ಭಾನುವಾರ, ಸೆಪ್ಟೆಂಬರ್ 15, 2019
27 °C
ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಫೈನಲ್‌ನಲ್ಲಿ ಕಿವೀಸ್‌ ವಿರೋಚಿತ ಸೋಲು

ವಿಶ್ವಕಪ್‌ಗೆ ಇಂಗ್ಲೆಂಡ್ ಹೊಸ ರಾಜ

Published:
Updated:

ಲಾರ್ಡ್ಸ್‌: ಕ್ರಿಕೆಟ್‌ ವಿಶ್ವಕಪ್‌ ನ ನಲ್ವತ್ತನಾಲ್ಕು ವರ್ಷಗಳ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ ಆತಿಥೇಯ ಇಂಗ್ಲೆಂಡ್ ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟಕ್ಕೆ ಏರಿತು.

ವಿಶ್ವಕ್ಕೆ ಕ್ರಿಕೆಟ್‌ ಕ್ರೀಡೆಯನ್ನು ಕೊಡುಗೆಯಾಗಿ ನೀಡಿದ ಇಂಗ್ಲೆಂಡ್ ತಂಡವು ಫೈನಲ್‌ನಲ್ಲಿ ಸೂಪರ್‌ ಓವರ್‌ನ ರೋಚಕ ಹಣಾಹಣಿಯಲ್ಲಿ ನ್ಯೂಜಿಲೆಂಡ್ ಎದುರು ಗೆದ್ದಿತು. ಅದ್ಬುತ ಫೀಲ್ಡಿಂಗ್, ಛಲದ ಆಟವಾಡಿದ ಕಿವೀಸ್ ಬಳಗಕ್ಕೆ ಕೊನೆಗೂ ಅದೃಷ್ಟ ಒಲಿಯಲಿಲ್ಲ. ಸತತ ಎರಡನೇ ಬಾರಿ ರನ್ನರ್ಸ್ ಅಪ್ ಆಯಿತು. ನಿಗದಿಯ ಓವರ್‌ಗಳಲ್ಲಿ (50–50) ಹತ್ತಾರು ನಾಟಕೀಯ ತಿರುವುಗಳನ್ನು ಕಂಡ ಪಂದ್ಯವು ಟೈ ಆಯಿತು. ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ (ಔಟಾಗದೆ 84)ಅವರ ದಿಟ್ಟ ಬ್ಯಾಟಿಂಗ್‌ ಇದಕ್ಕೆ ಕಾರಣವಾಯಿತು.

ಇದನ್ನೂ ಓದಿ: ಮಹೇಲ ಜಯವರ್ಧನೆಯ 12 ವರ್ಷ ಹಿಂದಿನ ದಾಖಲೆ ಮುರಿದ ಕೇನ್‌ ವಿಲಿಯಮ್ಸನ್

ಇದರಿಂದಾಗಿ ತಂಡದ ಫಲಿತಾಂಶವನ್ನು ಸೂಪರ್ ಓವರ್‌ನಲ್ಲಿ ನಿರ್ಧರಿಸಲಾಯಿತು. ಕಿವೀಸ್ ಪರ ಸೂಪರ್ ಓವರ್‌ ಬೌಲಿಂಗ್ ಮಾಡಿದ ಟ್ರೆಂಟ್ ಬೌಲ್ಟ್‌  ಓವರ್‌ನಲ್ಲಿ  ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ ಮತ್ತು ಜೋಸ್ ಬಟ್ಲರ್ ಅವರು 15 ರನ್ ಸೇರಿಸಿದರು. ಅದರಲ್ಲಿ  ಎರಡು ಬೌಂಡರಿಗಳು  ಇದ್ದವು. 16 ರನ್‌ಗಳ ಜಯದ ಗುರಿ ಬೆನ್ನಟ್ಟಿದ್ದ ಕಿವೀಸ್‌ ತಂಡವು  ಮಾರ್ಟಿನ್ ಗಪ್ಟಿಲ್‌ ಮತ್ತು ಜಿಮ್ಮಿ ನಿಶಾಮ್ ಅವರನ್ನು ಬ್ಯಾಟಿಂಗ್‌ಗೆ ಇಳಿಸಿತು. ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್ ಮೊದಲ ಎಸೆತವನ್ನೇ ವೈಡ್ ಹಾಕಿದರು. ಇದರಿಂದಾಗಿ ಕಿವೀಸ್‌ ಪಾಳಯದಲ್ಲಿ ನಗು ಮೂಡಿತು.

ನಂತರದ ಐದು ಎಸೆತಗಳಲ್ಲಿ ನಿಶಾಮ್ ಅವರು 13 ರನ್‌ಗಳನ್ನು ಸೂರೆ  ಮಾಡಿದರು. ಅದರಲ್ಲಿ ಒಂದು ಸಿಕ್ಸರ್ (ಎರಡನೇ ಎಸೆತ) ಹೊಡೆದಿದ್ದರು. ಆದರೆ, ಕೊನೆಯ ಎಸೆತದಲ್ಲಿ ಎರಡು ರನ್‌ಗಳ ಅವಶ್ಯಕತೆ ಇತ್ತು. ಆಗ ಬ್ಯಾಟಿಂಗ್ ಮಾಡುತ್ತಿದ್ದ ಗಪ್ಟಿಲ್‌ ಅವರು ಚೆಂಡನ್ನು ಹೊಡೆದರು. ಮೊದಲ ರನ್ ಪೂರೈಸಿದರು. ಎರಡನೇ ರನ್‌ಗೆ ಮರಳುವಾಗ ರನ್‌ಔಟ್ ಆದರು. ಆತಿಥೇಯ ಅಂಗಳದಲ್ಲಿ ಸಂಭ್ರಮ ಮುಗಿಲು ಮುಟ್ಟಿತು. ಬೆನ್ ಸ್ಟೋಕ್ಸ್‌ ಕಂಗಳಲ್ಲಿ ಆನಂದಭಾಷ್ಪ ಸುರಿಯಿತು. ಅತ್ತ ಕಿವೀಸ್ ಬಳಗದಲ್ಲಿಯೂ ದುಃಖದ ಧಾರೆ ಕಟ್ಟೆಯೊಡೆಯಿತು. ಗಪ್ಟಿಲ್ ಕುಸಿದರು. ನಿಶಾಮ್ ಖಿನ್ನರಾದರು. ಪೆವಿಲಿಯನ್‌ನಲ್ಲಿದ್ದ ನಾಯಕ ಕೇನ್ ವಿಲಿಯಮ್ಸನ್ ಸ್ಥಿತಪ್ರಜ್ಞನಂತೆ ಕೈಕಟ್ಟಿ ನಿಂತಿದ್ದರು!

ಇದನ್ನೂ ಓದಿ: ಫೈನಲ್‌: ಕಿವೀಸ್‌ ಪಡೆಗೆ ವೋಕ್ಸ್‌, ಪ್ಲಂಕೆಟ್‌ ಕಾಟ; ಇಂಗ್ಲೆಂಡ್‌ಗೆ ಗುರಿ @ 242

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 241 ರನ್ ಗಳಿಸಿತ್ತು. ಅಮೋಘ ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡಿದ ಕಿವೀಸ್ ಆಟಗಾರರು ಇಂಗ್ಲೆಂಡ್‌ ತಂಡವನ್ನು ಒತ್ತಡದಲ್ಲಿ ಕೆಡವಿದರು. ಯಶಸ್ವಿ ಆರಂಭಿಕ ಜೋಡಿಯನ್ನು ಆರಂಭದಲ್ಲಿಯೇ ಕಟ್ಟಿಹಾಕುವಲ್ಲಿ ಕಿವೀಸ್ ಬೌಲರ್‌ಗಳು ಯಶಸ್ವಿಯಾದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಬೆನ್ ಸ್ಟೋಕ್ಸ್‌ ಹೋರಾಟಕ್ಕೆ ಅದೃಷ್ಟದ ಬಲವೂ ಇತ್ತು. ಅದರಿಂದಾಗಿ ಇನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ ಹಲವು ನಾಟಕೀಯ ತಿರುವುಗಳು ಪಂದ್ಯದ ಗತಿ ಬದಲಿಸಿದವು.

 ಕಿವೀಸ್ ತಂಡದ ಟ್ರೆಂಟ್ ಬೌಲ್ಟ್‌49ನೇ ಓವರ್‌ನಲ್ಲಿ ಲಾಂಗ್‌ ಆನ್‌ನಲ್ಲಿ ಅದ್ಭುತ ಸಾಹಸಮಯವಾದ ಕ್ಯಾಚ್‌ನ್ನೇನೋ ಹಿಡಿದರು. ಆದರೆ ದೇಹದ ಸಮತೋಲನ ಕಾಪಾಡಿಕೊಳ್ಳದೇ ಚೆಂಡು ತಮ್ಮ ಕೈಯಲ್ಲಿರುವಾಗಲೇ ಬೌಂಡರಿಲೈನ್‌ ಹೊರಗೆ ಕಾಲಿಟ್ಟರು. ಅಂಪೈರ್ ಸಿಕ್ಸರ್‌  ಕೊಟ್ಟರು. ಬ್ಯಾಟ್ಸ್‌ಮನ್ ಬೆನ್ ಸ್ಟೋಕ್ಸ್‌ ಜೀವದಾನ ಪಡೆದರು. ಆಗ ಎಂಟು ವಿಕೆಟ್‌ ಕಳೆದುಕೊಂಡು 220 ರನ್‌ ಗಳಿಸಿದ್ದ ಇಂಗ್ಲೆಂಡ್ ತಂಡದ ಬಳಗದಲ್ಲಿ ಮತ್ತೊಂದು ಭರವಸೆಯ ಬೆಳಕು ಕಂಡಿತ್ತು.  ಕೊನೆಯ ಓವರ್‌ನಲ್ಲಿ ನಾಲ್ಕನೇ ಎಸೆತದಲ್ಲಿ ಓವರ್‌ ಥ್ರೋನಿಂದಾಗಿ (ಫೀಲ್ಡರ್ ಎಸೆದ ಥ್ರೋ ಸ್ಟೋಕ್ಸ್‌ ಬ್ಯಾಟ್‌ಗೆ ಬಡಿದು ಬೌಂಡರಿಗೆರೆ ದಾಟಿತು) ಇಂಗ್ಲೆಂಡ್‌ಗೆ ಲಭಿಸಿದ ಆರು ರನ್‌ಗಳೂ ಕೂಡ ಕೇನ್ ವಿಲಿಯಮ್ಸನ್ ಬಳಗಕ್ಕೆ ಕುತ್ತಾದವು. 

ಆದರೂ ಛಲ ಬಿಡದ ಕಿವೀಸ್ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ನ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ರನ್‌ಔಟ್ ಮಾಡಿತು.

ಸೂಪರ್ ಓವರ್‌ನಲ್ಲಿ

ನ್ಯೂಜಿಲೆಂಡ್  8ಕ್ಕೆ 241

ಇಂಗ್ಲೆಂಡ್ 241 (50 ಓವರ್‌ಗಳಲ್ಲಿ)

ಬೆನ್ ಸ್ಟೋಕ್ಸ್‌

ಔಟಾಗದೆ 84

ಎಸೆತ: 98

ಬೌಂಡರಿ: 5

ಸಿಕ್ಸರ್ : 2

ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ ಸೂಪರ್‌ ಓವರ್‌ನಲ್ಲಿ ಬೌಂಡರಿ ಕೌಂಟ್ ಆಧಾರದಲ್ಲಿ ಜಯ.

Post Comments (+)