ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಗೇಟು ನೀಡುವ ಛಲದಲ್ಲಿ ಭಾರತ ಮಹಿಳಾ ತಂಡ

ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಎದುರಿನ ಟಿ20 ಕ್ರಿಕೆಟ್ ಸರಣಿ ಇಂದು ಆರಂಭ; ಶಫಾಲಿ ಮೇಲೆ ಕಣ್ಣು
Last Updated 19 ಮಾರ್ಚ್ 2021, 12:50 IST
ಅಕ್ಷರ ಗಾತ್ರ

ಲಖನೌ: ಏಕದಿನ ಸರಣಿಯಲ್ಲಿ ಅನುಭವಿಸಿದ ನಿರಾಸೆ ಮರೆತು ಹೊಸ ಹುರುಪಿನಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿರುವ ಭಾರತ ಮಹಿಳೆಯರ ತಂಡ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಎದುರಿನ ಟಿ20 ಸರಣಿಯಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದೆ.

ಏಕಾನ ಮೈದಾನದಲ್ಲಿ ನಡೆದ ಏಕದಿನ ಸರಣಿಯಲ್ಲಿ ಮಿಥಾಲಿ ರಾಜ್ ನಾಯಕತ್ವದಲ್ಲಿ ಕಣಕ್ಕೆ ಇಳಿದಿದ್ದ ಭಾರತ ಐದು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದುಕೊಂಡಿತ್ತು. ಶನಿವಾರ ಆರಂಭವಾಗಲಿರುವ ಟಿ20 ಸರಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಮುಂದಾಳತ್ವದಲ್ಲಿ ತಂಡ ಸೆಣಸಲಿದೆ. ಆದರೆ ಉತ್ತಮ ಲಯದಲ್ಲಿರುವ ಪ್ರವಾಸಿ ತಂಡವನ್ನು ಕಟ್ಟಿಹಾಕಲು ಕೌರ್ ಬಳಗ ಯಶಸ್ವಿಯಾಗುವುದೇ ಎಂಬುದನ್ನು ಕಾದುನೋಡಬೇಕಿದೆ.

ಕೋವಿಡ್–19ರಿಂದಾಗಿ ಒಂದು ವರ್ಷ ಸ್ಪರ್ಧಾ ಕಣಕ್ಕೆ ಇಳಿಯದೇ ಇದ್ದ ಭಾರತ ಏಕದಿನ ಸರಣಿಯಲ್ಲಿ ಆಡಿದ ವಿಧಾನ ಗಮನಿಸಿದರೆ ಅಭ್ಯಾಸ ಮಾಡದೇ ಬಂದಂತೆ ಇತ್ತು. ಇದನ್ನು ಮಿಥಾಲಿ ರಾಜ್ ಅವರೇ ಒಪ್ಪಿಕೊಂಡಿದ್ದರು. ಬ್ಯಾಟಿಂಗ್‌ನಲ್ಲೂ ಬೌಲಿಂಗ್‌ನಲ್ಲೂ ತಂಡ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಿರಲಿಲ್ಲ.

ಜೆಮಿಮಾ ರಾಡ್ರಿಗಸ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದರು. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘ ಸಾಧನೆ ಮಾಡಿದ್ದ ಯುವ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ ಟಿ20 ಸರಣಿಯಲ್ಲಿ ಅವರಿಗೆ ಸ್ಥಾನ ನೀಡಲಾಗಿದೆ. ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ ಏಕದಿನ ಸರಣಿಯ ಒಂದು ಪಂದ್ಯದಲ್ಲಿ ಮಾತ್ರ ಮಿಂಚಿದ್ದರು. ಹೀಗಾಗಿ ಟಿ20 ಸರಣಿಯಲ್ಲಿ ನೈಜ ಸಾಮರ್ಥ್ಯ ಹೊರಸೂಸುವ ನಿರೀಕ್ಷೆಯಲ್ಲಿದ್ದಾರೆ.

ಹರ್ಲೀನ್ ಡಿಯೋಲ್ ಮತ್ತು ರಿಚಾ ಘೋಷ್ ಕೂಡ ತಂಡದಲ್ಲಿದ್ದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುವ ನಿರೀಕ್ಷೆ ಇದೆ.

ಏಕದಿನ ಸರಣಿಯಲ್ಲಿ ಬೌಲಿಂಗ್ ವಿಭಾಗ ಸಂಪೂರ್ಣವಾಗಿ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಮತ್ತು ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್ ಅವರನ್ನು ಅವಲಂಬಿಸಿತ್ತು. ಟಿ20 ಸರಣಿಯಲ್ಲಿ ಜೂಲನ್ ಇಲ್ಲ. ಆದ್ದರಿಂದ ಕರ್ನಾಟಕದ ರಾಜೇಶ್ವರಿ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇದೆ. ಕಳಪೆ ಪ್ರದರ್ಶನದಿಂದಾಗಿ ಲೆಗ್ ಸ್ಪಿನ್ನರ್ ಪೂನಂ ಯಾದವ್ ಮತ್ತು ಸ್ಪಿನ್ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಕೊನೆಯ ಏಕದಿನ ಪಂದ್ಯದಿಂದ ಕೈಬಿಡಲಾಗಿತ್ತು. ಅವರಿಬ್ಬರು ಟಿ20 ಸರಣಿಯಲ್ಲಿ ಗೌರವ ಉಳಿಸಿಕೊಳ್ಳಲು ಪ್ರಯತ್ನಿಲಿದ್ದಾರೆ.

ವೇಗದ ಬೌಲರ್‌ಗಳ ವಿಭಾಗದಲ್ಲಿ ಅರುಂಧತಿ ರೆಡ್ಡಿ ಮತ್ತು ಮಾನಸಿ ಜೋಶಿ ಲಯಕ್ಕೆ ಮರಳಬೇಕಾಗಿದ್ದು ಮೋನಿಕಾ ಪಟೇಲ್ ಮತ್ತು ಸಿಮ್ರಾನ್ ದಿಲ್ ಬಹದ್ದೂರ್ ಮೇಲೆಯೂ ಕಣ್ಣು ಇದೆ.

ಅಮೋಘ ಲಯದಲ್ಲಿ ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ಉತ್ತಮ ಲಯದಲ್ಲಿದೆ. ಲಿಜೆಲಿ ಲೀ, ಲೌರಾ ವೊಲ್ವರ್ಟ್ ಮತ್ತು ಮಿಗ್ನನ್ ಡು ಪ್ರೀಜ್‌ ಬ್ಯಾಟಿಂಗ್‌ನಲ್ಲಿ ಅಮೋಘ ಸಾಮರ್ಥ್ಯ ಮೆರೆದಿದ್ದಾರೆ. ಶಬ್ನಿಮ್ ಇಸ್ಮಾಯಿಲ್, ತೂಮಿ ಶೇಖುಖುನೆ, ನಡೈನ್ ಡಿ ಕ್ಲಾರ್ಕ್‌ ಮತ್ತು ಮರಿಜನೆ ಕಾಪ್ ಬೌಲಿಂಗ್‌ನಲ್ಲಿ ತಂಡಕ್ಕೆ ಬಲ ತುಂಬಿದ್ದಾರೆ.

ತಂಡಗಳು: ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ರಿಚಾ ಘೋಷ್‌, ಹರ್ಲೀನ್ ಡಿಯೋಲ್‌, ಸುಷ್ಮಾ ವರ್ಮಾ, ನುಶತ್ ಪರ್ವೀನ್‌ (ವಿಕೆಟ್ ಕೀಪರ್‌), ಆಯುಷಿ ಸೋನಿ, ಅರುಂಧತಿ ರೆಡ್ಡಿ, ರಾಧಾ ಯಾದವ್‌, ರಾಜೇಶ್ವರಿ ಗಾಯಕವಾಡ್‌, ಪೂನಂ ಯಾದವ್‌, ಮಾನಸಿ ಜೋಶಿ, ಮೋನಿಕಾ ಪಟೇಲ್‌, ಸಿ. ಪ್ರತ್ಯೂಷಾ, ಸಿಮ್ರಾನ್ ದಿಲ್ ಬಹದ್ದೂರ್‌.

ದಕ್ಷಿಣ ಆಫ್ರಿಕಾ: ಸುನೆ ಲೂಜ್‌ (ನಾಯಕಿ), ಅಯಬೊಂಗಾ ಖಾಕ, ಶಬ್ನಿಮ್‌ ಇಸ್ಮಾಯಿಲ್‌, ಲೌರಾ ವೊಲ್ವರ್ಟ್‌, ತ್ರಿಶಾ ಚೆಟ್ಟಿ, ಸಿನಾಲೊ ಜಾಫ್ತ, ತಸ್ಮಿನ್ ಬ್ರಿಜ್‌, ಮರಿಜನೆ ಕಾಪ್‌, ನೊಂಡುಮಿಸೊ ಶಾಂಗಸೆ, ಲಿಜೆಲಿ ಲೀ, ಅನೆಕಿ ಬೋಶ್‌, ಫೇ ತೂನಿಕ್ಲಿಫ್‌, ನೊಂಕುಲೆಕೊ ಮಾಬ, ಮಿಗ್ನನ್ ಡು ಪ್ರೀಜ್‌, ನಡೈನ್ ಡಿ ಕ್ಲಾರ್ಕ್‌, ಲಾರಾ ಗುಡಾಲ್‌, ತೂಮಿ ಶೇಖುಖೂನ್.

ಪಂದ್ಯ ಆರಂಭ: ಸಂಜೆ 7.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT