ಶುಕ್ರವಾರ, ಡಿಸೆಂಬರ್ 6, 2019
21 °C

ಜಿ.ಆರ್.ವಿಶ್ವನಾಥ್ ಪದಾರ್ಪಣೆ ಶತಕಕ್ಕೆ ಈಗ 50

Published:
Updated:
Prajavani

ಬೆಂಗಳೂರು: ಹಿರಿಯ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಅವರು ತಮ್ಮ ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿ ಗಳಿಸಿದ್ದ ಶತಕಕ್ಕೆ ಇವತ್ತು ಬರೋಬ್ಬರಿ ಅರ್ಧಶತಕ!

ಹೌದು; ಉತ್ತರ ಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ಭದ್ರಾವತಿಯ ’ವಿಶಿ’ ಶತಕ ದಾಖಲಿಸಿದ್ದರು. 1969ರ ನವೆಂಬರ್‌ 20ರಂದು ಅವರು ಶತಕ ಹೊಡೆದಿದ್ದರು. ನ15ರಂದು ಆರಂಭವಾಗಿದ್ದ ಆಸ್ಟ್ರೇಲಿಯಾ ವಿರುದ್ಧದ ಆ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅವರು ಸೊನ್ನೆ ಸುತ್ತಿದ್ದರು. ಅದರಿಂದ ತೀವ್ರ ಬೇಸರಗೊಂಡಿದ್ದರು. ಆದರೆ, ಎರಡನೇ ಇನಿಂಗ್ಸ್‌ನಲ್ಲಿ ವಿಶಿ ಶತಕ (137; 354ಎಸೆತ, 25 ಬೌಂಡರಿ) ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿತ್ತು.

‘ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದಾಗ ಬೇಸರವಾಗಿತ್ತು. ತಂಡದ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಬಂದು ಬೆನ್ನು ತಟ್ಟಿ ಸಂತೈಸಿದ್ದರು. ನೀವು ಶತಕ ಹೊಡಿತೀರಿ ಬಿಡಿ ಅಂದಿದ್ದರು. ಆದರೆ, ತಂಡವು ಮೊದಲ ಇನಿಂಗ್ಸ್‌ ಹಿನ್ನಡೆ ಅನುಭವಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ  ಪಟೌಡಿ ಮಾತು ನಿಜವಾಗಿತ್ತು’ ಎಂದು ವಿಶಿ ನೆನಪಿಸಿಕೊಳ್ಳುತ್ತಾರೆ.

ಆಸ್ಟ್ರೇಲಿಯಾದ ಬಿರುಗಾಳಿ ವೇಗದ ಬೌಲರ್‌ಗಳಿಗೆ ಆರಂಭಿಕ ಆಟಗಾರ ಅರ್ಧಶತಕದ ಉತ್ತರ ಕೊಟ್ಟಿದ್ದರು. ಆದರೆ ಉಳಿದವರು ವಿಫಲರಾಗಿದ್ದರು. ನಾಲ್ಕನೇ ದಿನದಾಟದಲ್ಲಿ ವಿಶಿ ಅಪಾರ ತಾಳ್ಮೆಯಿಂದ ಬೌಲರ್‌ಗಳನ್ನು ಎದುರಿಸಿ ನಿಂತರು. ದಿನದಾಟದ ಅಂತ್ಯಕ್ಕೆ ವಿಶಿ ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಅವರೊಂದಿಗೆ ಏಕನಾಥ್ ಸೋಳ್ಕರ್ ಕೂಡ ಇನ್ನೊಂದು ಬದಿಯಲ್ಲಿದ್ದರು. ಮರುದಿನ ಕಾನ್ಪುರ ತುಂಬ ಸುದ್ದಿ ಹರಡಿತ್ತು. ಜನ ತಂಡೋಪತಂಡವಾಗಿ ಕ್ರೀಡಾಂಗಣಕ್ಕೆ ಲಗ್ಗೆ ಇಟ್ಟರು. ವಿಶಿ ಶತಕವನ್ನು ಕಣ್ತುಂಬಿಕೊಂಡರು. ತಂಡದ ಸೋಲು ತಪ್ಪಿಸಿದ ಆಟಗಾರಿಗೆ ಜಯಘೋಷ ಕೂಗಿ ಹುರಿದುಂಬಿಸಿದರು. ಆ್ಯಷ್ಲೆ ಮೆಲೆಟ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆಗಿ ಪೆವಿಲಿಯನ್‌ನತ್ತ  ಹೊರಟಾಗ, ಜನರು ‘ವಿಶ್ವನಾಥ್ ಬಾಬಾ ಕೀ ಜೈ’ ಎಂದು ಕೂಗಿ ಗೌರವಿಸಿದರು. ಆ ಪಂದ್ಯವು ಡ್ರಾ ಆಯಿತು.

ಅವರು 91 ಟೆಸ್ಟ್‌ಗಳಲ್ಲಿ 14 ಶತಕ ದಾಖಲಿಸಿದರು. ಆದರೆ ಇಂದಿಗೂ ಅವರ ಪದಾರ್ಪಣೆಯ ಶತಕವನ್ನು ಕ್ರಿಕೆಟ್‌ ಅಭಿಮಾನಿಗಳು ಮರೆತಿಲ್ಲ. ಗ್ರೀನ್‌ ಪಾರ್ಕ್‌ ಅಂಗಳದಲ್ಲಿ ಅಂದು ನೋಡಿದ ಹಲವರ ಮನದಲ್ಲಿ ಹಸಿರಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು