ಭಾನುವಾರ, ಮೇ 16, 2021
28 °C
ಚೆನ್ನೈ ಸೂಪರ್ ಕಿಂಗ್ಸ್‌–ರಾಜಸ್ಥಾನ ರಾಯಲ್ಸ್‌ ಮುಖಾಮುಖಿ ಇಂದು

IPL-2021 CSK VS RR| ಮಹಿಗೆ ಸಂಜು ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರಸಿಂಗ್  ಧೋನಿಗೆ ಯುವನಾಯಕ ಸಂಜು ಸ್ಯಾಮ್ಸನ್ ಸೆಡ್ಡು ಹೊಡೆಯಲು ಸಿದ್ಧರಾಗಿದ್ದಾರೆ.

ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ತಂಡವು ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೆಣಸಲಿದೆ.  ಈ ಟೂರ್ನಿಯಲ್ಲಿ ಎರಡೂ ತಂಡಗಳು ಸಮಬಲಶಾಲಿಗಳಂತೆ ಕಾಣುತ್ತಿವೆ. ಏಕೆಂದರೆ, ಉಭಯ ತಂಡಗಳು ಇದುವರೆಗೆ ಆಡಿರುವ ತಲಾ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಸೋಲು ಅನುಭವಿಸಿವೆ.

ಅನುಭವಿ ಮತ್ತು ಯುವ ಆಟಗಾರರು ದಂಡು ಇರುವ ಧೋನಿ ಬಳಗವು ಹೋದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದ ರೀತಿಯು ಅಮೋಘವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡವನ್ನು 106 ರನ್‌ಗಳಿಗೆ ನಿಯಂತ್ರಿಸುವಲ್ಲಿ ಮಧ್ಯಮವೇಗಿ ದೀಪಕ್ ಚಾಹರ್ ಪಾತ್ರ ಹಿರಿದಾಗಿತ್ತು. ನಾಲ್ಕು ವಿಕೆಟ್ ಕಬಳಿಸಿದ್ದ ಅವರು ಮಿಂಚಿದ್ದರು. ಬ್ಯಾಟಿಂಗ್‌ನಲ್ಲಿ ಫಫ್ ಡುಪ್ಲೆಸಿ ಮತ್ತು ಮೋಯಿನ್ ಅಲಿ ಉತ್ತಮವಾಗಿ ಆಡಿ ತಂಡವನ್ನು ಗೆಲುವಿನ ಗಡಿ ಮುಟ್ಟಿಸಿದ್ದರು.  ಚೆನ್ನೈ ತಂಡವು ಮೊದಲ ಪಂದ್ಯದಲ್ಲಿ ತನ್ನ ಸೋಲಿಗೆ ಕಾರಣವಾಗಿದ್ದ ಲೋಪಗಳನ್ನು ತಿದ್ದಿಕೊಂಡಿದ್ದು ಎರಡನೇ ಪಂದ್ಯದಲ್ಲಿ ಕಂಡಿತ್ತು.

ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಎದುರು ವಿರೋಚಿತ ಸೋಲು ಅನುಭವಿಸಿದ್ದ ರಾಯಲ್ಸ್‌, ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಜಯಿಸಿತ್ತು.  ಡೇವಿಡ್ ಮಿಲ್ಲರ್ ಮತ್ತು ‘ದುಬಾರಿ‘ ಆಟಗಾರ ಕ್ರಿಸ್ ಮೊರಿಸ್ ಅವರ ಅಮೋಘ ಆಟ ಕಳೆಗಟ್ಟಿತ್ತು. ಗೆಲುವು ಕೈತಪ್ಪುವ ಹಂತದಲ್ಲಿ ತಮ್ಮ ಬ್ಯಾಟಿಂಗ್ ಪ್ರತಿಭೆ ಮೆರೆದಿದ್ದ ಕ್ರಿಸ್‌ ತಮಗೆ ನೀಡಿದ ಮೌಲ್ಯಕ್ಕೆ ಗೆಲುವಿನ ಉಡುಗೊರೆ ಕೊಟ್ಟಿದ್ದರು.

ಅನುಭವಿ ಬೌಲರ್ ಜಯದೇವ್ ಉನದ್ಕತ್ ಮತ್ತು ಯುವಪ್ರತಿಭೆ ಚೇತನ್ ಸಕಾರಿಯಾ ಅವರು  ಚೆನ್ನೈ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಯಾವ ತಂತ್ರ ಹೂಡಲಿದ್ದಾರೆಂಬುದೂ ಕುತೂಹಲ ಮೂಡಿಸಿದೆ. ಅಲ್ಲದೇ ಧೋನಿಯ ಕೀಪಿಂಗ್ ಮತ್ತು ನಾಯಕತ್ವವನ್ನು ನೋಡುತ್ತ, ಅವರಿಂದ ಕಲಿಯುತ್ತಲೇ ಬೆಳೆದ ಸಂಜು ಸ್ಯಾಮ್ಸನ್‌ಗೂ ಇದು ಪರೀಕ್ಷೆಯ ಪಂದ್ಯವಾಗುವುದು ಖಚಿತ.

ತಂಡಗಳು: ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರಸಿಂಗ್ ಧೋನಿ (ವಿಕೆಟ್‌ಕೀಪರ್–ನಾಯಕ), ಸುರೇಶ್ ರೈನಾ, ಅಂಬಟಿ ರಾಯುಡು, ಕೆ.ಎಂ. ಆಸಿಫ್, ದೀಪಕ್ ಚಾಹರ್, ಡ್ವೇನ್ ಬ್ರಾವೊ, ಫಫ್ ಡುಪ್ಲೆಸಿ, ಇಮ್ರಾನ್ ತಾಹಿರ್, ಎನ್. ಜಗದೀಶನ್, ಕರ್ಣ ಶರ್ಮಾ, ಲುಂಗಿ ಗಿಡಿ, ಮಿಚೆಲ್ ಸ್ಯಾಂಟನರ್, ರವೀಂದ್ರ ಜಡೇಜ, ಋತುರಾಜ್ ಗಾಯಕವಾಡ್, ಶಾರ್ದೂಲ್ ಠಾಕೂರ್, ಸ್ಯಾಮ್ ಕರನ್, ಆರ್. ಸಾಯಿಕಿಶೋರ್, ಮೋಯಿನ್ ಅಲಿ, ಕೃಷ್ಣಪ್ಪ ಗೌತಮ್, ಚೇತೇಶ್ವರ್ ಪೂಜಾರ, ಹರಿಶಂಕರ್ ರೆಡ್ಡಿ, ಭಗತ್ ವರ್ಮಾ, ಸಿ. ಹರಿ ನಿಶಾಂತ್

ರಾಜಸ್ಥಾನ ರಾಯಲ್ಸ್‌: ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್/ ನಾಯಕ), ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಬೆನ್ ಸ್ಟೋಕ್ಸ್‌, ಯಶಸ್ವಿ ಜೈಸ್ವಾಲ್, ಮನನ್ ವೊಹ್ರ, ಅನುಜ್ ರಾವತ್, ರಿಯಾನ್ ಪರಾಗ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಮಹಿಪಾಲ್ ಲೊಮ್ರೊರ್, ಶ್ರೇಯಸ್ ಗೋಪಾಲ್, ಮಯಂಕ್ ಮಾರ್ಕಂಡೆ, ಆ್ಯಂಡ್ರ್ಯೂ ಟೈ, ಜಯದೇವ್ ಉನದ್ಕತ್, ಕಾರ್ತಿಕ್ ತ್ಯಾಗಿ, ಶಿವಂ ದುಬೆ, ಕ್ರಿಸ್ ಮೊರಿಸ್, ಮುಸ್ತಫಿಜರ್ ರೆಹಮಾನ್, ಚೇತನ್ ಸಕಾರಿಯಾ, ಕೆ.ಸಿ. ಕಾರ್ಯಪ್ಪ, ಲಿಯಾಮ್ ಲಿವಿಂಗ್‌ಸ್ಟೋನ್, ಕುಲದೀಪ್ ಯಾದವ್, ಆಕಾಶ್ ಸಿಂಗ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು