ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಲ್‌, ಮಯಂಕ್‌ ಭರ್ಜರಿ ಶತಕ

ಭಾರತ ‘ಎ’ ಮೇಲೆ ಗೆದ್ದ ‘ಸಿ’ ತಂಡ ಫೈನಲ್‌ಗೆ; ಜಲಜ್‌ಗ 7 ವಿಕೆಟ್‌
Last Updated 1 ನವೆಂಬರ್ 2019, 20:14 IST
ಅಕ್ಷರ ಗಾತ್ರ

ರಾಂಚಿ: ಉತ್ತಮ ಲಯದಲ್ಲಿರುವ ಆರಂಭ ಆಟಗಾರ ಶುಭಮನ್‌ ಗಿಲ್‌ (143) ಮತ್ತು ಮಯಂಕ್‌ ಅಗರವಾಲ್‌ (120) ಭರ್ಜರಿ ಶತಕಗಳನ್ನು ಸಿಡಿಸಿದ ಮೇಲೆ, ಮಆಫ್‌ ಸ್ಪಿನ್ನರ್‌ ಜಲಜ್‌ ಸಕ್ಸೇನಾ 41 ರನ್ನಿಗೆ 7 ವಿಕೆಟ್‌ (9.5 ಓವರ್‌) ಕಬಳಿಸಿ ಮಿಂಚಿದರು. ಇವರ ಅಮೋಘ ಪ್ರದರ್ಶನದ ನೆರವಿನಿಂದ ಭಾರತ ‘ಸಿ’ ತಂಡ ಗುರುವಾರ ನಡೆದ ದೇವಧರ್‌ ಟ್ರೋಫಿ ಪಂದ್ಯದಲ್ಲಿ 232 ರನ್‌ಗಳ ಭಾರಿ ಅಂತರದಿಂದ ಭಾರತ ‘ಎ’ ತಂಡವನ್ನು ಮಣಿಸಿ ಫೈನಲ್‌ ತಲುಪಿತು.

ಟಾಸ್‌ ಗೆದ್ದ ಭಾರತ ‘ಎ’ 50 ಓವರುಗಳಲ್ಲಿ 3 ವಿಕೆಟ್‌ಗೆ 366 ರನ್‌ಗಳ ಭಾರಿ ಮೊತ್ತ ಪೇರಿಸಿತು. ಉತ್ತರವಾಗಿ ‘ಎ’ ತಂಡ 30ನೇ ಓವರ್‌ನಲ್ಲಿ 134 ರನ್‌ಗಳಿಗೆ ಉರುಳಿತು. ಇದು ‘ಎ’ ತಂಡಕ್ಕೆ ಎರಡನೇ ಸೋಲು. ಮೊದಲ ಪಂದ್ಯದಲ್ಲಿ ಅದು ‘ಬಿ’ ತಂಡಕ್ಕೆ ಮಣಿದಿತ್ತು.

ಯುವ ಆಟಗಾರರಾದ ಗಿಲ್‌ ಮತ್ತು ಮಯಂಕ್‌ ಮೊದಲ ವಿಕೆಟ್‌ಗೆ 38.3 ಓವರುಗಳಲ್ಲಿ 226 ರನ್‌ಗಳ ಅಮೋಘ ಜೊತೆಯಾಟ ಆಡಿದರು. ಗಿಲ್‌ ಆಟದಲ್ಲಿ 10 ಬೌಂಡರಿ, ಆರು ಸಿಕ್ಸರ್‌ಗಳಿದ್ದವು. ಮಯಂಕ್ ಒಂದು ಸಿಕ್ಸರ್‌, 15 ಬೌಂಡರಿ ಬಾರಿಸಿದರು. ನಂತರ ಸೂರ್ಯಕುಮಾರ್‌ ಯಾದವ್ ಕೇವಲ 29 ಎಸೆತಗಳಲ್ಲಿ 72 ರನ್‌ (9 ಬೌಂಡರಿ, 4 ಸಿಕ್ಸರ್‌) ಸಿಡಿಸಿ ‘ಎ’ ತಂಡದ ಬೌಲರ್‌ಗಳ ಗೋಳು ಹೊಯ್ದುಕೊಂಡರು. ಕೊನೆಯ ಮೂರು ಓವರುಗಳಲ್ಲಿ 61 ರನ್‌ಗಳು ಹರಿದವು.

ಕನ್ನಡಿಗ ದೇವದತ್‌ ಪಡಿಕ್ಕಲ್‌ ಗಳಿಸಿದ 31 ರನ್‌ಗಳೇ ‘ಎ’ ತಂಡದ ಪರ ಅತ್ಯಧಿಕ ವೈಯಕ್ತಿಕ ಗಳಿಕೆ ಎನಿಸಿತು. ಕೇವಲ 17 ರನ್‌ಗಳಾಗುಷ್ಟರಲ್ಲಿ ನಾಯಕ ಹನುಮ ವಿಹಾರಿ (0) ಸೇರಿ ಮೂವರು ಪೆವಿಲಿಯನ್‌ಗೆ ಮರಳಿದ್ದರು.

ಶನಿವಾರ ಭಾರತ ‘ಬಿ’ ಮತ್ತು ಭಾರತ ‘ಸಿ’ ತಂಡಗಳು ಮುಖಾಮುಖಿಯಾಗಲಿವೆ. ಈ ಎರಡೂ ತಂಡಗಳು ಫೈನಲ್‌ಗೆ ಅರ್ಹತೆ ಪಡೆದಿರುವ ಕಾರಣ, ಸೋಮವಾರದ (ನ.4) ಫೈನಲ್‌ಗೆ ಮೊದಲು ಅಭ್ಯಾಸ ಪಂದ್ಯದಂತೆ ಆಗಲಿದೆ.

ಸ್ಕೋರುಗಳು: ಭಾರತ ‘ಸಿ‘: 50 ಓವರುಗಳಲ್ಲಿ 3 ವಿಕೆಟ್‌ಗೆ 366 (ಮಯಂಕ್‌ ಅಗರವಾಲ್‌ 120, ಶುಭಮನ್‌ ಗಿಲ್‌ 143, ಸೂರ್ಯಕುಮಾರ್‌ ಯಾದವ್‌ ಔಟಾಗದೇ 72); ಭಾರತ ‘ಎ’: 29.5 ಓವರುಗಳಲ್ಲಿ 134 (ದೇವದತ್ತ ಪಡಿಕ್ಕಲ್‌ 31, ಬಿ.ಎಚ್‌.ಮರೈ 30, ಇಶಾನ್‌ ಕಿಶನ್‌ 25; ಜಲಜ್‌ ಸಕ್ಸೇನ 41ಕ್ಕೆ7, ಐ.ಸಿ.ಪೊರೆಲ್‌ 12ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT