ಗುರುವಾರ , ಜುಲೈ 29, 2021
22 °C

ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ ಲಾಂಛನ ಹಾಕಿಕೊಳ್ಳಲಿರುವ ಇಂಗ್ಲೆಂಡ್ ಆಟಗಾರರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಮುಂದಿನ ವಾರ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌ ಲೋಗೊ ಧರಿಸಲಿರುವ ವೆಸ್ಟ್ ಇಂಡೀಸ್ ತಂಡದೊಂದಿಗೆ ಆತಿಥೇಯ ಇಂಗ್ಲೆಂಡ್ ಕೂಡ ಕೈಜೋಡಿಸಲಿದೆ.

ಕ್ರೀಡೆಯಲ್ಲಿ ವರ್ಣ ಭೇದ ನೀತಿಯನ್ನು ವೀರೋಧಿಸಿ ವಿಂಡೀಸ್ ಆಟಗಾರರು ತಮ್ಮ ಟೀಶರ್ಟ್‌ನ ಕಾಲರ್‌ನಲ್ಲಿ ಈ ಲೋಗೊ ಹಾಕಿಕೊಂಡು ಪ್ರದರ್ಶಿಸಲಿದ್ದಾರೆ. ಅವರೊಂದಿಗೆ ಇಂಗ್ಲೆಂಡ್ ಆಟಗಾರರೂ ಲೋಗೊ ಧರಿಸಲಿದ್ದಾರೆ.  ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್‌ ಮಂಡಳಿಯು ಈ ಅಭಿಯಾನಕ್ಕೆ ಅನುಮತಿ ನೀಡಿದೆ.

’ಇಂಗ್ಲೆಂಡ್ ಆಟಗಾರರು ಈ ಲೋಗೊವನ್ನು ತಮ್ಮ ಶರ್ಟ್‌ಗಳ ಮೇಲೆ ಹಾಕಿಕೊಂಡು ಪ್ರದರ್ಶಿಸಲಿದ್ದಾರೆ‘ ಎಂದು ಇಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

’ಕಪ್ಪು ಜನಾಂಗಕ್ಕೆ ದೃಢವಾದ ಬೆಂಬಲ ಸೂಚಿಸುವುದು ನಮ್ಮ ಕರ್ತವ್ಯ. ಈ ವಿಷಯದ ಕುರಿತು ಜನಸಮುದಾಯದಲ್ಲಿ ತಿಳಿವಳಿಕೆ ಮೂಡಿಸುವುದು ಅವಶ್ಯಕವಾಗಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕುರಿತು ಎಲ್ಲ ಕಡೆಯೂ ಜಾಗೃತಿ ಮೂಡಬೇಕು. ಇಂಗ್ಲೆಂಡ್ ಆಟಗಾರರು ಮತ್ತು ಕ್ರಿಕೆಟ್ ಆಡಳಿತವು ಈ ಸರಣಿಯ ಮೂಲಕ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಲಿದೆ‘ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ತಿಳಿಸಿದ್ದಾರೆ.

’ಕಪ್ಪು, ಏಷ್ಯನ್ ಮತ್ತು ಅಲ್ಪಸಂಖ್ಯಾತ ಹಿನ್ನೆಲೆಯ ವ್ಯಕ್ತಿಗಳ ಬಗ್ಗೆ ಜನರು ತಾರತಮ್ಯದ ಭಾವವನ್ನು ತಾಳುವುದು ಏಕೆ ಎಂಬುದು ವಿಚಿತ್ರ. ತ್ವಚೆಯ ಬಣ್ಣದ ಕಾರಣಕ್ಕೆ ಅವರನ್ನು ಕೀಳಾಗಿ ಕಾಣುವುದು ಸರಿಯಲ್ಲ. ನಾವೆಲ್ಲರೂ ಈ ಕುರಿತು ಅರಿಯಬೇಕು. ಎಲ್ಲರೂ ಮನುಷ್ಯರು‘ ಎಂದು ರೂಟ್ ಹೇಳಿದ್ಧಾರೆ.

ಸರಣಿಯ ಮೊದಲ ಟೆಸ್ಟ್‌ನಲ್ಲಿ ರೂಟ್ ಆಡುತ್ತಿಲ್ಲ. ಅವರ ಬದಲಿಗೆ ಜೋ ರೂಟ್ ತಂಡವನ್ನು ಮುನ್ನಡೆಸುವರು.

ಹೋದ ತಿಂಗಳು ಅಮೆರಿಕದಲ್ಲಿ ಆಫ್ರೊ–ಅಮೆರಿಕ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅವರು ಪೊಲೀಸ್ ದೌರ್ಜನ್ಯದಲ್ಲಿ ಸಾವಿಗೀಡಾಗಿದ್ದರು. ಅದರ ನಂತರ ಜನಾಂಗೀಯ ದ್ವೇಷವನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಕ್ರೀಡೆಯಲ್ಲಿಯೂ ವರ್ಣದ್ವೇಷದ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು