ ನಿರ್ವಹಣೆಗೆ ಇದು ಅನಿವಾರ್ಯ‘ ಎಂದು ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಸಿಎ ಹೇಳಿದೆ.

’ಅನಿವಾರ್ಯವಾಗಿ 40 ಹುದ್ದೆಗಳನ್ನು ಕಡಿತಗೊಳಿಸಲಾಗುತ್ತಿದೆ. ಇತ್ತೀಚಿನ ಎಲ್ಲ ಪರಿಸ್ಥಿತಿಯನ್ನೂ ಅವಲೋಕಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಕ್ರಿಕೆಟ್‌ಗೆ ಇದು ಸಂಕಷ್ಟದ ಕಾಲವಾಗಿದೆ. ಇದನ್ನು ಎದುರಿಸಲೇಬೇಕಿದೆ‘ ಎಂದು ಹಾಕ್ಲೆ ಹೇಳಿದ್ದಾರೆ.

ಏಪ್ರಿಲ್‌ನಲ್ಲಿ ಸಿಇಒ ಆಗಿದ್ದ ಕೆವಿನ್ ರಾಬರ್ಟ್ಸ್‌ ಅವರು ಶೇ 80ರಷ್ಟು ಸಿಬ್ಬಂದಿಯ ಶೇ 20ರಷ್ಟು ವೇತನ ಕಡಿತ ಮಾಡಿದ್ದರು.

’ಕ್ರಿಕೆಟ್ ಆಸ್ಟ್ರೇಲಿಯಾದ ಉದ್ಯೋಗಿಗಳಿಗೆ ಇದು ಕಷ್ಟಕಾಲವಾಗಿದೆ ಎಂಬುದರ ಅರಿವು ನಮಗಿದೆ. ಇದರಿಂದಾಗಿ ಅವರೆಲ್ಲರ ಕುಟುಂಬಳಿಗೆ ತೊಂದರೆಯಾಗಿದೆ. ಆದರೂ ಕ್ರಿಕೆಟ್‌ ಉಳಿವಿಗಾಗಿ ಹಾದಿ ಸುಗಮಗೊಳಿಸುವುದು ನಮ್ಮ ಉದ್ದೇಶ. ಭವಿಷ್ಯದಲ್ಲಿ ಬಹುಬೇಗ ಚೇತರಿಸಿಕೊಳ್ಳುವ ಭರವಸೆ ಇದೆ. ಮತ್ತೆ ಸುಸ್ಥಿರತೆ ಬರಲಿದೆ‘ ಎಂದು ಹೇಳಿದ್ದಾರೆ.

ಹೊಸ ಆರ್ಥಿಕ ವರ್ಷದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾವು ಮಾರ್ಷ್ ಶೆಫೀಲ್ಡ್‌ ಶೀಲ್ಡ್‌, ಡಬ್ಲ್ಯುಎನ್‌ಸಿಎಲ್ ಮತ್ತು ಮಾರ್ಷಕ್‌ ಕಪ್ ಟೂರ್ನಿಗಳನ್ನು ಮುಂದುವರಿಸಲಿದೆ. ಕೆಎಫ್‌ಸಿ ಬಿಗ್‌ ಬ್ಯಾಷ್ ಲೀಗ್‌ನಲ್ಲಿಯೂ ಯಥಾಸ್ಥಿತಿ ಕಾಪಾಡಿಕೊಳ್ಳಲಿದೆ.

’ಆಸ್ಟ್ರೇಲಿಯಾ ಎ ಕ್ರಿಕೆಟ್ ತಂಡಗಳ ವಿದೇಶ ಪ್ರವಾಸಗಳಿಗೂ ತಡೆ ಒಡ್ಡಲಾಗಿದೆ. ಆಡಳಿತ, ಪ್ರವಾಸ, ಮಾರುಕಟ್ಟೆ ಮತ್ತು ಪ್ರಚಾರಗಳಲ್ಲಿಯೂ ಗಣನೀಯ ಪ್ರಮಾಣದಲ್ಲಿ ವೆಚ್ಚಗಳನ್ನು ಕಡಿತ ಮಾಡಲಾಗಿದೆ. ಸೀನಿಯರ್ ಹಂತದ ವ್ಯವಸ್ಥಾಪಕರಿಗೆ ಬೋನಸ್‌ ಕಡಿತಗೊಳಿಸಲಾಗಿದೆ‘ ಎಂದು ತಿಳಿಸಿದ್ದಾರೆ

’ಮುಂದಿನ ನಾಲ್ಕು ವರ್ಷಗಳಲ್ಲಿ ಕ್ರಿಕೆಟ್ ಚಟುವಟಿಕೆಗಳು ಸರಿಯಾದ ಹಾದಿಗೆ ಮರಳಿದರೆ ₹ 700 ಕೋಟಿಯ ಆದಾಯವನ್ನು ನಿರೀಕ್ಷಿಸಬಹುದು. ಆಗ ಮತ್ತೆ ಸಂಸ್ಥೆಯು ಸಮೃದ್ಧವಾಗಹುದು‘ ಎಂದಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಆಗಿದ್ದ ಕೆವಿನ್ ರಾಬರ್ಟ್ಸ್‌ ಮಂಗಳವಾರ ರಾಜೀನಾಮೆ ನೀಡಿದ್ದರು.

’ಸಿಎದಲ್ಲಿ ಆರ್ಥಿಕ ನಷ್ಟಕ್ಕೆ ಮತ್ತು ಅಸಮರ್ಪಕ ಯೋಜನೆಗಳ ನಿರ್ವಹಣೆಗೆ ಕೆವಿನ್ ಮಾತ್ರ ಶಿಕ್ಷಾರ್ಹರಲ್ಲ. ನಿರ್ದೇಶಕರೂ ಅದರಲ್ಲಿ ಪಾಲುದಾರರಾಗಿದ್ದಾರೆ. ಅವರಿಗೆ ಉತ್ತರದಾಯಿತ್ವ ಇಲ್ಲವೇ‘ ಎಂದು ದಿಗ್ಗಜ ಕ್ರಿಕೆಟಿಗ ಅಲನ್ ಬಾರ್ಡರ್ ಚಾಟಿ ಬೀಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT