ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿಗೆ ಸಲಾಂ: ಚಾಚಾ ಚಿಕಾಗೊ ನಿವೃತ್ತಿ ಘೋಷಣೆ

Last Updated 17 ಆಗಸ್ಟ್ 2020, 14:27 IST
ಅಕ್ಷರ ಗಾತ್ರ

ನವದೆಹಲಿ: ಅದು, 2011ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯ. ಮೊಹಾಲಿಯಲ್ಲಿ ನಡೆದ ಹಣಾಹಣಿಯಲ್ಲಿ ಸೆಣಸಿದ್ದು ಭಾರತ ಮತ್ತು ಪಾಕಿಸ್ತಾನ ತಂಡಗಳು. ಪಾಕಿಸ್ತಾನದ ಪಂದ್ಯ ವಿಶ್ವದ ಯಾವ ಮೂಲೆಯಲ್ಲಿದ್ದರೂ ಅಲ್ಲಿಗೆ ತೆರಳುವ ಕರಾಚಿ ಮೂಲದ ಮೊಹಮ್ಮದ್ ಬಶೀರ್ ಅವರಿಗೆ ಆ ಪಂದ್ಯ ವೀಕ್ಷಿಸಲು ಭಾರತದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಟಿಕೆಟ್ ಒಂದನ್ನು ಉಚಿತವಾಗಿ ಕಳುಹಿಸಿಕೊಟ್ಟಿದ್ದರು. ಅನಂತರ ಮಹತ್ವದ ಪಂದ್ಯಗಳಿಗೆಲ್ಲ ಅವರಿಗೆ ಧೋನಿ ಕಡೆಯಿಂದ ಟಿಕೆಟ್ ಬರುತ್ತಿತ್ತು.

ಚಾಚಾ ಚಿಕಾಗೊ ಎಂದೇ ಖ್ಯಾತರಾಗಿರುವ ಬಶೀರ್ ಇದೀಗ ಧೋನಿ ನಿವೃತ್ತಿ ಘೋಷಿಸಿದ್ದರಿಂದ ಬೇಸರಗೊಂಡು ತಾವು ಕೂಡ ಇನ್ನು ಅಂಗಣಕ್ಕೆ ತೆರಳಿ ಕ್ರಿಕೆಟ್ ವೀಕ್ಷಿಸುವುದಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನ ತಂಡವನ್ನು ಹುರಿದುಂಬಿಸಲು ಕ್ರೀಡಾಂಗಣಕ್ಕೆ ತೆರಳುತ್ತಿದ್ದರೂ ಭಾರತ ಎದುರಿನ ಪಂದ್ಯವಾಗಿದ್ದರೆ ಚಾಚಾ ಅವರು ಮಹೇಂದ್ರ ಸಿಂಗ್ ಧೋನಿ ಪರವಾಗಿರುತ್ತಿದ್ದರು. ಇದಕ್ಕೆ ಪಾಕಿಸ್ತಾನ ಅಭಿಮಾನಿಗಳಿಂದ ಟೀಕೆಗಳನ್ನೂ ಕೇಳಿದ್ದಾರೆ. ಮೊಹಾಲಿ ಪಂದ್ಯದಲ್ಲಿ ಬೇಷರತ್ತಾಗಿ ಕ್ರಿಕೆಟ್ ಬೆಂಬಲಿಸಬೇಕು ಎಂಬ ‘ಷರತ್ತು’ ಹಾಕಿ ಅವರಿಗೆ ಧೋನಿ ಟಿಕೆಟ್ ನೀಡಿದ್ದರು.

‘ಧೋನಿ ನಿವೃತ್ತರಾಗಿದ್ದಾರೆ. ಆದ್ದರಿಂದ ನಾನೂ ‘ನಿವೃತ್ತ’ನಾಗುತ್ತಿದ್ದೇನೆ. ಇನ್ನು ಮುಂದೆ ಅವರೊಂದಿಗೆ ತೆರಳಿ ಅಂಗಣದಲ್ಲಿ ಕ್ರಿಕೆಟ್ ನೋಡುವುದಕ್ಕಾಗುವುದಿಲ್ಲವಲ್ಲ ಎಂಬ ಬೇಸರ ಕಾಡುತ್ತಿದೆ. ಎಲ್ಲ ಆಟಗಾರರೂ ಒಂದಿಲ್ಲ ಒಂದು ಕಾಲದಲ್ಲಿ ನಿವೃತ್ತರಾಗಲೇಬೇಕು. ಆದರೆ ಧೋನಿ ನಿವೃತ್ತಿ ವಿಚಾರ ನನಗೆ ಅಚ್ಚರಿ ತಂದಿದೆ. ಅವರೊಂದಿಗೆ ಕಳೆದ ನೆನಪುಗಳು ಮಾಸದೇ ಉಳಿದಿವೆ’ ಎಂದು ಚಿಕಾಗೊದಲ್ಲಿ ರೆಸ್ಟಾರೆಂಟ್ ನಡೆಸುತ್ತಿರುವ ಬಶೀರ್ ಹೇಳಿದರು.

‘ಕೋವಿಡ್ –19 ಹಾವಳಿ ಮುಗಿದ ನಂತರ ರಾಂಚಿಗೆ ತೆರಳಿ ಧೋನಿ ಅವರನ್ನು ಭೇಟಿ ಮಾಡುವೆ. ಅವರ ನಿವೃತ್ತಿ ಜೀವನಕ್ಕೆ ಶುಭ ಕೋರಲು ಅಷ್ಟನ್ನಾದರೂ ಮಾಡದಿದ್ದರೆ ಹೇಗೆ’ ಎಂದು ಕೇಳಿದ ಬಶೀರ್‌, ‘ಮತ್ತೊಬ್ಬ ಕ್ರಿಕೆಟ್ ಪ್ರೇಮಿ ಮೊಹಾಲಿಯ ರಾಮ್ ಬಾಬು ಅವರನ್ನೂ ಜೊತೆಗೆ ಕರೆದುಕೊಂಡು ಹೋಗುವೆ. ಐಪಿಎಲ್‌ನಲ್ಲಿ ಅವರು ಆಡುವುದನ್ನು ನೋಡಬೇಕೆಂಬ ಬಯಕೆ ಇದೆ. ಆದರೆ ಪ್ರಯಾಣಕ್ಕೆ ಸಂಬಂಧಿಸಿದ ನಿರ್ಬಂಧಗಳು ಮತ್ತು ನನ್ನ ಆರೋಗ್ಯ ಸಮಸ್ಯೆ ಅದಕ್ಕೆ ಅಡ್ಡಿಯಾಗಿದೆ’ ಎಂದರು.

‘ಧೋನಿ ಅವರೊಂದಿಗೆ ಮಾತನಾಡಿದ್ದು ತೀರಾ ಕಡಿಮೆ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ವೇಳೆಯೂ ಮಾತನಾಡಲು ಆಗಲಿಲ್ಲ. ಆದರೆ ನಾನು ಕೇಳುವ ಮೊದಲೇ ಅವರು ನನಗಾಗಿ ಸಹಾಯ ಮಾಡಲು ಮುಂದಾಗುತ್ತಾರೆ. ಪಂದ್ಯಗಳಿಗಾಗಿ ಟಿಕೆಟ್ ಕಳುಹಿಸಿಕೊಡಲು ಮರೆಯುವುದೇ ಇಲ್ಲ. 2018ರ ಏಷ್ಯಾಕಪ್‌ ಸಂದರ್ಭದಲ್ಲಿ ಅವರ ಕೊಠಡಿಗೆ ಕರೆದುಕೊಂಡು ಹೋಗಿ ಅವರ ಜೆರ್ಸಿ ಕೊಟ್ಟರು. ಆ ಗಳಿಗೆಯನ್ನು ಮರೆಯಲು ಸಾಧ್ಯವೇ ಇಲ್ಲ’ ಎಂದು ಬಶೀರ್ ಭಾವುಕರಾಗಿ ಹೇಳಿದರು.

‘2015ರ ವಿಶ್ವಕಪ್‌ ಸಂದರ್ಭದಲ್ಲಿ ಸಿಡ್ನಿ ಅಂಗಣದಲ್ಲಿ ಕುಳಿತಿದ್ದೆ. ಬಿಸಿಲಿನ ಉರಿ ತಡೆಯಲಾಗುತ್ತಿರಲಿಲ್ಲ. ಆಗ ಅಲ್ಲಿಗೆ ಬಂದ ಸುರೇಶ್ ರೈನಾ ಅವರು ಸನ್‌ ಗ್ಲಾಸ್ ಕೊಟ್ಟರು. ಇದನ್ನು ಧೋನಿ ಅವರು ನಿಮಗಾಗಿ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಆಗ ನಾನು ಏನು ಹೇಳಬೇಕೆಂದು ತೋಚದೆ ಸುಮ್ಮನೆ ನಿಂತಿದ್ದೆ’ ಎಂದು ಬಶೀರ್ ಹೇಳಿದರು.

‘ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪಂದ್ಯವೊಂದರಲ್ಲಿ ನಾನು ಧೋನಿ ಅವರನ್ನು ಬೆಂಬಲಿಸಿದ್ದಕ್ಕೆ ಪಾಕಿಸ್ತಾನದ ಅಭಿಮಾನಿಗಳು ನನ್ನನ್ನು ವಂಚಕ ಎಂದು ಕರೆದು ಜರಿದರು. ಅದರಿಂದ ಬೇಸರವೇನೂ ಆಗಲಿಲ್ಲ. ಎರಡೂ ರಾಷ್ಟ್ರಗಳನ್ನು ಸಮಾನವಾಗಿ ಪ್ರೀತಿಸುವ ನನಗೆ ಮಾನವೀಯತೆ ಮುಖ್ಯ’ ಎಂದು ಬಶೀರ್ ನುಡಿದರು.

ಅವರ ಪತ್ನಿ ಹೈದರಾಬಾದ್‌ನವರಾಗಿದ್ದು ಜನವರಿಯಲ್ಲಿ ಅಲ್ಲಿಗೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT