ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಧರ್ ಟ್ರೋಫಿ: ರಹಾನೆ, ಅಶ್ವಿನ್‌ಗೆ ಸವಾಲಿನ ಟೂರ್ನಿ

ದೇವಧರ್ ಟ್ರೋಫಿ ಕ್ರಿಕೆಟ್ ಇಂದಿನಿಂದ; ಪೃಥ್ವಿ ಶಾ ಮಿಂಚುವ ಭರವಸೆ
Last Updated 22 ಅಕ್ಟೋಬರ್ 2018, 20:01 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಏಕದಿನ ಕ್ರಿಕೆಟ್ ತಂಡದಲ್ಲಿ ಮತ್ತೆ ಸ್ಥಾನ ಉಳಿಸಿಕೊಳ್ಳುವ ಬಯಕೆಯಲ್ಲಿರುವ ಅಜಿಂಕ್ಯ ರಹಾನೆ ಮತ್ತು ರವಿಚಂದ್ರನ್ ಅಶ್ವಿನ್‌, ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭರವಸೆಯೊಂದಿಗೆ ಕಣಕ್ಕೆ ಇಳಿಯಲಿದ್ದಾರೆ. ಟೂರ್ನಿ ಮಂಗಳವಾರ ಆರಂಭವಾಗಲಿದೆ.

ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ ಟೂರ್ನಿಗೆ ಇನ್ನು ಹೆಚ್ಚು ಸಮಯವಿಲ್ಲ. ಈ ಟೂರ್ನಿಗೂ ಮೊದಲುಭಾರತ ವಿವಿಧ ದೇಶಗಳ ವಿರುದ್ಧ 17 ಏಕದಿನ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಪ್ರಮುಖ ಆಟಗಾರರು ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಈಗ ತಂಡದಿಂದ ಹೊರಗೆ ಉಳಿದಿರುವ ಆಟಗಾರರು ದೇವಧರ್ ಟ್ರೋಫಿಯ ಮೂಲಕ ಆಯ್ಕೆ ಮಂಡಳಿಯ ಗಮನ ಸೆಳೆಯಲು ಶ್ರಮಿಸಲಿದ್ದಾರೆ.

ಟೆಸ್ಟ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ವೆಸ್ಟ್ ಇಂಡೀಸ್‌ ಎದುರಿನ ಏಕದಿನ ಸರಣಿಯಲ್ಲಿ ಆಡುವ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಆದರೆ ಅವರ ಬೌಲಿಂಗ್ ಜೋಡಿ ರವಿಚಂದ್ರನ್ ಅಶ್ವಿನ್ ಇನ್ನೂ ಹೊರಗೆಯೇ ಉಳಿದಿದ್ದಾರೆ. 2017ರ ಜುಲೈ ನಂತರ ಅವರು ಒಂದು ಏಕದಿನ ಪಂದ್ಯವನ್ನುನ್ನೂ ಆಡಿಲ್ಲ.

ಈಗ ತಂಡದ ಸ್ಪಿನ್ ವಿಭಾಗ ಉತ್ತಮವಾಗಿದೆ. ಆದ್ದರಿಂದ ಮತ್ತೆ ತಂಡದಲ್ಲಿ ಸ್ಥಾನ ಗಳಿಸಿ ಮುಂದಿನ ವಿಶ್ವಕಪ್‌ನಲ್ಲಿ ಆಡುವ ಕನಸು ಕಾಣಬೇಕಾದರೆ ಅಶ್ವಿನ್‌ ಎದುರು ಭಾರಿ ಸವಾಲು ಇದೆ. ತಮಿಳುನಾಡಿನ ಮತ್ತೊಬ್ಬ ಆಟಗಾರ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್ ಅವರಿಗೂ ದೇವಧರ್ ಟ್ರೋಫಿ ಟೂರ್ನಿ ಸವಾಲಿನದ್ದಾಗಿದೆ.

ಶ್ರೀಲಂಕಾದಲ್ಲಿ ನಡೆದಿದ್ದ ನಿಧಾಸ್ ಕಪ್‌ ಟೂರ್ನಿಯ ಫೈನಲ್‌ನಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ದಿನೇಶ್ ಕಾರ್ತಿಕ್‌ ನಂತರ ಲಭಿಸಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿಲ್ಲ. ಅವರ ಸ್ಥಾನದಲ್ಲಿ ಈಗ ರಿಷಭ್ ಪಂತ್‌ ಮಿಂಚುತ್ತಿದ್ದಾರೆ. ಮುಂದಿನ ತಿಂಗಳು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ತಂಡದಲ್ಲಿ ಸ್ಥಾನ ಗಳಿಸಬೇಕಾದರೆ ದೇವಧರ್ ಟ್ರೋಫಿ ಟೂರ್ನಿಯಲ್ಲಿ ಕಾರ್ತಿಕ್‌ ತಮ್ಮ ಸಾಮರ್ಥ್ಯವನ್ನು ಪಣಕ್ಕಿಡಬೇಕಾಗಿದೆ. ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಎಂಟು ತಿಂಗಳಿಂದ ಏಕದಿನ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಗಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT