ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ನಿರೀಕ್ಷೆಯಲ್ಲಿ ಹೋಬಳಿ ಕೇಂದ್ರ ಕೋಣಂದೂರು

ಶಿಥಿಲಗೊಂಡ ನಾಡಕಚೇರಿ ಕಟ್ಟಡ; ಪ್ರಗತಿ ಕಾಣದ ಪ್ರಾಥಮಿಕ ಆರೋಗ್ಯ ಕೇಂದ್ರ
Last Updated 29 ಏಪ್ರಿಲ್ 2018, 13:56 IST
ಅಕ್ಷರ ಗಾತ್ರ

ಕೋಣಂದೂರು: ಚುನಾವಣೆ ಕಾವು ರಂಗೇರುತ್ತಿದೆ. ಅಭ್ಯರ್ಥಿಗಳ ಮನೆ ಮನೆ ಭೇಟಿಯ ಭರಾಟೆ ಬಿಸಿಲನ್ನೂ ಲೆಕ್ಕಿಸದೆ ಸಾಗುತ್ತಿದೆ. ಈ ಬಾರಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ನಾ ಮೇಲು, ತಾ ಮೇಲು ಎಂಬಂತೆ ಪ್ರಚಾರದಲ್ಲಿ ತೊಡಗಿವೆ.

ಆದರೆ, ಕೋಣಂದೂರಿನ ನಾಗರಿಕರು ಈ ಬಾರಿಯ ಮತದಾನಕ್ಕೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಈ ಭಾಗದಲ್ಲಿ ಅಭಿವೃದ್ಧಿ ಕೈಗೊಂಡಿರುವ ಬಗ್ಗೆ ಮತದಾರನಿಗೆ ತೃಪ್ತಿ ಇಲ್ಲದಿರುವುದು ಕಂಡು ಬರುತ್ತಿದೆ.

ತಾಲ್ಲೂಕು ಕೇಂದ್ರವನ್ನು ಹೊರತುಪಡಿಸಿದರೆ ಹೃದಯ ಭಾಗದಲ್ಲಿರುವ ಕೋಣಂದೂರು ಪ್ರಮುಖ ಹೋಬಳಿ ಕೇಂದ್ರ. ಉತ್ತಮ ಶ್ಯೆಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿರುವ ಇಲ್ಲಿ ಮೂಲಸೌಕರ್ಯಗಳಿಂದ ಜನ ವಂಚಿತರಾಗಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರ: 1966ರಲ್ಲಿ ಮೈಸೂರು ವಿಧಾನಸಭೆಯ ಸದಸ್ಯರಾದ ಶಾಂತವೇರಿ ಗೋಪಾಲಗೌಡ ಅಧ್ಯಕ್ಷತೆಯಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕಡಿದಾಳ ಮಂಜಪ್ಪನವರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದರು. ಹಲವು ದಶಕಗಳನ್ನು ಪೂರೈಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಯಾವುದೇ ರೀತಿಯ ಆಧುನಿಕ ಲೇಪನದ ಭಾಗ್ಯವೂ ಲಭಿಸಿಲ್ಲ. ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ಆರಂಭವಾಗಲಿಲ್ಲ. ದೇಮ್ಲಾಪುರ, ಹಿರೇಕಲ್ಲಳ್ಳಿ, ಚಿಕ್ಕಲ್ಲಳ್ಳಿ, ಕಲ್ಲುಗುಡ್ಡ, ಮಂಗಳ, ಮಲ್ಲಿಕಟ್ಟೆ, ಆಲೂರು ಹೊಸಕೊಪ್ಪ, ಕೆಸುವಿನ ಮನೆ, ವಾಟಗಾರು ಸುತ್ತಲಿನ ಹಳ್ಳಿಯ ಜನ ಈ ಆಸ್ಪತ್ರೆಯನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಪ್ರಸೂತಿ, ಶಸ್ತ್ರಚಿಕಿತ್ಸೆ ಸೌಲಭ್ಯಗಳು ಇಲ್ಲಿ ದೊರೆಯುತ್ತಿಲ್ಲ. ಮಂಗನಕಾಯಿಲೆ ಈ ಭಾಗದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ಕೇಂದ್ರದಲ್ಲಿ ಎಲ್ಲಾ ಸೌಲಭ್ಯಗಳು ಸಿಗುವಂತಿರಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ವಿದ್ಯುತ್‌ ವಿತರಣಾ ಕೇಂದ್ರ: 10 ವರ್ಷಗಳ ಹಿಂದೆ ಸಮೀಪದ ಕೆರೆಕೋಡಿಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ವಿದ್ಯುತ್‌ ವಿತರಣಾ ಕೇಂದ್ರ ನಿರ್ಮಾಣ ಕಾರ್ಯ ಅರ್ಧಕ್ಕೇ ನಿಂತಿದೆ. ಸಾಕಷ್ಟು ಪ್ರಮಾಣದ ಪರಿಕರಗಳು ಬಿಸಿಲು, ಮಳೆಯಲ್ಲಿ ತೋಯ್ದು ಹೋಗುತ್ತಿವೆ. ಶ್ಯೆಕ್ಷಣಿಕ ಮತ್ತು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಕೋಣಂದೂರಿಗೆ ನಿರಂತರ ಗುಣಮಟ್ಟದ ವಿದ್ಯುಚ್ಛಕ್ತಿಯ ಅಗತ್ಯವಿದೆ. ಇದು ಇಲ್ಲಿನ ಜನರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿ ಈ ಬಾರಿಯ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ನಾಡ ಕಚೇರಿ: ಇಲ್ಲಿನ ಕಂದಾಯ ಇಲಾಖೆಯ ನಾಡಕಚೇರಿ ಶಿಥಿಲಗೊಂಡಿದೆ. ಕಂದಾಯ ಇಲಾಖೆಯ ದಾಖಲೆಗಳು, ಕಂಪ್ಯೂಟರ್ ಕಳವಾಗಿವೆ. ಆದರೂ ಕಚೇರಿಯ ನವೀಕರಣವಾಗಲಿ, ಸ್ಥಳಾಂತರವಾಗಲಿ, ಹೊಸ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳದಿರುವುದು ಜನರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜನರ ಸೇವೆಗಾಗಿರುವ ನೆಮ್ಮದಿ ಕೇಂದ್ರಗಳ ಸೇವೆ, ಆರ್‌.ಟಿ.ಸಿ ಮುಂತಾದವು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಸಿಬ್ಬಂದಿ ಜನರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಬಗರ್‌ಹುಕುಂ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾಗಿರುವುದು ಬಗರ್‌ಹುಕುಂ ಸಾಗುವಳಿದಾರರಿಗೆ ನೋವು ತಂದಿದೆ. ಈ ಭಾಗದಿಂದಲೇ ಬಗರ್‌ಹುಕುಂ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾಗಿವೆ. ಹಕ್ಕುಪತ್ರ ಸಿಗದಿರುವುದು ಬೇಸರ ತಂದಿದೆ. ಬಹುತೇಕ ಗ್ರಾಮೀಣ ಮತದಾರರು ಬಗರ್‌ಹುಕುಂ ಸಾಗುವಳಿದಾರರಾಗಿದ್ದಾರೆ. ಅವರ ಕನಸು ನನಸಾಗದಿರುವ ಬಗ್ಗೆ ಅಸಮಾಧಾನಗೊಂಡಿದ್ದಾರೆ.

ಪೊಲೀಸ್ ಉಪಠಾಣೆ: ಪೊಲೀಸ್ ವಸತಿಗೃಹಗಳು ಮತ್ತು ಉಪಠಾಣೆ ಕಿಷ್ಕಿಂಧೆಯಂತಿದ್ದು, ಜನರ ಸಂಪರ್ಕಕ್ಕೆ ಅನಾನುಕೂಲವಾಗುತ್ತಿದೆ. ಶಿಥಿಲಗೊಂಡ ಕಟ್ಟಡ, ಪಾಳು ಬಿದ್ದಿರುವ ಶೌಚಾಲಯ, ಸಿಬ್ಬಂದಿ ಕೊರತೆಯೂ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ.

ಸರ್ಕಾರಿ ಕಾಲೇಜಿನ ಬಹುದಿನಗಳ ಬೇಡಿಕೆ ಇನ್ನೂ ಈಡೇರಿಲ್ಲ. ಬಿ.ಎಸ್‌.ಎನ್‌.ಎಲ್‌ ಬ್ರಾಡ್‌ಬ್ಯಾಂಡ್‌ ಸೇವೆ ಮತ್ತು ಸ್ಥಿರ ದೂರವಾಣಿಯ ನೆಟ್‌ವರ್ಕ್‌ ಸಮಸ್ಯೆ ತಲೆದೋರಿದೆ. ಈ ಎಲ್ಲಾ ಬೇಡಿಕೆಗಳಿಗಾಗಿ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರಾದ ಉಮೇಶ್.

ಮತಯಾಚನೆಗಾಗಿ ಬರುವ ಅಭ್ಯರ್ಥಿಗಳು ಈ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ಅರ್ಥೈಸಿಕೊಂಡು ಪರಿಹಾರದ ಭರವಸೆ ನೀಡುತ್ತಾರೋ ಅವರಿಗೆ ಮತ ಸಿಗುವ ಸಾಧ್ಯತೆ ಹೆಚ್ಚಿದೆ. ‘ನೋಟಾ’ ಬೀಳದಂತೆ ಎಚ್ಚರವಹಿಸಿ ಮತದಾರರನ್ನು ಸೆಳೆಯುವ ಕೌಶಲದಲ್ಲಿ ಯಾರು ಸಫಲರಾಗುತ್ತಾರೋ ಕಾದು ನೋಡಬೇಕು.

**
ಪ್ರಮುಖ ವಾಣಿಜ್ಯ ಮತ್ತು ಶೈಕ್ಷಣಿಕ ನಗರವಾಗಿ ಬೆಳೆಯುತ್ತಿರುವ ಕೋಣಂದೂರಿನ ಅಭಿವೃದ್ಧಿಯ ಓಟಕ್ಕೆ ಅಸಮರ್ಪಕ ವಿದ್ಯುತ್‌ ಶಕ್ತಿಯೇ ತೊಡಕಾಗಿದೆ
– ಗಿರೀಶ್ ಶರ್ಮ,ಮಾಲೀಕ, ರೋಬೋಟೆಕ್ ಕಂಪ್ಯೂಟರ್ಸ್ 

– ಹೊಸಕೊಪ್ಪ ಶಿವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT