ಭಾನುವಾರ, ಡಿಸೆಂಬರ್ 15, 2019
26 °C

ಕ್ರಿಕೆಟ್‌ ಬೆಟ್ಟಿಂಗ್‌ಗೆ ‘ಆ್ಯಪ್’ ಬಳಕೆ, ಸಿಸಿಬಿ ಕಾರ್ಯಾಚರಣೆ; ನಾಲ್ವರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್‌ ನಡೆಸುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರು ಬಂಧಿಸಿರುವ ನಾಲ್ವರು ಆರೋಪಿಗಳು, ಜನರಿಂದ ಬೆಟ್ಟಿಂಗ್‌ ಕಟ್ಟಿಸಿಕೊಳ್ಳಲು ‘ಆ್ಯಪ್‌’ ಬಳಕೆ ಮಾಡುತ್ತಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

‘ಹೆಮ್ಮಿಗೆಪುರದ ಮನೆಯಲ್ಲಿ ಬಂಧಿಸಿರುವ ಗುಡ್ಡೆ ಮಂಜ ಅಲಿಯಾಸ್ ಮಂಜುನಾಥ್, ಪ್ರಮುಖ ಬುಕ್ಕಿ ಆಗಿದ್ದಾನೆ. ದೆಹಲಿಯ ಕೆಲವು ವ್ಯಕ್ತಿಗಳ ಜೊತೆ ಸಂಪರ್ಕ ಇಟ್ಟುಕೊಂಡು ಬೆಟ್ಟಿಂಗ್‌ ನಡೆಸುತ್ತಿದ್ದ. ಆತನಿಂದ ₹11.05 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಡಿಸಿಪಿ ಎಸ್‌.ಗಿರೀಶ್ ತಿಳಿಸಿದರು.

‘ಐದು ವರ್ಷಗಳಿಂದ ಬೆಟ್ಟಿಂಗ್‌ ನಡೆಸುತ್ತಿದ್ದ ಮಂಜ, ‘ಬೆಟ್‌ ಫೇರ್’ ಹಾಗೂ ‘ಬೆಟ್‌– 65’ ಆ್ಯಪ್‌ ಬಳಕೆ ಮಾಡುತ್ತಿದ್ದ. ಅದರ ಜೊತೆಗೆ ಪ್ರತ್ಯೇಕ ಟೆಲಿಫೋನ್‌ ಲೈನ್‌ಗಳ ಮೂಲಕವೂ ಕ್ರಿಕೆಟ್‌ ಪಂದ್ಯಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಬೆಟ್ಟಿಂಗ್ ಆಡುತ್ತಿದ್ದ. ಪ‍್ರತಿ ಬಾಲ್, ಓವರ್ ಹಾಗೂ ಪಂದ್ಯಕ್ಕಾಗಿ ಜನರಿಂದ ₹30 ಕಟ್ಟಿಸಿಕೊಂಡು, ಗೆದ್ದರೆ ₹70 ವಾಪಸ್‌ ಕೊಡುತ್ತಿದ್ದ. ಗೆದ್ದ ಹಣವನ್ನು ಆನ್‌ಲೈನ್‌ ಮೂಲಕ ಜನರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿತ್ತು. ಆತನ ಜೊತೆಗೆ ಹಲವರು ಕೃತ್ಯದಲ್ಲಿ ತೊಡಗಿದ್ದ ಮಾಹಿತಿ ಇದ್ದು, ಅವರನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಹೇಳಿದರು. 

ಸ್ಥಳೀಯ ಪಂದ್ಯಗಳಿಗೂ ಬೆಟ್ಟಿಂಗ್: ‘ಕಾಮಾಕ್ಷಿಪಾಳ್ಯ ಸಮೀಪದ ಶ್ರೀರಾಮನಗರದ ಗಾಡಿ ಮುದ್ದಣ್ಣ ರಸ್ತೆಯ ‘ಭೈರವೇಶ್ವರ ಟ್ರಾವೆಲ್ಸ್ ಆ್ಯಂಡ್ ಸೈಬರ್ ಸೆಂಟರ್‌’ನಲ್ಲಿ ಬೆಟ್ಟಿಂಗ್‌ ನಡೆಸುತ್ತಿದ್ದ ಸಿ. ಗಣೇಶ್ (37) ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ ₹1.23 ಲಕ್ಷ ಜಪ್ತಿ ಮಾಡಲಾಗಿದೆ’ ಎಂದು ಗಿರೀಶ್ ಮಾಹಿತಿ ನೀಡಿದರು.

‘ಅಂತರರಾಷ್ಟ್ರೀಯ ಪಂದ್ಯಗಳ ಜೊತೆ ಆರೋಪಿ, ಸ್ಥಳೀಯ ಕ್ರಿಕೆಟ್ ಪಂದ್ಯಗಳಿಗೂ ಬೆಟ್ಟಿಂಗ್‌ ಕಟ್ಟಿಸಿಕೊಳ್ಳುತ್ತಿದ್ದ. ದಕ್ಷಿಣ ಆಫ್ರಿಕಾದ ಡರ್ಬಾನ್‌ನಲ್ಲಿ ನಡೆದ ‘ಡರ್ಬಾನ್ ಹಿಟ್’ ಮತ್ತು ‘ಜಾಜಿ ಸ್ಟಾರ್ಸ್‌’ ನಡುವಿನ ಕ್ರಿಕೆಟ್ ಪಂದ್ಯ ಹಾಗೂ ಅಫ್ಗಾನಿಸ್ತಾನದಲ್ಲಿ ನಡೆದ ಪಂದ್ಯಗಳ ಬೆಟ್ಟಿಂಗ್‌ ಚೀಟಿಗಳು ಆತನ ಬಳಿ ಸಿಕ್ಕಿವೆ’ ಎಂದರು. 

ಬೆಟ್ಟಿಂಗ್‌ ಪಂಟರ್‌ಗಳು: ‘ಜೆ.ಪಿ. ನಗರದಲ್ಲಿ ಬಂಧಿಸಿರುವ ಜೆ. ಗೋಪಾಲ್ (45) ಹಾಗೂ ಬಿನ್ನಿ (33) ಎಂಬುವರು, ಬೆಟ್ಟಿಂಗ್‌ ಪಂಟರ್ಸ್‌ಗಳು. ಪ್ರಮುಖ ಬುಕ್ಕಿ ಜೊತೆಯಲ್ಲಿ ಸಂಪರ್ಕವಿಟ್ಟುಕೊಂಡು ಬೆಟ್ಟಿಂಗ್ ನಡೆಸುತ್ತಿದ್ದರು. ಅವರಿಂದ ₹5.38 ಲಕ್ಷ ಜಪ್ತಿ ಮಾಡಲಾಗಿದೆ’ ಎಂದು ಗಿರೀಶ್ ಹೇಳಿದರು. 

ಸಾಲಗಾರರ ಆಸ್ತಿ ಕಬಳಿಸಿರುವ ಕೃಷ್ಣಪ್ಪ

‘ಮೀಟರ್‌ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪದಡಿ ಬಂಧಿಸಿರುವ ಆನೇಕಲ್‌ ಕೃಷ್ಣಪ್ಪ, ಮೀಟರ್ ಬಡ್ಡಿ ಹಾಗೂ ಅಸಲು ಸಮೇತ ಸಾಲ ತೀರಿಸಿದರೂ ಸಾಲಗಾರರ ಆಸ್ತಿ ಕಬಳಿಸಿದ್ದಾನೆ. ಆ ಬಗ್ಗೆ ಈಗಾಗಲೇ 8 ಮಂದಿ ದೂರು ನೀಡಿದ್ದಾರೆ’ ಎಂದು ಡಿಸಿಪಿ ಗಿರೀಶ್ ಹೇಳಿದರು.

‘ಆರೋಪಿ ಕೃಷ್ಣಪ್ಪ, ಸಾಲ ನೀಡುವ ವೇಳೆ ಸಾಲಗಾರರಿಂದ ಖಾಲಿ ಬಾಂಡ್‌ ಪೇಪರ್‌ ಮೇಲೆ ಸಹಿ ಹಾಕಿಸಿಕೊಂಡು, ಆಸ್ತಿ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದ. 6 ತಿಂಗಳು ಅಥವಾ ವರ್ಷದ ನಂತರ, ಖಾಲಿ ಬಾಂಡ್‌ ಪೇಪರ್‌ ಮೇಲೆ ಆಸ್ತಿ ಖರೀದಿಸಿರುವುದಾಗಿ ಬರೆದುಕೊಳ್ಳುತ್ತಿದ್ದ. ನಂತರ, ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡುತ್ತಿದ್ದ’

‘ವಿಚಾರಣೆ ಆರಂಭವಾದ ಬಳಿಕ ನ್ಯಾಯಾಲಯದಿಂದ ಸಾಲಗಾರರಿಗೆ ಸಮನ್ಸ್‌ ಜಾರಿಯಾಗುತ್ತಿತ್ತು. ಆ ಸಮನ್ಸ್‌ ಸಾಲಗಾರರಿಗೆ ತಲುಪದಂತೆ ಆರೋಪಿ ನೋಡಿಕೊಳ್ಳುತ್ತಿದ್ದ. ಆ ಮೂಲಕ ಆಸ್ತಿ ಕಬಳಿಸುತ್ತಿದ್ದ. ಅದರ ವಿರುದ್ಧ ಸಾಲಗಾರರು ಪೊಲೀಸ್‌ ಠಾಣೆಗೆ ದೂರು ನೀಡಲು ಹೋದರೂ ಪೊಲೀಸರು ಪಡೆಯುತ್ತಿರಲಿಲ್ಲ. ನಮಗೆ ಮಾಹಿತಿ ಬರುತ್ತಿದ್ದಂತೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ’ ಎಂದು ಗಿರೀಶ್ ಹೇಳಿದರು.

‘ಪ್ರಜಾ ವಿಮೋಚನಾ ಚಳವಳಿ ಅಧ್ಯಕ್ಷನೂ ಆಗಿರುವ ಕೃಷ್ಣಪ್ಪ, ವಿಧವೆಯರು, ಮಕ್ಕಳು ಇಲ್ಲದವರು ಹಾಗೂ ಬಡವರ ಆಸ್ತಿಯನ್ನೇ ಕಬಳಿಸಿದ್ದಾನೆ. ರೌಡಿಗಳ ಮೂಲಕ ಆತ ಸಾಲಗಾರರಿಗೆ ಬೆದರಿಕೆ ಹಾಕಿಸುತ್ತಿದ್ದ. ಸದ್ಯ ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಆತನಿಂದ ಅನ್ಯಾಯಕ್ಕೊಳಗಾದವರು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬಂದು ದೂರು ನೀಡಬಹುದು’ ಎಂದು ಗಿರೀಶ್ ಹೇಳಿದರು.

ಮಿರ್ಲೆ ವಿರುದ್ಧ 100ಕ್ಕೂ ಹೆಚ್ಚು ಮಂದಿಯಿಂದ ದೂರು

ಜನರನ್ನು ಬೆದರಿಸಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದ ಆರೋಪದಡಿ ಬಂಧಿಸಲಾಗಿರುವ ಮಿರ್ಲೆ ವರದರಾಜು ವಿರುದ್ಧ ಶನಿವಾರದವರೆಗೆ 100ಕ್ಕೂ ಹೆಚ್ಚು ಮಂದಿ ಸಿಸಿಬಿಗೆ ದೂರು ನೀಡಿದ್ದಾರೆ.

‘ಕೆಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿನಗರ, ಚಂದ್ರಾಲೇಔಟ್ ಸುತ್ತಮುತ್ತ ಆರೋಪಿ, ಸಾರ್ವಜನಿಕರ ಭೂಮಿ ಕಬಳಿಸಿದ್ದ. ಆತನ ಮನೆ ಮೇಲೆ ದಾಳಿ ನಡೆಸಿದ್ದಾಗ ₹ 500 ಕೋಟಿಗೂ ಅಧಿಕ ಮೌಲ್ಯದ ಭೂವ್ಯವಹಾರದ ದಾಖಲೆಗಳು ಸಿಕ್ಕಿದ್ದವು. ಅವುಗಳ ಪರಿಶೀಲನೆ ನಡೆಯುತ್ತಿದೆ. ವರದರಾಜು ಪತ್ನಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಡಿಸಿಪಿ ಗಿರೀಶ್ ಹೇಳಿದರು.

ಆ್ಯಂಬಿಡೆಂಟ್ ಪ್ರಕರಣ; ಪ್ರತ್ಯೇಕ ಖಾತೆ

‘ಆ್ಯಂಬಿಡೆಂಟ್’ ಕಂಪನಿ ವಂಚನೆ ಪ್ರಕರಣ ಸಂಬಂಧ ನ್ಯಾಯಾಲಯದ ಹೆಸರಿನಲ್ಲಿ ಪ್ರತ್ಯೇಕ ಖಾತೆ ತೆರೆಯಲಾಗಿದೆ. ಕಂಪನಿಯಿಂದ ಹಣ ಪಡೆದವರು, ಡಿಡಿ ಮೂಲಕ ಆ ಖಾತೆಗೆ ಹಣ ಜಮೆ ಮಾಡುತ್ತಿದ್ದಾರೆ. ಅದೇ ಹಣವನ್ನು ನ್ಯಾಯಾಲಯವೇ ಗ್ರಾಹಕರಿಗೆ ನೀಡಲಿದೆ’ ಎಂದು ಗಿರೀಶ್ ಹೇಳಿದರು.

‘ಕಂಪನಿಯಿಂದ ಹಣ ಪಡೆದಿರುವ ವಿಜಯ್ ಟಾಟಾ (₹4.71 ಕೋಟಿ) ಹಾಗೂ ಜಿಯಾ ಎಂಬಾತ ಹಣ ವಾಪಸ್‌ ಕೊಡಲು ಒಪ್ಪಿಕೊಂಡಿದ್ದಾರೆ. ಅವರನ್ನು ಪ್ರಕರಣದ ಸಾಕ್ಷಿಯನ್ನಾಗಿ ಮಾಡಿಕೊಳ್ಳಲಾಗಿದೆ’ ಎಂದರು.

‘ಬಡ್ಡಿ ಆಸೆ ತೋರಿಸಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ’ಅಜ್ಮೀರ್ ಗ್ರೂಪ್’ ಕಂಪನಿ ವಿರುದ್ಧವೂ ತನಿಖೆ ನಡೆಯುತ್ತಿದೆ. ಕಂಪನಿ ವ್ಯವಸ್ಥಾಪಕ ತಬ್ರೇಜ್ ಪಾಷಾ ಹಾಗೂ ಅಬ್ದುಲ್ ದಸ್ತಗೀರ್‌ನ ಜಾಮೀನು ರದ್ದಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಿದ್ದೇವೆ’ ಎಂದು ಗಿರೀಶ್ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು