‘ಯುವ ಪ್ರತಿಭೆಗಳಿಗೆ ಭಾರತದಲ್ಲಿ ಆಡುವ ಆಕಾಂಕ್ಷೆ’

7
ಭಾರತ ‘ಎ’ ತಂಡದ ಬ್ಯಾಟ್ಸ್‌ಮನ್‌ ಹನುಮವಿಹಾರಿ ಮಾತಿನ ಲಹರಿ

‘ಯುವ ಪ್ರತಿಭೆಗಳಿಗೆ ಭಾರತದಲ್ಲಿ ಆಡುವ ಆಕಾಂಕ್ಷೆ’

Published:
Updated:

ಬೆಂಗಳೂರು: ‘ಭಾರತ ‘ಎ’ ತಂಡದಲ್ಲಿ ಆಡುವ ಅನುಭವ ವಿಶಿಷ್ಟವಾದದ್ದು. ಬೇರೆ ಬೇರೆ ರಾಜ್ಯಗಳ ಆಟಗಾರರು ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುತ್ತೇವೆ. ಅನುಭವ , ಜ್ಞಾನವನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಈ ತಂಡದಲ್ಲಿರುವ ಎಲ್ಲರಿಗೂ ಭಾರತ ತಂಡದಲ್ಲಿ ಆಡುವ ಆಕಾಂಕ್ಷೆ ಇದೆ. ಆದರೆ ಎಲ್ಲರೂ ಪರಸ್ಪರ ಆರೋಗ್ಯಕರ ಸ್ಪರ್ಧೆ ಮಾಡುತ್ತಿದ್ದೇವೆ’–

ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ನಡೆಯುತ್ತಿರುವ ‘ಟೆಸ್ಟ್‌’ ಕ್ರಿಕೆಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ (148 ರನ್) ಬಾರಿಸಿದ ಜಿ. ಹನುಮವಿಹಾರಿ ಅವರ ಮಾತುಗಳಿವು. ಪಂದ್ಯದ ಮೂರನೇ ದಿನವಾದ ಭಾನುವಾರ ಮಳೆಯಿಂದಾಗಿ ಆಟ ಸ್ಥಗಿತಗೊಂಡಾಗ ಹನುಮವಿಹಾರಿ ಮಾಧ್ಯಮದವರೊಂದಿಗೆ ಮಾತಿಗೆ ಕುಳಿತಿದ್ದರು.

‘ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕಿದೆ. ಆದು ನನ್ನ ಮೆಚ್ಚಿನ ಸ್ಥಾನ. ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಮಯಂಕ್ ಅಗರವಾಲ್ ಔಟಾಗಿದ್ದರು. ಅದರಿಂದಾಗಿ ದೀರ್ಘ ಇನಿಂಗ್ಸ್‌ ಅಡುವ ಹೊಣೆ ಇತ್ತು. ಅದನ್ನು ನಿಭಾಯಿಸಿದ ತೃಪ್ತಿ ನನಗಿದೆ’ ಎಂದರು.

ತಾಳ್ಮೆ ಮತ್ತು ತಾಂತ್ರಿಕ ಕೌಶಲಭರಿತ ಆಟಕ್ಕೆ ಹನುಮವಿಹಾರಿ ಚಿರಪರಿಚಿತರು. ಚೇತೇಶ್ವರ್ ಪೂಜಾರ ಮತ್ತು ರಾಹುಲ್ ದ್ರಾವಿಡ್ ಆವರ ಬ್ಯಾಟಿಂಗ್‌ ಕೌಶಲವನ್ನು ನೆನಪಿಸುವಂತೆ ಆಡುತ್ತಾರೆ. ಆದರೆ ಒಂದು ವಿಷಯದಲ್ಲಿ ಹನುಮವಿಹಾರಿ ಅವರಿಬ್ಬರಿಗಿಂತಲೂ ಮುಂದಿದ್ದಾರೆ!

ಆಂಧ್ರದ ಕಾಕಿನಾಡದ ಹುಡುಗ ಹನುಮವಿಹಾರಿ ಪ್ರಥಮ ದರ್ಜೆ ಪಂದ್ಯಗಳನ್ನು ಆಡುತ್ತಿರುವ  ಬ್ಯಾಟ್ಸ್‌ಮನ್‌ಗಳ ರನ್‌ ಸರಾಸರಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 62 ಪಂದ್ಯಗಳಲ್ಲಿ 4994 ರನ್‌ಗಳನ್ನು ಪೇರಿಸಿರುವ ಅವರು 59.45 ಸರಾಸರಿ ಹೊಂದಿದ್ದಾರೆ. ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್ (57.27), ಭಾರತದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ್ ಪೂಜಾರ (ತಲಾ 54) ಅವರಿಗಿಂತಲೂ ಮುಂಚೂಣಿಯಲ್ಲಿದ್ದಾರೆ. ವಿಶ್ವದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಸರಾಸರಿ ಹೊಂದಿರುವ ದಿಗ್ಗಜರ ಪಟ್ಟಿಯ ಹತ್ತನೇ ಸ್ಥಾನಕ್ಕೆ ಹನುಮವಿಹಾರಿ ಏರಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಡಾನ್‌ ಬ್ರಾಡ್ಮನ್ (95.14) ಇದ್ದಾರೆ. ದ್ರಾವಿಡ್ ಅವರು 55.33ರ ಸರಾಸರಿ ಗಳಿಸಿದ್ದಾರೆ.

‘ಬೇರೆ ಬೇರೆ ತಂಡಗಳಲ್ಲಿ ಆಡುವುದು ವಿಶೇಷ ಅನುಭವ ನೀಡುತ್ತದೆ. ಆದರೆ ಅಷ್ಟೇ ಅಪಾಯಕಾರಿಯೂ ಹೌದು. 16ನೇ ವಯಸ್ಸಿನಿಂದ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದೆ. ಹೋದ ದೇಶಿ ಟೂರ್ನಿಯಲ್ಲಿ ಆಂಧ್ರ ತಂಡ ಸೇರಿದೆ. ಅಲ್ಲಿ ನನಗೆ ನಾಯಕತ್ವ ನೀಡಲಾಯಿತು. ಅವರ ವಿಶ್ವಾಸಕ್ಕೆ ಧಕ್ಕೆ ಬರದಂತೆ ಆಡಿದೆ. ನಾಯಕತ್ವದ ಜೊತೆಗೆ ಉತ್ತಮವಾಗಿ ಆಡಿದಾಗ ತಂಡದ ಇತರ ಆಟಗಾರರ ಆತ್ಮವಿಶ್ವಾಸ ಹೆಚ್ಚುತ್ತದೆ’ ಎಂದರು.

‘ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನ ಅಮೋಘವಾದದ್ದು. ಅವರು ಹೆಚ್ಚು ಮಾತನಾಡುವುದಿಲ್ಲ. ಆದರೆ ಕೆಲವೇ ಪದಗಳಲ್ಲಿ ಮನಮುಟ್ಟುವಂತಹ ಅಮೂಲ್ಯ ಸಲಹೆ ನೀಡುತ್ತಾರೆ. ಅದು ನಮ್ಮ ಆಟ ಮತ್ತು ವ್ಯಕ್ತಿತ್ವವನ್ನೇ ಬದಲಿಸಿಬಿಡುತ್ತದೆ. ದಕ್ಷಿಣ ಆಫ್ರಿಕಾಕ್ಕೆ ಪ್ರವಾಸಕ್ಕೆ ತೆರಳಿದ್ದಾಗ ಬಹಳ ಒತ್ತಡದಲ್ಲಿದ್ದೆ. ಆದರೆ ಅವತ್ತು ಹೇಳಿದ ಏಕಾಗ್ರತೆಯ ಪಾಠದಿಂದ ಒತ್ತಡ ನಿರ್ವಹಣೆ ಮಾಡುವುದನ್ನು ಕರಗತ ಮಾಡಿಕೊಂಡೆ’ ಎಂದು ನೆನಪಿಸಿಕೊಂಡರು.

ಹೋದ ವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿಯೂ ಅವರು ಅರ್ಧಶತಕ ಗಳಿಸಿದ್ದರು. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಆಡುವ ಕೌಶಲವನ್ನು ಬೆಳೆಸಿಕೊಂಡಿದ್ದಾರೆ. ಆದಷ್ಟು ಬೇಗ ಭಾರತ ತಂಡಕ್ಕೆ ಜಿಗಿಯುವತ್ತ ಚಿತ್ತ ನೆಟ್ಟಿದ್ದಾರೆ.

ಮೂರನೇ ದಿನ ಮಳೆಯಾಟ; ಡ್ರಾದತ್ತ ಪಂದ್ಯ
ಭಾರತ ‘ಎ’ ಮತ್ತು ದಕ್ಷಿಣ ಆಫ್ರಿಕಾ ‘ಎ’ ನಡುವಣ ನಡೆಯುತ್ತಿರುವ ‘ಟೆಸ್ಟ್‌’ ಪಂದ್ಯದ ಮೂರನೇ ದಿನದಾಟದ ಬಹುತೇಕ ಸಮಯವು ಮಳೆಗೆ ಆಹುತಿಯಾಯಿತು. ಇದರಿಂದಾಗಿ ಪಂದ್ಯವು ಡ್ರಾ ಆಗುವ ಸಾಧ್ಯತೆ ಹೆಚ್ಚಿದೆ. ಭಾನುವಾರ ಬೆಳಿಗ್ಗೆಯಿಂದಲೇ ಮಳೆ ಹನಿಯುತ್ತಿದ್ದ ಕಾರಣ ಊಟದ ವಿರಾಮದವರೆಗೂ ಆಟ ನಡೆಯಲಿಲ್ಲ. ನಂತರ ಮೈದಾನ ಒಣಗಿದ್ದರಿಂದ ಆಟ ಆರಂಭಿಸಲಾಯಿತು.

ಶನಿವಾರ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 219 ರನ್‌ ಗಳಿಸಿದ್ದ ದಕ್ಷಿಣ ಆಫ್ರಿಕಾ ‘ಎ’ ತಂಡ ರೂಡಿ ಸೆಕೆಂಡ್ ಮತ್ತು ಹೆನ್ರಿಕ್ಸ್‌ ಅವರು ನಿಧಾನವಾಗಿ ರನ್‌ ಗಳಿಸಿದರು. ಈ ಜೊತೆಯಾಟವನ್ನು ಅಂಕಿತ್ ರಜಪೂತ್ ಮುರಿದರು. ಹೆನ್ರಿಕ್ಸ್‌ ಮತ್ತು ರೂಡಿ ಅವರ ವಿಕೆಟ್‌ಗಳನ್ನು ಪಡೆದ ಅವರು ಪೆಟ್ಟು ನೀಡಿದರು. ಚಹಾದ ವೇಳೆಗೆ ಮತ್ತೆ ಮಳೆ ಸುರಿದ ಕಾರಣ ಆಟವನ್ನು ಸ್ಥಗಿತಗೊಳಿಸಲಾಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಭಾರತ ’ಎ’: 345, ದಕ್ಷಿಣ ಆಫ್ರಿಕಾ ’ಎ’: 92.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 294 (ರೂಡಿ ಸೆಕೆಂಡ್ 47, ಸೆನುರನ್ ಮುತುಸಾಮಿ ಔಟಾಗದೆ 23, ಡ್ವೇನ್ ಪ್ರಿಟೋರಿಯಸ್ 10, ಡೇನ್ ಪೀಡ್ತ್ 22, ಮೊಹಮ್ಮದ್ ಸಿರಾಜ್ 58ಕ್ಕೆ2, ಅಂಕಿತ್ ರಜಪೂತ್ 42ಕ್ಕೆ2, ಜಯಂತ್ ಯಾದವ್ 55ಕ್ಕೆ1, ಯಜುವೇಂದ್ರ ಚಾಹಲ್ 84ಕ್ಕೆ2)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !