ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ –ಆಸ್ಟ್ರೇಲಿಯಾ ಹಣಾಹಣಿ: ಸೆಮಿಫೈನಲ್ ಮೇಲೆ ಕಮಿನ್ಸ್ ಪಡೆಗೆ ಕಣ್ಣು

Published 3 ನವೆಂಬರ್ 2023, 13:13 IST
Last Updated 3 ನವೆಂಬರ್ 2023, 13:13 IST
ಅಕ್ಷರ ಗಾತ್ರ

ಅಹಮದಾಬಾದ್: ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಐದು ಸಲದ ಪ್ರಶಸ್ತಿ ವಿಜೇತ ಆಸ್ಟ್ರೇಲಿಯಾ ತಂಡಗಳು ಶನಿವಾರ  ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ.

ಆದರೆ ಈ ಸಲದ ರೌಂಡ್ ರಾಬಿನ್ ಲೀಗ್‌ನಲ್ಲಿ ಉಭಯ ತಂಡಗಳು ತದ್ವಿರುದ್ಧ ಸ್ಥಿತಿಯಲ್ಲಿವೆ. ಇಂಗ್ಲೆಂಡ್ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದ್ದು, ಸೆಮಿಫೈನಲ್ ಹಾದಿಯಿಂದ ಹೊರಬಿದ್ದಿದೆ. ಆಡಿದ ಆರು ಪಂದ್ಯಗಳಲ್ಲಿ ಗೆದ್ದಿರುವುದು ಒಂದೇ ಪಂದ್ಯ. ಕಳಪೆ ಬ್ಯಾಟಿಂಗ್‌ ನಿಂದಾಗಿಯೇ ಹೆಚ್ಚು ಸೋಲುಗಳನ್ನು ಅನುಭವಿಸಿದೆ.

ಇದೀಗ ತನ್ನ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ಎದುರು ಯಾವ ರೀತಿ ಆಡಲಿದೆ ಎಂಬ ಕುತೂಹಲ ಗರಿಗೆದರಿದೆ. ಆದರೆ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಪ್ಯಾಟ್ ಕಮಿನ್ಸ್‌ ಬಳಗವು ನಂತರದ ನಾಲ್ಕರಲ್ಲಿ ಸತತ ಗೆಲುವು ಸಾಧಿಸಿದೆ. ಆ ಮೂಲಕ ನಾಲ್ಕರ ಘಟ್ಟದತ್ತ ದಾಪುಗಾಲಿಟ್ಟಿದೆ.

ಆದರೆ ಗಾಯಾಳುಗಳ ಸಮಸ್ಯೆಯಿಂದಾಗಿ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಅನಿವಾರ್ಯತೆ ಆಸ್ಟ್ರೇಲಿಯಾಕ್ಕೆ ಇದೆ. ಅಮೋಘ ಲಯದಲ್ಲಿದ್ದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯಗೊಂಡಿದ್ದಾರೆ. ಮಿಚೆಲ್ ಮಾರ್ಷ್ ಕೌಟುಂಬಿಕ ಕಾರಣಗಳಿಗಾಗಿ ತಮ್ಮ ತವರಿಗೆ ಮರಳಿದ್ದಾರೆ.

ಇದರಿಂದಾಗಿ ಕಣಕ್ಕಿಳಿಯಲಿರುವ ಮಾರ್ಕಸ್ ಸ್ಟೊಯಿನಿಸ್ ಮತ್ತು ಕ್ಯಾಮರಾನ್ ಗ್ರೀನ್ ಅವರ ಮೇಲೆ ಹೊಣೆ ಹೆಚ್ಚಿದೆ.

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡುವ ಲಕ್ಷಣಗಳಿವೆ. ಆದ್ದರಿಂದ ಆ್ಯಡಂ ಜಂಪಾ ಅವರಿಗೆ ಉತ್ತಮ ಅವಕಾಶವಿದೆ. ಅವರು ಈ ಟೂರ್ನಿಯಲ್ಲಿ  16 ವಿಕೆಟ್ ಗಳಿಸಿದ್ದಾರೆ.  ಇಂಗ್ಲೆಂಡ್ ತಂಡದ ಬ್ಯಾಟರ್‌ಗಳಾದ ಜಾನಿ ಬೆಸ್ಟೊ, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್ ಹಾಗೂ ನಾಯಕ ಬಟ್ಲರ್ ಅವರಿಗೆ ಕಠಿಣ ಸವಾಲೊಡ್ಡಬಲ್ಲ ಸಮರ್ಥ ಬೌಲರ್ ಜಂಪಾ ಅವರಾಗಿದ್ದಾರೆ.

ಇಂಗ್ಲೆಂಡ್ ತಂಡದಲ್ಲಿರುವ ಸ್ಪಿನ್ನರ್‌ಗಳಾದ ಮೊಯಿನ್ ಅಲಿ ಮತ್ತು ಆದಿಲ್ ರಶೀದ್ ಅವರು ಲಯಕ್ಕೆ ಮರಳಬೇಕಿದೆ. ಆಸ್ಟ್ರೇಲಿಯಾದ ಸಿಡಿಲಬ್ಬರದ ಬ್ಯಾಟರ್‌ ಡೇವಿಡ್ ವಾರ್ನರ್ (413 ರನ್), ಟ್ರಾವಿಸ್ ಹೆಡ್ ಹಾಗೂ ಜೋಷ್ ಇಂಗ್ಲಿಷ್ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಪ್ರಮುಖ ಬ್ಯಾಟರ್ ಸ್ಟೀವನ್ ಸ್ಮಿತ್ ಇನ್ನೂ ಆಟಕ್ಕೆ ಕುದುರಿಕೊಂಡಿಲ್ಲ. 

ಈ ಪಂದ್ಯವೂ ಸೇರಿದಂತೆ ಇಂಗ್ಲೆಂಡ್‌ಗೆ ಇನ್ನೂ ಮೂರು ಪಂದ್ಯಗಳು ಬಾಕಿಯಿವೆ. ಎಲ್ಲದರಲ್ಲಿ ಗೆದ್ದರೆ  ಅಗ್ರ ಏಳರಲ್ಲಿ ಸ್ಥಾನ ಪಡೆಯಬಹುದು. ಇದರಿಂದ ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ನೇರಪ್ರವೇಶ ಗಿಟ್ಟಿಸಬಹುದು.  ಆ ಕಾರಣಕ್ಕಾದರೂ ಆಸ್ಟ್ರೇಲಿಯಾಕ್ಕೆ ಕಠಿಣ ಪೈಪೋಟಿಯೊಡ್ಡುವ ನಿರೀಕ್ಷೆ ಗರಿಗೆದರಿದೆ.

ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ವಿಕೆಟ್‌ಕೀಪಿಂಗ್ ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ
ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ವಿಕೆಟ್‌ಕೀಪಿಂಗ್ ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ

ತಂಡಗಳು:

ಇಂಗ್ಲೆಂಡ್: ಜೋಸ್ ಬಟ್ಲರ್ (ವಿಕೆಟ್‌ಕೀಪರ್–ನಾಯಕ) ಜಾನಿ ಬೆಸ್ಟೊ ಡೇವಿಡ್ ಮಲಾನ್ ಜೋ ರೂಟ್ ಬೆನ್ ಸ್ಟೋಕ್ಸ್ ಮೋಯಿನ್ ಅಲಿ ಲಿಯಾಮ್ ಲಿವಿಂಗ್‌ಸ್ಟೋನ್ ಕ್ರಿಸ್ ವೋಕ್ಸ್ ಡೇವಿಡ್ ವಿಲಿ ಆದಿಲ್ ರಶೀದ್ ಮಾರ್ಕ್ ವುಡ್ ಸ್ಯಾಮ್ ಕರನ್ ಹ್ಯಾರಿ ಬ್ರೂಕ್ ಗಸ್ ಅಟ್ಕಿನ್ಸನ್ ಬ್ರೈಡನ್ ಕೇರ್ಸ್.

ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ)  ಡೇವಿಡ್ ವಾರ್ನರ್ ಟ್ರಾವಿಸ್ ಹೆಡ್ ಮಿಚೆಲ್ ಮಾರ್ಷ್ ಸ್ಟೀವನ್ ಸ್ಮಿತ್ ಮಾರ್ನಸ್ ಲಾಬುಷೇನ್ ಗ್ಲೆನ್ ಮ್ಯಾಕ್ಸ್‌ವೆಲ್ ಜೋಶ್ ಇಂಗ್ಲಿಸ್ (ವಿಕೆಟ್‌ಕೀಪರ್‌) ಮಿಚೆಲ್ ಸ್ಟಾರ್ಕ್ ಆ್ಯಡಂ ಜಂಪಾ ಜೋಸ್ ಹ್ಯಾಜಲ್‌ವುಡ್ ಮಾರ್ಕಸ್ ಸ್ಟೊಯಿನಿಸ್ ಅಲೆಕ್ಸ್ ಕ್ಯಾರಿ ಕ್ಯಾಮರಾನ್ ಗ್ರೀನ್ ಸೀನ್ ಅಬಾಟ್. ಪಂದ್ಯ ಆರಂಭ: ಮಧ್ಯಾಹ್ನ 2 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ ನೆಟ್‌ವರ್ಕ್ ಹಾಟ್‌ಸ್ಟಾರ್ ಆ್ಯಪ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT