ಶುಕ್ರವಾರ, ಜುಲೈ 1, 2022
24 °C

ತಾಯಿ, ಸಹೋದರಿಯನ್ನು ಕಳೆದುಕೊಂಡಾಗ ‘ಸಂಪೂರ್ಣ ನಾಶವಾದೆ’: ವೇದಾ ಕೃಷ್ಣಮೂರ್ತಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಇತ್ತೀಚೆಗೆ ಕೋವಿಡ್-19ನಿಂದ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ಬಳಿಕ ‘ಸಂಪೂರ್ಣವಾಗಿ ನಾಶವಾದೆ’ ಎಂದು ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ, ಕನ್ನಡತಿ ವೇದಾ ಕೃಷ್ಣಮೂರ್ತಿ ಅವರು ಇಎಸ್‌ಪಿಎನ್‌ ಕ್ರಿಕ್ ಇನ್ಫೋ ಸಂದರ್ಶನದಲ್ಲಿ ಹೇಳಿದ್ದಾರೆ.

ನಿಧಾನವಾಗಿ ಆ ದುಃಖದಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ. ಸಂಕಷ್ಟದ ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ವೇದಾ ಕೃಷ್ಣಮೂರ್ತಿಯ ಕುಟುಂಬದ ಒಂಬತ್ತು ಮಂದಿ ಕೊರೊನಾಗೆ ತುತ್ತಾಗಿ ತತ್ತರಿಸಿದ್ದಾರೆ. ಎರಡು ವಾರಗಳ ಅಂತರದಲ್ಲಿ ವೇದಾ ಅವರ ತಾಯಿ ಮತ್ತು ಸಹೋದರಿ ಕಳೆದ ತಿಂಗಳು ಕಡೂರಿನಲ್ಲಿ ಮೃತಪಟ್ಟರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಹಣೆಬರಹದ ಬಗ್ಗೆ ನಾನು ತುಂಬಾ ನಂಬಿಕೆ ಇಟ್ಟವಳಾಗಿದ್ದೇನೆ. ನನ್ನ ಅಕ್ಕ ಗುಣಮುಖಳಾಗಿ ಮನೆಗೆ ಹಿಂದಿರುಗಬಹುದೆಂದು ನಾನು ನಿಜವಾಗಿಯೂ ಆಶಿಸಿದ್ದೆ. ಅವಳು ವಾಪಸ್ ಬರದಿದ್ದಾಗ, ನಾನು ಸಂಪೂರ್ಣವಾಗಿ ನಾಶವಾದೆ. ನಾವು ಸಂಪೂರ್ಣ ಕುಸಿದಿದ್ದೇವೆ’ಎಂದು ವೇದಾ ಕೃಷ್ಣಮೂರ್ತಿ ನೋವು ತೋಡಿಕೊಂಡಿದ್ದಾರೆ.

‘ನನ್ನ ಕುಟುಂಬದ ಉಳಿದವರಿಗಾಗಿ ನಾನು ಧೈರ್ಯಶಾಲಿ ಇರಬೇಕಿತ್ತು. ಆ ಪರೀಕ್ಷೆಯ ಒಂದೆರಡು ವಾರಗಳಲ್ಲಿ ನಾನು ನನ್ನ ದುಃಖದಿಂದ ಹೊರಬರಲು ಕಲಿತೆ. ಆದರೆ, ಅಷ್ಟು ಸುಲಭವಾಗಿ ಅದು ನಿಮ್ಮನ್ನು ಬಿಡುವುದಿಲ್ಲ ಮತ್ತೆ ಮತ್ತೆ ನನ್ನನ್ನು ಕಾಡುತ್ತದೆ’ಎಂದು ವೇದಾ ಹೇಳಿದ್ದಾರೆ.

ನನ್ನ ಕುಟುಂಬದ ಪೈಕಿ ನಾನೊಬ್ಬಳು ಮಾತ್ರ ಕೊರೊನಾ ಸೋಂಕಿಗೆ ತುತ್ತಾಗಿಲ್ಲ ಎಂದು ಮಧ್ಯಮ ಕ್ರಮಾಂಕದ ಬಾಟುಗಾರ್ತಿ ಹೇಳಿದ್ದಾರೆ.

ಬಳಿಕ, ನನ್ನ ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯ ಒದಗಿಸಿದೆ. ಈ ಸಂದರ್ಭ, ಸಾಮಾನ್ಯ ಜನರಿಗೆ ಮೂಲಭೂತ ಆರೋಗ್ಯದ ಸೌಲಭ್ಯ ಪಡೆದುಕೊಳ್ಳಲು ಎಷ್ಟು ಕಷ್ಟವಾಗಬಹುದೆಂದು ಅರಿತುಕೊಂಡೆ ಎಂದಿದ್ದಾರೆ.

‘ಕೋವಿಡ್ ಸೋಂಕಿತರಾದಾಗ ಏನು ಮಾಡಬೇಕು ಎಂಬುದರ ಕುರಿತು ವೈದ್ಯರ ಸಲಹೆ ಪಡೆಯುವುದೂ ಸಹ ಬಹಳಷ್ಟು ಜನರಿಗೆ ಕಷ್ಟವಾಗಿತ್ತು ಎಂಬುದನ್ನು ಆ ಸಮಯದಲ್ಲಿ ಟ್ವಿಟರ್ ಮೂಲಕ ತಿಳಿದುಕೊಂಡೆ" ಎಂದು ಅವರು ಹೇಳಿದ್ದಾರೆ

ಆರೋಗ್ಯ ಬಿಕ್ಕಟ್ಟನ್ನು ನಿಭಾಯಿಸುವ ಮಾನಸಿಕ ಅಂಶ ಮತ್ತು ಅಂತಹ ಪ್ರಮಾಣದ ದುರಂತದ ಬಗ್ಗೆ ಮಾತನಾಡಿದ ಕೃಷ್ಣಮೂರ್ತಿ, ಸೋಂಕಿಗೆ ತುತ್ತಾಗಿದ್ದ ತಾಯಿ ಮತ್ತು ಸಹೋದರಿ ಕೂಡ ಆತಂಕದಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.

‘ಕೋವಿಡ್ ಎದುರಿಸಲು ಮಾನಸಿಕ ಶಕ್ತಿ ತುಂಬಾ ಮುಖ್ಯ. ನನ್ನ ಹಿರಿಯ ಸಹೋದರಿ ವತ್ಸಲಾ ಅವರು ಕೋವಿಡ್‌ನಿಂದ ಸಾವಿಗೀಡಾಗುವ ಮೊದಲು ಅಧಿಕ ಆತಂಕದಲ್ಲಿದ್ದರು’ ಎಂದು 28 ವರ್ಷದ ಕ್ರಿಕೆಟ್ ಆಟಗಾರ್ತಿ ಹೇಳಿದ್ದಾರೆ.

‘ನನ್ನ ತಾಯಿ ಕೂಡ ಭಯಭೀತರಾಗಿದ್ದಿರಬಹುದು, ಏಕೆಂದರೆ, ಅವರು ಬೆಂಗಳೂರಿನಿಂದ 230 ಕಿ.ಮೀ ದೂರದ ಕಡೂರಿನಲ್ಲಿ ಕೋವಿಡ್‌ನಿಂದ ಮೃತರಾಗುವುದಕ್ಕೂ ಮುನ್ನ, ಹಿಂದಿನ ರಾತ್ರಿ ಮನೆಯ ಮಕ್ಕಳೂ ಸೇರಿ ಕುಟುಂಬದ ಉಳಿದವರೆಲ್ಲರೂ ಕೋವಿಡ್ ಪಾಸಿಟಿವ್ ಆಗಿರುವುದು ದೃಢಪಟ್ಟಿತ್ತು. ಅದು ಅವರ ಮನಸ್ಸನ್ನು ಘಾಸಿಗೊಳಿಸಿರಬಹುದು’ಎಂದು ಅವರು ಹೇಳಿದ್ದಾರೆ.

ಈ ಹಿಂದೆ ತಾವು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದ ಬಗ್ಗೆ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ.. ವೇದಾ ಕೃಷ್ಣಮೂರ್ತಿ ಅವರ ತಾಯಿ ಚಲುವಾಂಬದೇವಿ ಕೋವಿಡ್‌ನಿಂದ ನಿಧನ

ಇದನ್ನೂ ಓದಿ.. ಕೋವಿಡ್: ವೇದಾ ಕೃಷ್ಣಮೂರ್ತಿ ಅವರ ಸಹೋದರಿ ವತ್ಸಲಾ ಶಿವಕುಮಾರ್ ಸಾವು
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು