ಶನಿವಾರ, ಜುಲೈ 31, 2021
27 °C

ಚೆಂಡಿನ ಹೊಳಪಿಗೆ ಬೆನ್ನಿನ ಬೆವರು ಬಳಸುತ್ತಿರುವ ಇಂಗ್ಲೆಂಡ್ ಆಟಗಾರರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್: ಕ್ರಿಕೆಟ್ ಪಂದ್ಯದಲ್ಲಿ ಚೆಂಡಿನ ಹೊಳಪು ಕಾಪಾಡಲು ಎಂಜಲು ಲೇಪಿಸುವುದನ್ನು ನಿಷೇಧ ಮಾಡಿರುವದರಿಂದಾಗಿ, ಇಂಗ್ಲೆಂಡ್ ಆಟಗಾರರು ತಮ್ಮ ಬೆನ್ನಿನ ಮೇಲಿನ ಬೆವರನ್ನು ಬಳಸುತ್ತಿದ್ದಾರೆ.

ಇಲ್ಲಿಯ ರೋಸ್‌ ಬೌಲ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಎರಡನೇ ದಿನವಾದ ಗುರುವಾರ ಇಂಗ್ಲೆಂಡ್ ಬೌಲರ್‌ಗಳು ಈ ಪ್ರಯೋಗ ಮಾಡಿದ್ದು ಕಂಡುಬಂದಿತು.

ಕೋವಿಡ್ –19 ತಡೆಗೆ ಚೆಂಡುಗಳಿಗೆ ಎಂಜಲು ಪ್ರಯೋಗವನ್ನು ಐಸಿಸಿಯು ತಾತ್ಕಾಲಿಕವಾಗಿ ನಿಷೇಧಿಸಿದೆ.

‘ಬೆನ್ನಿನ ಬೆವರಿನಿಂದ ಹೊಳಪು ಉಳಿಸಿಕೊಳ್ಳುವುದೊಂದೇ ಈ ಸಮಯದಲ್ಲಿ ಸೂಕ್ತ ದಾರಿಯಾಗಿದೆ. ನಾನು, ಜಿಮ್ಮಿ ಆ್ಯಂಡರ್ಸನ್ ಮತ್ತು ಜೋಫ್ರಾ (ಆರ್ಚರ್)  ಈ ರೀತಿ ಮಾಡುತ್ತಿದ್ದೇವೆ’ ಎಂದು ಬೌಲರ್ ಮಾರ್ಕ್ ವುಡ್ಸ್‌ ಹೇಳಿದ್ದಾರೆ.

ಪಂದ್ಯದ ಮೊದಲ ದಿನದ ಬಹುತೇಕ ಸಮಯವು ಮಳೆಯಿಂದಾಗಿ ನಡೆದಿರಲಿಲ್ಲ. ಎರಡನೇ ದಿನದಾಟದಲ್ಲಿ ವಿಂಡೀಸ್‌ ವೇಗಿ ಶಾನನ್ ಗ್ಯಾಬ್ರಿಯಲ್ ಮತ್ತು ಜೇಸನ್ ಹೋಲ್ಡರ್  ಕ್ರಮವಾಗಿ ನಾಲ್ಕು ಮತ್ತು ಆರು ವಿಕೆಟ್‌ಗಳನ್ನು ಗಳಿಸಿದ್ದರು. ಇದರಿಂದಾಗಿ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 204 ರನ್‌ಗಳಿಗೆ ಆಲೌಟ್ ಆಗಿತ್ತು.

‘ಪಂದ್ಯದಲ್ಲಿ ಇನ್ನೂ ಮೂರು ದಿನಗಳು ಬಾಕಿ ಇವೆ. ಪಿಚ್‌ನಲ್ಲಿ ಇನ್ನೂ ಸತ್ವವೂ ಇದೆ. ನಾವು 250–300 ರನ್‌ಗಳನ್ನು ಗಳಿಸಿದ್ದರೆ ಚೆನ್ನಾಗಿತ್ತು. ಇರಲಿ; ಮತ್ತೆ ಪುಟಿದೇಳುವ ಅವಕಾಶ ನಮಗೆ ಇದೆ’ ಎಂದು ವುಡ್ಸ್‌ ಹೇಳಿದ್ದಾರೆ.

‘ನಾವು ಬೌಲಿಂಗ್‌ನಲ್ಲಿ ಲೈನ್ ಮತ್ತು ಲೆಂಗ್ತ್‌ ಕಾಪಾಡಿಕೊಳ್ಳಬೇಕು. ವಿಂಡೀಸ್ ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿದ್ದು ಅವರಿಗೆ ಫಲ ಸಿಕ್ಕಿತು’ ಎಂದು ಹೇಳಿದರು.

ಕೊರೊನಾ ವೈರಸ್ ಪ್ರಸರಣದ ಕಾರಣ ಹೋದ ನಾಲ್ಕು ತಿಂಗಳಲ್ಲಿ ಕ್ರಿಕೆಟ್  ಚಟುವಟಿಕೆಗಳು ಸ್ಥಗಿತವಾಗಿದ್ದವು. ಅದರ ನಂತರ ಇದೇ ಮೊದಲ ಸರಣಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು